ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೂತ್ರದಾರವೂ ಇಲ್ಲ, ಮೂಗುದಾರವೂ ಇಲ್ಲದ ಬಿಜೆಪಿ

By ಪ್ರಸಾದ ನಾಯಿಕ
|
Google Oneindia Kannada News

ಭಾರತೀಯ ಜನತಾ ಪಕ್ಷದ ಹೈಕಮಾಂಡ್ ಯಾರು? ಇದು ಯಾವ ನಾಯಕನ ಹಿಡಿತದಲ್ಲಿದೆ? ಬಿಜೆಪಿ ಹೈಕಮಾಂಡ್ ವ್ಯಾಪ್ತಿಯಲ್ಲಿ ಕೆಳಮಟ್ಟದ (ರಾಜ್ಯಮಟ್ಟದ) ನಾಯಕರು ಬರುತ್ತಾರಾ ಇಲ್ಲವಾ? ಅಸಲಿಗೆ, ಬಿಜೆಪಿ ಹೈಕಮಾಂಡ್ ಹಲ್ಲಿಲ್ಲದ ಹಾವಾಗಿದೆಯಾ? ಹಲ್ಲಿದ್ದರೆ ರಾಷ್ಟ್ರಮಟ್ಟದ ಮತ್ತು ರಾಜ್ಯಮಟ್ಟದ ನಾಯಕರನ್ನು ಯಾಕೆ ಹದ್ದುಬಸ್ತಿನಲ್ಲಿ ಇಡಲು ಆಗುತ್ತಿಲ್ಲ?

ಈ ಪ್ರಶ್ನೆಗಳಿಗೆ ಉತ್ತರಗಳು ಯಾವತ್ತೂ ಸಿಗುವುದಿಲ್ಲ. ದೇಶ ಕಟ್ಟುವ ಹೊಸ ಕನಸುಗಳೊಂದಿಗೆ ಗಾಳಿಯಲ್ಲಿ ಸ್ವಚ್ಛಂದವಾಗಿ ಹಾರಾಡುತ್ತಿರುವ ಬಿಜೆಪಿ ಎಂಬ ಗಾಳಿಪಟದ ಸೂತ್ರಕ್ಕೆ ಕಟ್ಟಿದ ದಾರವನ್ನು ಗಟ್ಟಿಯಾಗಿ ಹಿಡಿದುಕೊಂಡು ನಿಯಂತ್ರಣದಲ್ಲಿ ಇಡಲು ರಾಷ್ಟ್ರನಾಯಕ ರಾಜನಾಥ್ ಸಿಂಗ್ ಹರಸಾಹಸಪಡುತ್ತಿರುವುದು ಇತ್ತೀಚೆಗೆ ನಡೆದ ಹಲವಾರು ಬೆಳವಣಿಗೆಗಳಿಂದ ಸಾಬೀತಾಗಿದೆ.

ಬಿಜೆಪಿಯನ್ನು ಕಟುವಾಗಿ ಟೀಕಿಸುತ್ತಿದ್ದ ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಅವರ ಸೇರ್ಪಡೆ ಮತ್ತು ಹೊರಹಾಕಿದ್ದು, ಭಾರತೀಯ ಜನತಾ ಪಕ್ಷದಲ್ಲಿನ ಹುಳುಕು, ಕೊಳಕು, ಒಡಕುಗಳನ್ನು ಮತ್ತೆ ಹೊರಹಾಕಿದೆ. ರಾಜ್ಯ ನಾಯಕರು ನಿಜಕ್ಕೂ ಹೈಕಮಾಂಡ್ ಹಿಡಿತದಲ್ಲಿದ್ದರೆ ಇಂಥ ಘಟನೆ ಸಂಭವಿಸುತ್ತಿತ್ತಾ? ಅಥವಾ ಇಂಥದಕ್ಕೆಲ್ಲಾ ಹೈಕಮಾಂಡ್ ಅನುಮತಿ ಏಕೆ ಬೇಕೆಂಬ ದಾರ್ಷ್ಟ್ಯವೆ? ಬೆಕ್ಕಿಗೆ ಗಂಟೆ ಕಟ್ಟುವವರಾರು? [ಪ್ರಮೋದ್ ಮುತಾಲಿಕ್ ಬಿಜೆಪಿ ಸೇರ್ಪಡೆ ರದ್ದು]

Who will bell the cat in Karnataka BJP?

ಒಟ್ಟಿನಲ್ಲಿ ಬಿಜೆಪಿಯ ನಾಯಕರು ಮುಜುಗರಕ್ಕೀಡಾಗಿದ್ದಂತೂ ಸತ್ಯ. ಪ್ರಮೋದ್ ಮುತಾಲಿಕ್ ಅವರ ಬಾಯಿಗೆ ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಶಿ, ಕೆಎಸ್ ಈಶ್ವರಪ್ಪ ಅವರು ಹಾಕಿದ ಸಿಹಿಸಿಹಿ ಮೋತಿಚೂರ್ ಲಾಡು ಎರಡೇ ಗಂಟೆಗಳಲ್ಲಿ ಕಹಿಕಹಿಯಾಗಿದ್ದು ವಿಡಂಬನೆಯ ಪರಮಾವಧಿ. ಹೈಕಮಾಂಡ್ ಅಣತಿಯಿಲ್ಲದೆ ಮುತಾಲಿಕ್ ಅವರನ್ನು ಪಕ್ಷದೊಳಗೆ ಸೇರಿಸಿಕೊಂಡಿದ್ದಾದರೂ ಹೇಗೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿ]

ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರನ್ನು ಪಕ್ಷದೊಳಗೆ ಬಿಟ್ಟುಕೊಳ್ಳುವಾಗಲೇ ಹಿರಿಯ ನಾಯಕರು ಎಚ್ಚೆತ್ತುಕೊಳ್ಳಬೇಕಿತ್ತು ಮತ್ತು ರಾಜ್ಯ ನಾಯಕರು ಎಚ್ಚರಿಕೆಯ ಮತ್ತು ವಿವೇಚಿತ ನಿರ್ಧಾರ ತೆಗೆದುಕೊಳ್ಳಬೇಕಿತ್ತು. ಯಡಿಯೂರಪ್ಪ ಅವರ ಸ್ವಾಗತಕ್ಕೆ ಅಡ್ವಾಣಿ ಸೇರಿದಂತೆ ಕೆಲ ಹಿರಿಯ ನಾಯಕರು ಅಂದೇ ರೆಡ್ ಸಿಗ್ನಲ್ ತೋರಿಸಿದ್ದರು. ಆದರೆ, ಯಡಿಯೂರಪ್ಪ ಅವರು ರಾಜ್ಯ ಬಿಜೆಪಿ ನೆಲೆಯೂರಲು ಅಗತ್ಯವಾಗಿ ಬೇಕಿದ್ದರಿಂದ ಕಾಂಪ್ರೊಮೈಸ್ ಮಾಡಿಕೊಳ್ಳಬೇಕಾಯಿತು.

ಒಂದು ಕಡೆ ಯಡಿಯೂರಪ್ಪ ಮತ್ತು ಕೆಲವೇ ಕೆಲವು ಅವರ ಬೆಂಬಲಿಗರು ಬಿಜೆಪಿಯನ್ನು ಮತ್ತೆ ಹೊಕ್ಕರೂ, ಬಿಜೆಪಿಯನ್ನು ಧಿಕ್ಕರಿಸಿ ಕೆಜೆಪಿ ಸೇರಿದ್ದ ಹಲವಾರು ರಾಜಕಾರಣಿಗಳು ಮತ್ತು ಬೆಂಬಲಿಗರನ್ನು ಕಳೆದುಕೊಳ್ಳಬೇಕಾಯಿತು. ಧನಂಜಯ್ ಕುಮಾರ್ ತೆನೆಹೊತ್ತ ಮಹಿಳೆಯ ಪಾಲಾಗಿದ್ದರೆ, ಬಿಪಿ ಹರೀಶ್ ಕೈಯನ್ನು ಕಾಂಗ್ರೆಸ್ ಹಿಡಿದಿದೆ. ಆದರೆ, ವಿಪರ್ಯಾಸದ ಸಂಗತಿಯೆಂದರೆ, ಬಿಜೆಪಿಯಲ್ಲಿ ಯಡಿಯೂರಪ್ಪನವರಿಗೆ ಹಿಂದಿಲ್ಲ ಬಲವೂ ಇಲ್ಲ, ಬೆಂಬಲವೂ ಇಲ್ಲ. ಸುಮ್ಮನೆ ಇದ್ದಾರಷ್ಟೆ.

ಯಡಿಯೂರಪ್ಪ ಸೇರ್ಪಡೆ ಎಪಿಸೋಡ್ ಒಂದು ರೀತಿಯದಾದರೆ, ಪಕ್ಷ ತೊರೆದು ಬಿಎಸ್ಆರ್ ಕಾಂಗ್ರೆಸ್ ಕಟ್ಟಿದ್ದ ಬಿ ಶ್ರೀರಾಮುಲು ಅವರ ಸೇರ್ಪಡೆ ಬಿಜೆಪಿಯ ದುರ್ಬಲ ವ್ಯವಸ್ಥೆಯನ್ನು ಬಟಾಬಯಲು ಮಾಡಿದೆ. ರೆಡ್ಡಿ ಸಹೋದರರ 'ಅಮ್ಮ' ಎಂದು ಕರೆಸಿಕೊಂಡಿದ್ದ ಸುಷ್ಮಾ ಸ್ವರಾಜ್ ಅವರು ನೇರವಾಗಿಯೇ ಶ್ರೀರಾಮುಲು ಅವರ ಸೇರ್ಪಡೆಗೆ ಪ್ರತಿರೋಧ ವ್ಯಕ್ತಪಡಿಸಿದ್ದರು. ರೆಡ್ಡಿ ಸಹೋದರರಲ್ಲಿ ಒಬ್ಬರೆಂದೇ ಪರಿಗಣಿಸಲ್ಪಟ್ಟಿರುವ ಶ್ರೀರಾಮುಲು ಅವರ ಹೆಸರು ಕೂಡ ಅಕ್ರಮ ಗಣಿಗಾರಿಕೆಯಲ್ಲಿ ಪರಿಗಣನೆಯಾಗಿರುವುದು ಇದಕ್ಕೆ ಕಾರಣ ಎಂಬುದು ಎಲ್ಲರಿಗೂ ತಿಳಿದ ವಿಚಾರ. [ಶ್ರೀರಾಮುಲು ಬಿಜೆಪಿ ವಾಪಸಾತಿಗೆ ಸುಷ್ಮಾ ವಿರೋಧ]

ಇದಕ್ಕೆ, ಬಿಜೆಪಿಯಲ್ಲಿ ಕಡೆಗಣಿಸಲ್ಪಡುತ್ತಿರುವ ಮತ್ತೊಬ್ಬ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರು ಕೂಡ ಸುಷ್ಮಾ ಅವರ ಮಾತನ್ನು ಪ್ರತಿಧ್ವನಿಸಿದ್ದರು. ಆದರೆ, ಇವರಿಬ್ಬರ ಮಾತಿಗೆ ರಾಜ್ಯ ನಾಯಕರು ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ. ಸ್ವಲ್ಪ ವಿಳಂಬ ಮಾಡಿದರೂ, ವಿಧ್ಯುಕ್ತವಾಗಿ ಹಾರ ಹಾಕಿ ತುರಾಯಿ ಕೊಟ್ಟು ಶ್ರೀರಾಮುಲುವನ್ನು ಬಿಜೆಪಿ ರಾಜ್ಯ ನಾಯಕರು ಬರಮಾಡಿಕೊಂಡಿದ್ದಾರೆ. ಇದಕ್ಕೆ ಕೂಡ ಸುಷ್ಮಾ ಅವರು, ನನ್ನ ಅಣತಿಯನ್ನು ಮೀರಿ ಶ್ರೀರಾಮುಲುವನ್ನು ಸೇರಿಸಿಕೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ಮೂರನೇ ಘಟನೆಯಾಗಿ ಪ್ರಮೋದ್ ಮುತಾಲಿಕ್ ಪ್ರಕರಣ ಘಟಿಸಿದೆ. ಇದಕ್ಕೂ ಅವಕಾಶ ನೀಡಿದರೆ, ಬಿಜೆಪಿ ಮಾನ ಮೂರು ಕಾಸಿಗೆ ಹರಾಜಾಗುತ್ತದೆ ಎಂದರಿತ ಬಿಜೆಪಿ ಹೈಕಮಾಂಡ್ ನಿದ್ದೆಯಿಂದ ಎಚ್ಚೆತ್ತಂತೆ 'ನೋ' ಎಂದು ಕಿರುಚಿದೆ. ಮುತಾಲಿಕ್ ಸೇರ್ಪಡೆಯಿಂದ ಧಾರವಾಡದಲ್ಲಿ ಪ್ರಹ್ಲಾದ್ ಜೋಶಿ ಗೆಲುವು ಸುಗಮವಾಗಲಿದೆ ಎಂದು ಮೆಲ್ಲನೆ ಮಂಡಿಗೆ ಮೆಲ್ಲುತ್ತಿದ್ದ ರಾಜ್ಯ ನಾಯಕರ ಹಲ್ಲುಗಳಿಗೆ, ಹೈಕಮಾಂಡ್ ನಿರ್ಧಾರದಿಂದ ಕಲ್ಲು ಸಿಕ್ಕಂತಾಗಿದೆ. ಅಲ್ಲದೆ, ಸಾಕಷ್ಟು ಮುಜುಗರಕ್ಕೂ ತಳ್ಳಿದೆ.

ರಾಷ್ಟ್ರಮಟ್ಟದಲ್ಲಾದರೂ ಬಿಜೆಪಿಯ ಸ್ಥಿತಿಗತಿ ಸುಸೂತ್ರವಾಗಿದೆಯಾ? ಅಡ್ವಾಣಿ ಅವರನ್ನು ಬಲವಂತವಾಗಿ ಗಾಂಧಿನಗರದಿಂದ ಸ್ಪರ್ಧೆಗಿಳಿಸಲಾಗಿದೆ. ಅಡ್ವಾಣಿಯ ಕಟ್ಟಾ ಬೆಂಬಲಿಗರಾದ ಜಸ್ವಂತ್ ಸಿಂಗ್ ಬಿಜೆಪಿಯ ಸಹವಾಸವೇ ಬೇಡವೆಂದು ದೂರ ಉಳಿಯಲು ಸಿದ್ಧರಾಗಿದ್ದಾರೆ. ನರೇಂದ್ರ ಮೋದಿ ಅವರ ಕೇಂದ್ರಾಧಿಪತ್ಯದಿಂದ ಕೆಲ ಹಿರಿತಲೆಗಳಿಗೆ ಅಸಮಾಧಾನವಾಗಿರುವುದಂತೂ ದಿಟ. ಯಶವಂತ್ ಸಿನ್ಹಾ ಕೂಡ ಇದೇ ಸಾಲಿನಲ್ಲಿ ನಿಲ್ಲುತ್ತಾರೆ.

ಇಂಥದೇ ಘಟನೆ ಕರ್ನಾಟಕ ಕಾಂಗ್ರೆಸ್ ನಲ್ಲಿಯೂ ನಡೆದಿತ್ತು. ಶ್ರೀರಾಮಸೇನೆಯ ಅಧಿಕೃತ ವಕೀಲರಾಗಿದ್ದ ದಿನಕರ ಶೆಟ್ಟಿ ಅವರನ್ನು ಕಾಂಗ್ರೆಸ್ ನೊಳಗೆ ಎಳೆದುಕೊಂಡಿತ್ತು. ಮಂಗಳೂರು ಪಬ್ ದಾಳಿಯ ಪ್ರಕರಣದಲ್ಲಿ ಅವರ ಹೆಸರು ಕೂಡ ತಳಕುಹಾಕಿಕೊಂಡಿತ್ತು ಎಂಬ ಅರಿವು ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಕಾಂಗ್ರೆಸ್ ಶೆಟ್ಟಿ ಸೇರ್ಪಡೆಯನ್ನು ರದ್ದುಗೊಳಿಸಿತು. ಇಂಥ ಸಂಗತಿಗಳು ಅರಿವಿಗೆ ಬರುವುದಿರಲಿ, ಹಿರಿಯ ನಾಯಕರು ಬೊಂಬಡಾ ಹೊಡೆಯುತ್ತಿದ್ದರೂ ಕೇಳುವಂಥ ಸ್ಥಿತಿಯಲ್ಲಿ ಬಿಜೆಪಿಯ ಕೆಲ ನಾಯಕರು ಇಲ್ಲದಂತಾಗಿದ್ದಾರೆ. ಇಂಥ ಅಪಸವ್ಯಗಳಿಗೆ ಬಿಜೆಪಿ ಎಂದು ಕೊನೆಹಾಡುತ್ತದೆ?

English summary
Is BJP high command in total control of the situation in Karnataka? Why was Pramod Muthalik kicked out hours after induction in Hubli? Why was Sriramulu welcomed despite of opposition from senior leaders? Why national leaders like Advani, Jaswanth, Yeshwanth revolting?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X