ಬೆಳಗಾವಿ ರೈತ ಸಮಾವೇಶದಲ್ಲಿ ಮೋದಿ ಹೇಳಿದ್ದೇನು?

Posted By:
Subscribe to Oneindia Kannada

ಬೆಳಗಾವಿ, ಫೆಬ್ರವರಿ 27 : ಬೆಳಗಾವಿಯ ಅಂಗಡಿ ಕಾಲೇಜು ಮೈದಾನದಲ್ಲಿ ಕರ್ನಾಟಕ ಬಿಜೆಪಿ ಆಯೋಜಿಸಿದ್ದ ರೈತ ಸಮಾವೇಶವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿದರು. 'ಕರ್ನಾಟಕದ ಬಂಧು ಭಗಿನಿಯರೇ ನಿಮಗೆಲ್ಲಾ ನನ್ನ ಪ್ರಣಾಮಗಳು' ಎಂದು ಮಾತು ಆರಂಭಿಸಿದ ಮೋದಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಹುಟ್ಟು ಹಬ್ಬದ ಶುಭಾಶಯ ಸಲ್ಲಿಸಿದರು. ಸಮಾವೇಶದಲ್ಲಿ ಮೋದಿ ಹೇಳಿದ್ದೇನು ಇಲ್ಲಿದೆ ಮಾಹಿತಿ.....

ಸಮಯ 5.25 :'ನಾವು ದೇವರ ಪ್ರಸಾದ ಕೆಳಗೆ ಬಿದ್ದರೆ ಬೇಸರ ಮಾಡಿಕೊಳ್ಳುತ್ತೇವೆ. ನೀರು ಸಹ ದೇವರು ನೀಡಿದ ಪ್ರಸಾದ. ನೀರು ಕಾರ್ಖನೆಯಿಂದ ತಯಾರಾಗುವುದಿಲ್ಲ. ಒಂದು ಹನಿ ನೀರು ಸಿಕ್ಕರೆ ರೈತ ಚಿನ್ನ ಬೆಳೆಯುತ್ತಾನೆ. ಹೆಚ್ಚು ಫಸಲು ಪಡೆಯುವ ಪ್ರತಿ ಹನಿ ನೀರು ಹನಿಯೂ ಮುಖ್ಯ. ಉದ್ಯೋಗ ಖಾತ್ರಿ ಯೋಜನೆ ಮೂಲಕ ನೀರಿನ ಸಂರಕ್ಷಣೆಗೆ ಆದ್ಯತೆ ನೀಡಲಾಗುತ್ತದೆ'.

ಸಮಯ 5.23 : 'ಇಸ್ರೇಲ್ ದೇಶ ಕಡಿಮೆ ನೀರು ಬಳಸಿ ಕೃಷಿ ಮಾಡುವ ಮೂಲಕ ಕ್ರಾಂತಿ ಮಾಡಿದೆ. ಮೈಕ್ರೋ ಇರಿಗೇಷನ್‌ ಮೂಲಕ ಕಬ್ಬು ಬೆಳೆಯಬಹುದು. ಹಳ್ಳಿ ಹಳ್ಳಿಗಳಲ್ಲೂ ಚೆಕ್ ಡ್ಯಾಂ ನಿರ್ಮಾಣ ಮಾಡುವ ಮೂಲಕ ರೈತರಿಗೆ ಸರ್ಕಾರ ನೆರವು ನೀಡಲಿದೆ. ಮಣ್ಣಿನ ಫಲವತ್ತತೆ ಕಾಪಾಡಲು ರೈತರಿಗೆ ಸಾಯಿಲ್ ಹೆಲ್ತ್ ಕಾರ್ಡ್ ಯೋಜನೆ ಜಾರಿಗೊಳಿಸಲಾಗಿದೆ'.

modi in belagavi

ಸಮಯ 5.20 : 'ಬೆಳೆ ವಿಮಾ ಯೋಜನೆಯನ್ನು ಮೊದಲು ಆರಂಭಿಸಿದ್ದು ಅಟಲ್ ಜೀ ಅವರು. ಆದರೆ, ನಂತರ ಬಂದ ಸರ್ಕಾರಗಳು ಈ ಬಗ್ಗೆ ಗಮನಹರಿಸಲಿಲ್ಲ. ಆದ್ದರಿಂದ, ರೈತರು ಯೋಜನೆ ಮೇಲೆ ವಿಶ್ವಾಸ ಕಳೆದುಕೊಳ್ಳುವಂತಾಯಿತು. ದೇಶದಲ್ಲಿ ಸ್ವಾತಂತ್ರ್ಯ ನಂತರ ಬಂದ ಸರ್ಕಾರಗಳು ನೀರಿನ ಬಗ್ಗೆ ಆಲೋಚನೆ ನಡೆಸಿದ್ದರೆ ಇಂದು ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬರುತ್ತಿರಲಿಲ್ಲ'

ಸಮಯ 5.06 : 'ವಿಶ್ವದಲ್ಲಿ ಆರ್ಥಿಕ ಪ್ರಗತಿಯಲ್ಲಿರುವ ಏಕೈಕ ದೇಶ ಭಾರತ. ಕೃಷಿ, ಉತ್ಪಾದನೆ, ಸೇವಾ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆ ತೋರಿದ ದೇಶ ಭಾರತ. ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಪೈಕಿ ಭಾರತ ಪ್ರಥಮ ಸ್ಥಾನದಲ್ಲಿದೆ'.

ಸಮಯ 5 ಗಂಟೆ : ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಅವರಿಗೆ ನಮನ ಸಲ್ಲಿಸಿದ ಮೋದಿ. 'ಕರ್ನಾಟಕದ ಬಂಧು ಭಗಿನಿಯರೇ ನಿಮಗೆಲ್ಲಾ ನನ್ನ ಪ್ರಣಾಮಗಳು' ಎಂದು ಮಾತು ಆರಂಭಿಸಿದರು. ಬಿ.ಎಸ್.ಯಡಿಯೂರಪ್ಪ ಅವರಿಗೆ ಹುಟ್ಟು ಹಬ್ಬದ ಶುಭಾಶಯ ಸಲ್ಲಿಸಿದ ಮೋದಿ ಅವರು, ಯಡಿಯೂರಪ್ಪ ಅವರ ಜನ್ಮದಿನದಂದೇ ರೈತರ ಸಮಾವೇಶ ನಡೆಯುತ್ತಿದೆ' ಎಂದು ಹೇಳಿದರು.

ಸಮಯ 4.46 : ಸಮಾವೇಶದಲ್ಲಿ ನರೇಂದ್ರ ಮೋದಿ, ಬಿ.ಎಸ್.ಯಡಿಯೂರಪ್ಪ, ಅನಂತ ಕುಮಾರ್, ಪ್ರಹ್ಲಾದ್ ಜೋಶಿ, ಜಗದೀಶ್ ಶೆಟ್ಟರ್, ಡಿ.ವಿ.ಸದಾನಂದ ಗೌಡ, ಬೆಳಗಾವಿ ಸಂಸದ ಸುರೇಶ್ ಅಂಗಡಿ ಮುಂತಾದವರು ಪಾಲ್ಗೊಂಡಿದ್ದಾರೆ.

ಸಮಯ 4.15 : ಸಮಾವೇಶಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ, ಭತ್ತ ತೂರುವ ಮೂಲಕ ಸಮಾವೇಶ ಉದ್ಘಾಟಿಸಿದ ಮೋದಿ

ಸಮಯ 4.05 : ಮೋದಿ ಸಮಾವೇಶಕ್ಕೆ ಅಡ್ಡಿ ಪಡಿಸಲು ಯತ್ನಿಸಿದ 500ಕ್ಕೂ ಹೆಚ್ಚು ರೈತರನ್ನು ಬೆಳಗಾವಿಯಲ್ಲಿ ವಶಕ್ಕೆ ಪಡೆಯಲಾಗಿದೆ. ಸಮಾವೇಶಕ್ಕೆ ತೆರಳುತ್ತಿರುವ ವಾಹನಗಳನ್ನು ತಡೆದ ರೈತರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಚನ್ನಮ್ಮ ವೃತ್ತದಲ್ಲಿ ಬಿಗುಬಿನ ವಾತಾವರಣ ನಿರ್ಮಾಣವಾಗಿದೆ.

ಮೋದಿ ಸಮಾವೇಶ ವಿಡಿಯೋ ನೋಡಿ

ಸಮಯ 3.55 : 'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಬ್ಲೋ ವಾಚ್‌ ಕಂಪನಿ ಸೇವೆ ಮಾಡುತ್ತಿದ್ದಾರೆ' ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಕೆ.ಮುರಳೀಧರರಾವ್‌ ವ್ಯಂಗ್ಯವಾಡಿದ್ದಾರೆ. [ಸಿದ್ದುಗೆ ಕಂಟಕ ತರಲಿದೆಯಾ ಉಬ್ಲೋ ಡೈಮಂಡ್ ವಾಚ್?]

ಸಮಯ 3.45 : ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸುವ ಮುನ್ನವೇ ಬೆಳಗಾವಿಯಲ್ಲಿ ರೈತ ಸಮಾವೇಶವನ್ನು ಉದ್ಘಾಟನೆ ಮಾಡಲಾಗಿದೆ. ಬಿ.ಎಸ್.ಯಡಿಯೂರಪ್ಪ, ಪ್ರಹ್ಲಾದ್ ಜೋಶಿ, ಅನಂತ್ ಕುಮಾರ್, ಸುರೇಶ್ ಅಂಗಡಿ ಮುಂತಾದವರು ಸಮಾವೇಶದಲ್ಲಿ ಪಾಲ್ಗೊಂಡಿದ್ದಾರೆ.

modi

ಸಮಯ 3.15 : ರೈತರ ಸಮಾವೇಶ ಉದ್ದೇಶಿಸಿ ಮಾತನಾಡಲು ಪ್ರಧಾನಿ ನರೇಂದ್ರ ಮೋದಿ ಅವರು, ಬೆಳಗಾವಿಗೆ ಆಗಮಿಸಲಿದ್ದಾರೆ. ರೈತರಿಗಾಗಿ ಕೇಂದ್ರ ಸರ್ಕಾರ ಆರಂಭಿಸಿರುವ ಯೋಜನೆಗಳ ಬಗ್ಗೆ ಮಾಹಿತಿ ನೀಡಲಿರುವ ಮೋದಿ, 'ಪ್ರಧಾನ್‌ ಮಂತ್ರಿ ಫಸಲ್‌ ಬಿಮಾ ಯೋಜನಾ (ಪಿಎಂಎಫ್‌ಬಿವೈ)' ಬಗ್ಗೆ ರೈತರಿಗೆ ಮಾಹಿತಿ ನೀಡಲಿದ್ದಾರೆ.

ಬೆಳಗಾವಿಯ ಅಂಗಡಿ ಕಾಲೇಜು ಮೈದಾನದಲ್ಲಿ ಸಮಾವೇಶ ನಡೆಯುತ್ತಿದೆ. ಮಧ್ಯಾಹ್ನ 4 ಗಂಟೆಗೆ ಪ್ರಧಾನಿ ಮೋದಿಯವರು ಸಮಾವೇಶಕ್ಕೆ ಆಗಮಿಸಲಿದ್ದಾರೆ. ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. [ಕರಿಮೆಣಸು ಬೆಳೆಗಾರನ ಕಂಗೆಡಿಸಿದ 'ಸೊರಗುರೋಗ']

ರೈತ ಸಮಾವೇಶದಲ್ಲಿ 60 ಸಾವಿರಕ್ಕೂ ಅಧಿಕ ರೈತರು ಭಾಗವಹಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ಕಳಸಾ-ಬಂಡೂರಿ ಹೋರಾಟ ನಡೆಸುತ್ತಿರುವ ರೈತರು ಪ್ರತಿಭಟನೆ ನಡೆಸುವ ಹಿನ್ನಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್‌ ಕೈಗೊಳ್ಳಲಾಗಿದೆ.

ಏನಿದು ಯೋಜನೆ? : ಪ್ರಧಾನ್‌ ಮಂತ್ರಿ ಫಸಲ್‌ ಬಿಮಾ ಯೋಜನೆಗೆ ಕೇಂದ್ರ ಸರ್ಕಾರ ಕೆಲವು ದಿನಗಳ ಹಿಂದೆ ಒಪ್ಪಿಗೆ ನೀಡಿದೆ. ಈಗಾಗಲೇ ಜಾರಿಯಲ್ಲಿದ್ದ ರಾಷ್ಟ್ರೀಯ ಕೃಷಿ ವಿಮೆ ಯೋಜನೆ (ಎನ್‌ಎಐಎಸ್‌) ಮತ್ತು 'ಸುಧಾರಿತ ಎನ್‌ಎಐಎಸ್‌' ಯೋಜನೆಗಳಿಗೆ ಬದಲಾಗಿ ಈ ಹೊಸ ಯೋಜನೆ ಜಾರಿಗೊಳಿಸಲಾಗಿದೆ.

ಅತಿ ಕಡಿಮೆ ಪ್ರೀಮಿಯಂನ ಈ ಯೋಜನೆ ನಷ್ಟದ ತ್ವರಿತ ಅಂದಾಜು, ಕಾಲಮಿತಿಯೊಳಗೆ ಹಣ ಪಾವತಿ ಮುಂತಾದ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಯೋಜನೆ ಬಗ್ಗೆ ರೈತರಿಗೆ ಮಾಹಿತಿ ನೀಡಲು ದೇಶದ 4 ರಾಜ್ಯಗಳಲ್ಲಿ ಬಿಜೆಪಿ ಫೆಬ್ರವರಿ ತಿಂಗಳಿನಲ್ಲಿ ಕಿಸಾನ್ ಸಮಾವೇಶ ಆಯೋಜಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Prime Minister Narendra Modi address a farmers' rally in Belagavi on February 27 as part of efforts to create awareness about his government contribution to farmers including new crop insurance scheme.
Please Wait while comments are loading...