ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ಪೆಷಲ್: ನ್ಯಾಯ ದೇವರ ಅಂಗಳದಲ್ಲಿ ಏನಿದು ಭ್ರಷ್ಟಾಚಾರ

By ಮಹಾಂತ ವಕ್ಕುಂದ
|
Google Oneindia Kannada News

ಸುಮಾರು 20 ದಿನಗಳ ಹಿಂದೆ ಅದೊಂದು ಸಂಜೆ ಬೆಳಗಾವಿಯ ಜೆ ಎಂ ಎಫ್ ಸಿ ನ್ಯಾಯಾಲಯದ ಅಂಗಳದಲ್ಲಿ ಅದ್ಯಾವುದೋ ಕೆಲಸದ ನಿಮಿತ್ತ ಹೋಗಿದ್ದೆ, ಸಂಜೆ 5 ಕಾಲು ಸಮಯ. ಹೆಚ್ಚು ಕಡಿಮೆ ಕೋರ್ಟಿನ ಕಲಾಪ ಎಲ್ಲ ಮುಗಿದಿದ್ದವು. ಅದ್ಯಾವುದೋ ಒಬ್ಬ 16-17 ವರ್ಷದ ಮುಸ್ಲಿಂ ಬಾಲಕ ಕೋರ್ಟಿನ ಒಬ್ಬ ಗುಮಾಸ್ತನ ಹಿಂದೆ ಓಡಾಡುತ್ತಿದ್ದ. ತುಂಬಾ ಅಂಗಲಾಚಿ ಬೇಡಿ ಅವರನ್ನೇನೋ ಕೇಳುತ್ತಿದ್ದ, ಆ ಯಪ್ಪ ಮಾತ್ರ ಸಿಟ್ಟಿನಲ್ಲಿ ಉತ್ತರ ಕೊಟ್ಟುಕೊಂಡು ಆ ಹುಡುಗನನ್ನು ಸತಾಯಿಸುತ್ತಿದ್ದ.

2-3 ಸುತ್ತು ಇದೆ ಓಡಾಟ, ಕುತೂಹಲಕ್ಕೆ ಆ ಹುಡುಗನನ್ನು ಒಂದ ಸರಿ ಮಾತಾಡ್ಸೋಣ ಅನ್ನಸ್ತು . ಅವನನ್ನು ಕರೆದು ಕೇಳಿದೆ 'ಏನಾಯ್ತೋ ? ಯಾಕ ಅವರ ಹಿಂದ ಅಷ್ಟೊಂದು ಓಡಾಡಾಕತ್ತಿ ?'

ಅದಕ್ಕವನು ' ಸರ್ ನಮ್ಮಪ್ಪ 4 ತಿಂಗಳಿಂದ ಜೈಲ್ ಒಳಗ ಅದಾರ ರೀ , ಇವತ್ತು ಬೈಲ್ ಸಿಕ್ಕೆತಿ ಆದರ ಆರ್ಡರ್ ಕಾಪಿ ಕೊಡಾಕ ಇವರು 50 ರುಪಾಯಿ ಕೇಳಾಕತ್ತಾರ, ನನ್ನ ಹತ್ತರ ಬರೇ 10 ರುಪಾಯಿ ಅಷ್ಟ ಅದಾವು, ಆಗಲೇ 5.20 ಅಗೈತಿ , 6 ಘಂಟೆ ಒಳಗ ಜೈಲಿಗೆ ಆರ್ಡರ್ ತೊಗೊಂಡ ಹೋಗಲಿಲ್ಲ ಅಂದರ ನಮ್ಮಪ್ಪ ಹೊರಗ ಬರೋದು ಮತ್ತ 2 ದಿನ ತಡ ಅಕ್ಕೆತಿ, ನಾಳೆ ಸೆಕೆಂಡ್ ಸಾಟರ್ಡೆ, ನಾಡಿದ್ದು ಐತಾರ (ಭಾನುವಾರ). ನಮ್ಮವ್ವ ಬ್ಯಾರೆ ಮನಿಯೊಳಗ ದಿನಾ ಅಳತಾಳ, ಓಡ್ಯಾಡಾಕು ಬ್ಯಾರೆ ಯಾರು ಇಲ್ಲ, ಇವರಿಗೆ ಕೊಡಾಕ ನನ್ನ ಹತ್ರ ಈ 10 ರುಪಾಯಿ ಬಿಟ್ಟರ ಬೇರೆ ಏನೂ ಇಲ್ಲ, ಅದನ್ನ ಹೇಳಿದರ ಇವರು ಕೇಳಾಕತ್ತಿಲ್ಲ, 50 ರುಪಾಯಿ ಕೊಡೊತನ ಆರ್ಡರ್ ಕಾಪಿ ಕೊಡೋದಿಲ್ಲ ಅನ್ನಾಕತ್ತಾರು." ಸ್ವಲ್ಪ ಹರಿದ ಬಟ್ಟೆ, ಅವನ ಅವಸ್ಥೆ ಕಂಡು ನಿಜವಾಗಲು ಆತ ಬಡವ, ಆತನ ಬಳಿ ಕಾಸಿಲ್ಲ ಅನ್ನೋದು ಅರ್ಥವಾಗುತ್ತಿತ್ತು.

Real Estate Crisis, Corruption In Belagavi

ಈ ಹುಡುಗ ಹೇಳ್ತಿರೋದು ನಿಜವೋ ಸುಳ್ಳೋ ನನಗೆ ಗೊತ್ತಿಲ್ಲ, ಒಂದ ಸರಿ ನೋಡೋಣ ಅಂದುಕೊಂಡು ಈ ಕೇಸಿಗೆ ಸಂಬಂಧ ಪಟ್ಟವನಂತೆ ಆ ಗುಮಾಸ್ತನ ಬಳಿಗೆ ನಾನೇ ಹೋಗಿ ಮಾತನಾಡಿದಾಗ ನನಗು ಅದೇ ಪ್ರತ್ತ್ಯುತ್ತರ, ಬಾಲಕನ ಮಾತು ನಿಜವಾಗಿತ್ತು. ಲಂಚ ಕೊಡೋದು ತಪ್ಪು ತೊಗೊಳೋದು ತಪ್ಪು ಅನ್ನೋ ಸತ್ಯಾಂಶ ತಿಳಿದಿದ್ದರೂ ಜೇಬಿನಿಂದ 50 ರುಪಾಯಿ ತೆಗೆದು ಗುಮಾಸ್ತನ ಕೈಗಿಟ್ಟೆ. 10 ನಿಮಿಷಕ್ಕೆ ಆರ್ಡರ ಕಾಪಿ ಕೊಟ್ಟು ಆತ ಹೊರಟ, ಖುಷಿಯಲ್ಲಿ ಎಡಗೈ ಮುಂಗೈಯಿಂದ ಕಣ್ಣಿರು ಒರೆಸಿಕೊಂಡು ಆ ಹುಡುಗ 'ಅಬ್ಬಾಗೆ ಕರಕೊಂಡು ಬರ್ತೀನಿ' ಅಂತ ಹೇಳಿ ಹೊರಟು ಹೋದ. ಎಲ್ಲರು ಹೊರಟು ಹೋದರು ಆದರೆ ಮನಸ್ಸಿನಲ್ಲಿ ಭಾವನೆಗಳು ಮಾತ್ರ ಚುಚ್ಚತೊಡಗಿದವು.

4 ತಿಂಗಳಿಂದ ತಂದೆಯನ್ನು ತಬ್ಬದ ಆ ಕೈಗಳು, ಗಂಡನಿಲ್ಲದ ನೋವಿನಲ್ಲಿ ಆ ತಾಯಿ, ಯಜಮಾನನಿಲ್ಲದ ಆ ಮನೆ ಇದ್ಯಾವ ಭಾವನೆಯು ಆ ಗುಮಾಸ್ತನಿಗೆ 50 ರುಪಾಯಿಯ ವ್ಯಾಮೋಹದ ಮುಂದೆ ದೊಡ್ಡದಾಗಿ ಕಂಡಿರಲಿಲ್ಲ. ಜೈಲಿಗೆ ಹೋದವ ಅಪರಾಧಿಯೋ, ನಿರಪರಾಧಿಯೋ. ಹಿಂದುವೋ, ಮುಸಲ್ಮಾನನೋ ಅವನಿಗೆ ಕೋರ್ಟ್ ದೇವರು ಇದಾಗಲೇ ಬೈಲ್ ನೀಡಿತ್ತು ಆದರೆ ಪುಜಾರಿ ಗುಮಾಸ್ತ ಮಾತ್ರ ದಕ್ಷಿಣೆಯನ್ನೇ ನೋಡಿದರೆ ಹೊರತು ಸನ್ನಿವೇಶವನ್ನಲ್ಲ.

ಆ ಬಾಲಕನಿಗೆ ಗುಮಾಸ್ತ ಕೇಳಿದ್ದ 50 ರುಪಾಯೀ ನೈತಿಕ ಶುಲ್ಕವೋ ಅಥವಾ ಲಂಚವೋ ಎಂಬುದರ ಬಗ್ಗೆಯೂ ಆ ಬಾಲಕನಿಗೆ ತಿಳಿದಿರಲಿಲ್ಲ. ನಮ್ಮ ಸಮಾಜದ ಅದೆಷ್ಟೋ ಜನಕ್ಕೆ ಸರ್ಕಾರಿ ಕಛೇರಿಗೆ ಹೋದಾಗ ಅಲ್ಲಿನ ಅಧಿಕಾರಿಗಳು ಗತ್ತಿನಲ್ಲಿ ಕೇಳುವ ಶೈಲಿ ನೋಡಿದರೆ ಹೆಚ್ಚು ಕಡಿಮೆ ಯಾರು ಅವರನ್ನು ನೈತಿಕ ಅನೈತಿಕತೆಯ ಬಗ್ಗೆ ಪ್ರಶ್ನಿಸುವುದಿಲ್ಲ, ನೈತಿಕ ಅನೈತಿಕ ಶುಲ್ಕಗಳ ಬಗ್ಗೆ ಕೇಳುವುದು ಇಲ್ಲ, ತಿಳಿದುಕೊಳ್ಳುವುದೂ ಇಲ್ಲ.

ದುಡ್ಡು ಕೊಟ್ಟರೇನೆ ಆರ್ಡರ್ ಕಾಪಿ: ದುಡ್ಡು ಕೊಟ್ಟರೇನೆ ಆರ್ಡರ್ ಕಾಪಿ ಕೊಡುವೆ ಎಂಬ ಆತನ ಬೆದರಿಕೆಗೆ ಹಾಗು ಅನಿವಾರ್ಯ ಪರಿಸ್ಥಿತಿಗೆ ಸಿಲುಕಿ ಆ ಬಾಲಕ ನಲುಗಿ ಹೋಗಿದ್ದ. ಒಬ್ಬ ಮನುಷ್ಯನ ತುರ್ತು ಅವಶ್ಯಕತೆಯನ್ನು ಅರಿತ ಇನ್ನೊಬ್ಬ ಅದರಲ್ಲಿ ತನ್ನ ಲಾಭವನ್ನು ಬಯಸುವ ಲಾಲಚಿಯಾಗಿದ್ದ. ಇದೆಲ್ಲ ನಡೆದದ್ದು ನಮ್ಮೂರಿನ ನ್ಯಾಯ ದೇಗುಲದಲ್ಲಿ. ನ್ಯಾಯಕ್ಕಾಗಿ ಅಂಗಲಾಚಿ ನಾವು ಕೈ ಮುಗಿದು ಮಾತನಾಡಿಸುವ ಆ ನ್ಯಾಯ ದೇವರ ಅಂಗಳದಲ್ಲಿ.

ಅದೆಷ್ಟೋ ಸಾರಿ ಸರ್ಕಾರಿ ಕಛೇರಿಗಳಲ್ಲಿ ಸುಲಲಿತವಾಗಿ ಕೆಲಸ ನಿರ್ವಹಿಸಿ, ಸಾರ್ವಜನಿಕರಿಗೆ ಒಂಚೂರೂ ತೊಂದರೆಯಾಗದಂತೆ ನಡೆದುಕೊಳ್ಳುವ ಪ್ರಾಮಾಣಿಕ ಅಧಿಕಾರಿಗಳು ಇದ್ದಾರೆ. ಎಷ್ಟೋ ಸರಿ ನಮಗೆ ಅರಿವಿಗೆ ಬಾರದೆ ಮಾಡಿದ ತಪ್ಪುಗಳನ್ನು ಸರಿ ಪಡಿಸಿ, ಗೊತ್ತಿಲ್ಲದ್ದನ್ನು ತಿಳಿಸಿ, ಸೌಮ್ಯವಾಗಿ ವರ್ತಿಸಿ, ಸ್ಪಷ್ಟವಾಗಿ ಮಾತನಾಡಿ, ನಿಖರವಾಗಿ ಕೆಲಸವನ್ನು ಮುಗಿಸಿ, ಹಸನ್ಮುಖಿಯಾಗಿ ಸಾರ್ವಜನಿಕರನ್ನು ಬೀಳ್ಕೊಡುವ ಅಧಿಕಾರಿಗಳನ್ನು ಕಂಡಾಗ ನಾವಾಗಿಯೇ ಅವರಿಗೊಂದು ಕ್ರುತಜ್ಞ್ಯತೆಯನ್ನು ಸಲ್ಲಿಸಿ ಸಣ್ಣ ಪುಟ್ಟ ಕಾಣಿಕೆ ನೀಡುವ ಮನಸಾಗುವುದು ಸಹಜ, ಅದು ಅವರ ಕರ್ತವ್ಯವಾಗಿದ್ದರೂ ಅವರು ಸೌಜನ್ಯ ತೋರಿದಲ್ಲಿ ಅದು ಯಾರ ಮನಸ್ಸನ್ನು ತಟ್ಟದೆ ಇರಲಾರದು. ಆದರೆ ದುಡ್ಡು ಕೊಟ್ಟರೇನೇ ಕೆಲಸ ಮಾಡೋದು ಅನ್ನೋ ನಿರ್ಧಾಕ್ಷಿಣ್ಯ, ನೀತಿಹೀನ ಮನುಷ್ಯರನ್ನು ಕಂಡಾಗ ಒಂದೆಡೆ ರಕ್ತ ಕುದ್ದರೆ ಇನ್ನೊಂದೆಡೆ ಇದೆಂತಹ ಹೀನ ಸಮಾಜದಲ್ಲಿ ನಾವು ಬದುಕುತ್ತಿದ್ದೆವೆಂಬ ಜಿಗುಪ್ಸೆ ಉಂಟಾಗುತ್ತದೆ. ಮುಂದೆ ಓದಿ :ಲಂಚ ನೀಡದೆ ಬೆಳಗಾವಿಯಲ್ಲೊಂದು ಮನೆ ಮಾಡಿ!

English summary
Here is an article by Mahanth Vakkunda based on real incident that show cases Real Estate Crisis In Belagavi, corrupted government officials, bribe network exist in Kunda city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X