ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಏಡ್ಸ್ ಮುಕ್ತ ಕರ್ನಾಟಕ, ಸಿದ್ದರಾಮಯ್ಯ ಕನಸು

By Prasad
|
Google Oneindia Kannada News

ಬೆಳಗಾವಿ, ಡಿ. 3 : ಕರ್ನಾಟಕವನ್ನು ಎಚ್‌ಐವಿ/ಏಡ್ಸ್ ಮುಕ್ತ ರಾಜ್ಯವನ್ನಾಗಿ ಮಾಡುವ ಗುರಿಯನ್ನು ಸರ್ಕಾರ ಹೊಂದಿದ್ದು, ಈ ನಿಟ್ಟಿನಲ್ಲಿ ಎಲ್ಲಾ ಜನಪ್ರತಿನಿಧಿಗಳು ಕೈಜೋಡಿಸಬೇಕಾಗಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ತಿಳಿಸಿದ್ದಾರೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಮಂಗಳವಾರ ಸುವರ್ಣಸೌಧದಲ್ಲಿ ಆಯೋಜಿಸಲಾಗಿದ್ದ 'ಜನಪ್ರತಿನಿಧಿಗಳಿಗೆ ಸಮಗ್ರ ಆರೋಗ್ಯ' ಮತ್ತು ಎಚ್‌ಐವಿ/ಏಡ್ಸ್ ಕುರಿತು ಮಾಹಿತಿ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಎಚ್‌ಐವಿ ಪೀಡಿತರಿಗೆ ಸಾಮಾಜಿಕ ಬಹಿಷ್ಕಾರ ಹಾಕುವ ಪರಿಸ್ಥಿತಿ ತೊಲಗಬೇಕಾಗಿದೆ. ಅವರನ್ನು ತಿರಸ್ಕಾರ ಭಾವದಿಂದ ನೋಡದೆ ಆತ್ಮವಿಶ್ವಾಸ ತುಂಬುವ ಕಾರ್ಯ ನಡೆಯಬೇಕಿದೆ. ಅವರಿಗೆ ಸಾಂತ್ವನ ನೀಡಿದರೆ ಇನ್ನಷ್ಟು ವರ್ಷ ಆರೋಗ್ಯದಿಂದ ಅವರು ಬಾಳಲು ಸಾಧ್ಯವಿದೆ. ಇದೇ ರೀತಿ ಎಚ್‌ಐವಿ ಪೀಡಿತರು ಸ್ವಯಂ ನಿರ್ಬಂಧಗಳನ್ನು ಹಾಕಿಕೊಂಡು ಈ ಸೋಂಕು ಇತರರಿಗೆ ಹರಡದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.

Winter session : Siddaramaiah wants to make Karnataka AIDS free

ರಾಜ್ಯದಲ್ಲಿ ಇನ್ನು ಮುಂದೆ ಯಾರಿಗೂ ಎಚ್‌ಐವಿ ಸೋಂಕು ಬಾರದಂತೆ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಈ ಕಾರ್ಯದಲ್ಲಿ ಜನಪ್ರತಿನಿಧಿಗಳು ಕೈಜೋಡಿಸಿದರೆ ರಾಜ್ಯವನ್ನು ಎಚ್‌ಐವಿ/ಏಡ್ಸ್ ಮುಕ್ತವಾಗಿ ಮಾಡಲು ಸಾಧ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಮಾವೇಶವನ್ನು ಉದ್ಘಾಟಿಸಿದ ವಿಧಾನಸಭೆ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರು, ಏಡ್ಸ್ ಜಾಗೃತಿ ವಿಷಯದಲ್ಲಿ ಗ್ರಾಮ ಪಂಚಾಯತ್‌ನಿಂದ ಹಿಡಿದು ಲೋಕಸಭೆಯವರೆಗೆ ಎಲ್ಲಾ ಜನಪ್ರತಿನಿಧಿಗಳು ಆಸಕ್ತಿ ವಹಿಸಬೇಕಿದೆ. ಎಲ್ಲಾ ಜನಪ್ರತಿನಿಧಿಗಳು ಈ ರೋಗದ ಜಾಗೃತಿ ವಿಷಯದಲ್ಲಿ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕು ಎಂದು ಹೇಳಿದರು.

ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವರು ಹಾಗೂ ಎಚ್‌ಐವಿ/ಏಡ್ಸ್ ಕುರಿತ ಸಂಸದೀಯ ವೇದಿಕೆಯ ಅಧ್ಯಕ್ಷ ಆಸ್ಕರ್ ಫರ್ನಾಂಡಿಸ್ ಅವರು, ಎಚ್‌ಐವಿ ಸೋಂಕು ಹರಡುವಿಕೆ ಪ್ರಮಾಣ ದೇಶದಲ್ಲಿ ಶೇ.50ರಷ್ಟು ಕಡಿಮೆಯಾಗಿದೆ. ಆದರೂ ದೇಶ ಎಚ್‌ಐವಿ ಪೀಡಿತರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಈ ರೋಗದ ಕುರಿತು ಗ್ರಾಮಸಭೆಗಳಲ್ಲಿ ಚರ್ಚೆಯಾಗಬೇಕಿದೆ. ಏಡ್ಸ್ ಕುರಿತು ಜಾಗೃತಿಯಲ್ಲಿ ಆರೋಗ್ಯ ಇಲಾಖೆ ಜತೆಯಲ್ಲಿ ಶಿಕ್ಷಣ, ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಸಮಾಜ ಕಲ್ಯಾಣ ಸೇರಿದಂತೆ ಪ್ರಮುಖ ಇಲಾಖೆಗಳು ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಸಚಿವ ಎಚ್.ಕೆ.ಪಾಟೀಲ್ ಅವರು, ರಾಜ್ಯದ ಎಲ್ಲಾ 5629 ಗ್ರಾಮ ಪಂಚಾಯತ್‌ಗಳಲ್ಲಿ ಏಡ್ಸ್ ಜಾಗೃತಿಗೆ ಸಮಿತಿ ರಚಿಸಲಾಗುವುದು. ಎಚ್‌ಐವಿ ಏಡ್ಸ್ ಕುರಿತು ಗ್ರಾಮಸಭೆಗಳಲ್ಲಿ ಜಾಗೃತಿ ಮೂಡಿಸಲಾಗುವುದು. ಇದಕ್ಕಾಗಿ ಆರೋಗ್ಯ ಇಲಾಖೆಯ ಸಹಕಾರ ಪಡೆಯಲಾಗುವುದು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್, ಏಡ್ಸ್ ಹಾಗೂ ಎಚ್‌ಐವಿ ಕುರಿತು ಜನಪ್ರತಿನಿಧಿಗಳಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಸಮಾವೇಶವನ್ನು ಆಯೋಜಿಸಲಾಗಿದೆ. ಇದಕ್ಕಾಗಿ ರಾಷ್ಟ್ರಮಟ್ಟದಲ್ಲಿರುವ ಸಂಸದೀಯ ವೇದಿಕೆ ಮಾದರಿಯಲ್ಲಿ ಶಾಸಕಾಂಗ ವೇದಿಕೆಯನ್ನು ರಚಿಸಲಾಗುತ್ತಿದೆ ಎಂದು ಹೇಳಿದರು.

ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರು, ಎಚ್.ಐ.ವಿ/ಏಡ್ಸ್ ಕುರಿತ ಶಾಸಕಾಂಗ ವೇದಿಕೆ ರಚನೆಯ ಘೋಷಣೆಯನ್ನು ಮಾಡಿದರು. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಅವರು ಆರೋಗ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳ ಕುರಿತಾದ ಪುಸ್ತಕವನ್ನು ಬಿಡುಗಡೆಗೊಳಿಸಿದರು.

ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್, ಕಾನೂನು ಸಚಿವ ಟಿ.ಬಿ.ಜಯಚಂದ್ರ, ಕಂದಾಯ ಸಚಿವ ಶ್ರೀನಿವಾಸ ಪ್ರಸಾದ್, ಪೌರಾಡಳಿತ ಸಚಿವ ಖಮರುಲ್ ಇಸ್ಲಾಮ್, ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ, ಶಾಸಕರಾದ ಮೋಟಮ್ಮ, ತಾರಾ ಅನುರಾಧ, ವಿಮಲಾಗೌಡ ಸೇರಿದಂತೆ ಜನಪ್ರತಿನಿಧಿಗಳು, ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

English summary
Chief minister Siddaramaiah has said, govt aims to make Karnataka AIDS free. He was speaking to the media at AIDS awareness programme organized by Health and Family Welfare department in Belgaum during winter session.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X