ಅಗತ್ಯಬಿದ್ದಲ್ಲಿ 10 ಲಕ್ಷ ಟನ್ ಕಲ್ಲಿದ್ದಲು ಖರೀದಿ: ಡಿಕೆ ಶಿವಕುಮಾರ್

By: ಬೆಳಗಾವಿ ಪ್ರತಿನಿಧಿ
Subscribe to Oneindia Kannada

ಬೆಳಗಾವಿ, ನವೆಂಬರ್ 22: ವಿದ್ಯುತ್ ಕೊರತೆ ನಿಭಾಯಿಸಲು ಅಗತ್ಯ ಬಿದ್ದಲ್ಲಿ 10ಲಕ್ಷ ಟನ್ ಕಲ್ಲಿದ್ದಲು ಖರೀದಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಇಂಧನ ಸಚಿವ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಲೋಡ್ ಶೆಡ್ಡಿಂಗ್ ಅನಿವಾರ್ಯ : ಡಿ.ಕೆ.ಶಿವಕುಮಾರ್

ಮಂಗಳವಾರ ಸುವರ್ಣಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, "ರಾಜ್ಯದಲ್ಲಿ ಕಲ್ಲಿದ್ದಲು ಕೊರತೆಯಿಂದ ವಿದ್ಯುತ್ ಉತ್ಪಾದನೆ ಕುಂಠಿತಗೊಂಡಿದೆ. ತುರ್ತು ಸಂದರ್ಭ ನಿಭಾಯಿಸಲು ಅಗತ್ಯ ಬಿದ್ದಲ್ಲಿ 10 ಲಕ್ಷ ಟನ್ ಕಲ್ಲಿದ್ದಲು ಖರೀದಿಗೆ ಟೆಂಡರ್ ಕರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ," ಎಂದು ತಿಳಿಸಿದರು.

 If required, will buy 10 lakh tonnes of coal: DK Shivakumar

ಕಲ್ಲಿದ್ದಲಿನ ಅಭಾವದಿಂದಾಗಿ ವಿದ್ಯುತ್ ಉತ್ಪಾದನೆಯಲ್ಲಿ ಸಾವಿರ ಮೆಗಾವ್ಯಾಟ್‍ನಷ್ಟು ಕೊರತೆಯುಂಟಾಗಿದೆ. ಇದರಲ್ಲಿ 900 ಮೆ.ವ್ಯಾ ನಷ್ಟು ವಿದ್ಯುತ್ ಖರೀದಿಸಲಾಗುತ್ತಿದೆ. ಯಾವುದೇ ಪರಿಸ್ಥಿತಿಯಲ್ಲೂ ಲೋಡ್ ಶೆಡ್ಡಿಂಗ್ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ವಿದ್ಯುತ್ ಖರೀದಿ ಹಗರಣದ ವರದಿ ಮಂಡನೆ, ಶಿಫಾರಸುಗಳು

"ಕಲ್ಲಿದ್ದಲಿನ ಪೂರೈಕೆಗಾಗಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದ್ದು, ಪಕ್ಷಾತೀತವಾಗಿ ಈ ಕುರಿತು ಕೇಂದ್ರಕ್ಕೆ ಮನವಿ ಮಾಡುವಂತೆ ಕೋರಲಾಗಿದೆ. ಇತ್ತೀಚಿಗೆ ಕೇಂದ್ರ ಕಲ್ಲಿದ್ದಲು ಖಾತೆ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿಯಾಗಿ ಈ ಕುರಿತು ಮನವಿ ಮಾಡಲಾಗಿದೆ. ಶೀಘ್ರವೇ ಕಲ್ಲಿದ್ದಲಿನ ಹಂಚಿಕೆಯಾಗುವ ನಿರೀಕ್ಷೆಯಿದೆ," ಎಂದು ತಿಳಿಸಿದರು.

"ಪ್ರಸ್ತುತ ಹಂಚಿಕೆಯಾದ ಕಲ್ಲಿದ್ದಲನ್ನು ರೈಲು - ಸಮುದ್ರ - ರೈಲು ಮಾರ್ಗವಾಗಿ ಸಾಗಾಟ ಮಾಡಲಾಗುತ್ತಿದೆ. ತುರ್ತು ಸಂದರ್ಭದಲ್ಲಿ ಅದನ್ನು ರೈಲು ಮತ್ತು ರಸ್ತೆ ಮಾರ್ಗವಾಗಿ ಸಾಗಿಸಲು ಅನುವಾಗುವಂತೆ ಕ್ರಮ ಜರುಗಿಸಲಾಗುತ್ತಿದೆ. ಒಂದೊಮ್ಮೆ ಕಲ್ಲಿದ್ದಲು ಹಂಚಿಕೆ ವಿಳಂಬವಾದಲ್ಲಿ ವಿದ್ಯುತ್ ಉತ್ಪಾದನೆಗಾಗಿ ಕಲ್ಲಿದ್ದಲು ಖರೀದಿಗೆ ಟೆಂಡರ್ ಕರೆಯಲು ಎಲ್ಲಾ ಸಿದ್ಧತೆ ಮಾಡಲಾಗಿದೆ," ಎಂದು ಹೇಳಿದರು.

ಕಲ್ಲಿದ್ದಲು ಕೊರತೆ : ಕಾಡಲಿದೆ ಲೋಡ್ ಶೆಡ್ಡಿಂಗ್ ಭೀತಿ

ಇಡೀ ರಾಷ್ಟ್ರದಲ್ಲಿ ಕಲ್ಲಿದ್ದಲಿನ ಕೊರತೆ ತೀವ್ರವಾಗಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯದ ಮೂರು ವಿದ್ಯುತ್ ಸ್ಥಾವರಗಳಲ್ಲಿ ಮೂರು ಘಟಕಗಳಲ್ಲಿ ನಿರ್ವಹಣಾ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ ಎಂದು ಶಿವಕುಮಾರ್ ತಿಳಿಸಿದರು.

ಕಳೆದ 7ತಿಂಗಳಲ್ಲಿ ಆರ್.ಟಿ.ಪಿ.ಎಸ್ ಘಟಕಕ್ಕೆ ಹಂಚಿಕೆಯಾಗಿದ್ದ 27ಸಾವಿರ ಮೆ.ಟನ್ ಕಲ್ಲಿದ್ದಲಿನ ಪೈಕಿ ಅರ್ಧದಷ್ಟು ಮಾತ್ರ ಪೂರೈಕೆಯಾಗಿದೆ. ಬಿ.ಟಿ.ಪಿ.ಎಸ್‍ಗೆ ಹಂಚಿಕೆಯಾಗಿದ್ದ ಬಾರಾಂಜಾ ಬ್ಲಾಕ್ ಕಲ್ಲಿದ್ದಲು ಗಣಿಗಾರಿಕೆ ಪ್ರಕರಣ ಸುಪ್ರೀಂಕೋರ್ಟ್‍ನಲ್ಲಿದ್ದು, ಗಣಿಗಾರಿಕೆಗೆ ಟೆಂಡರ್ ಕರೆಯಲು ಅನುಮತಿ ನೀಡುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

"ಛತ್ತೀಸಗಢ ರಾಜ್ಯದಲ್ಲಿ ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರ ಸ್ಥಾಪಿಸಲು ಹಂಚಿಕೆಯಾಗಿರುವ ಜಾಗಕ್ಕೆ ಬಂದೋಬಸ್ತು ಮಾಡಲಾಗಿದೆ. ಅಲ್ಲದೆ ಕಲ್ಲಿದ್ದಲು ಪೂರೈಕೆಗೆ ಕೇಂದ್ರ ಸರ್ಕಾರಕ್ಕೆ ಅರ್ಜಿ ಸಲ್ಲಿಸಲಾಗಿದ್ದು, ಇದು ಹಂಚಿಕೆಯಾಗುವ ಅಂತಿಮ ಹಂತದಲ್ಲಿದೆ. ಈ ಯೋಜನೆಯನ್ನು ರದ್ದುಪಡಿಸಲಾಗಿದೆ ಎಂದು ಛತ್ತೀಸ್ ಗಢ ಮುಖ್ಯಮಂತ್ರಿ ಅವರು ನೀಡಿರುವ ಹೇಳಿಕೆ ಸತ್ಯಕ್ಕೆ ದೂರವಾಗಿದೆ," ಎಂದು ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Power minister DK Shivakumar said the action would be taken to purchase 10 lakh tonnes of coal to meet the shortage of power.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ