ಬೆಳಗಾವಿ: ವಿಮಾನ ನೋಡಲು ಬಂದಿದ್ದ ವಿದ್ಯಾರ್ಥಿಗಳ ಬಂಧನ, ಬಿಡುಗಡೆ

By: ಒನ್ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಳಗಾವಿ, ಅಕ್ಟೋಬರ್ 15: ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದ ರನ್ ವೇ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ನಾಲ್ವರು ವಿದ್ಯಾರ್ಥಿಗಳನ್ನು ಶುಕ್ರವಾರ ವಶಕ್ಕೆ ಪಡೆದಿದ್ದ ಪೊಲೀಸರು, ಆ ನಂತರ ವಿಚಾರಣೆ ನಡೆಸಿ ಮುಚ್ಚಳಿಕೆ ಬರೆಸಿಕೊಂಡು ಬಿಡುಗಡೆ ಮಾಡಿದ್ದಾರೆ.

ಶುಕ್ರವಾರ ಬೆಳಗ್ಗೆ ಯುವಕರ ತಂಡವೊಂದು ರನ್ ವೇ ಸುತ್ತಮುತ್ತ ಓಡಾಡುತ್ತಿತ್ತು. ಇದು ಭದ್ರತಾ ಸಿಬ್ಬಂದಿ ಗಮನಕ್ಕೆ ಬಂದಿದೆ. ಆ ತಂಡವನ್ನು ವಶಕ್ಕೆ ಪಡೆದು, ಮಾರಿಹಾಳ ಪೊಲೀಸರಿಗೆ ಒಪ್ಪಿಸಿದ್ದಾರೆ. ಬೆಂಗಳೂರಿನಿಂದ ಆಗಮಿಸುವ ವಿಮಾನ ಇಳಿಯುವ ಕೆಲ ನಿಮಿಷಗಳ ಮೊದಲಷ್ಟೇ ಬಂಧನವಾಗಿದ್ದರಿಂದ ಕೆಲ ಸಮಯ ಆತಂಕಕ್ಕೆ ಕಾರಣವಾಯಿತು.[ಮಂಗಳೂರು ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆ]

Belagavi airport

ಹೈದರಾಬಾದ್ ನ ಶೇಟ್ ಸಮೀರ್, ಬಾಗಲಕೋಟೆಯ ಬಂದೇನವಾಜ್ ಜಮಾದಾರ, ಬೆಳಗಾವಿಯ ತೌಫಿಕ್, ಬಾಬುಲ್ ವಶಕ್ಕೆ ಪಡೆದಿದ್ದ ವಿದ್ಯಾರ್ಥಿಗಳು. ಇವರ ಹತ್ತಿರ ಯಾವುದೇ ಮಾರಕಾಸ್ತ್ರವೂ ಇರಲಿಲ್ಲ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಈ ವಿದ್ಯಾರ್ಥಿಗಳು ಪಂತ್ ಬಾಳೇಕುಂದ್ರಿಯ ಮದರಸಾದವರು ಎಂದು ಅಲ್ಲಿನ ಪ್ರಾಂಶುಪಾಲ ಮೊಹಮ್ಮದ್ ಸಲೀಂ ವಾಲೀಕಾರ ತಿಳಿಸಿದ್ದಾರೆ.[ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲು ಹೊಸ ರಸ್ತೆ]

ಈ ವಿದ್ಯಾರ್ಥಿಗಳು ವಿಮಾನದ ಲ್ಯಾಂಡಿಂಗ್ ಹಾಗೂ ಟೇಕ್ ಆಫ್ ನೋಡುವ ಸಲುವಾಗಿ ಬಂದಿದ್ದರು ಅಷ್ಟೇ. ಆದ್ದರಿಂದ ಅವರಿಂದ ಮುಚ್ಚಳಿಕೆ ಬರೆಸಿಕೊಂಡು ಬಿಟ್ಟು ಕಳಿಸಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಯಾವುದೇ ವಿಧ್ವಂಸಕ ಕೃತ್ಯ ನಡೆಸಲು ಬಂದವರಲ್ಲ ಎಂದು ಖಚಿತಪಡಿಸಿಕೊಂಡ ನಂತರವೇ ಬಿಟ್ಟು ಕಳಿಸಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
4 students arrested and released in Belagavi airport on Friday. These 4 are students of nearest Madarasa. They went to airport to see flights take off and landing. After confirmation students released.
Please Wait while comments are loading...