ಕಾಲೇಜು ಆರಂಭದ ಬೆನ್ನಲ್ಲೇ ಬೆಳಗಾವಿಯಲ್ಲಿ ಕೊರೊನಾ ಶಾಕ್
ಬೆಳಗಾವಿ, ನವೆಂಬರ್ 20: ರಾಜ್ಯದಲ್ಲಿ ಕೊರೊನಾ ಸೋಂಕು ಕ್ಷೀಣಿಸುತ್ತಿರುವ ಕಾರಣ ರಾಜ್ಯಾದ್ಯಂತ ನ.17ರಿಂದ ಪದವಿ ಕಾಲೇಜುಗಳನ್ನು ತೆರೆಯಲಾಗಿದೆ. ಹಲವು ಜಿಲ್ಲೆಗಳಲ್ಲಿ ಕಾಲೇಜುಗಳಿಗೆ ವಿದ್ಯಾರ್ಥಿಗಳೂ ಬರಲು ಆರಂಭಿಸಿದ್ದಾರೆ.
ಆದರೆ ಕಾಲೇಜು ಆರಂಭದ ಬೆನ್ನಲ್ಲೇ ಬೆಳಗಾವಿಯಲ್ಲಿ ಕೊರೊನಾ ಶಾಕ್ ನೀಡಿದೆ. ಬೆಳಗಾವಿಯ ಮೂರು ಖಾಸಗಿ ಕಾಲೇಜುಗಳ 6 ಸಿಬ್ಬಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಇದು ವಿದ್ಯಾರ್ಥಿಗಳಲ್ಲಿ ಆತಂಕವನ್ನು ತಂದೊಡ್ಡಿದೆ. ಜಿಲ್ಲೆಯಲ್ಲಿನ 250 ಕಾಲೇಜು ಸಿಬ್ಬಂದಿ ಪೈಕಿ ಆರು ಜನರಲ್ಲಿ ಕೊರೊನಾ ಸೋಂಕು ಇರುವುದಾಗಿ ತಿಳಿದುಬಂದಿದೆ.
ಕರ್ನಾಟಕದಲ್ಲಿ ಕಾಲೇಜುಗಳು ಪುನಾರಂಭ: ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಹಾಜರ್
ಕಾಲೇಜು ಆರಂಭದ ಹಿನ್ನೆಲೆಯಲ್ಲಿ ನವೆಂಬರ್ 17ರಂದು 671 ಕಾಲೇಜು ಸಿಬ್ಬಂದಿಯ ಗಂಟಲು ದ್ರವ ಮಾದರಿ ಸಂಗ್ರಹ ಮಾಡಲಾಗಿತ್ತು. ಆಯಾ ಕಾಲೇಜುಗಳಿಗೆ ತೆರಳಿ ಆರೋಗ್ಯ ಇಲಾಖೆ ಪರೀಕ್ಷೆ ನಡೆಸಿತ್ತು. ನ.18ರಂದು 656, ನ.19ರಂದು 699 ಕಾಲೇಜು ಸಿಬ್ಬಂದಿಗೆ ಕೋವಿಡ್ ಟೆಸ್ಟ್ ನಡೆಸಲಾಗಿತ್ತು. ಮೊದಲ ಮೂರು ದಿನ ಕಾಲೇಜು ಸಿಬ್ಬಂದಿಗೆ ಮಾತ್ರ ಕೋವಿಡ್ ಟೆಸ್ಟ್ ನಡೆಸಲಾಗಿತ್ತು.
ಒಟ್ಟು 2026 ಕಾಲೇಜು ಸಿಬ್ಬಂದಿ ಪರೀಕ್ಷೆ ನಡೆಸಿದ್ದು, ಈ ಪೈಕಿ 250 ಜನರ ವರದಿ ಬಂದಿದೆ. ಈ 250 ಜನರಲ್ಲಿ ಒಟ್ಟು ಆರು ಸಿಬ್ಬಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಇನ್ನೂ 1776 ಕಾಲೇಜು ಸಿಬ್ಬಂದಿ ಕೋವಿಡ್ ವರದಿ ಬರುವುದು ಬಾಕಿ ಇದೆ. ಆರು ಮಂದಿಯಲ್ಲಿ ಸೋಂಕು ದೃಢಪಟ್ಟಿರುವುದು ವಿದ್ಯಾರ್ಥಿಗಳ ಪೋಷಕರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಸದ್ಯಕ್ಕೆ ಕಾಲೇಜು ಸಿಬ್ಬಂದಿಗೆ ಆಫ್ಲೈನ್ ವಿದ್ಯಾರ್ಥಿಗಳ ಪಟ್ಟಿಯನ್ನೂ ಸಿದ್ಧಪಡಿಸಲು ಸೂಚನೆ ನೀಡಲಾಗಿದೆ. ಶುಕ್ರವಾರದಿಂದ ಆಫ್ಲೈನ್ ವಿದ್ಯಾರ್ಥಿಗಳ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಲು ಸೂಚಿಸಲಾಗಿದೆ.
ಹಾಸನ; ವಿದ್ಯಾರ್ಥಿಗಳು, ಉಪನ್ಯಾಸಕರಿಗೆ ಕಡ್ಡಾಯ ಕೋವಿಡ್ ಪರೀಕ್ಷೆಗೆ ಸೂಚನೆ
ಬೆಳಗಾವಿ ಕೊರೊನಾ ಸೋಂಕಿನ ಪ್ರಕರಣಗಳು: ಬೆಳಗಾವಿ ಜಿಲ್ಲೆಯಲ್ಲಿ ನ.19ರ ವರದಿಯಂತೆ ಒಟ್ಟು 25352 ಕೊರೊನಾ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 24621 ಮಂದಿ ಗುಣಮುಖರಾಗಿದ್ದು, ಸದ್ಯಕ್ಕೆ 391 ಸಕ್ರಿಯ ಪ್ರಕರಣಗಳಿವೆ. ಸೋಂಕಿನಿಂದ ಜಿಲ್ಲೆಯಲ್ಲಿ ಇದುವರೆಗೂ 340 ಮಂದಿ ಮೃತಪಟ್ಟಿದ್ದಾರೆ.