ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಾಲ್ಮೀಕಿ ಯಾರು? ಕೆಎಸ್ಸೆನ್ ಆಚಾರ್ಯರ ಕೃತಿಗೇಕೆ ನಿಷೇಧ?

By ನವೀನ್ ನಾಯಕ್
|
Google Oneindia Kannada News

ಖ್ಯಾತ ವಿದ್ವಾಂಸ ಕೆ.ಎಸ್ ನಾರಾಯಣಾಚಾರ್ಯ ಅವರ "ವಾಲ್ಮೀಕಿ ಯಾರು?" ಎಂಬ ಕೃತಿಯನ್ನು ಕರ್ನಾಟಕ ಸರ್ಕಾರ ನಿಷೇಧಿಸಲು ಮುಂದಾಗಿದೆ. ಈ ಕೃತಿಯಲ್ಲಿ ನಾರಾಯಣಾಚಾರ್ಯ ಅವರು ಬೇಡ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ. ಆಧಾರವಿಲ್ಲದೆ ವಾಲ್ಮೀಕಿಯನ್ನು ಬ್ರಾಹ್ಮಣ ಎಂದು ಕರೆಯಲಾಗಿದೆ. ವಾಲ್ಮೀಕಿ ಅವರ ಕುಲಕ್ಕೂ ಅವಮಾನ ಮಾಡಲಾಗಿದೆ. ಸರ್ಕಾರ ನಡೆಸುವ ವಾಲ್ಮೀಕಿ ಜಯಂತಿಯನ್ನು ಪ್ರಶ್ನಿಸಿದ್ದಾರೆ ಎಂಬೆಲ್ಲಾ ಕಾರಣವನ್ನು ನೀಡಲಾಗಿದೆ. ಈ ಬಗ್ಗೆ ಬೆಳಕು ಚೆಲ್ಲುವ ಲೇಖನ ಇದಾಗಿದೆ. ಇಲ್ಲಿರುವ ಅಭಿಪ್ರಾಯಗಳೆಲ್ಲವೂ ಲೇಖಕರದ್ದಾಗಿರುತ್ತದೆ. -ಒನ್ ಇಂಡಿಯಾ ಕನ್ನಡ

ಕೆ.ಎಸ್ ನಾರಾಯಣಾಚಾರ್ಯರ "ವಾಲ್ಮೀಕಿ ಯಾರು" ಎಂಬ ಕೃತಿಗೆ ನಿಷೇಧದ ಭೀತಿ ಎದುರಾಗಿದೆ. ಕೆಳವರ್ಗದವರು ಮಹಾಗ್ರಂಥಗಳನ್ನು ಬರೆಯಲು ಸಾಧ್ಯವಿಲ್ಲ ಅದು ಕೇವಲ ಬ್ರಾಹ್ಮಣರ ಸೊತ್ತು ಎಂಬಂತೆ ಪುಸ್ತಕ ಸೂಚಿಸುತ್ತದೆ ಎಂಬ ಆರೋಪವನ್ನೂ ಹೊರಿಸಿ ಹಲವು ಸಂಘಟನೆಗಳು ಪ್ರತಿಭಟಿಸುತ್ತಿವೆ. ಈ ಎಲ್ಲಾ ವಿವಾದಗಳಿಗೆ ಮೂಲ ಕಾರಣ ವಾಲ್ಮೀಕಿಯವರ ಜನ್ಮ ವೃತ್ತಾಂತವನ್ನು ಕೆ.ಎಸ್ ನಾರಾಯಣಾಚಾರ್ಯರು ತಡಕಾಡಿದ್ದು. ತಡಕಾಡಲು ಕಾರಣವನ್ನೂ ಅವರು ಕೃತಿಯಲ್ಲೇ ನೀಡಿದ್ದಾರೆ. ವಾಲ್ಮೀಕಿ ರಾಮಾಯಣ ಮತ್ತು ಆನಂದರಾಮಾಯಣದ ಆಧಾರವನ್ನೇ ಈ ಕುರಿತ ಚರ್ಚೆಗೆ ಬಳಸಿದ್ದಾರೆ.

ವಾಲ್ಮೀಕಿ ಬ್ರಾಹ್ಮಣ ಪುತ್ರನೋ ಇಲ್ಲವೋ ಎಂಬುದಕ್ಕೆ ಲೇಖಕರು ಕೊಟ್ಟ ಆಧಾರಗಳು ಇಂತಿವೆ. ವಾಲ್ಮೀಕಿಯವರ ಆಶ್ರಮದಲ್ಲಿ ನೆಲೆಸಿ ಲವ ಕುಶರನ್ನು ಹಡೆದ ಸೀತಾಮಾತೆಯನ್ನು ಮತ್ತೆ ಶ್ರೀರಾಮನೆದುರು ನಿಲ್ಲಿಸಿ "ಈಕೆ ಪರಿಶುದ್ಧೆ ! ಸ್ವೀಕರಿಸು" ಎನ್ನುವಾಗ ಮಹರ್ಷಿಯು ತಾನು ಸುಳ್ಳಾಡುವವನು ಅಲ್ಲ ಎಂದು ಪ್ರತಿಜ್ಞೆ ಮಾಡಿ ತನ್ನ ಕುಲಗೋತ್ರವನ್ನು ತಂದೆಯವರನ್ನು ಸ್ಮರಿಸಿ ಹೇಳುತ್ತಾರೆ

"ಪ್ರಚೇತಸೋಹಂ ದಶಮಃ ಪುತ್ರೋ , ರಾಘವನಂದನ" | (ಉತ್ತರಾಯಣ 96-16 ).

ಹೇ ಶ್ರೀರಾಮ ! ನಾನು ಪ್ರಚೇತಸನೆಂಬ ಮಹರ್ಷಿಯ ಹತ್ತನೆಯ ಮಗ. ಎರಡನೆಯದಾಗಿ ಲವಕುಶರು ಶ್ರೀರಾಮನೆದುರೇ ರಾಮಾಯಣವನ್ನು ಗಾನ ಮಾಡಿ ತೋರಿಸಿದಾಗ ಶ್ರೀರಾಮಚಂದ್ರನು ಇದನ್ನು ಬರೆದವರಾರು ಎಂದು ಕೇಳಿದಾಗ, ಮಕ್ಕಳು ಇದನ್ನು ಭಾರ್ಗವ ಗೋತ್ರದ ಮಹರ್ಷಿ ವಾಲ್ಮೀಕಿ ಬರೆದರು ಎನ್ನುತ್ತಾರೆ. ಇದಲ್ಲದೇ ಇತರ ಪುರಾಣಗಳಲ್ಲೂ ಅಲ್ಲಲ್ಲಿ ವಾಲ್ಮಿಕಿಯನ್ನು "ಪ್ರಾಚೇತಸ , ಭಾರ್ಗವ, ವರುಣಪುತ್ರ, ಭೃಗುಸೋದರ" ನೆಂದೂ ಹೇಳಿದೆ.

ವಾಲ್ಮೀಕಿಯವರು ಬೇಡನಾಗಲು ಇರುವ ಕಾರಣಗಳನ್ನು ಹಲವಾರು ಕಾವ್ಯಗಳು ಎರಡು-ಮೂರು ರೀತಿಯಲ್ಲಿ ಚಿತ್ರಿಸಿವೆ. ಬೇಡನಾದ ನಂತರ ವಾಲ್ಮೀಕಿಯವರಿಗೆ ಸಪ್ತರ್ಷಿಗಳು ಅಥವ ನಾರದರ ಅನುಗ್ರಹದಿಂದ ರಾಮ ಮಂತ್ರದ ಉಪದೇಶವನ್ನು ಪಡೆದು ಜಪಿಸತೊಡಗಿದರು. ಕಾಲ ಚಲಿಸಿದಂತೆ ಬೇಡನ ಸುತ್ತ ಹುತ್ತ (ವಾಲ್ಮೀಕ ) ಬೆಳೆಯಿತು. ನಂತರ ಸಪ್ತರ್ಷಿಗಳು ಬೇಡನನ್ನು ಹೊರ ಬರುವಂತೆ ಕರೆದಾಗ ಹುತ್ತವನ್ನೊಡೆದುಕೊಂಡು ಹೊರ ಬಂದು ವಾಲ್ಮೀಕರೆಂದು ಪ್ರಖ್ಯಾತರಾದರು.

ಇದರಲ್ಲಿ ಆಚಾರ್ಯರು ಯಾವುದಾದರೂ ವಿಷಯವನ್ನು ಸೃಷ್ಟಿಸಿರುವುದು ಕಂಡು ಬರುತ್ತದೆಯೇ ? ಇಲ್ಲವಲ್ಲ. ಕೃತಿಯ ಮಧ್ಯಭಾಗದಲ್ಲಿ ಲೇಖಕರು ಬರೆಯುತ್ತಾರೆ, ಪಾಮರನಾದ ಬೇಡನೊಬ್ಬ ದಿಢೀರನೆ ರಾಮಾಯಣದಂತಹ ಕಾವ್ಯ ಬರೆದ ಎಂದು ಹೇಳುವುದು ಹಾಸ್ಯಾಸ್ಪದವಾಗುತ್ತದೆ. ಈ ವಾಕ್ಯದ ಕುರಿತಾದ ದೃಷ್ಠಿಕೋನವನ್ನು ಈಗ ತಿರುಚಿರುವುದೇ ವಿವಾದಕ್ಕೆ ಮೂಲವಾಗಿರುವುದು.

Who is Valmiki Why KS Narayanacharya book facing Ban Karnataka

"ಪಾಮರನಾದ ಬೇಡನೊಬ್ಬ ದಿಢೀರನೆ ಕಾವ್ಯ ಬರೆದ ಎಂದು ಹೇಳುವುದು ಹಾಸ್ಯಾಸ್ಪದ" ಈ ವಾಕ್ಯದ ಅರ್ಥವನ್ನು ತಿರುಚಿದ್ದೇ ಅಥವಾ ಅಪಾರ್ಥ ಮಾಡಿಕೊಂಡಿರುವುದೇ ದುರಾದೃಷ್ಟಕರ. ಅದನ್ನೇ ಹೀಗೆ ಯೋಚಿಸಿ ! ರೈತನು ಇದ್ದಕಿದ್ದಂತೆ ವೈದ್ಯನೋ ಇಂಜಿನಿಯರೋ ಆಗಲು ಸಾಧ್ಯವೇ ? ಅಥವಾ ವೈದ್ಯನು ಹಾಗೂ ಇಂಜಿನಿಯರ್ ದಿಢೀರನೇ ರೈತನಾಗಲು ಸಾಧ್ಯವೇ ? ಇಲ್ಲವಲ್ಲ !

ಈ ಕುರಿತು ಲೇಖಕರು ತಮ್ಮನ್ನೇ ಉದಾಹರಿಸಿಕೊಳ್ಳುತ್ತಾರೆ. ತಮ್ಮ ಎದುರಲ್ಲೇ ಹುಡುಗನೊಬ್ಬ ತೂರಿದ ಕಲ್ಲಿನಿಂದ ಪಕ್ಷಿಯೊಂದು ಸತ್ತು ಕೆಳಗೆ ಬಿದ್ದಿತು. ಈ ದುರಂತವನ್ನು ವೀಕ್ಷಿಸಿದ ನಾನು ಮಮ್ಮಲ ಮರುಗಿದೆ. ವಾಲ್ಮೀಕಿಯವರ ಜೀವನದಲ್ಲಿ ನಡೆದ ಕ್ರೌಂಚ ಪಕ್ಷಿಗಳ ಘಟನೆಯಂತೇ ಇಲ್ಲವೇ? ಇದರಿಂದ ನಾನು ವಾಲ್ಮೀಕಿಯಾಗಲಿಲ್ಲ ಎನ್ನುತ್ತಾರೆ.

ಸಿದ್ದರಾಮಯ್ಯನವರು ದಿಢೀರನೇ ಮುಖ್ಯಮಂತ್ರಿಯಾದರೇ ? ಹಲವು ಮಜಲುಗಳನ್ನು ಅವರು ದಾಟಲಿಲ್ಲವೇ! ಅದೆಲ್ಲದರ ಪ್ರಯತ್ನದ ಮೂಲಕ ತಾನೇ ಇಂದು ಮುಖ್ಯಮಂತ್ರಿ ಪಟ್ಟದಲ್ಲಿರುವುದು. ಆಯಾ ವೃತ್ತಿಯ ಕುರಿತು ಅಭ್ಯಸಿಸಬೇಕು . ದಿಢೀರನೇ ಈ ಪ್ರಪಂಚದಲ್ಲಿ ಏನೂ ಆಗುವುದಿಲ್ಲ ಪ್ರತಿಭಟನೆಯನ್ನು ಹೊರತುಪಡಿಸಿದರೆ !

ಹಿಂದಿನ ಕಾಲದಲ್ಲಿ ಬ್ರಾಹ್ಮಣನ ಮಗನಾದರೂ ವಿದ್ಯಾಭ್ಯಾಸ ಮಾಡಿದರೆ ಮಾತ್ರ ಬ್ರಾಹ್ಮಣ ಪಟ್ಟಕ್ಕೆ ಅರ್ಹನಾಗುತ್ತಾನೇ ಹೊರತು ಈಗಿರುವಂತೆ ವಂಶ ಪಾರಂಪರ್ಯದಂತಲ್ಲ.ಅದನ್ನೇ ಆಚಾರ್ಯರು ಹೇಳಿದ್ದು. ತೆಗಳಿದ್ದಲ್ಲ,ಷಡ್ಯಂತರ ಮಾಡಿದ್ದಲ್ಲ!

ಪ್ರತಿಭಟಿಸುವವರೆಲ್ಲಾ ಶಾಂತ ಮನಸ್ಥಿತಿಯಿಂದ ಕೃತಿಯನ್ನು ಒಮ್ಮೆಯಾದರೂ ಓದಬೇಕು. ಲೇಖಕರ ಕಾಳಜಿ ಇರುವುದು ಸಮಾಜದಲ್ಲಿರುವ ಎಲ್ಲಾ ವರ್ಗಗಳಿಗೆ ಒಳಿತಲ್ಲೇ ಹೊರತು ಒಬ್ಬರಿಗೊಬ್ಬರನ್ನು ಎತ್ತಿ ಕಟ್ಟುವುದರಲ್ಲಿ ಅಲ್ಲ. ಒಂದೆರಡು ಸಾಲನ್ನೇ ಕೃತಿ ಎಂದುಕೊಳ್ಳುವುದು ಮೂಢತೆಯಾಗುತ್ತದೆ. ಇದೆಲ್ಲದರ ನಡುವೆ ಡುಂಢಿ 'ಕೃತಿ'ಯನ್ನು ನಿಷೇಧಿಸಿದಾಗ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಎಂದು ಬೀದಿಗಿಳಿಯುತಿದ್ದ ಬುದ್ದಿಜೀವಿಗಳೆನಿಸಿಕೊಂಡವರು ಈಗ ಕಾಣೆಯಾಗಿದ್ದಾರೆ.[ಢುಂಢಿ ವಿವಾದದ ಹಿನ್ನೆಲೆ]

ಗಮನಿಸಿ: ಈ ಲೇಖನ ಈಗಾಗಲೇ ನಿಲುಮೆ.ನೆಟ್ ನಲ್ಲಿ ಪ್ರಕಟಿತವಾಗಿದೆ.

English summary
Who is Valmiki Why KS Narayanacharya book facing ban in Karnataka. The government recently decided to ban ‘Valmiki yaaru’ (Who is Valmiki), a book by scholar Prof K S Narayanacharya on the ground that it has hurt the sentiments of a community.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X