ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬುಧವಾರ ತನಕ ಮಳೆ ಹೊಡೆತ ಗ್ಯಾರಂಟಿ!

By Mahesh
|
Google Oneindia Kannada News

ಬೆಂಗಳೂರು, ಅ.26: ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಇಂದು ತೀವ್ರ ಸ್ವರೂಪ ಪಡೆಯಲಿದ್ದು, ಚಂಡಮಾರುತವಾಗಿ ಬದಲಾಗುವ ಸಾಧ್ಯತೆಗಳಿವೆ. ಆಗ್ನೇಯ ಮಾರುತಗಳ ಹೊಡೆತಕ್ಕೆ ದಕ್ಷಿಣ ಭಾರತ ಒಳಪಡಬೇಕಾಗಿದೆ. ಹೀಗಾಗಿ ಮುಂಬರುವ ಮುರ್ನಾಲ್ಕು ದಿನಗಳ ಕಾಲ ಮಳೆ ಎದುರಿಸಬೇಕಾಗುತ್ತದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿವೃತ್ತ ನಿರ್ದೇಶಕ ವಿ.ಎಸ್.ಪ್ರಕಾಶ್ ಹೇಳಿದ್ದಾರೆ.

ಕರ್ನಾಟಕ ಹವಾಮಾನ ಇಲಾಖೆ ಮುಖ್ಯಸ್ಥ ಪುಟ್ಟಣ್ಣ ಅವರು ಕೂಡಾ ಬುಧವಾರ(ಅ.29) ತನಕ ಬೆಂಗಳೂರು ಸೇರಿದಂತೆ ಬಳ್ಳಾರಿ, ರಾಯಲ ಸೀಮೆ ಭಾಗಗಳು, ತಮಿಳುನಾಡು ಹಾಗೂ ಕೇರಳಕ್ಕೆ ಹೊಂದಿಕೊಂಡಿರುವ ಕರ್ನಾಟಕದ ಭಾಗಗಳಲ್ಲಿ ಭಾರಿ ಮಳೆ ನಿರೀಕ್ಷೆಯಿದೆ ಎಂದಿದ್ದಾರೆ.

ಒಟ್ಟಾರೆ ಹವಾಮಾನ ತಜ್ಞರ ಅಭಿಪ್ರಾಯ ಸಂಗ್ರಹ ಹೀಗಿದೆ:

* ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮೋಡ ಕವಿದ ವಾತಾವರಣವಿದ್ದು, ಆಗಾಗ್ಗೆ ಮಳೆ ಬರುವ ಸಾಧ್ಯತೆಗಳಿವೆ.

* ಅದರೆ, ವಾಯುಭಾರ ಕುಸಿತ, ಚಂಡಮಾರುತವಾಗಿ ಪರಿವರ್ತನೆಯಾದರೂ ಕರ್ನಾಟಕ ಸೇರಿದಂತೆ ಭಾರತದ ಮೇಲೆ ಯಾವುದೇ ನೇರ ಪರಿಣಾಮ ಉಂಟಾಗುವುದಿಲ್ಲ. ಸಾಧಾರಾಣದಿಂದ ಗುಡುಗು ಸಹಿತ ಮಳೆಯಷ್ಟೇ ರಾಜ್ಯವನ್ನು ಒದ್ದೆ ಮಾಡಲಿದೆ.

* ಚಂಡಮಾರುತ ಮಧ್ಯಪ್ರಾಚ್ಯದ ಕಡೆಗೆ ತಿರುಗುವುದರಿಂದ ಭಾರತದ ಕರಾವಳಿ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಉಂಟಾಗುವುದಿಲ್ಲ.

* ನ.5ರವರೆಗೂ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆ ಮುಂದುವರೆಯುವ ಮುನ್ಸೂಚನೆಗಳಿವೆ.

* ವಾಯುಭಾರ ಕುಸಿತದಿಂದಾಗಿ ಕೊಪ್ಪಳ, ಬಳ್ಳಾರಿ, ತುಮಕೂರು, ಕೋಲಾರ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ ಸೇರಿದಂತೆ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದ್ದು, ಇನ್ನೂ ಮೂರು ದಿನಗಳ ಕಾಲ ಮುಂದುವರಿಯುವ ಮುನ್ಸೂಚನೆಗಳಿವೆ.

ಮಳೆ ಪ್ರಮಾಣ: ಕೊಡಗು, ಉಡುಪಿ, ಬಳ್ಳಾರಿ, ಚಿಕ್ಕಬಳ್ಳಾಪುರ, ಕೊಪ್ಪಳ, ಶಿವಮೊಗ್ಗ, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಚಾಮರಾಜನಗರ, ಗುಲ್ಬರ್ಗ, ಹಾಸನ, ಯಾದಗಿರಿ, ಮಂಡ್ಯ, ಬೆಳಗಾವಿ, ಧಾರವಾಡ, ಚಿಕ್ಕಮಗಳೂರು, ಬಿಜಾಪುರ, ಹಾವೇರಿ, ಚಿತ್ರದುರ್ಗ, ರಾಯಚೂರು, ಉತ್ತರಕನ್ನಡ, ಬೆಂಗಳೂರು ನಗರ, ತುಮಕೂರು, ಗದಗ, ಬಾಗಲಕೋಟೆ, ಮೈಸೂರು ಜಿಲ್ಲೆಗಳಲ್ಲಿ ವ್ಯಾಪಕ ಪ್ರಮಾಣದದಲ್ಲಿ ಸಾಧಾರಣದಿಂದ ಭಾರಿ ಮಳೆಯಾದ ವರದಿಯಾಗಿದೆ.

* ರಾಜ್ಯದಲ್ಲಿ ಅ.1ರಿಂದ ಇಂದಿನವರೆಗೆ 119.8 ಮಿಲಿ ಮೀಟರ್ ವಾಡಿಕೆ ಪ್ರಮಾಣದ ಮಳೆಯಾಗಬೇಕಾಗಿದ್ದು, ಕೇವಲ 102.6 ಮಿಲಿ ಮೀಟರ್ ನಷ್ಟು ಮಾತ್ರ ಆಗಿದೆ. ಶೇ.14.4ರಷ್ಟು ಕೊರತೆ ರಾಜ್ಯದಲ್ಲಿ ಉಂಟಾಗಿದೆ.

* ರಾಮನಗರ, ಬೀದರ್, ದಾವಣಗೆರೆ, ಕೋಲಾರ ಜಿಲ್ಲೆಗಳಲ್ಲಿ ಭಾಗಶಃ ವ್ಯಾಪಕ ಪ್ರಮಾಣದಲ್ಲಿ ಸಾಧಾರಣದಿಂದ ಭಾರಿ ಮಳೆಯಾದ ವರದಿಯಾಗಿದೆ.

ಮಳೆಯಿಂದ ಹಾನಿ: ಸರ್ಜಾಪುರ ರಸ್ತೆ ಇಬ್ಬಲೂರಿನಲ್ಲಿ ಭಾರಿ ಮಳೆಗೆ ಮನೆಯ ಗೋಡೆ ಕುಸಿದು ಮಾರೂಫ್ ಎಂಬ ಬಾಲಕ ಮೃತಪಟ್ಟಿದ್ದು, ಈತನ ತಂದೆ ಬಾಬುಲಾಲ್ ಹಾಗೂ ಮಗುವಿನ ತಾಯಿ ತೀವ್ರವಾಗಿ ಗಾಯಗೊಂಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಮೇಯರ್ ಶಾಂತಕುಮಾರಿ ಅವರು ಮೃತನ ಕುಟುಂಬದವರಿಗೆ ಸಾಂತ್ವಾನ ಹೇಳಿ ಒಂದು ಲಕ್ಷ ರು. ಪರಿಹಾರ ನೀಡಿದ್ದಾರೆ.

Bangalore Rain

* ಕಾವೇರಿಪುರ ವಾರ್ಡ್ ಬಳಿ ಇರುವ ರಾಜಕಾಲುವೆ ದುರಸ್ತಿ ನಡೆಯುತ್ತಿದ್ದು, ನಿನ್ನೆ ಬಿದ್ದ ಭಾರೀ ಮಳೆಯ ನೀರು ಸರಾಗವಾಗಿ ಹರಿಯಲು ಅಡಚಣೆಯುಂಟಾಗಿ ಈ ಭಾಗದ ಸುಮಾರು 200 ಮನೆಗಳಿಗೆ ನೀರು ನುಗ್ಗಿದೆ. ಇಲ್ಲಿರುವ ಮಹದೇಶ್ವರ ದೇವಸ್ಥಾನಕ್ಕೂ ಮಳೆಯ ನೀರು ನುಗ್ಗಿತ್ತು.

* ಬನಶಂಕರಿ, ಲಾಲ್ ಬಾಗ್ ಪಶ್ಚಿಮ ದ್ವಾರ, ಜರಗನಹಳ್ಳಿ, ಬನಶಂಕರಿ, ಸಾರಕ್ಕಿ, ಹೆಬ್ಬಾಳ ರಿಂಗ್ ರೋಡ್, ನಂದಿನಿಲೇಔಟ್, ಕೋರಮಂಗಲ, ಜಕ್ಕಸಂದ್ರ, ವಿವೇಕನಗರ ಮುಂತಾದ ಕಡೆ ರಸ್ತೆಯೆಲ್ಲ ಕೆರೆಯಂತಾಗಿದೆ. ಸುಮಾರು 26 ಕಡೆ ಮರಗಳು ಧರೆಗುರುಳಿ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.ಅಲ್ಲಲ್ಲಿ ವಿದ್ಯುತ್ ಕಡಿತಗೊಂಡ ವರದಿ ಬಂದಿದೆ.

*ಮಹಾಲಕ್ಷ್ಮಿ ಲೇಔಟ್ ನಲ್ಲಿರುವ ಮೈಸೂರು ಸ್ಯಾಂಡಲ್ ಸೋಪ್ ಫ್ಯಾಕ್ಟರಿಗೆ ನೀರು ನುಗ್ಗಿ ಹಾನಿ ಸಂಭವಿಸಿದೆ. ಗಂಗಯ್ಯ-ತಿಮಯ್ಯ ಛತ್ರಕ್ಕೂ ಮಳೆಯ ನೀರು ನುಗ್ಗಿದೆ. ಗಾಳಿ ಆಂಜನೇಯನ ಗುಡಿ, ತಗ್ಗು ಪ್ರದೇಶಗಳಲ್ಲಿರುವ ಸ್ಲಂಗಳಲ್ಲಿ ಮಳೆಯಲ್ಲೇ ಈಜುಕೊಳ ನಿರ್ಮಾಣವಾಗಿದೆ.

ಬಿಬಿಎಂಪಿ ಮೇಯರ್ ಶಾಂತಕುಮಾರಿ ಅವರು ಸಹಾಯವಾಣಿ ಕರೆಗಳನ್ನು ಸ್ವೀಕರಿಸುತ್ತಿದ್ದಾರೆ. ನೀವು ಪ್ರಯತ್ನಿಸಿ. 080 2294 5836 ಅಥವಾ ಬಿಬಿಎಂಪಿ ಸಹಾಯವಾಣಿ : 080-2266 0000 ಅಥವಾ ಬಿಬಿಎಂಪಿ ಕಂಟ್ರೋಲ್ ರೂಮ್ : 080-2222 1188 ಸಂಖ್ಯೆಗಳಿಗೆ ಕರೆ ಮಾಡಿ

English summary
Weather forecast for Bangalore and Karnataka: Karnataka State Natural Disaster Monitoring Centre director VS Prakash With the north east monsoon active over south India, the weather forecast rain or thundershowers in the region in coming for days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X