ಗ್ರಾಹಕರ ಹಕ್ಕುಗಳ ದಿನದಂದು ಟ್ವಿಟ್ಟರ್ ಚಳುವಳಿ

By: ವಲ್ಲೀಶ ಕುಮಾರ್ ಎಸ್, ಬೆಂಗಳೂರು.
Subscribe to Oneindia Kannada

ಮಾರ್ಚ್ 15 - ಗ್ರಾಹಕರ ಹಕ್ಕುಗಳ ದಿನವೆಂದು ಗುರುತಿಸಲ್ಪಡುವ ದಿನ. ಗ್ರಾಹಕನಿಗೆ ಇರುವ ನಾಲ್ಕು ಹಕ್ಕುಗಳು ಅಂದರೆ - ಮಾಹಿತಿಯ ಹಕ್ಕು, ಸುರಕ್ಷತೆಯ ಹಕ್ಕು, ಆಯ್ಕೆಯ ಹಕ್ಕು ಮತ್ತು ದೂರು ಕೊಡುವ ಹಕ್ಕು - ಇವುಗಳನ್ನು ಎತ್ತಿಹಿಡಿಯುವ ದಿನ. ಗ್ರಾಹಕರನ್ನು ಕಾಪಾಡುವ ಕಾನೂನುಗಳನ್ನು ಬಹುತೇಕ ಎಲ್ಲಾ ದೇಶಗಳೂ ರೂಪಿಸಿಕೊಂಡಿವೆ; ಅಂತೆಯೇ ಭಾರತದಲ್ಲೂ ಗ್ರಾಹಕರ ಹಕ್ಕುಗಳ ಕುರಿತ ಕಾನೂನುಗಳು ಇವೆ.

ಭಾರತದಲ್ಲಿ ಗ್ರಾಹಕರ ಹಕ್ಕುಗಳ ಎತ್ತಿ ಹಿಡಿಯಲು ರೂಪಿಸಲಾಗಿರುವ ಕಾನೂನುಗಳಲ್ಲಿ ಯಾವುದೇ ವಸ್ತು ಅಥವಾ ಸೇವೆ ಪಡೆಯುವ ಗ್ರಾಹಕನಿಗೆ ಮುಖ್ಯವಾಗಿ ಆ ವಸ್ತು ಅಥವಾ ಸೇವೆಗೆ ಸಂಬಂಧಿಸಿದಂತೆ ಗುಣಮಟ್ಟ, ಅಳತೆ ಇತ್ಯಾದಿ ವಿಷಯಗಳನ್ನು ಹೆಚ್ಚಾಗಿ ಗಮನಿಸಲಾಗಿದೆ.[ಭಾರತದ ಗ್ರಾಹಕ ಹಕ್ಕು ನಿಯಮಗಳು ಗಟ್ಟಿಗೊಳ್ಳಲಿ]

ಮಾರುಕಟ್ಟೆಯಲ್ಲಿ ಗ್ರಾಹಕನಿಗೆ ಮತ್ತು ಮಾರಾಟಗಾರರಿಗೆ ಅನುಕೂಲ ಮಾಡುವ, ಒಳ್ಳೆಯ ಸಂಬಂಧ ಮತ್ತು ನಂಬಿಕೆಯನ್ನು ಬೆಸೆಯುವ ಮುಖ್ಯವಾದ ಆಯಾಮವಾದ ಭಾಷೆಯನ್ನು ಹೆಚ್ಚಾಗಿ ಪರಿಗಣಿಸಲಾಗಿಲ್ಲ. ಕೆಲವು ಕಾನೂನುಗಳಲ್ಲಿ ಭಾಷೆಯ ಆಯಾಮವನ್ನು ಪರಿಗಣಿಸಿದರೂ ಅಲ್ಲೆಲ್ಲಾ ಗ್ರಾಹಕರ ಭಾಷೆಯನ್ನು ಹಿಂದಿ/ಇಂಗ್ಲಿಷ್ ಎಂದು ಪರಿಗಣಿಸಲಾಗಿದೆ.

World Consumer Rights Day (WCRD)

ಇಂಗ್ಲಿಷ್ ಮತ್ತು ಹಿಂದಿ ಭಾಷೆಗೆ ಏಕೆ ಮಹತ್ವ?: ಅಂದರೆ, ಭಾರತದಲ್ಲಿ ವ್ಯಾಪಾರ ನಡೆಸ ಬಯಸುವವರು ಇಂಗ್ಲಿಷ್/ಹಿಂದಿ ಭಾಷೆಗಳಲ್ಲಿ ಸೇವೆಯನ್ನು ನೀಡಿದರೆ ನಿಯಮಗಳನ್ನು ಪಾಲಿಸಿದಂತೆ ಆಗುತ್ತದೆ. ಅದ್ದರಿಂದ ಬಹುತೇಕ ಕಂಪನಿಗಳು ಕೇವಲ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಸೇವೆ ನೀಡುತ್ತಾ ಬಂದಿವೆ. ಇದರ ಪರಿಣಾಮ ಭಾರತ ದೇಶದಲ್ಲಿ ಇಂದು ನಡೆಯುವ ವ್ಯಾಪಾರ ವಹಿವಾಟಿನಲ್ಲಿ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳನ್ನು ಮಾತ್ರ ಹೆಚ್ಚಾಗಿ ಕಾಣುತ್ತೇವೆ.

ಉದಾಹರಣೆಗೆ ಕರ್ನಾಟಕದಲ್ಲಿ ಮಾರಲಾಗುವ ಔಷಧಿಗಳ ಮೇಲೆ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಮಾತ್ರ ಮಾಹಿತಿ ಮುದ್ರಿಸಿರುತ್ತಾರೆ. ಕನ್ನಡದಲ್ಲಿ ಮಾಹಿತಿ ಇರುವುದಿಲ್ಲ. ಹಿಂದಿ ಭಾಷಿಕರ ಜನಸಂಖ್ಯೆ ಮತ್ತು ಇಂಗ್ಲಿಷ್ ಬಲ್ಲವರ ಜನಸಂಖ್ಯೆ ಹೊರತುಪಡಿಸಿ ಉಳಿದ ಭಾರತೀಯರು (ಸುಮಾರು 90 ಕೋಟಿ ಜನರು) ತಮ್ಮ ನುಡಿಯಲ್ಲಿ ಗ್ರಾಹಕ ಸೇವೆ ಸಿಗದೇ ತೊಂದರೆ ಅನುಭವಿಸಬೇಕಾಗಿ ಬಂದಿದೆ. ಇದರಿಂದ ಗ್ರಾಹಕರ ಹಕ್ಕುಗಳಾದ ಮಾಹಿತಿಯ ಹಕ್ಕು ಮತ್ತು ಸುರಕ್ಷತೆಯ ಹಕ್ಕನ್ನು ಕಸಿದುಕೊಂಡಂತಾಗಿದೆ.

ಕನ್ನಡಿಗರಿಗೆ ಕರ್ನಾಟಕದಲ್ಲಿ ತಮ್ಮ ನುಡಿಯಲ್ಲೇ ಎಲ್ಲಾ ಗ್ರಾಹಕ ಸೇವೆಗಳನ್ನು ಪಡೆಯುವ ಹಕ್ಕಿದೆ. ಅಂತೆಯೇ ಭಾರತದ ಇತರ ಭಾಷೆಗಳಾದ ತೆಲುಗು, ತಮಿಳು, ಮಲಯಾಳಂ, ಬಾಂಗ್ಲಾ, ಮರಾಠಿಗಳಿಗೂ ತಮ್ಮ ತಮ್ಮ ರಾಜ್ಯಗಳಲ್ಲಿ ತಮ್ಮ ಭಾಷೆಯಲ್ಲಿ ಸೇವೆಯನ್ನು ಪಡೆಯುವ ಹಕ್ಕಿದೆ.

ಈ ಗ್ರಾಹಕ ಹಕ್ಕಿನ ಕುರಿತು ಜಾಗೃತಿ ಮೂಡಿಸಲು ಮತ್ತು ಗ್ರಾಹಕ ಸೇವೆಯಲ್ಲಿ ಭಾಷೆಯ ಪ್ರಾಮುಖ್ಯತೆಯನ್ನು ಎತ್ತಿ ಹಿಡಿಯಲು ಮಾರ್ಚ್ 15, 2016ರಂದು "ಕನ್ನಡ ಗ್ರಾಹಕರ ಕೂಟ"ವು ಟ್ವಿಟ್ಟರ್ ಚಳುವಳಿಯೊಂದನ್ನು ಹಮ್ಮಿಕೊಂಡಿದೆ. ಆ ದಿನದಂದು ಸಂಜೆ 4 ಗಂಟೆಯಿಂದ 8 ಗಂಟೆಯವರೆಗೆ #ServeInMyLanguage ಮತ್ತು #WorldConsumerRightsDay ಅನ್ನುವ hashtagಗಳನ್ನು ಬಳಸಿ ಟ್ವೀಟ್ ಮಾಡುವ ಮೂಲಕ ಈ ಚಳುವಳಿಯಲ್ಲಿ ಭಾಗವಹಿಸಬಹುದಾಗಿದೆ. ಎಲ್ಲಾ ಕನ್ನಡಿಗರೂ, ಮತ್ತಿತರ ಭಾಷಿಕರೂ ಈ ಚಳುವಳಿಯಲ್ಲಿ ಪಾಲ್ಗೊಂಡು ಗ್ರಾಹಕರ ಹಕ್ಕುಗಳ ಕುರಿತ ಜಾಗೃತಿಗೆ ದನಿಗೂಡಿಸಬೇಕು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
World Consumer Rights Day (WCRD) Twitter Campaign started by Kannada Consumer Forum to demand rights to Kannada consumers. The event is on March 15 from 4 PM to 8 PM. Public can tweet with #ServeInMyLanguage and #WorldConsumerRightsDay hash tags
Please Wait while comments are loading...