ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಕಿತ್ತೂರು ತಹಶಿಲ್ದಾರ್: ತಡ ರಾತ್ರಿಯ ದಾಳಿಯಲ್ಲಿ ಸಿಕ್ಕಿದ್ದೇನು?
ಬೆಳಗಾವಿ, ನವೆಂಬರ್ 26: ಲಂಚ ಪಡೆಯುತ್ತಿದ್ದ ವೇಳೆ ಚನ್ನಮ್ಮನ ಕಿತ್ತೂರು ತಹಶಿಲ್ದಾರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಅವರಿಂದ ಹಲವು ದಾಖಲೆ ಸೇರಿದಂತೆ ಹತ್ತು ಲಕ್ಷ ರೂಪಾಯಿಗೂ ಅಧಿಕ ನಗದನ್ನು ವಶಪಡಿಸಿಕೊಳ್ಳಲಾಗಿದೆ. ತಡ ರಾತ್ರಿ ಅವರ ಮನೆಯಲ್ಲಿ ಶೋಧ ಕಾರ್ಯ ಮಾಡಿರುವ ಲೋಕಾಯುಕ್ತ ಅಧಿಕಾರಿಗಳು ಹಲವು ದಾಖಲೆಗಳನ್ನು ಜಾಲಾಡಿದ್ದಾರೆ.
ಕಿತ್ತೂರು ತಹಶಿಲ್ದಾರ್ ಸೋಮಲಿಂಗಪ್ಪ ಹಾಲಗಿ ಅವರ ಕಚೇರಿ, ಮನೆಗಳಲ್ಲಿ ವ್ಯಾಪಕ ಶೋಧ ನಡೆಸಿದ ಲೋಕಾಯುಕ್ತ ಪೊಲೀಸರು ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆಂದು ತಿಳಿದುಬಂದಿದೆ.
ಲೋಕಾಯುಕ್ತ ಅಧಿಕಾರಿಗಳಿಗೆ ಹತ್ತು ಲಕ್ಷಕ್ಕೂ ಹೆಚ್ಚು ನಗದು ಹಾಗೂ ಮಹತ್ವದ ದಾಖಲೆಗಳು ದೊರೆತಿವೆ.
ತಹಶಿಲ್ದಾರ್ ಸೋಮಲಿಂಗಪ್ಪ ಹಾಲಗಿ ಹಾಗೂ ಅವರ ಗುಮಾಸ್ತ ಜಿ.ಪ್ರಸನ್ನ ಅವರು ಎರಡು ಲಕ್ಷ ಲಂಚ ತೆಗೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಸಿಕ್ಕುಬಿದ್ದಿದ್ದಾರೆ. ಆರೋಪಿಗಳ ಮೇಲೆ ಭ್ರಷ್ಟಾಚಾರದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅವರನ್ನು ಬೆಳಗಾವಿ ಕರೆದೊಯ್ಯಲಾಗಿದ್ದು, ವೈದ್ಯಕೀಯ ತಪಾಸಣೆ ಮಾಡಿಸಲಾಗಿದೆ. ಆ ಬಳಿಕ ಅವರನ್ನು ಲೋಕಾಯುಕ್ತ ನ್ಯಾಯಾದೀಶರ ಮನೆಗೆ ಕರೆದುಕೊಂಡು ಬರಲಾಗಿದೆ. ನಂತರ ಬೆಳಗಾವಿ ಹಿಂಡಲಗಾ ಜೈಲಿಗೆ ಕರೆದೊಯ್ಯಲಾಯಿತು.
ಆರೋಪಿಗಳು ರೈತರಿಂದ ಲಂಚ ಪಡೆಯುತ್ತಿದ್ದರು ಎಂದು ಗೊತ್ತಾಗಿದೆ. ಕಿತ್ತೂರು ತಾಲೂಕಿನ ಖಾದನಾಪುರ ಗ್ರಾಮದ ಬಾಪುಸಾಹೇಬ ಇನಾಮದಾರ ಎಂಬುವವರ ಜಮೀನನ್ನು ಅವರ ಪುತ್ರ ರಾಜೇಂದ್ರ ಅವರು ತಮ್ಮ ಖಾತೆಗೆ ಬರೆಸಿಕೊಳ್ಳಬೇಕಿತ್ತು. ಈ ವಿಚಾರವಾಗಿ ಆರೋಪಿಗಳು 5 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ರಾಜೇಂದ್ರ ಅವರು ಎರಡು ಲಕ್ಷ ಮುಂಗಡವನ್ನು ಆರೋಪಿಗಳಿಗೆ ಕೊಡುವ ಸಮಯದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದರು ಎಂದು ತಿಳಿದುಬಂದಿದೆ.

ದುರಂತವೆಂದರೆ, ಈ ಘಟನೆಯ ಬಳಿಕ ಬಾಪು ಸಾಹೇಬ ಇನಾಮದಾರ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದೆಲ್ಲವೂ ತಡ ರಾತ್ರಿ ನಡೆದಿದೆ.