ಬಿಜೆಪಿ ಮೇಲೆ ಸುಮ್ಮನೆ ಆಪಾದನೆ ಮಾಡುವುದು ಸರಿಯಲ್ಲ; ಈಶ್ವರಪ್ಪ
ಬೆಳಗಾವಿ, ನವೆಂಬರ್ 28: ಸಿಎಂ ರಾಜಕೀಯ ಕಾರ್ಯದರ್ಶಿ ಎನ್.ಆರ್.ಸಂತೋಷ್ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯಿಸಿದ್ದು, "ಅವರ ವೈಯಕ್ತಿಕ ಸಮಸ್ಯೆ ನೂರು ಇರುತ್ತೆ, ಅದರ ಕುರಿತು ಅವರ ಮನೆಯವರನ್ನು ಕೇಳಬೇಕು" ಎಂದಿದ್ದಾರೆ.
ಸಂತೋಷ್, ರಾಜಕೀಯ ಒತ್ತಡದಿಂದ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಹಾಗೇನಾದರೂ ಇದ್ದರೆ ಪೊಲೀಸ್ ಠಾಣೆಗೆ ದೂರು ಕೊಡಲಿ. ಸುಮ್ಮನೆ ಹೇಳಿಕೆ ಕೊಟ್ಟು ಬಿಜೆಪಿ ಮೇಲೆ ಆಪಾದನೆ ಮಾಡುತ್ತಾ ಕೂತರೆ ಹೇಗೆ? ಮನೆಯಲ್ಲಿಯೂ ಪಾಲಿಟಿಕ್ಸ್ ತುಂಬಾ ಇರುತ್ತೆ. ಖಾಸಗಿ ವಿಚಾರದ ಬಗ್ಗೆ ನಾನು ಉತ್ತರ ಕೊಡಲು ಇಷ್ಟಪಡಲ್ಲ ಎಂದು ಹೇಳಿದ್ದಾರೆ. ಮುಂದೆ ಓದಿ...
ಸಂತೋಷ್ ಆತ್ಮಹತ್ಯೆ ಯತ್ನ ಪ್ರಕರಣ; ಡಿಕೆಶಿ ಬಿಚ್ಚಿಟ್ಟ ಸಂಗತಿ ಏನು?

"ವ್ಯಕ್ತಿಯ ಅಭಿಪ್ರಾಯ ಪಕ್ಷದ ಅಭಿಪ್ರಾಯ ಅಲ್ಲ"
ರಮೇಶ್ ಜಾರಕಿಹೊಳಿ ನಿವಾಸ ಪವರ್ ಸೆಂಟರ್ ಆಗ್ತಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿ, "ರಾಜಕೀಯದಲ್ಲಿ ಆಕ್ಟಿವ್ ಆಗಿರುವುದು ಮುಖ್ಯ. ರಮೇಶ್ ಜಾರಕಿಹೊಳಿ ಅಂಡ್ ಟೀಮ್ ಚಟುವಟಿಕೆ ಮಾಡಿದ್ದಕ್ಕೆ ನಮ್ಮ ಸರ್ಕಾರ ಬಂದಿದೆ. ಅವರ ಸ್ನೇಹಿತರೆಲ್ಲರೂ ಒಟ್ಟಿಗೆ ಸೇರುತ್ತಿರಬಹುದು, ಸೇರಬಾರದು ಎಂದೇನಿಲ್ಲ.
ರಮೇಶ್ ಜಾರಕಿಹೊಳಿ ಸ್ನೇಹಿತರದೊಂದು ಟೀಮ್, ಬೇರೆ ಸ್ನೇಹಿತರದ್ದೊಂದು ಟೀಮ್ ಅಂತಾ ಹತ್ತು ಟೀಮ್ ಇರುತ್ತೆ. ಆದರೆ ಪಕ್ಷ ಒಂದೇ. ಮೂರ್ನಾಲ್ಕು ಜನ ಒಂದು ಕಡೆ ಸೇರಿದರೆ ಮಂತ್ರಿಮಂಡಲದ ಚರ್ಚೆ ಮಾಡುತ್ತಿದ್ದಾರೆ ಎಂದಿಲ್ಲ" ಎಂದು ಹೇಳಿದ್ದಾರೆ. ಸರ್ಕಾರ ತರಲು ಯೋಗೇಶ್ವರ ಪ್ರಯತ್ನ ಮಾಡಿದ್ದಾರೆ ಎಂದು ರಮೇಶ್ ಜಾರಕಿಹೊಳಿ ಹೇಳಿಕೊಂಡಿದ್ದಾರೆ. ಹಾಗಂತಾ ಅವರು ಹೇಳಿದ್ದೆ ಆಗಿ ಬಿಡುತ್ತಾ. ವ್ಯಕ್ತಿಯ ಅಭಿಪ್ರಾಯ ಪಕ್ಷದ ಅಭಿಪ್ರಾಯ ಅಲ್ಲ ಎಂದು ಪರೋಕ್ಷವಾಗಿ ರಮೇಶ್ ಜಾರಕಿಹೊಳಿಗೆ ತಿರುಗೇಟು ನೀಡಿದರು.

"ವಲಸಿಗರು, ಮೂಲ ಎಂಬ ಪ್ರಶ್ನೆಯೇ ಇಲ್ಲ"
105 ಬಿಜೆಪಿ ಶಾಸಕರು ಆಯ್ಕೆಯಾಗಿದ್ದು, ವೈಯಕ್ತಿಕವಾಗಿ ಅಲ್ಲ ಪಕ್ಷ ಸ್ಥಾನಕ್ಕೆ ತಂದಿದೆ. ಎಲ್ಲ ಶಾಸಕರಲ್ಲಿ ಯಾರಿಗೆ ಸಚಿವ ಸ್ಥಾನ ಕೊಡಬೇಕು ಅಂತಾ ಪಕ್ಷ ಚರ್ಚೆ ಮಾಡುತ್ತೆ. ತ್ಯಾಗ ಮಾಡಿ ಬಂದವರಲ್ಲಿ ಯಾರಿಗೆ ಕೊಡಬೇಕು ಅಂತಾನೂ ಚರ್ಚೆ ಮಾಡುತ್ತೆ. ಬಿಜೆಪಿಯಲ್ಲಿ ವಲಸಿಗರು, ಮೂಲ ಎಂಬ ಪ್ರಶ್ನೆ ಇಲ್ಲವೇ ಇಲ್ಲ.
ಅವರವರ ಅಭಿಪ್ರಾಯ ವ್ಯಕ್ತಪಡಿಸಲು ಪೂರ್ಣ ಸ್ವಾತಂತ್ರ ಬಿಜೆಪಿಯಲ್ಲಿದೆ ಎಂದು ಹೇಳಿದರು.

ಸಿದ್ದರಾಮಯ್ಯಗೆ ಈಶ್ವರಪ್ಪ ತಿರುಗೇಟು
ಸಿಎಂ ಬದಲಾಗುತ್ತಾರೆ ಎಂದು ಸಿದ್ದರಾಮಯ್ಯ ಪದೇ ಪದೇ ಹೇಳಿಕೆ ನೀಡುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿ, "ಸಿದ್ದರಾಮಯ್ಯನವರಿಗೆ ಈ ಸ್ಥಿತಿ ಬರಬಾರದಿತ್ತು.
ಅವರ ಸ್ಥಿತಿ ಅಡ್ಡಗೋಡೆ ಮೇಲಿನ ದೀಪ ಇದ್ದ ಹಾಗೆ. ಕಾಂಗ್ರೆಸ್ ನಲ್ಲಿ ಪೂರ್ಣ ಸ್ವಾತಂತ್ರ ಸಿದ್ದರಾಮಯ್ಯ ಒಬ್ಬರಿಗೆ ಇದೆ. ಈಗಲೂ ನಾನೇ ಮುಖ್ಯಮಂತ್ರಿ ಮುಂದೆಯೂ ನಾನೇ ಮುಖ್ಯಮಂತ್ರಿ ಎಂಬ ಸರ್ವಾಧಿಕಾರಿ ಹೇಳಿಕೆ ಸಿದ್ದರಾಮಯ್ಯ ಅವರದ್ದು. ಮುಖ್ಯಮಂತ್ರಿ ಬದಲಾವಣೆ ಅಂತಾ ಹುಚ್ಚು ಹೇಳಿಕೆ ಕೊಡುವುದರಲ್ಲಿ ಅರ್ಥವೇ ಇಲ್ಲ. ಇದನ್ನ ಬಿಟ್ಟು ಯಡಿಯೂರಪ್ಪ ಬದಲಾವಣೆ ಮಾಡ್ತಾರೆ ನನಗೆ ದೆಹಲಿ ಮೂಲದಿಂದ ಮಾಹಿತಿ ಇದೆ ಅಂತಿದ್ದಾರೆ. ನಮ್ಮ ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆ ಬಗ್ಗೆ ಹೇಳೋರು ಕೇಳೋರು ಇದ್ದಾರೆ ಎಂದು ತಿರುಗೇಟು ನೀಡಿದರು.

"ಡಿಕೆಶಿ ದಾಖಲೆ ಕೊಟ್ಟು ಮಾತಾಡಲಿ"
ಎನ್.ಆರ್.ಸಂತೋಷ್ ಆತ್ಮಹತ್ಯೆ ಯತ್ನದ ಕುರಿತು ಡಿ.ಕೆ.ಶಿವಕುಮಾರ್ ಹೇಳಿಕೆ ವಿಚಾರವಾಗಿ ಮಾತನಾಡಿ, "ಡಿ.ಕೆ.ಶಿವಕುಮಾರ್ ಹೇಳಿಕೆ ಮುಟ್ಟಾಳತನದ್ದು. ಈ ರೀತಿ ಹೇಳಿಕೆ ಕೊಡೋಕೆ ಡಿ.ಕೆ.ಶಿವಕುಮಾರ್ ಗೆ ನಾಚಿಕೆ ಆಗಬೇಕು. ವಿಡಿಯೋ ಲೀಕ್ ಆಗಿದೆ ಅಂದ್ರೆ ಆ ವಿಡಿಯೋ ಇವರ ಹತ್ತಿರ ಇರಬೇಕಲ್ಲ. ವಿಡಿಯೋ ಇದೆ ಅಂತಾ ಹೇಳುವುದು ರಾಜ್ಯದ ಜನರ ದಿಕ್ಕು ತಪ್ಪಿಸುವಂತಹದ್ದು. ವಿಡಿಯೋ ಕಾಪಿ ನಿಮ್ಮಲ್ಲಿದ್ದರೆ ಬಿಡುಗಡೆ ಮಾಡಲಿ. ಏನೇ ಆಪಾದನೆ ಮಾಡಬೇಕು ಅಂದ್ರೇ ಡಾಕ್ಯುಮೆಂಟ್ ಬೇಕು ಎಂದು ಹೇಳಿದರು.