ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ಪೆಷಲ್: ಲಂಚ ನೀಡದೆ ಬೆಳಗಾವಿಯಲ್ಲೊಂದು ಮನೆ ಮಾಡಿ!

By ಮಹಾಂತ ವಕ್ಕುಂದ
|
Google Oneindia Kannada News

ಕೋರ್ಟಿನಲ್ಲಿ ಕಂಡ ಆ ಸೌಭಾಗ್ಯವನ್ನು ನಾನು ಮರೆಯುವಷ್ಟರಲ್ಲಿಯೇ ಬೇರೆ ಕಾರಣಗಳಿಗಾಗಿ ನಾನು ಬೆಳಗಾವಿಯ ಉಪ ನೊಂದನಾಧಿಕಾರಿ (Sub-Registar), ರಸ್ತೆ ಸಾರಿಗೆ (RTO) , ನಗರಾಭಿವೃದ್ಧಿ ಪ್ರಾಧಿಕಾರ (BUDA), ತಹಶಿಲ್ದಾರ ಕಛೆರಿ, ಮಹಾನಗರ ಪಾಲಿಕೆ (City corporation) , ಪೋಲಿಸ ಇಲಾಖೆಗೆ ಕಳೆದ ಒಂದು ತಿಂಗಳಿನಲ್ಲಿ ಭೇಟಿ ನೀಡಿದೆ.

ಎಲ್ಲೆಲ್ಲೂ ಈ ಭ್ರಷ್ಟತೆಯೇ ಸಂಗೀತವಿಲ್ಲಿ. ಇಲ್ಲ್ಯಾವುದೇ ಭಯವಿಲ್ಲ, ಮುಜುಗುರವಿಲ್ಲ, ಪ್ರತಿಯೊಂದು ಇಲಾಖೆಯ ಪ್ರತಿ ಮೇಜಿನಲ್ಲೂ ಗಟ್ಟಿಯಾಗೇ ಲಂಚ (ಅನೈತಿಕ ಪೀಸ್ ) ಕೇಳಲಾಗುತ್ತದೆ. ಪೋಲಿಸ ಇಲಾಖೆಯಲ್ಲಿ CCTV ಇದೆ ಎಂಬ ಕಾರಣಕ್ಕೆ ಠಾಣೆಯ ಹಿಂದೆ ಕರೆದುಕೊಂಡು ಹೋಗಿ ದುಡ್ಡು ಕೇಳುತ್ತಾರೆ. ರಸ್ತೆ ಸಾರಿಗೆ ಕಚೇರಿಯಲ್ಲಂತೋ ಏಜೆಂಟ್ ಗಳಿಲ್ಲದೆ ಯಾವ ಕೆಲಸವೂ ಆಗೋದಿಲ್ಲ, ತಾವಾಗಿಯೇ ತಮ್ಮ ಕೆಲಸ ಮಾಡಿಕೊಳ್ಳಬೇಕು ಎಂಬುವರಿಗೆ ಮಾರ್ಗ ದರ್ಶನಗಳೂ ಇಲ್ಲ, ಮಾರ್ಗ ದರ್ಶಕರೂ ಇಲ್ಲ. ಉಪ ನೊಂದಣಾಧಿಕಾರಿ ಕಚೇರಿಯೋ ಸಂತೆ, ಅಲ್ಲಿ ನೀವು ಕೊಡುವ ಲಂಚ ತರಕಾರಿ ಕೊಂಡಂತೆ , ಚೌಕಾಶಿ ಮಾಡಿಯೇ ಮುಂದೆ ಸಾಗಬೇಕು, ಎಲ್ಲವೂ ಬಹಿರಂಗ ಚರ್ಚಾಕೂಟ.

ಹೊಸದಾಗಿ ನಿರ್ಮಿಸಿದ ಮನೆಯ ಟ್ಯಾಕ್ಸ್ ಕಟ್ಟಲು ಬೆಳಗಾವಿಯ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಹೋದರೆ ಅಲ್ಲಿಯ ಸಹಾಯಕ 675 ರುಪಾಯಿ ಟ್ಯಾಕ್ಸ್ ಕಟ್ಟಲು 3,000 ರುಪಾಯಿಯ ಲಂಚ ಕೇಳಿದ. ಒಟ್ಟು 3,675 ರುಪಾಯಿ. ಕಮೀಷನರ ಹತ್ತಿರ ಹೋಗಿ ಈ ವಿಷಯವನ್ನು ಪ್ರಸ್ತಾಪ ಮಾಡಿದಾಗ ಅವರು "ನಿಮ್ಮ ಫೈಲ್ ನಂಬರ್ ಹೇಳಿ, ಯಾರು ದುಡ್ಡು ಕೇಳದಂತೆ ನಾನು ನೋಡಿಕೊಳ್ಳುತ್ತೇನೆ, ಯಾರಿಗೂ ದುಡ್ಡು ಕೊಡಬೇಡಿ, ಏನಾದರು ಸಮಸ್ಸೆಯಾದರೆ ನನ್ನ ಬಳಿ ಬನ್ನಿ" ಎಂದರು,

Corruption In Belagavi

ಅಂತೆಯೇ ಫೈಲ್ ಮೂವ್ ಕೂಡ ಆಯ್ತು, ಆದರೆ ಎಲ್ಲರೂ ನನ್ನ ಹಾಗೆ ಕಮಿಷನರ್ ಬಳಿ ಹೋಗುವವರೆಯೇ ? ಹೋಗದಿದ್ದರೆ ? ನೂರಕ್ಕೆ 70-80 ರಷ್ಟು ಜನ ಇಲ್ಲಿ ಆ ಗೋಜಿಗೆ ಹೋಗುವುದಿಲ್ಲ, ಸಾಹೇಬರು ಹೇಳಿರೋ ಪೀಸ್ ಕೊಟ್ಟು ಆದಷ್ಟು ಬೇಗ ಕೆಲಸ ಮುಗಿಸಿಕೊಳ್ಳೋಣ ಅನ್ನೋ ಆತುರದಲ್ಲಿ ಕೇಳಿದ್ದು ಕೊಟ್ಟು ಹೋಗುವವರೇ ಜಾಸ್ತಿ.

ಹೀಗೆ ತಿನ್ನಿಸಿದವರ ರುಚಿಯೂ ಖಾರವಾಗಿರಬಹುದು ಇಂದು ಪ್ರತಿಯೊಬ್ಬ ಅಧಿಕಾರಿಯೂ ಈ ರೀತಿ ಹಣ ಕೇಳಲು. ನಾವೆಲ್ಲರೂ ಉತ್ತಮ ಭಾಷಣಕಾರರು, ಮಾತುಗಾರರು ಆದರೆ ತಮ್ಮ ಸ್ವಂತ ಕೆಲಸಕ್ಕೆ ಸರ್ಕಾರಿ ಕಚೇರಿಯ ಮೆಟ್ಟಿಲೇರಿದಾಗ ಎಲ್ಲರೂ ಈ ಅವ್ಯವಸ್ತೆಗೆ ತಲೆ ಬಾಗುವವರೇ ಎಂಬುದು ಕೆಲವು ಸ್ನೇಹಿತರನ್ನು ಕಂಡಾಗ ತಿಳಿಯಿತು. ಆದರೆ ಇದಕ್ಕೆಲ್ಲ ಕೊನೆ ಎಂದು ?

ಅಣ್ಣಾ ಹಜಾರೆ ಭ್ರಷ್ಟಾಚಾರದ ವಿರುದ್ದ ಚಳುವಳಿ, ಉಪವಾಸ ಸತ್ಯಾಗ್ರಹ ಮಾಡಿದರೆ TV ನೋಡಿ ಕೈ ತಟ್ಟುವ ಜನ ಕಚೇರಿಗೆ ಹೋಗಿ ಲಂಚ ತೊಗೋತಾರೆ, ಕೊಡ್ತಾರೆ. ಬರಿ ತೊಗೊಳೋದು, ಕೊಡೋದು ಅಲ್ಲ, ಕೊಟ್ಟರೇನೆ ಕೆಲಸ ಮಾಡೋದು ಅನ್ನೋ ಜಿದ್ದಿನಲ್ಲಿ ಕತ್ತು ಹಿಡಿದೇ ಕೂರೋದು. ಹೀಗಿರೋ ದೇಶಕ್ಕೆ ಮೋದಿ ಪ್ರಧಾನಿಯಾದರೂ, ಇನ್ನ್ಯಾರೇ ಏನಾದರೂ ಉದ್ದಾರ ಮಾಡೋಕ ಆಗತ್ತಾ ??

ಬೆಳಗಾವಿ ಇಂದು ಈ ತರಹದ ಅದ್ವಾನಗಳ ತವರೂರು. ಕನ್ನಡ ಅರಿಯದೇ ಕೆಲಸ ಮಾಡಿಸಿಕೊಳ್ಳಲು ಬರುವ ಅನ್ಯ ಭಾಷಿಕರು. ಭಾಷೆ ಬಂದರೂ,ತಮ್ಮ ಕೆಲಸ ತಾವೇ ಮಾಡಿಕೊಳ್ಳುವ ಸಾಮರ್ಥ್ಯವಿದ್ದರೂ ಏಜೆಂಟರ ಮೂಲಕ ಹೋಗುವ ಸುಶಿಕ್ಷಿತ ಅರೆ ಪ್ರಜ್ಞಾವಂತ ಜನ. ಕೆಲಸ ತುರ್ತಾಗಿ ಆಗಲಿ ಎಂದು ಕೇಳದಿದ್ದರೂ ಲಂಚ ಕೊಡುವ ಆತುರಗೇಡಿಗಳು ಎಲ್ಲರೂ ಸೇರಿ ಇಂದು ಒಬ್ಬ ಸಾಮಾನ್ಯ ಮನುಷ್ಯ ಲಂಚವಿಲ್ಲದೆ, ಭ್ರಷ್ಟತೆಯಲ್ಲಿ ಭಾಗಿಯಾಗದೇ ಸರ್ಕಾರಿ ಕೆಲಸ ಮಾಡಿಕೊಳ್ಳದಂತಹ ಪರಿಸ್ಥಿತಿ ತಂದಿಟ್ಟಿದ್ದಾರೆ. ಇಲ್ಲಿ ನಡೆಯುವ ಭ್ರಷ್ಟಾಚಾರದಲ್ಲಿ ಎಲ್ಲರೂ ಭಾಗಿಗಳೇ, ಭ್ರಷ್ಟತೆಯ ಬಗ್ಗೆ ದನಿ ಎದ್ದಾಗ ಅದನ್ನಡಗಿಸಲು ಭಾಷಾ ದ್ವೇಷ ಹಬ್ಬಿಸಲು ಶ್ರಮಿಸುವ ರಾಜಕಾರಣಿಗಳಿಂದ ಹಿಡಿದು ಲಂಚ ನೀಡುವ ಕೊನೆಯ ನಾಗರಿಕನವರೆಗೆ ಎಲ್ಲರೂ.

ಪ್ರಜ್ಞಾವಂತರೆಲ್ಲ ಒಟ್ಟಿಗೆ ಸೇರಿರುವ ಬರಿ ಬೆಂಗಳೂರೋ, ಇನ್ನೊಂದೋ ಉದ್ದಾರವಾದರೆ ಈ ದೇಶ ರಾಮ ರಾಜ್ಯವಾಗದು, ನಮ್ಮೆಲ್ಲ ಊರುಗಳು ಸ್ವಚ್ಚವಾಗಬೇಕು. ಆ ನಿಟ್ಟಿನಲ್ಲಿ ನಾವೆಲ್ಲಾ ಇನ್ನಾದರೂ ಯೋಚಿಸಿ ನಡೆಯಬೇಕಿದೆ. ನನ್ನಂತೆಯೇ ಆಲೋಚಿಸಿ ಮನೆಯಲ್ಲೇ ಹಲ್ಲು ಕಚ್ಚುತ್ತ ಕೂತಿರುವ ಅದೆಷ್ಟೋ ಜನರಿರಬಹುದು, ಏಳಿ ಎದ್ದೇಳಿ ಇಗಲಾದರು ಕೈ ಜೋಡಿಸಿ. ರಾಜಕಾರಣಿಯೋ ಇನ್ನೊಬ್ಬನೋ ನಮ್ಮ ಸಮಾಜವನ್ನು ಸುಧಾರಿಸಬೇಕೆಂಬ ಉಪದೇಶ ನೀಡುವುದ ಬಿಟ್ಟು ನಿಮ್ಮ ಪಾಲಿನ ಕರ್ತವ್ಯ ನಿಭಾಯಿಸಿ, ಬೆಳಗಾವಿಯಲ್ಲೊಂದು ಮನೆಯ ಮಾಡಿ ಲಂಚಬಾಕರಿಗಂಜಿದೊಡೆಂತಯ್ಯ ??
ಭ್ರಷ್ಟಾಚಾರದಲ್ಲಿ ಮುಳುಗೆದ್ದು ಗಬ್ಬು ನಾರುತ್ತಿದೆ ನನ್ನ ಬೆಳಗಾವಿ ? ಸ್ನಾನ ಮಾಡಿಸಲು ಯಾರಾದರು ಬರುವಿರ ? ನಾವಿದನ್ನು ತೊಳೆಯಲು ಸಿದ್ದರಾಗೋಣ , ಮಲಿನವಾದರೆ ನಮ್ಮ ಕೈಗೆ ನೀರು ಹಾಕಲಿಕ್ಕುಂಟು ನೂರೆಂಟು ಜನ .......

English summary
Here is an article by Mahanth Vakkunda based on real incident that show cases Real Estate Crisis In Belagavi, corrupted government officials, bribe network exist in Kunda city corporation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X