2500 ಕೋಟಿ ಕೊಟ್ರೆ ಸಿಎಂ ಮಾಡ್ತೀವಿ ಅಂತ ಬಂದಿದ್ರು: ಯತ್ನಾಳ್ ಬಾಂಬ್
ಬೆಳಗಾವಿ, ಮೇ. 06: ಬಿಜೆಪಿಯ ಫೈರ್ ಬ್ರಾಂಡ್ ಲೀಡರ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೊಮ್ಮೆ ಪಕ್ಷದ ನಾಯಕರ ವಿರುದ್ಧ ಹರಿ ಹಾಯ್ದಿದ್ದಾರೆ. ಸಿಎಂ ಖುರ್ಚಿಯ ವ್ಯಾಪಾರದ ಬಗ್ಗೆಯೂ ಅವರು ಹೇಳಿಕೆ ನೀಡಿದ್ದು, ರಾಜಕೀಯ ವಲಯದಲ್ಲಿ ಸಂಚಲನ ಹುಟ್ಟು ಹಾಕಿದೆ.
ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿದ ವೇಳೆ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

2500 ಕೋಟಿ ಕೊಡಿ ಸಿಎಂ ನೀವೇ ಅಂದಿದ್ರು:
"ದೆಹಲಿಯಿಂದ ಬಂದ ಕೆಲವು ಲೀಡರ್ಗಳು 2500 ಕೋಟಿ ರೂಪಾಯಿ ಕೊಡಿ, ಸಿಎಂ ಮಾಡ್ತೀವಿ ಅಂದಿದ್ರು. ರಾಜಕಾರಣಲ್ಲಿ ಯಾರೂ ಅಲ್ಲಿ ಅಲ್ಲಿ ಹೋಗಿ ಹಾಳಗಬೇಡಿ. ನಿಮಗೆ ಟಿಕೆಟ್ ಕೊಡಿಸುತ್ತೇವೆ. ದೆಹಲಿಗೆ ಕರೆದುಕೊಂಡು ಹೋಗ್ತೇವೆ. ಸೋನಿಯಾ ಗಾಂಧಿಯನ್ನು ಭೇಟಿ ಮಾಡಿಸ್ತೀವಿ.. ಜೆ.ಪಿ. ನಡ್ಡಾರನ್ನು ಭೇಟಿ ಮಾಡಿಸ್ತೀವಿ ಅಂತ ಹೇಳ್ತಾರೆ. ದೆಹಲಿಯಿಂದ ಒಂದಷ್ಟು ಮಂದಿ ನನ್ನ ಬಳಿ ಬಂದಿದ್ದರು. ನಿಮ್ಮನ್ನು ಸಿಎಂ ಮಾಡ್ತೀವಿ 2500 ಕೋಟಿ ರೂ. ಕೊಡಿ ಎಂದಿದ್ದರು,'' ಎಂದು ಬಾಂಬ್ ಸಿಡಿದ್ದಾರೆ.
"ಮಕ್ಕಳಾ 2500 ಕೋಟಿ ರೂ. ಅಂದ್ರೆ ಏನ್ ಅಂತ ತಿಳಿದೀರಿ ಅಂತ ನಾನು ಅವರನ್ನು ಕೇಳಿದೆ. ಆ ಎರಡೂವರೆ ಸಾವಿರ ಕೋಟಿ ಹೆಂಗ್ ಇಡೋದು. ಕೋಣೆಯಲ್ಲಿ ಇಡೊದಾ, ಗೋದಾಮಿನಲ್ಲಿ ಇಡೋದಾ, ರಾಜಕಾರಣದಲ್ಲಿ ಮೋಸ ಮಾಡ್ತಾರೆ. ವಾಜಪೇಯಿ ಅವರ ನೆರಳಲ್ಲಿ ಕೆಲಸ ಮಾಡಿದವನು. ಅಡ್ವಾಣಿ, ರಾಜನಾಥ್ ಸಿಂಗ್ ನನ್ನನ್ನು ಬಸವನಗೌಡ ಅಂತಾ ಹೆಸರು ಹೇಳಿ ಕರೀತಿದ್ರು. ಎರಡೂವರೆ ಕೋಟಿ ಸಜ್ಜು ಮಾಡಿ, ಸಿಎಂ ಮಾಡ್ತೀವಿ, ಅವರ ಮನೆಗೆ ಕರೆದುಕೊಂಡು ಹೊಗ್ತೀರಿ ಅಂತ ಹೇಳ್ತಾರೆ. ರಾಜಕಾರಣದಲ್ಲಿ ಹೀಗೆಲ್ಲಾ ನಡೀತಿದೆ,'' ಎಂದು ಬಸನಗೌಡ ಪಾಟೀಲ್ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಬಿಜೆಪಿಯಲ್ಲಿ ಭಾರೀ ಚರ್ಚೆಗೆ ನಾಂದಿ ಹಾಡಿದೆ.

ಬಿಎಸ್ವೈಗೆ ಟಾಂಗ್ ಕೊಟ್ಟ ಯತ್ನಾಳ್:
ಲಿಂಗಾಯುತರಲ್ಲಿ 72 ಪರ್ಸೆಂಟ್ ಪಂಚಮಸಾಲಿಗಳು ಇದ್ದಾರೆ. ಇಲ್ಲಿಯವರೆಗೂ ರಾಜ್ಯದ ಸಿಎಂ ಆದವರು ಎರಡು ಪರ್ಸೆಂಟ್ ಇರೋರು. ಸುಳ್ಳು ಹೇಳಿ ಮೋಸ ಮಾಡೋದೇ ರಾಜಕಾರಣ ಆಗಿದೆ. ಯಡಿಯೂರಪ್ಪ ಸಿಎಂ ಆಗಿರುವರೆಗೂ ನಿಮ್ಮ ಚೇಂಬರ್ಗೆ ಬರಲ್ಲ ಎಂದಿದ್ದೆ. ಯಡಿಯೂರಪ್ಪ ಸಿಎಂ ಖುರ್ಚಿಯಿಂದ ಇಳಿಯುವ ವರೆಗೂ ನಾನು ಕಾವೇರಿಗೂ ಕಾಲಿಡಲಿಲ್ಲ, ಕೃಷ್ಣಾಗೂ ಕಾಲಿಡಲಿಲ್ಲ ಎಂದು ಯತ್ನಾಳ್ ಹರಿಹಾಯ್ದರು.
"ನಾನು ನಾಟಕ ಮಾಡಿದ್ದರೆ ಈ ಹಿಂದೆಯೇ ಸಿಎಂ ಅಗಿರುತ್ತಿದ್ದೆ. ಪಾಪ ಯಡಿಯೂರಪ್ಪ ಅವರಿಗೆ ಪುತ್ರ ವ್ಯಾಮೋಹ ಜಾಸ್ತಿ. ಯತ್ನಾಳ್ ಮಂತ್ರಿಯಾದ್ರೆ ನನ್ನ ಪುತ್ರ ವಿಜಯೇಂದ್ರನ ಗತಿಯೇನು? ಅಂತ ಮಂತ್ರಿ ಮಾಡದೆ ನನ್ನನ್ನು ಯಡಿಯೂರಪ್ಪ ತುಳಿದರು. ಲೆಟರ್ ಕೊಟ್ಟರೂ ಸೈಡ್ಗೆ ಇಡುತ್ತಿದ್ದರು. ಆಗಲೇ ನೀವು ಸಿಎಂ ಆಗೋ ವರೆಗೂ ನಿಮ್ಮ ಚೇಂಬರ್ ಗೆ ಕಾಲಿಡಲ್ಲ ಎಂದು ಹೇಳಿದ್ದೆ. ಸಿಎಂ ಸ್ಥಾನದಿಂದ ಇಳಿದ ಬಳಿಕ ಬಸವರಾಜ ಬೊಮ್ಮಾಯಿ ಪೋನ್ ಮಾಡಿ ಕರೆದಾಗ ನಾನು ಹೋಗಿದ್ದೆ. ನಿಮ್ಮಿಂದ ನಾನು ಇವತ್ತು ಸಿಎಂ ಆದೆ ಅಂತ ಹೇಳಿದ್ರು. ಮಂತ್ರಿ ಅಸೆ ಇಲ್ಲ, ನೀರಾವರಿ ಯೋಜನೆಗೆ ಹತ್ತು ಸಾವಿರ ಕೋಟಿ ಕೊಡಿ ಎಂದೆ. ನಿಮ್ಮನ್ನು ಮಂತ್ರಿ ಮಾಡ್ತೀವಿ ಅಂತ ಬೊಮ್ಮಾಯಿ ಹೇಳಿದರು. ಲಾಲಿಪಾಪ್ ಆಸೆ ಬೇಡ. ನಾನು ನಾಟಕ ಆಡೋ ಮಗ ಅಲ್ಲ, ಪಂಚಮಸಾಲಿಗೆ ಮೀಸಲಾತಿ ಕೊಡಿ. ನಿಮ್ಮ ಮಂತ್ರಿ ಸ್ಥಾನ ಬೇಡ,'' ಎಂದು ಹೇಳಿದ್ದಾಗಿ ಯತ್ನಾಳ್ ಹರಿಹಾಯ್ದಿದ್ದಾರೆ.

ನಿರಾಣಿ ಕ್ಯಾಶ್ ಕ್ಯಾಂಡಿಡೇಟ್ :
"ನಮ್ಮ ಹೋರಾಟದಿಂದ ಪಂಚಮಸಾಲಿಯ ಮೂವರು ಮಂದಿ ಸಚಿವರಾಗಿದ್ದಾರೆ. ಮೊದಲು ಬಿ.ಎಸ್. ಯಡಿಯೂರಪ್ಪ ಒಬ್ಬರನ್ನು ಸಿಎಂ ಮಾಡಲು ಒದ್ದಾಡುತ್ತಿದ್ದರು. ಬಸನಗೌಡನನ್ನು ಮಾಡಬಾರದು ಅಂತ ಸಿಸಿ ಪಾಟೀಲನನ್ನು ಮಾಡಿದರು. ಒಂದು ಕ್ಯಾಶ್ ಕ್ಯಾಂಡಿಡೇಟ್ ಐತಿ. ಅದನ್ನು ಮಾಡಲೇಬೇಕಿತ್ತು ಎಂದು ಮುರುಗೇಶ್ ನಿರಾಣಿ ಹೆಸರನ್ನು ಪರೋಕ್ಷವಾಗಿ ಉಲ್ಲೇಖಿಸಿ ಆಪಾದಿಸಿದರು. ಇನ್ನೊಬ್ಬ ಶಂಕರ ಪಾಟೀಲ ಮುನೇನಕೊಪ್ಪ ಆದರು. ಅರವಿಂದ ಬೆಲ್ಲದ್ ಅವರನ್ನು ಮಂತ್ರಿ ಮಾಡಬಾರದು ಅಂತ ಜಗದೀಶ್ ಶೆಟ್ಟರ್ ಮುನೇನಕುಪ್ಪನ ಮಾಡಿಸಿದರು. ಸಿ.ಸಿ. ಪಾಟೀಲ್ ಬೊಮ್ಮಾಯಿ ದೋಸ್ತಿ. ಅದಕ್ಕೆ ಆಯ್ತು. ಕ್ಯಾಶ್ ಕ್ಯಾಂಡಿಡೇಟ್ದೂ ಆಯ್ತು ಎಂದರು.

ನಾ ರೊಕ್ಕ ಕೊಡೋನು ಅಲ್ಲ
ನಾ ರೊಕ್ಕ ಕೊಡೋನು ಅಲ್ಲ, ಕಿಸಿಯೋನು ಅಲ್ಲ, 50 ಕೋಟಿ, ನೂರು ಕೋಟಿ ಕೊಡ್ತಾನೆ. ಹಣ ತಗೊಂಡು ಮಂತ್ರಿ ಮಾಡ್ತಾರೆ. ನಾನು ಎಂಬುವನು ಕರ್ನಾಟಕ ಲೂಟಿ ಮಾಡೋಕೆ ಭಗವಂತನ ಸಾಕ್ಷಿಯಾಗಿ ಬಂದಿದ್ದೇನೆ ಅಂತಾನೇ ಕೆಲಸ ಮಾಡೋದು. ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ನಡೆಯುತ್ತಿದೆ ಎಂದು ಹೇಳಿದ್ದೆ. ಅಗ ಕಾಂಗ್ರೆಸ್ ನವರು ನನ್ನ ವಿರುದ್ಧ ಎಸಿಬಿಗೆ ದೂರು ಕೊಟ್ಟರು. ಯತ್ನಾಳ್ ಗೆ ಎಲ್ಲಾ ಗೊತ್ತು ಮಾಹಿತಿ ಪಡೆಯಬೇಕು ಅಂತ ದೂರು ನೀಡಿದ್ದರು. ಸಂಜೆ ವೇಳೆಗೆ ಅವರ ಅಧ್ಯಕ್ಷನದ್ದೇ ಹೂರಣ ಹೊರಗೆ ಬಂತು. ಎಲ್ಲೋ ಹೋಗಿ ಸಿಗಿಸಬೇಕು ಅಂತ ಹೋಗಿ ಅವರೇ ಸಿಕ್ಕಿ ಹಾಕಿಕೊಳ್ತಿದ್ದಾರೆ ಎಂದು ಬಾಂಬ್ ಸಿಡಿಸಿದ್ದಾರೆ.