ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅತೃಪ್ತರ ಸಮಾವೇಶದಲ್ಲಿ ಈಶ್ವರಪ್ಪ-ಬಿಎಸ್ವೈ ಬೆಂಬಲಿಗರ ಮಾರಾಮಾರಿ

'ಸಂಘಟನೆ ಉಳಿಸೋಣ ಬನ್ನಿ' ಹೆಸರಿನಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಬಿಜೆಪಿ ಅತೃಪ್ತರು ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಬಿಎಸ್ ಯಡಿಯೂರಪ್ಪ ಮತ್ತು ಈಶ್ವರಪ್ಪ ಬೆಂಬಲಿಗರ ನಡುವೆ ಮಾರಾಮಾರಿ ನಡೆದಿದೆ.

By Sachhidananda Acharya
|
Google Oneindia Kannada News

ಬೆಂಗಳೂರು, ಏಪ್ರಿಲ್ 27: 'ಸಂಘಟನೆ ಉಳಿಸಿ' ಹೆಸರಿನಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಬಿಜೆಪಿ ಅತೃಪ್ತರು ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಬಿಎಸ್ ಯಡಿಯೂರಪ್ಪ ಮತ್ತು ಈಶ್ವರಪ್ಪ ಬೆಂಬಲಿಗರ ನಡುವೆ ಮಾರಾಮಾರಿ ನಡೆದಿದೆ.

ಈ ಮೂಲಕ ಇಲ್ಲಿಯವರೆಗೆ ನಾಯಕರ ನಡುವೆ ನಡೆಯುತ್ತಿದ್ದ ತಿಕ್ಕಾಟ ಕಾರ್ಯಕರ್ತರ ವಲಯಕ್ಕೂ ಕಾಲಿಟ್ಟಿದೆ.ಇಂದು ಅರಮನೆ ಮೈದಾನದಲ್ಲಿ ನಡೆಯುತ್ತಿದ್ದ ಸಮಾವೇಶ ಸ್ಥಳಕ್ಕೆ ಆಗಮಿಸಿದ ಯಡಿಯೂರಪ್ಪ ಬೆಂಗಲಿಗರೊಬ್ಬರು ಗಲಾಟೆ ನಡೆಸಿದರು.[ನಾವು ತಂದೆ ತಾಯಿಗೆ ಹುಟ್ಟಿದವರು ಪಕ್ಷ ಬಿಡಲ್ಲ : ಈಶ್ವರಪ್ಪ]

ಪ್ರಾಸ್ತಾವಿಕ ಭಾಷಣ ಆರಂಭಿಸಿದ ಭಾನುಪ್ರಕಾಶ್, "ಪುಟ್ಟಸ್ವಾಮಿ ವಿರುದ್ದ ವಾಗ್ದಾಳಿ ನಡೆಸುತ್ತಿದ್ದರು. ಇದೇ ವೇಳೆ ಯಡಿಯೂರಪ್ಪ ವಿರುದ್ದ ಮಾತನಾಡುತ್ತಿದ್ದಂತೆ ಅವರ ಬೆಂಬಲಿಗರೊಬ್ಬರು ಗಲಾಟೆ ಆರಂಭಿಸಿದ್ದಾರೆ. ತಕ್ಷಣ ಅವರನ್ನು ಹೊರ ಹಾಕುವಂತೆ ಮಾಜಿ ಪರಿಷತ್ ಸದಸ್ಯ ಎಂಸಿ ಭಾನು ಪ್ರಕಾಶ್ ಹರಿಹಾಯ್ದರು.

ನಂತರ ಯಡಿಯೂರಪ್ಪ ಬೆಂಬಲಿಗರನ್ನು ಕತ್ತು ಪಟ್ಟಿ ಹಿಡಿದು ಸಮಾವೇಶದಿಂದ ಹೊರ ಹಾಕಲಾಯಿತು. ಕೂಡಲೇ ಪೊಲೀಸರು ಸ್ಥಳಕ್ಕೆ ಬಂದು ಪರಿಸ್ಥಿತಿಯನ್ನು ತಿಳಿಗೊಳಿಸಿದರು.

 ಎಚ್ಚರಿಕೆ ಧಿಕ್ಕರಿಸಿದ ಈಶ್ವರಪ್ಪ

ಎಚ್ಚರಿಕೆ ಧಿಕ್ಕರಿಸಿದ ಈಶ್ವರಪ್ಪ

ಅತೃಪ್ತರ ಸಮಾವೇಶದಲ್ಲಿ ಭಾಗವಹಿಸದಂತೆ ಈಶ್ವರಪ್ಪಗೆ ಬಿ.ಜೆ ಪುಟ್ಟಸ್ವಾಮಿ ಮತ್ತು ರವಿಕುಮಾರ್ ಮೂಲಕ ಯಡಿಯೂರಪ್ಪ ಎಚ್ಚರಿಕೆ ನೀಡಿದ್ದರು. ಆದರೆ ಯಡಿಯೂರಪ್ಪ ಎಚ್ಚರಿಕೆಗೆ ಕ್ಯಾರೇ ಎನ್ನದ ಈಶ್ವರಪ್ಪ ಸಮಾವೇಶದಲ್ಲಿ ಭಾಗವಹಿಸಿದ್ದಾರೆ. ಈ ಮೂಲಕ ಬಿಜೆಪಿ ಭಿನ್ನರ ಸಭೆಯಲ್ಲಿ ಭಾಗಿಯಾಗಿ ಈಶ್ವರಪ್ಪ ಬಿಎಸ್ ವೈಗೆ ಸೆಡ್ಡು ಹೊಡೆದಿದ್ದಾರೆ.

 ಪಕ್ಷದ ಸಂಸ್ಕೃತಿ ಉಳಿಯಲಿ

ಪಕ್ಷದ ಸಂಸ್ಕೃತಿ ಉಳಿಯಲಿ

ಬಿಜೆಪಿ ಭಿನ್ನರ ಸಭೆಯಲ್ಲಿ ಪರಿಷತ್ ಸದಸ್ಯ ಭಾನುಪ್ರಕಾಶ ಮಾತನಾಡಿ, "ಬಿಜೆಪಿಯಲ್ಲಿ ಒಳ್ಳೆಯ ಅವಕಾಶವಿದೆ ಏಕೆ ಜಗಳವಾಡುತ್ತಿದ್ದೀರಿ ಎಂದು ಜನ ನಮ್ಮನ್ನು ಕೇಳುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಕ್ಷ ಸಂಘಟನೆ ನಡೆಯಲಿ ಅನ್ನೋದು ನಮ್ಮ ಆಸೆ. ಈ ಕಾರಣಕ್ಕೆ ನಾವು ಹೋರಾಟ ಮಾಡುತ್ತಿದ್ದೇವೆ. ನಾವು ಯಾರೂ ಕೂಡಾ ಮುಂದಿನ ಚುನಾವಣೆಗೆ ಟಿಕೆಟ್ ಕೊಡಿ ಎಂದು ಕೇಳುತ್ತಿಲ್ಲ ," ಎಂದು ಭಾನು ಪ್ರಕಾಶ್ ಹೇಳಿದರು.

ಸಂಆವೇಶದಲ್ಲಿ ಪ್ರಾಸ್ತಾವಿಕ ಮಾತುಗಳನ್ನಾಡಿದ ಅವರು, "ಪಕ್ಷದ ಸಂಸ್ಕೃತಿ ಉಳಿಯಲಿ ಅನ್ನೋದು ನಮ್ಮ ಭಾವನೆ. ಮೂಲ ಕಾರ್ಯಕರ್ತರನ್ನು ಕಡೆಗಣಿಸುತ್ತಿದ್ದಾರೆಂದು ತಿಳಿಸಲು ಈ ಸಭೆಯನ್ನು ಕರೆಯಲಾಗಿದೆ," ಎಂದು ಭಾನು ಪ್ರಕಾಶ್ ಹೇಳಿದ್ದಾರೆ.[ಯಡಿಯೂರಪ್ಪ ಮುತ್ಸದ್ಧಿತನ ಮೆರೆದಿದ್ದಾರೆ - ಸೊಗಡು ಶಿವಣ್ಣ]

 ಯಡಿಯೂರಪ್ಪ ವಿರುದ್ಧ ವಾಗ್ದಾಳಿ

ಯಡಿಯೂರಪ್ಪ ವಿರುದ್ಧ ವಾಗ್ದಾಳಿ

ಇದೇ ವೇಳೆ ಭಾನು ಪ್ರಕಾಶ್ ಯಡಿಯೂರಪ್ಪ ವಿರುದ್ಧ ನೇರ ವಾಗ್ದಾಳಿ ನಡೆಸಿದರು. "ಪದಾಧಿಕಾರಿಗಳ ನೇಮಕದಲ್ಲಿ ಅನ್ಯಾಯವಾಗಿದೆ. ಪಕ್ಷದಲ್ಲೇ ಇಲ್ಲದವರು ಜಿಲ್ಲಾಧ್ಯಕ್ಷರಾಗಿದ್ದಾರೆ. ನಮ್ಮ ಅಭಿಪ್ರಾಯವನ್ನು ಮೊದಲೇ ತಿಳಿಸಿದ್ದೇವೆ. ಆದರೂ ಪಕ್ಷದಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ. ಇವತ್ತಿನ ಸಭೆ ಅತೃಪ್ತರ ಸಭೆನೂ ಅಲ್ಲ. ಇಂದಿನ ಸಭೆ ಭಿನ್ನರ ಸಭೆಯೂ ಅಲ್ಲ. ನಾವೆಲ್ಲಾ ಮೂಲ ಬಿಜೆಪಿಯವರು. ಇವತ್ತು ಬೇರೆ ಪಕ್ಷ ಕಟ್ಟಿದವರೇ ಪಕ್ಷ ಆಳುತ್ತಿದ್ದಾರೆ," ಎಂದು ಯಡಿಯೂಪ್ಪನವರ ಮೇಲೆ ಭಾನು ಪ್ರಕಾಶ್ ಹರಿಹಾಯ್ದರು.

 ಯಡಿಯೂರಪ್ಪ ಕೆಜೆಪಿ ಕಟ್ಟಿದ್ಯಾಕೆ? ಈಶ್ವರಪ್ಪ ಪ್ರಶ್ನೆ

ಯಡಿಯೂರಪ್ಪ ಕೆಜೆಪಿ ಕಟ್ಟಿದ್ಯಾಕೆ? ಈಶ್ವರಪ್ಪ ಪ್ರಶ್ನೆ

ಇನ್ನು ಸಮಾವೇಶದಲ್ಲಿ ಮಾತನಾಡಿದ ಅತೃಪ್ತರ ನಾಯಕ ಈಶ್ವರಪ್ಪ, ಬಿಎಸ್ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು. "ಯಡಿಯೂರಪ್ಪ ಕೆಜೆಪಿ ಕಟ್ಟಿದ್ದು ಯಾಕೆ? ಅವರು ಕೆಜೆಪಿ ಕಟ್ಟಿದ್ದರಿಂದ ಇವತ್ತು ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಅವತ್ತು ಬೇಡ ಬೇಡ ಅಂದರೂ ಕೆಜೆಪಿ ಕಟ್ಟಿದರು. ಇದರಿಂದ ಬಿಜೆಪಿ ಸೋಲು ಕಾಣಬೇಕಾಯಿತು. ಸಿದ್ದರಾಮಯ್ಯನವರಿಗೆ ಲಾಟರಿ ಹೊಡೆಯಿತು," ಎಂದರು.

ಆದರೆ ಈ ಬಾರಿ ಬಿಜೆಪಿ ಒಡೆಯಲು ಬಿಡುವುದಿಲ್ಲ. ಬಿಜೆಪಿ ಸರ್ಕಾರ ಬರಬೇಕು ಎನ್ನುವುದು ನಮ್ಮ ಆಸೆ ಎಂದು ಕೆ.ಎಸ್ ಈಶ್ವರಪ್ಪ ಹೇಳಿದರು.[ನಾಳೆ ಬೆಂಗಳೂರಲ್ಲಿ ಬಿಎಸ್‍ವೈ ವಿರುದ್ಧ ಬಿಜೆಪಿ ಅತೃಪ್ತರ ಶಕ್ತಿ ಪ್ರದರ್ಶನ]

 ಮುಂದಿನ ಸಿಎಂ ಯಡಿಯೂರಪ್ಪ

ಮುಂದಿನ ಸಿಎಂ ಯಡಿಯೂರಪ್ಪ

ನಿಷ್ಠಾವಂತ ಕಾರ್ಯಕರ್ತರಿಂದ ಸರ್ಕಾರ ಬರಬೇಕು. ಆದರೆ ನಿಷ್ಠಾವಂತರನ್ನು ಕಡೆಗಣಿಸಿ ಮೋರ್ಚಾಗಳಿಗೆ ನೇಮಕ ಮಾಡಲಾಗಿದೆ. ನೇಮಕವಾದವರೇನು ಜೈಲಿಗೆ ಹೋಗಿ ಬಂದವರಾ? ಹೋರಾಟ ಮಾಡಿದವರಾ? ಎಂದು ಈಶ್ವರಪ್ಪ ಪ್ರಶ್ನಿಸಿದರು.

ಯಾರೋ ಹಣ ಕೊಟ್ಟು ಶಾಸಕರಾದವರಿಂದ ಸರ್ಕಾರ ಬರಬೇಕು ಅಂದರೆ ಆಗುವುದಿಲ್ಲ. ಮುಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅಂತ ನಾವೆಲ್ಲಾ ಒಪ್ಪಿದ್ದೇವೆ. ಆದರೆ ನೀವು ಮಾಡುತ್ತಿರುವುದೇನು? ಎಂದು ಈಶ್ವರಪ್ಪ ವಾಗ್ದಾಳಿ ನಡೆಸಿದರು.

 ಸಸ್ಪೆಂಡ್ ಮಾಡ್ತೀರಾ? ಗುಡುಗಿದ ಈಶ್ವರಪ್ಪ

ಸಸ್ಪೆಂಡ್ ಮಾಡ್ತೀರಾ? ಗುಡುಗಿದ ಈಶ್ವರಪ್ಪ

"ನಿಮ್ಮ ಸುತ್ತಮುತ್ತ ಹಿಂಬಾಲಕರು ನಿಮ್ಮನ್ನು ಇಂದ್ರ ಚಂದ್ರ ಅಂತಾ ಹೊಗಳುತ್ತಿರುತ್ತಾರೆ. ಹಿಂದೆಯೂ ಇಂಥವರೇ ನಿಮ್ಮನ್ನು ಮುಳುಗಿಸಿದರು. ನೀವು ಏನಾದರೂ ಮಾಡಿ. ನಾವು ಪಕ್ಷ ಉಳಿಸುತ್ತೇವೆ. ರಾಯಣ್ಣ ಬ್ರಿಗೇಡ್ ಮುಂದುವರಿಸಿ ಅಂತ ಹಾಗಂತ ಅಮಿತ್ ಷಾ ಅವರೇ ಹೇಳಿದ್ದಾರೆ. ನಾವು ರಾಯಣ್ಣ ಬ್ರಿಗೇಡ್ ಮುಂದುವರಿಸುತ್ತೇವೆ," ಎಂದು ಈಶ್ವರಪ್ಪ ಸ್ಪಷ್ಟವಾಗಿ ಹೇಳಿದ್ದಾರೆ.

ಇವತ್ತಿನ ಸಭೆಯಲ್ಲಿ ಭಾಗವಹಿಸಿದರೆ ಎಚ್ಚರಿಕೆ ಅಂತೀರಾ? ನಾವು ಇಲ್ಲಿ ಭಾಗವಹಿಸಿದವರೆಲ್ಲಾ ನಿಷ್ಠಾವಂತರು. ನಮ್ಮ ಸುದ್ದಿಗೆ ಬಂದರೆ ಹುಷಾರ್ ಎಂದು ಎಚ್ಚರಿಕೆ ನೀಡದರು.

 ಇಷ್ಟು ದಿನ ಎಲ್ಲಿ ಹೋಗಿದ್ರಿ?

ಇಷ್ಟು ದಿನ ಎಲ್ಲಿ ಹೋಗಿದ್ರಿ?

ಇವತ್ತು ನಾಲ್ಕು ಗೋಡೆ ಮಧ್ಯೆ ಮಾತಾಡೋಣ ಅಂತಿದ್ದೀರಾ. ಇಷ್ಟು ದಿನ ಎಲ್ಲಿ ಹೋಗಿದ್ರಿ ಯಡಿಯೂರಪ್ಪನವರೇ? ಎಂದು ಈಶ್ವರಪ್ಪ ಪ್ರಶ್ನಿಸಿದರು. ಈಗಲೂ ಕಾಲ ಮಿಂಚಿಲ್ಲ. ಈಗಲೂ ಒಟ್ಟಾಗಿ ಹೋಗೋಣಾ ಬನ್ನಿ ಎಂದು ಯಡಿಯೂರಪ್ಪನವರಿಗೆ ಆಹ್ವಾನ ನೀಡಿದರು.

ನಾವಿಲ್ಲಿ ಕುಳಿತವರು ನಾಯಿ, ನರಿಗಳಲ್ಲ; ನಾವೆಲ್ಲಾ ಹುಲಿಗಳು ಎಂದು ಈಶ್ವರಪ್ಪ ಘರ್ಜಿಸಿದರು.

 ಸರ್ವಾಧಿಕಾರಿ ಧೋರಣೆ ನಡೆಯಲ್ಲ

ಸರ್ವಾಧಿಕಾರಿ ಧೋರಣೆ ನಡೆಯಲ್ಲ

ಪಕ್ಷ ಬಿಟ್ಟು ಹೋಗಿ ಬಂದವರು ನಮಗೆ ಇವತ್ತು ಎಚ್ಚರಿಕೆ ನೀಡುತ್ತಿದ್ದಾರೆ. ನಮ್ಮ ಜೀವ ಹೋದರೂ ನಾವು ಪಕ್ಷ ಬಿಟ್ಟು ಹೋಗಲ್ಲ. ನಾವು ಪಕ್ಷ ಕಟ್ಟಿದ್ದೇ ತಪ್ಪಾ? ಲಕ್ಷ ಜನರನ್ನು ಸದಸ್ಯರನ್ನಾಗಿ ಮಾಡಿದ್ದು ತಪ್ಪಾ? ಇವತ್ತು ಸಭೆಯಲ್ಲಿ ಭಾಗವಹಿಸಿದ್ರೆ ಹುಷಾರ್ ಅಂತೀರಾ? ಎಂದು ಯಡಿಯೂರಪ್ಪನವರ ಮೇಲೆ ಹರಿಹಾಯ್ದರು.

ನಮಗೆ ಎಚ್ಚರಿಕೆ ನೀಡುವುದಲ್ಲ. ನಿಮಗೆ ನಾವು ಎಚ್ಚರಿಕೆ ಕೊಡ್ತಿದ್ದೇವೆ. ನಿಮ್ಮ ಸರ್ವಾಧಿಕಾರಿ ಧೋರಣೆ ನಡೆಯಲ್ಲ ಎಂದು ಈಶ್ವರಪ್ಪ ಹೇಳಿದರು.

 ನಮ್ಮ ತಂದೆ-ತಾಯಿಗೆ ಹುಟ್ಟಿದವರು

ನಮ್ಮ ತಂದೆ-ತಾಯಿಗೆ ಹುಟ್ಟಿದವರು

ನಮ್ಮ ತಂದೆ ತಾಯಿಗೆ ಹುಟ್ಟಿದವರು ನಾವು. ನಾವೆಂದೂ ಪಕ್ಷ ಬಿಟ್ಟು ಹೋಗಲ್ಲ. ಬೇರೆ ಪಕ್ಷವನ್ನೂ ಕಟ್ಟುವುದಿಲ್ಲ. ಯಾರು ಯಾರನ್ನು ಪಕ್ಷಕ್ಕೆ ತೆಗೆದುಕೊಳ್ಳಬೇಕು ಚರ್ಚೆ ಮಾಡಿ. ನಿಮಗಿಷ್ಟ ಬಂದವರನ್ನ ನೇಮಕ ಮಾಡಲು ಸಾಧ್ಯವಿಲ್ಲ. ಇದು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಭೆ ಅಲ್ಲ. ಈ ಸಭೆ ಕರೆದವನು ನಾನಂತೂ ಅಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಇದು ಬಿಜೆಪಿ ನಿಷ್ಠಾವಂತರ ಸಭೆ. ಮತ್ತೊಮ್ಮೆ ಹೇಳುತ್ತಿದ್ದೇನೆ. ಈ ಸಭೆಯನ್ನು ನಾನು ಕರೆದಿಲ್ಲ. ಮತ್ತೆ ಹೇಳುತ್ತಿದ್ದೇನೆ ಇದು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಭೆ ಅಲ್ಲ. ಇದು ತುರ್ತು ಪರಿಸ್ಥಿತಿ ವೇಳೆಯಲ್ಲಿ ಜೈಲಿಗೆ ಹೋಗಿದ್ದ ಕಾರ್ಯಕರ್ತರು, ಪಕ್ಷ ಸಂಘಟನೆ ಮಾಡಿದ್ದ ಕಾರ್ಯಕರ್ತರು, 24 ಜನ ಪ್ರಮುಖ ಕಾರ್ಯಕರ್ತರು ಕರೆಕೊಟ್ಟ ಸಭೆ ಎಂದು ಈಶ್ವರಪ್ಪ ವಿವರ ನೀಡಿದರು.

English summary
BJP state president BS Yeddyurappa and BJP rebel leader KS Eshwarappa supporters clash in ‘Sanghatane Ulisi’ rally at Palace Ground, Bengaluru. Rebel BJP leaders like K S Eshwarappa, Sogadu Shivanna and others organised a rally in Palace Ground, Bengaluru against the decisions of BS Yeddyurappa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X