• search
  • Live TV
ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಉಕ್ಕಿ ಹರಿಯುತ್ತಿರುವ ವೇದಗಂಗಾ ನದಿ; ರಾಷ್ಟ್ರೀಯ ಹೆದ್ದಾರಿ-4ರ ಸಂಚಾರ ಬಂದ್

|
Google Oneindia Kannada News

ಬೆಳಗಾವಿ, ಜುಲೈ 23: ಮಹಾರಾಷ್ಟ್ರ ಹಾಗೂ ಕರ್ನಾಟಕದ ಕೊಂಕಣ ಭಾಗದಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ಬೆಳಗಾವಿ ಜಿಲ್ಲೆಯ ವೇದಗಂಗಾ ನದಿ ಉಕ್ಕಿ ಹರಿಯುತ್ತಿದೆ.

ವೇದಗಂಗಾ ನದಿಯು ರಾಷ್ಟ್ರೀಯ ಹೆದ್ದಾರಿ-4ರ ಮೇಲೆ ಹರಿಯುತ್ತಿರುವುದರಿಂದ ವಾಹನ ಸಂಚಾರ ಬಂದ್ ಆಗಿದೆ. ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲೂಕಿನ ಯಮಗರ್ಣಿ ಬಳಿ ರಾಷ್ಟ್ರೀಯ ಹೆದ್ದಾರಿಗೆ ನೀರು ನುಗ್ಗಿದ್ದು, ಐನೂರಕ್ಕೂ ಹೆಚ್ಚು ವಾಹನಗಳು ಮುಂದೆ ಸಾಗದೆ ರಸ್ತೆಯಲ್ಲೆ ನಿಂತಿದ್ದು, ಪ್ರಯಾಣಿಕರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.

ನದಿ ನೀರಿನಲ್ಲಿ ಸಿಲುಕಿದ ಲಾರಿ, ಓಮಿನಿ ವ್ಯಾನ್

ರಾಷ್ಟ್ರೀಯ ಹೆದ್ದಾರಿ ನಾಲ್ಕರ ಮೇಲೆ ವೇದಗಂಗಾ ನದಿ ನೀರು ಹರಿಯುತ್ತಿದ್ದು, ಒಂದು ಲಾರಿ, ಓಮಿನಿ ವ್ಯಾನ್ ನದಿ ನೀರಿನಲ್ಲಿ ಸಿಲುಕಿದೆ. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಯಮಗರಣಿ ಗ್ರಾಮದ ಹೊರ ವಲಯದ ಘಟನೆ ನಡೆದಿದ್ದು, ಓಮಿನಿ ವ್ಯಾನ್‌ನಲ್ಲಿದ್ದ ಹನ್ನೊಂದು ಜನರನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ.

ಮಹಾರಾಷ್ಟ್ರದಿಂದ ಕರ್ನಾಟಕ ಮೂಲಕ ತಮಿಳುನಾಡು ಹೋಗುತ್ತಿದ್ದ ಲಾರಿ ಚಾಲಕ ನಡುನೀರಿನಲ್ಲಿ ಸಿಲುಕಿದ್ದು, ಪೊಲೀಸರು ರಕ್ಷಣಾ ಕಾರ್ಯಾಚರಣೆ ಮುಂದುವರೆಸಿದ್ದಾರೆ.

ಜಲಾವೃತಗೊಂಡ ರಾಷ್ಟ್ರೀಯ ಹೆದ್ದಾರಿಯ 2 ಕಿ.ಮೀ ಮೊದಲೇ ಬ್ಯಾರಿಕೇಡ್ ಹಾಕಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ಧಾರವಾಡ, ಹಿರೇಬಾಗೇವಾಡಿ ಮತ್ತು ಹತ್ತರಕಿಯ ಟೋಲ್ ಗೇಟ್‌ನಿಂದ ಮಹಾರಾಷ್ಟ್ರಕ್ಕೆ ಹೋಗುವ ವಾಹನಗಳನ್ನು ಪರ್ಯಾಯ ರಸ್ತೆಯ ಮೂಲಕ ಸಂಚಾರಕ್ಕೆ ಅನುಕೂಲ ಮಾಡಲಾಗುತ್ತಿದೆ.

Belagavi: Bengaluru- Pune NH Is Closed For Traffic Temporarily As The Veda Ganga River Is Overflowing

ಬಹಳಷ್ಟು ವಾಹನಗಳು ರಾಷ್ಟ್ರೀಯ ಹೆದ್ದಾರಿ ಬಿಟ್ಟು ಪರ್ಯಾಯ ರಸ್ತೆಯ ಮೂಲಕ ಮಹಾರಾಷ್ಟ್ರಕ್ಕೆ ಸಂಚರಿಸುತ್ತಿವೆ. ವಿಪರೀತ ಮಳೆಯಿಂದಾಗಿ ಬೆಳಗಾವಿಯ ಶಿವಾಜಿ ನಗರದ ಮನೆಗಳಿಗೆ ತಡರಾತ್ರಿ ನೀರು ನುಗ್ಗಿದ ಪರಿಣಾಮ ಅಲ್ಲಿಯ ಜನ ಪರದಾಡಿದ್ದಾರೆ.

ಖಾನಾಪೂರ ತಾಲ್ಲೂಕಿನ ಲೋಂಡಾ ಪ್ರದೇಶದಲ್ಲಿ ಮಳೆಯ ಅರ್ಭಟ ಜೋರಾಗಿದ್ದು, ನೀರಿನಲ್ಲಿ ಲಾರಿಯೊಂದು ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ನಡೆದಿದೆ‌.

ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನಲ್ಲಿ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಮಲಪ್ರಭಾ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಮಲಪ್ರಭಾ ನದಿ ನೀರು ಖಾನಾಪುರ ಪಟ್ಟಣಕ್ಕೆ ನುಗ್ಗಿದ್ದು, ಖಾನಾಪುರ ಹೊರವಲಯದ ಸೇತುವೆ ಸಂಪೂರ್ಣ ಜಲಾವೃತಗೊಂಡಿದೆ.

ಖಾನಾಪುರ ಪಟ್ಟಣದ ಕೆಎಸ್‌ಆರ್‌ಪಿ ತರಬೇತಿ ಕೇಂದ್ರದ ಮೈದಾನ, ಮೀನಿನ ಮಾರುಕಟ್ಟೆಗೂ ನೀರು ಬಂದಿದ್ದು, ನಿರಂತರ ಮಳೆಯಿಂದ ಖಾನಾಪುರ ಪಟ್ಟಣದಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಶಾಸಕಿ ಅಂಜಲಿ ನಿಂಬಾಳ್ಕರ್ ಮನೆ ಎದುರಿನ ಪ್ರದೇಶವೂ ಜಲಾವೃತವಾಗಿದೆ.

ಬೆಳಗಾವಿ ನಗರ ಸೇರಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಸುರಿಯುತ್ತಿದ್ದು, ವಾಘವಾಡೆ ಗ್ರಾಮದ ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕನನ್ನು ರಕ್ಷಣೆ ಮಾಡಲಾಗಿದೆ. ಗುರುವಾರ ಸಂಜೆ ಗದ್ದೆಯಲ್ಲಿ ಕೆಲಸ ಮಾಡಲು ತೆರಳಿದ್ದ ಯುವಕ, ಏಕಾಏಕಿ ಹಳ್ಳದಲ್ಲಿ ನೀರಿನ ಹರಿವು ಹೆಚ್ಚಳ ಹಿನ್ನೆಲೆ ಸಿಲುಕಿಕೊಂಡಿದ್ದ. ನಂತರ ವಾಘವಾಡೆ ಗ್ರಾಮಸ್ಥರು ಹಗ್ಗ ಎಸೆದು ಯುವಕನನ್ನು ರಕ್ಷಣೆ ಮಾಡಿದ್ದಾರೆ. ಹಳ್ಳದಲ್ಲಿ ಸಿಲುಕಿದ್ದ ಯುವಕನ ರಕ್ಷಣೆ ಮಾಡುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ.

English summary
Due to heavy rains in Belgaum district, the Vedaganga River is flowing on National Highway-4 and is a traffic jam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X