ಕರಗುವ ಮುನ್ನ ಸವಿಯಲೇಬೇಕು ಮುಂಜಾನೆ ಮಂಜಿನ ಸುಖ

Posted By:
Subscribe to Oneindia Kannada

ಬೆಂಗಳೂರು, ಜನವರಿ 17 : ಬೇಸಿಗೆಯನ್ನು ಇನ್ನೇನು ಸ್ವಾಗತಿಸಲು ಸಿದ್ಧತೆ ಮಾಡಿಕೊಳ್ಳುತ್ತಿರುವ ಬೆಂಗಳೂರಿನಲ್ಲಿ ಬೆಳಗಿನ ಜಾವ ಮೈಮರಗಟ್ಟಿಸುವ ಚಳಿ. ವಾಕಿಂಗೂ ಬೇಡ, ಕೆಲಸ ಭೊಗಸಿಯೂ ಬೇಡ, ಕಚೇರಿಯಂತೂ ಬೇಡವೇ ಬೇಡ... ರಗ್ಗು ಹೊದ್ದುಕೊಂಡು ಗಡದ್ದಾಗಿ ಮಲಗಿ ಬಿಡೋಣ ಎಂಬಂಥ ಭಾವ.

ಬೆಳಿಗ್ಗೆ ಆರೂವರೆಯಾದರೂ ಆಗಸದಲ್ಲಿ ಕಾಣಿಸಿಕೊಳ್ಳಲು ಭಾಸ್ಕರನಿಗೆ ಏನೋ ಆಲಸಿತನ. ದಟ್ಟವಾಗಿ ಆವರಿಸಿಕೊಂಡ ಮಂಜಿನ ಮುಸುಕನ್ನು ಸರಿಸಿ ವ್ಯಾಪಾರದಲ್ಲಿ ತೊಡಗುವವರಿಗೆ ದರ್ಶನ ತೋರಲು ಏನೋ ಬಿಗುಮಾನ.

Winter in Bengaluru : Take care of yourself

ಇನ್ನು, ಲಗುಬಗೆಯಿಂದ ಎದ್ದು, ಕಸಗುಡಿಸಿ, ಬೆಚ್ಚಗೆ ಮಲಗಿರುವ ಮಕ್ಕಳನ್ನು ಬೇಗನೆ ಎಬ್ಬಿಸಿ, ಥಳಿರಂಗೋಲಿ ಮಾಡಿ, ಬೇಕಾದ ಪಾತ್ರೆಗಳನ್ನು ಐಸ್ ಥಂಡಾ ನೀರಿನಲ್ಲಿ ತೊಳೆದುಕೊಂಡು, ಎರಡೆರಡು ಡಬ್ಬಿಗಳನ್ನು ಕಟ್ಟಿ ಶಾಲೆ ಅಟ್ಟಬೇಕಾದ ತಾಯಂದಿರ ಕಥೆಯಂತೂ ಕೇಳಲೇಬೇಡಿ.

ಇನ್ನು ಈ ಹಂತವನ್ನು ದಾಟಿ, ಬೀರುವಿನ ಬೀಗದ ಕೈಯನ್ನು ತಾವೇ ಇಟ್ಟುಕೊಂಡು, ಸೊಸೆಯ ಕೈಗೆ ಸೌಟು ಮಾತ್ರ ಕೊಟ್ಟು, ಸ್ಕಾರ್ಫ್ ಮಫ್ಲರ್ ಸುತ್ತಿಕೊಂಡು, ಹತ್ತಿರದ ಪಾರ್ಕಿಗೆ ವಾಕಿಂಗ್ ಬರುವ ಅತ್ತೆಯಂದಿರ ನೋಟ, ಆ ಚಳಿಯಲ್ಲಿ ಹಲ್ಲು ಕಡಿದುಕೊಂಡು ಸೊಸೆಯಂದಿರನ್ನು ಹೀನಾಯವಾಗಿ ಬೈಯುವ ವೈಖರಿ ಸೊಗಸಾಗಿರುತ್ತದೆ.

Winter in Bengaluru : Take care of yourself

ಮಾನವರದು ಸಂಕಟ ಒಂದು ಬಗೆಯದಾದರೆ, ಕೊರೆಯುವ ಚಳಿಯಲ್ಲಿ ಮೈಮುದುರಿಕೊಂಡು ಯಾವುದೋ ಮೂಲೆಯಲ್ಲಿ ಇಡೀರಾತ್ರಿ ನಿದ್ದೆ ಮಾಡದೆ ಬಿದ್ದುಕೊಂಡು, ಸೂರ್ಯ ತನ್ನ ಕಿರಣಗಳನ್ನು ಭೂಮಿಯ ಮೇಲೆ ಪಸರಿಸುತ್ತಲೇ ಡುಬ್ಬ ಎತ್ತರಿಸಿ ಶ್ವಾನಗಳ ಆಟ, ನೋಟ ಇನ್ನೊಂದು ಬಗೆಯದು.

ಈ ಚಳಿಗಾಲದ ಮಜವೇ ಅಂತಹುದು. ಮೈ ಒಡೆಯುತ್ತದೆಂದು ಬೈದುಕೊಂಡರೂ ಸೂರ್ಯ ತನ್ನ ಬಂಗಾರದ ಹೊಂಗಿರಣವನ್ನು ಚೆಲ್ಲುತ್ತಲೇ, ಗಸಗಸ ಕೈತಿಕ್ಕಿಕೊಳ್ಳುತ್ತ ಮೈಕಾಸಿಕೊಳ್ಳುವ ಅನುಭವವಿದೆಯಲ್ಲ? ಇದು ಒಂಬತ್ತರವರೆಗೆ ಹಾಸಿಗೆಯಲ್ಲಿ ಬಿದ್ದುಕೊಳ್ಳುವ ಭೂಪರಿಗೆ ಸಿಕ್ಕುವುದಿಲ್ಲ.

Winter in Bengaluru : Take care of yourself

ಬೆಂಗಳೂರಿನಲ್ಲಿ ಸದ್ಯಕ್ಕೆ ಇಂದು ಕನಿಷ್ಠ ತಾಪಮಾನ 24 ಡಿಗ್ರಿ ಸೆಂಟಿಗ್ರೇಡ್. ಇದು ಬೆಳಗಿನ ಜಾವ ಆರು ಗಂಟೆಯ ಹೊತ್ತಿದೆ 14ಕ್ಕೆ ಇಳಿಯಲಿದೆ ಎಂದು ಹವಾಮಾನ ಇಲಾಖೆ ನಾಗರಿಕರಿಗೆ ಮುನ್ನೆಚ್ಚರಿಕೆ ಕೊಟ್ಟಿದೆ. ಇದನ್ನು ಮೊದಲೇ ತಿಳಿದುಕೊಂಡು ನಿಮ್ಮ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳಿ.

ಹಾಗೆಯೆ, ಶಾಲೆಗೆ ಹೋಗುವ ಮಕ್ಕಳು, ಕಚೇರಿ ಮತ್ತು ಅಡುಗೆಮನೆಯಿಂದ ನಿವೃತ್ತಿ ತೆಗೆದುಕೊಂಡು ಮೊಮ್ಮಕ್ಕಳ ಜೊತೆ ಆಟವಾಡಿಕೊಂಡಿರುವ ವಯಸ್ಸಾದವರ ಆರೋಗ್ಯದ ಕಾಳಜಿಯನ್ನು ಹೆಚ್ಚಾಗಿ ತೆಗೆದುಕೊಳ್ಳಿ. ಬಿಸಿಬಿಸಿ ಅಂಬೋಡೆ, ಗರಮಾಗರಂ ಕಾಫಿ ಸಂಜೆಯ ಸಂಗಾತಿಯಾಗಿರಲಿ.

Winter in Bengaluru : Take care of yourself

ಜನವರಿ 14ರಂದು ಸಂಕ್ರಾಂತಿಯಂದು ಸೂರ್ಯ ರಥವೇರಿದ್ದಾನೆ. ಫೆಬ್ರವರಿ 3, ಶುಕ್ರವಾರದಂದು ಬೆಳಿಗ್ಗೆ 5.26ರಿಂದ 7.09ರ ನಡುವಿನ ಮುಹೂರ್ತದಲ್ಲಿ ಸೂರ್ಯ ತನ್ನ ಪಥವನ್ನು ಬದಲಿಸಲಿದ್ದಾನೆ. ಅಲ್ಲಿಂದ ಮುಂದೆ ಅಧಿಕೃತವಾಗಿ ಬೇಸಿಗೆ ಆರಂಭವಾಗಲಿದೆ.

ಈಬಾರಿ ಮಳೆ ನೆಗೆದುಬಿದ್ದು ಹೋಗಿದೆ. ಚಳಿಗಾಲದ ದರ್ಶನವೂ ಇಲ್ಲ ಎಂದು ಗೊಣಗುತ್ತಿದ್ದವರು ಉಳಿದ ದಿನಗಳಲ್ಲಿ ಚಳಿಗಾಲದ ದಿವ್ಯ ಅನುಭವವನ್ನು ಗಡದ್ದಾಗಿ ಅನುಭವಿಸಿಬಿಡಿ. ಹೊಸದಾಗಿ ಮದುವೆಯಾದ ಜೋಡಿಗಳಿಗೆ ಇದನ್ನು ವಿಶೇಷವಾಗಿ ಹೇಳಬೇಕಿಲ್ಲ!

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Let us love winter, for it is the spring of genius - Pietro Aretino. Winter is wonder season before summer and after the rainy season. Bengaluru is experiencing chilli weather. Enjoy and have wonderful time. Also take care of your health.
Please Wait while comments are loading...