ಪಟ್ಟು ಬಿಡದ ರಮೇಶ್ ಕುಮಾರ್ ಮತ್ತು ಬೆಳಗಾವಿ ಅಧಿವೇಶನದ 9 ಅಂಶಗಳು

Subscribe to Oneindia Kannada

ಬೆಳಗಾವಿ, ನವೆಂಬರ್ 15: ದಿನ ಮೂರು ಕಳೆದರೂ ಶಾಸಕರು ಬೆಳಗಾವಿ ಚಳಿಗಾಲದ ಅಧಿವೇಶನದತ್ತ ತಲೆ ಹಾಕುವ ಮನಸ್ಸು ಮಾಡಿಲ್ಲ. ಹೀಗಾಗಿ ವೈದ್ಯರ ಮುಷ್ಕರ, ಸಿದ್ದರಾಮಯ್ಯರಿಂದ ಪೂರಕ ಅಂದಾಜು ಮಂಡನೆಯಂಥ ಪ್ರಮುಖ ಘಟನೆಗಳು ನಡೆಯುತ್ತಿದ್ದರೂ ವಿಧಾನಸಭೆ ಮಾತ್ರ ಬುಧವಾರವೂ ಖಾಲಿ ಹೊಡೆಯುತ್ತಿತ್ತು.

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಿಂದಲೇ ಹೊರ ನಡೆದ ರಮೇಶ್ ಕುಮಾರ್... ಪಟ್ಟು ಬಿಡದ ವೈದ್ಯರಿಂದ ನಾಳೆ ಬೆಂಗಳೂರಿನಲ್ಲೂ ಮುಷ್ಕರ ಆರಂಭ... ರೋಗಿಗಳ ಜೀವ ಹೋದರೂ ಪಟ್ಟು ಬಿಡದ ಸರಕಾರ, ವೈದ್ಯರು... ಕುರಿ ಕಾಯ್ದ ಪೊಲೀಸರು... ಮೆಟ್ರೋದಲ್ಲಿ ಮಹಿಳೆಯರಿಗಾಗಿ ಪ್ರತ್ಯೇಕ ಬೋಗಿ.. ಪೂರಕ ಅಂದಾಜು ಮಂಡಿಸಿದ ಸಿದ್ದರಾಮಯ್ಯ..

ಚಿತ್ರಗಳು : ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ

ಹೀಗೆ ವಿಧಾನಸಭೆ ಕಲಾಪ ಹಾಗೂ ಅಧಿವೇಶನಕ್ಕೆ ಸಂಬಂಧಿಸಿದಂತೆ ಹಲವು ಬೆಳವಣಿಗೆಗಳಿಗೆ ರಾಜ್ಯದ ಜನತೆ ಬುಧವಾರ ಸಾಕ್ಷಿಯಾದರು. ಇಡೀ ದಿನ ಬೆಳಗಾವಿ ಅಧಿವೇಶನದ ಸುತ್ತ ನಡೆದ ಬೆಳವಣಿಗೆಗಳ ಸಮಗ್ರ ಚಿತ್ರಣ ಇಲ್ಲಿದೆ.

ಆರೋಗ್ಯ ಸಚಿವರು ರೆಬೆಲ್

ಆರೋಗ್ಯ ಸಚಿವರು ರೆಬೆಲ್

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ವಿವಾದಕ್ಕೆ ಕಾರಣವಾಗಿರುವ ಕೆಎಂಪಿಎ ಮಸೂದೆ ಕುರಿತು ಸಭೆಯಲ್ಲಿ ಹೆಚ್ಚಿನ ಚರ್ಚೆ ನಡೆಯಲಿಲ್ಲ.

ಕರ್ನಾಟಕ ಖಾಸಗಿ ವೈದ್ಯಕೀಯ ತಿದ್ದುಪಡಿ ಮಸೂದೆ ವಿಚಾರದಲ್ಲಿ ಸರ್ಕಾರದ ವಿರುದ್ಧ ಆರೋಗ್ಯ ಸಚಿವ ರಮೇಶ್ ಕುಮಾರ್ ಅಸಮಾಧಾನ ಹೊರಹಾಕಿ ಅರ್ಧದಲ್ಲೇ ಹೊರನಡೆದರು.

ಸದಾಶಿವ ಆಯೋಗದ ವರದಿ ಜಾರಿ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಪಟ್ಟು ಹಿಡಿದರೆ, ಕೆಲವು ಶಾಸಕರು ವಿರೋಧ ವ್ಯಕ್ತಪಡಿಸಿದರು. ಅಂತಿಮವಾಗಿ ಹಿರಿಯ ಸಚಿವರು, ನಾಯಕರೊಂದಿಗೆ ಚರ್ಚಿಸಿ ತೀರ್ಮಾನ ಮಾಡುವುದಾಗಿ ಸಿಎಂ ಭರವಸೆ ನೀಡಿದರು.

ಎಲ್ಲಾ ಶಾಸಕರು ಕಡ್ಡಾಯವಾಗಿ ಕಲಾಪದಲ್ಲಿ ಪಾಲ್ಗೊಳ್ಳಬೇಕು ಎಂದು ಸಿದ್ದರಾಮಯ್ಯ ಸೂಚನೆ ನೀಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಪಾಲ್ಗೊಂಡಿದ್ದರು. ಹಲವು ಶಾಸಕರು ಗೈರು ಹಾಜರಾಗಿದ್ದರು. ಸಚಿವರಾದ ರಮೇಶ ಜಾರಕಿಹೊಳಿ, ಸಂತೋಷ್ ಲಾಡ್, ಆರ್.ವಿ.ದೇಶಪಾಂಡೆ, ಪ್ರಿಯಾಂಕ ಖರ್ಗೆ, ಈಶ್ವರ ಖಂಡ್ರೆ ಗೈರು ಹಾಜರಾದ ಪ್ರಮುಖರಾಗಿದ್ದಾರೆ.

ಸಿಬಿಐ ಪ್ರಬಲ ಸಾಕ್ಷಿ ಹುಡುಕಲಿ

ಸಿಬಿಐ ಪ್ರಬಲ ಸಾಕ್ಷಿ ಹುಡುಕಲಿ

ಸಚಿವ ಜಾರ್ಜ್ ಈಗಲೇ ರಾಜೀನಾಮೆ ನೀಡೋದು ಉಚಿತ ಅಲ್ಲ. ಸಚಿವ ಜಾರ್ಜ್ ರಾಜೀನಾಮೆಗೆ ಈಗ ಸಮಯ ಅಲ್ಲ. ಪ್ರಕರಣದಲ್ಲಿ ಸಿಬಿಐ ಪ್ರಬಲ ಸಾಕ್ಷಿ ಹುಡುಕಲಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ವಿಧಾನಸಭೆಯಲ್ಲೇ ಹೇಳಿದರು.

ಆದರೆ ಸರಕಾರದ ವಿರುದ್ಧ ಹರಿಹಾಯ್ದ ಅವರು, ಡಿವೈಎಸ್ ಪಿ ಗಣಪತಿ ಆತ್ಮಹತ್ಯೆ ಪ್ರಕರಣದ ತನಿಖೆ ವೇಳೆಯಲ್ಲಿ ಬುಲೆಟ್ ಸಿಕ್ಕಿದೆ. ಎಷ್ಟರ ಮಟ್ಟಿಗೆ ಮಹಜರು ಮಾಡಲಾಗಿದೆ ಎಂಬುದನ್ನು ಇದು ಸೂಚಿಸುತ್ತದೆ. ಸರ್ಕಾರಕ್ಕೆ ನಾಚಿಕೆಯಾಗಬೇಕು. ಸಾಕ್ಷಿ ನಾಶ ಮಾಡಲು ಹೋಗಿ ಸರಕಾರದಿಂದ ಅಧಿಕಾರ ದುರ್ಬಳಕೆಯಾಗುತ್ತಿದ ಎಂದು ಹರಿಹಾಯ್ದರು.

ಈ ಅಧಿವೇಶನದಲ್ಲಿ ಸರ್ಕಾರ ಎಸ್ಸಿಎಸ್ಟಿ ನೌಕರರ ಮೀಸಲು ಮುಂದುವರೆಸುವ ವಿಧೇಯಕ ತಂದಿದೆ. ಈ ವಿಧೇಯಕ ಬಹಳ ದಿನಗಳ ಕಾಲ ಜಾರಿಯಲ್ಲಿ ಇರುವುದಿಲ್ಲ ಎಂದು ಅವರು ಹೇಳಿದರು.

ಕುರಿ ಕಾಯ್ದ ಪೊಲೀಸರು

ಕುರಿ ಕಾಯ್ದ ಪೊಲೀಸರು

ಸುವರ್ಣಸೌಧದ ಒಳಗೆ ಅಧಿವೇಶನ ನಡೆಯುತ್ತಿದ್ದರೆ ಹೊರಗೆ ಪೊಲೀಸರು ಲಾಠಿ ಬೀಸುತ್ತಾ 'ಟರ್ ಬ್ಯಾ' ಎನ್ನುತ್ತಾ ಕುರಿಗಳನ್ನು ಸುವರ್ಣಸೌಧದ ಅಂಗಳದಿಂದ ಆಚೆ ಅಟ್ಟುವುದರಲ್ಲಿ ನಿರತರಾಗಿದ್ದರು.

ಕುರುಬ ಜನಾಂಗವನ್ನು ಎಸ್.ಟಿ ಗೆ ಸೇರಿಬೇಕೆಂಬ ಒತ್ತಾಯದೊಂದಿಗೆ ಬಂದಿದ್ದ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಸಂಘಟನೆಯ ಹೋರಾಟಗಾರರು ಸುವರ್ಣಸೌಧದ ಒಳಕ್ಕೆ ಕುರಿಗಳನ್ನು ಹಾಯಿಸಲು ಪ್ರಯತ್ನಪಟ್ಟರು.

ಇದರಿಂದ ಸದನದ ಹೊರಗೆ ಕೆಲ ಕಾಲ ಉದ್ವಿಗ್ನ ಪರಿಸ್ಥಿತಿ ಉಂಟಾಯಿತು. ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದಾಗ ಕುರಿ ಓಡಿಸುವ ಶಿಕ್ಷೆ ಪೊಲೀಸರಿಗೆ ಸಿಕ್ಕಿತು. ಪೊಲೀಸರು ಸ್ವಲ್ಪ ಸಮಯ ಕುರಿ ಕಾಯಬೇಕಾಯಿತು.

ಕಣ್ಣೀರು ಗ್ಲಿಸರಿನ್ ಹಾಕಿದ್ರೂ ಬರತ್ತೆ

ಕಣ್ಣೀರು ಗ್ಲಿಸರಿನ್ ಹಾಕಿದ್ರೂ ಬರತ್ತೆ

ಸಾರ್ವಜನಿಕ ಜೀವನದಿಂದಲೇ ಬೇಕಿದ್ದರೆ ದೂರ ಸರಿಯುತ್ತೇನೆ, ಆದರೆ, ಕೆಪಿಎಂಇ ವಿಧೇಯಕ ಮಂಡನೆಯಾಗದೆ ವಿರಮಿಸುವುದಿಲ್ಲ ಎಂದು ಖಾಸಗಿ ವೈದ್ಯರಿಗೆ ಆರೋಗ್ಯ ಸಚಿವ ರಮೇಶ್ ಕುಮಾರ್ ಸೆಡ್ಡು ಹೊಡೆದಿದ್ದಾರೆ.
ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ವಿಧೇಯಕದ ವಿರುದ್ಧ ಪ್ರತಿಭಟನೆಗಿಳಿದಿರುವ ಖಾಸಗಿ ವೈದ್ಯರ ನೇತೃತ್ವ ವಹಿಸಿರುವ ಐಎಂಎ (ಕರ್ನಾಟಕ) ಅಧ್ಯಕ್ಷ ಡಾ. ರವೀಂದ್ರ ರಮೇಶ್ ಕುಮಾರ್ ವಿರುದ್ಧ ಹರಿಹಾಯ್ದಿದ್ದಾರೆ.

"ನಿಮ್ಮನ್ನು ಕೊಲೆಗಡುಕರು ಅಂದ್ರು ಅಂತ ಹೇಳಿ ಕಣ್ಣೀರು ಹಾಕಿದ್ರಿ. ಡಾಕ್ಟರ್ಸ್ ಗಳನ್ನು ಪಿಕ್ ಪಾಕೆಟರ್ಸ್, ಕೊಲೆಗಡುಕರು, ದರೋಡೆಕೋರರು ಅಂತ ನೀವು ಕರಿದ್ರಿ. ನಿಮ್ಮನ್ನು ಕೊಲೆಗಡುಕರು ಅಂದಿದಕ್ಕೆ ನಿಮ್ ಮಕ್ಕಳು ಕೇಳಿದ್ರು.. ನಮ್ಮನ್ನು ಈಗ ನಮ್ಮ ಮಕ್ಕಳು ಕೇಳ್ತಿದಾರೆ. ನಮ್ಮ ಮಕ್ಕಳಿಗೆ ನಾವೇನು ಉತ್ತರ ಕೊಡಬೇಕು" ಎಂದು ಅವರು ಪ್ರಶ್ನಿಸಿದ್ದಾರೆ.

ಆಡೋ ಮಾತು, ನಾಲಿಗೆ ಮೇಲೆ ಹಿಡಿತ ಇಲ್ಲ ಅಂದ್ರೆ, ವಿಚಿತ್ರವಾದ ಭ್ರಮೆಗೆ ಬಿದ್ರೆ ಹೀಗೆಲ್ಲ ವ್ಯತ್ಯಾಸಗಳಾಗ್ತಾವೆ. ಕಣ್ಣೀರೇನು ಗ್ಲಿಸರಿನ್ ಹಾಕಿದ್ರೂ ಬರುತ್ತೆ.. ಅದೆಲ್ಲ ಅಲ್ಲ. ಕಣ್ಣೀರು ಹೃದಯದಿಂದ ಬರಬೇಕು ಎಂದು ಅವರು ಚಾಟಿ ಬೀಸಿದ್ದಾರೆ.

ಒಂದು ವೇಳೆ ವಿಧೇಯಕ ಮಂಡನೆಯಾದರೆ ರಾಜ್ಯಾದ್ಯಂತ ಖಾಸಗಿ ಆಸ್ಪತ್ರೆಗಳನ್ನೇ ಬಂದ್ ಮಾಡುವುದಾಗಿ ವೈದ್ಯರು ಬೆದರಿಕೆ ಒಡ್ಡಿದ್ದಾರೆ. ಇವರಿಬ್ಬರ ಜಗಳದಲ್ಲಿ ರೋಗಿಗಳು ಒದ್ದಾಡುತ್ತಿದ್ದಾರೆ.

ಮಹಿಳೆಯರಿಗೆ ಪ್ರತ್ಯೇಕ ಬೋಗಿ

ಮಹಿಳೆಯರಿಗೆ ಪ್ರತ್ಯೇಕ ಬೋಗಿ

ಕೆಲವೇ ದಿನಗಳಲ್ಲಿ ನಮ್ಮ ಮೆಟ್ರೋದಲ್ಲಿ ಮಹಿಳೆಯರಿಗಾಗಿಯೇ ಪ್ರತ್ಯೇಕ ಬೋಗಿ ಗಳನ್ನು ಆರಂಭಿಸುವುದಗಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.

ಜೆಡಿಎಸ್ ಶಾಸಕ ಗೋಪಾಲಯ್ಯ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸದ್ಯದಲ್ಲೇ ಮಹಿಳಾ ಬೋಗಿಗಳನ್ನು ಆರಂಭಿಸುವುದಾಗಿ ಹೇಳಿದರು.

ಪ್ರಶ್ನೋತ್ತರ ಅವಧಿ

ಪ್ರಶ್ನೋತ್ತರ ಅವಧಿ

ಪರಿಷತ್ ಪ್ರಶ್ನೋತ್ತರ ಅವಧಿಯಲ್ಲಿ ಕೇಳಿದ ಹಲವು ಪ್ರಶ್ನೆಗಳಿಗೆ ಸಚಿವರು ಉತ್ತರಿಸಿದ್ದಾರೆ. ಸಂಕ್ಷಿಪ್ತ ಉತ್ತರಗಳು ಹೀಗಿವೆ,

*ತುಂಗಭದ್ರಾ ಅಣೆಕಟ್ಟು 32 ಟಿಎಂಸಿ ಹೂಳು ತೆಗೆಯುವುದು ಕಷ್ಟ. ಕಾರಣ ಹೂಳು ಹಾಕಲು 66 ಸಾವಿರ ಎಕರೆ ಜಾಗಬೇಕು. ತುಂಗಾಭದ್ರ ನೀರಿನ ಶೇಖರಣೆ ಸಂಗ್ರಹ ಸಾಮರ್ಥ್ಯ ಸರಿದೂಗಿಸಲು ಗಂಗಾವತಿ ತಾಲೂಕು ನವಲಿ ಗ್ರಾಮದ ಸಮೀಪ ನೀರಿನ ಶೇಖರಣೆ ಪಸ್ತಾಪ ಇದೆ ಎಂದ ಜಲಸಂಪನ್ಮೂಲ ಸಚಿವ ಎಂಬಿ ಪಾಟೀಲ್.

* ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಸುಮಾರು 11 ಲಕ್ಷ ಕಾರ್ಮಿಕರು ನೋಂದಾವಣಿ ಮಾಡಿಕೊಂಡಿದ್ದಾರೆ. ಇನ್ನೂ 15 ಲಕ್ಷ ಜನರನ್ನು ನೋಂದಾವಣಿ ಮಾಡಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ. ಕಟ್ಟಡ ನಿರ್ಮಾಣ ಕಾರ್ಮಿಕರಿಗಾಗಿ ವೆಬ್ ಸೈಟ್ ನಿರ್ಮಾಣ ಮಾಡಲಾಗುತ್ತಿದೆ. ಇಲ್ಲಿ ಕಟ್ಟಡ ಕಾರ್ಮಿಕರು, ಪೇಂಟರ್ ಬಗ್ಗೆ ಮಾಹಿತಿ ಸಿಗಲಿದೆ. ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.

ಸಿಸಿಟಿವಿ ಅಳವಡಿಕೆ ಕಡ್ಡಾಯ

ಸಿಸಿಟಿವಿ ಅಳವಡಿಕೆ ಕಡ್ಡಾಯ

ಬೆಂಗಳೂರಿನಲ್ಲಿ ಸಿಸಿಟಿವಿ ಅಳವಡಿಕೆಗೆ ಪ್ರತಿ ಕಾರ್ಪೋರೇಟರ್ ಗೆ ಹತ್ತು ಲಕ್ಷ ರೂಪಾಯಿ ನೀಡಲಾಗುತ್ತಿದೆ. ಗುರಪ್ಪನ ಪಾಳ್ಯ ವಾರ್ಡ್ ನಲ್ಲಿ ಪ್ರಾಯೋಗಿಕವಾಗಿ 100 ಹೈ ಡೆಫಿನೇಷನ್ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.

ರಾಜ್ಯಾದ್ಯಂತ ಖಾಸಗಿ ವ್ಯಕ್ತಿಗಳು ಆರು ಲಕ್ಷಕ್ಕೂ ಹೆಚ್ಚು ಸಿಸಿ ಕ್ಯಾಮರಾ ಅಳವಡಿಸಿಕೊಂಡಿದ್ದಾರೆ. ಇದೀಗ ನಾವೂ ಸಿಸಿ ಕ್ಯಾಮರಾ ಅಳವಡಿಕೆ ಕಡ್ಡಾಯ ಮಾಡುತ್ತಿದ್ದು, ಇದರಿಂದ ಅಪರಾಧ ಪ್ರಕರಣಗಳ ನಿಯಂತ್ರಣ ಸಾಧ್ಯ ಎಂದರು.

ಈ ಕಾಯ್ದೆ ಉಲ್ಲಂಘಿಸುವ ಧಾರ್ಮಿಕ ಸ್ಥಳಗಳು ಮತ್ತು ಶೈಕ್ಷಣಿಕ ಸಂಸ್ಥೆಗಳನ್ನು ಸೀಜ್ ಮಾಡುವುದರಿಂದ ವಿನಾಯ್ತಿ ನೀಡುತ್ತೇವೆ. ಉಳಿದ ವಾಣಿಜ್ಯ ಸಂಸ್ಥೆಗಳಿಗೆ ಮಾತ್ರ ಕಾಯ್ದೆ ಉಲ್ಲಂಘಿಸಿದರೆ, ಪೊಲೀಸರು ಸೀಜ್ ಮಾಡಬಹುದು ಎಂದು ಅವರು ಹೇಳಿದರು.

ವಿಧಾನಸಭೆಯಲ್ಲಿ ಪೂರಕ ಅಂದಾಜು ಮಂಡನೆ

ವಿಧಾನಸಭೆಯಲ್ಲಿ ಪೂರಕ ಅಂದಾಜು ಮಂಡನೆ

ಸಿದ್ಧರಾಮಯ್ಯ ವಿಧಾನಸಭೆಯಲ್ಲಿ ಮತ್ತೊಂದು ಪೂರಕ ಅಂದಾಜು ಮಂಡನೆ ಮಾಡಿದ್ದಾರೆ. 7476 ಕೋಟಿ 86 ಲಕ್ಷ ರೂ ವೆಚ್ಚದ ಪೂರಕ ಅಂದಾಜುಗಳನ್ನು ವಿಧಾನಸಭೆಯಲ್ಲಿ ಮಂಡಿಸಿದ್ದಾರೆ. ರಾಜ್ಯ ಸರಕಾರ ಮಾಡಿರುವ ಸಾಲದ ಮೇಲಿನ ಬಡ್ಡಿ ಪಾವತಿಗೆ ಮತ್ತು ರೈತರ ಸಾಲ ಮನ್ನಾದಂತಹ ಕಾರ್ಯಕ್ರಮಗಳಿಗೆ ಈ ಅನುದಾನದಲ್ಲಿ ಹೆಚ್ಚಿನ ಭಾಗವನ್ನು ವೆಚ್ಚ
ಮಾಡಲಾಗುತ್ತಿದೆ.

ಸರಕಾರ ಪಡೆದುಕೊಂಡಿರುವ ಮುಕ್ತ ಮಾರುಕಟ್ಟೆ ಸಾಲದ ಮೇಲಿನ ಬಡ್ಡಿ ಹೆಚ್ಚಳವಾದ ಕಾರಣ ಬಡ್ಡಿ ಪಾವತಿಗಾಗಿ 153 ಕೋಟಿ ರೂ., ಸಹಕಾರಿ ಸಂಘಗಳಲ್ಲಿನ ರೈತರ ಸಾಲ ಮನ್ನಾ ಮಾಡಲು 2999
ಕೋಟಿ ರೂ. ಗಳನ್ನು ವೆಚ್ಚ ಮಾಡಲು ಈ ಪೂರಕ ಅಂದಾಜಿನಲ್ಲಿ ಅವಕಾಶ ಕಲ್ಪಿಸಲಾಗಿದೆ.

ಹಿಂಗಾರು ಹಂಗಾಮಿನಲ್ಲಿ ರೈತರಿಗಾದ ಬೆಳೆಹಾನಿಯನ್ನು ಪಾವತಿಸಲು 795 ಕೋಟಿ ರೂ., ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾನದ ಅಭಿವೃದ್ಧಿ ಕಾಮಗಾರಿಗಳಿಗೆ 25 ಕೋಟಿ ರೂ, ರಾಜ್ಯ ಸರಕಾರದ ಕಾರ್ಯಕ್ರಮಗಳನ್ನು ಪ್ರಚಾರ ಮಾಡೋ ಸಲುವಾಗಿ ಬರೋಬ್ಬರಿ 66 ಕೋಟಿ 53 ಲಕ್ಷ ರೂ. ವೆಚ್ಚ ಮಾಡಲಾಗುತ್ತಿದೆ. ಜತೆಗೆ ಕೆಎಸ್ ಆರ್ ಟಿಸಿ ಬಸ್ ಗಳಲ್ಲಿ ಸರಕಾರಿ ಕಾರ್ಯಕ್ರಮಗಳನ್ನು ವಿನೈಲ್ ಮೂಲಕ ಪ್ರಚಾರ ಮಾಡಲು 31 ಕೋಟಿ 25 ಲಕ್ಷ ರೂ. ನೀಡುವುದು. ಮೋಡಬಿತ್ತನೆ ಕಾರ್ಯಕ್ರಮ ಮಾಡೋದಕ್ಕಾಗಿ 14 ಕೋಟಿ 37 ಲಕ್ಷ ರೂ. ನೀಡಲಾಗಿದೆ.

ಹೀಗೆ ಮಿನಿ ಬಜೆಟ್ ರೀತಿಯಲ್ಲಿ ಪೂರಕ ಅಂದಾಜುಗಳನ್ನು ಸಿಎಂ ಸಿದ್ಧರಾಮಯ್ಯ ಅವರು ಮಂಡನೆ ಮಾಡಿದ್ದು, ವಿಧಾನಸಭೆಯಲ್ಲಿ ಇದಕ್ಕೆ ಅನುಮೋದನೆ ದೊರೆಯಲಿದೆ.

ಮೂರನೇ ದಿನಕ್ಕೆ ಕಾಲಿಟ್ಟ ಮುಷ್ಕರ

ಮೂರನೇ ದಿನಕ್ಕೆ ಕಾಲಿಟ್ಟ ಮುಷ್ಕರ

ಕೆಪಿಎಂಇ ಕಾಯ್ದೆ ವಿರೋಧಿಸಿ ಖಾಸಗಿ ಆಸ್ಪತ್ರೆ ವೈದ್ಯರು ನಡೆಸುತ್ತಿರುವ ಮುಷ್ಕರ ಮೂರನೇ ದಿನಕ್ಕೆ ಕಾಲಿಟ್ಟಿದೆ. ಸರ್ಕಾರ ವೈದ್ಯರ ಹಾದಿಗೆ ಬರುತ್ತಿಲ್ಲ, ವೈದ್ಯರೂ ತಮ್ಮ ಪಟ್ಟು ಸಡಿಲಿಸುತ್ತಿಲ್ಲ.

ವೈದ್ಯರ ಮುಷ್ಕರದಿಂದಾಗಿ ಎರಡು ದಿನದಲ್ಲಿ 10-15 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ರಾಜ್ಯದೆಲ್ಲೆಡೆ ರೋಗಿಗಳ ಪರದಾಟ ಮುಂದುವರೆದಿದೆ. ಅಗತ್ಯ ಚಿಕಿತ್ಸೆ ಬೇಕಾಗಿರುವ ಗಡಿಭಾಗದ ಕೆಲ ಅನುಕೂಲಸ್ಥರು ಹೊರ ರಾಜ್ಯಗಳಿಗೆ ಹೋಗಿ ಅಧಿಕ ಹಣ ತೆತ್ತು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Legislators did not want to come to the Belgaum Winter Session on the third day too. Meanwhile, the doctors' strike continued for the third day. Also Siddaramaiah presented a supplementary budget in the Assembly.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ