ನವೆಂಬರ್ 1 ರಿಂದ ಏಕರೂಪದ ಆರೋಗ್ಯ ಭಾಗ್ಯ ಜಾರಿ: ಸಿಎಂ

Posted By:
Subscribe to Oneindia Kannada

ಬೆಂಗಳೂರು, ಸೆಪ್ಟೆಂಬರ್ 15: ನವೆಂಬರ್ 1 ರಿಂದ ಎಪಿಎಲ್ ಹಾಗೂ ಬಿಪಿಎಲ್ ಕಾರ್ಡುದಾರರಿಗೆ ಏಕರೂಪದ ಆರೋಗ್ಯ ಭಾಗ್ಯ ಯೋಜನೆ ಜಾರಿಗೆ ಬರಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ನೆಫ್ರೋ-ಯುರಾಲಜಿ ಸಂಸ್ಥೆಯ ಅನೆಕ್ಸ್ ಕಟ್ಟಡ ಹಾಗೂ ಬಿ.ಎಂ.ಸಿ. ಆರ್. .ಐ. ನ ವಿವಿಧ ಕಟ್ಟಡಗಳ ಉದ್ಫಾಟನೆ ನೆರವೇರಿಸಿ ನಂತರ ಸಮಾರಂಭದಲ್ಲಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನರು ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ವಾರಕ್ಕೆರಡು ಬಾರಿ ಡಯಾಲಿಸಿಸ್ ಅವಶ್ಯಕತೆ ಇರುತ್ತದೆ. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ವೆಚ್ಚ ಹೆಚ್ಚಿರುವುದರಿಂದ ಬಡವರಿಗೆ ಬಹಳ ತೊಂದರೆಯಾಗುತ್ತದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಚ್ಚು ಸವಲತ್ತು ದೊರೆತರೆ ಇಲ್ಲಿಯೇ ಚಿಕಿತ್ಸೆ ಪಡೆಯುತ್ತಾರೆ ಎಂದರು.

''ಬಡವರ ಆರೋಗ್ಯ ರಕ್ಷಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ರೋಗಿಗಳ ಪಾಲಿಗೆ ವೈದ್ಯರೇ ದೇವರು. ಒಳ್ಳೆಯ ಚಿಕಿತ್ಸೆ ನೀಡಿದರೆ ಪ್ರತಿನಿತ್ಯ ವೈದ್ಯರನ್ನು ನೆನೆಯುತ್ತಾರೆ. ಬಡವರ ಮಕ್ಕಳಿಗೂ ವೈದ್ಯಕೀಯ ಶಿಕ್ಷಣ ಸಿಗಬೇಕು. ಈ ವರ್ಷ 12 ಹೊಸ ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ತೆರೆಯಲು ಮಂಜೂರಾತಿ ನೀಡಲಾಗಿದೆ'' ಎಂದರು.

ಜಿಲ್ಲಾ ಕೇಂದ್ರಗಳಲ್ಲಿ ಇಂದಿರಾ ಕ್ಯಾಂಟೀನ್

ಜಿಲ್ಲಾ ಕೇಂದ್ರಗಳಲ್ಲಿ ಇಂದಿರಾ ಕ್ಯಾಂಟೀನ್

ತಮ್ಮ ಮಾತನ್ನು ಮುಂದುವರಿಸಿದ ಸಿದ್ದರಾಮಯ್ಯ, ''ಮುಂಬರುವ ದಿನಗಳಲ್ಲಿ ಜಿಲ್ಲೆಗೊಂದು ವೈದ್ಯಕೀಯ ಕಾಲೇಜು ತೆರೆಯಲು ಸರ್ಕಾರ ಉದ್ದೇಶಿಸಿದೆ. ಸಾಮಾನ್ಯರಿಗೂ ಕೈಗೆಟುಕುವಂತೆ ಆರೋಗ್ಯ ರಕ್ಷಣೆಯಾಗಬೇಕು. ನಗರದ ಪ್ರಮುಖ ಸರ್ಕಾರಿ ಆಸ್ಪತ್ರೆಗಳಾದ ವಾಣಿವಿಲಾಸ, ಕೆ.ಸಿ. ಜನರಲ್ ಆಸ್ಪತ್ರೆ ಮುಂತಾದವುಗಳಲ್ಲಿ ತಲಾ ಒಂದರಂತೆ ಇಂದಿರಾ ಕ್ಯಾಂಟೀನ್‍ಗಳನ್ನು ತೆರೆಯಲಾಗುವುದು'' ಎಂದರು.

ವೈದ್ಯಕೀಯ ಕಾಲೇಜಿಗೆ ಅನುದಾನ

ವೈದ್ಯಕೀಯ ಕಾಲೇಜಿಗೆ ಅನುದಾನ

ಕಾರ್ಯಕ್ರಮದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರಾದ ಶರಣ ಪ್ರಕಾಶ್ ಪಾಟೀಲ್ ಮಾತನಾಡಿ, ''ಇಂದು ಮಿಂಟೋ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಮೆಟ್ರೋ ಸಹಯೋಗದಲ್ಲಿ ಗರ್ಭಿಣಿಯರ ತುರ್ತು ಚಿಕಿತ್ಸಾ ಘಟಕ, ನೆಫ್ರೋ ಯುರಾಲಜಿ ಕಟ್ಟಡಗಳು ಉದ್ಫಾಟನೆಗೊಂಡಿದೆ. ಬೆಂಗಳೂರು ವೈದ್ಯಕೀಯ ಕಾಲೇಜಿಗೆ 228 ಕೋಟಿ ರು. ಅನುದಾನ ನೀಡಲಾಗಿದೆ'' ಎಂದರು.

ಕಡಿಮೆ ದರದಲ್ಲಿ ಗುಣಮಟ್ಟದ ಚಿಕಿತ್ಸೆ

ಕಡಿಮೆ ದರದಲ್ಲಿ ಗುಣಮಟ್ಟದ ಚಿಕಿತ್ಸೆ

ಅಲ್ಲದೆ, ''ಇಂದು 78 ಕೋಟಿ ರು. ಗಳ ಕಾಮಗಾರಿ ಉದ್ಫಾಟನೆಗೊಂಡಿದೆ. ಮುಂದಿನ ವರ್ಷ ಕಲಬುರಗಿಯಲ್ಲೂ ವಿವಿಧ ಸವಲತ್ತುಗಳ ಆರೋಗ್ಯ ಸೇವೆಗಳು ಉದ್ಫಾಟನೆಗೊಳ್ಳಲಿವೆ. ಸಾಮಾನ್ಯ ಜನರಿಗೂ ಒಳ್ಳೆಯ ಆರೋಗ್ಯ ನೀಡುವ ನಿಟ್ಟಿನಲ್ಲಿ ಕಡಿಮೆ ದರದಲ್ಲಿ ಗುಣಮಟ್ಟದ ಚಿಕಿತ್ಸೆ ನೀಡಲು ಸರ್ಕಾರ ಬದ್ಧವಾಗಿದೆ'' ಎಂದು ಶರಣಪ್ರಕಾಶ ಪಾಟೀಲರು ತಿಳಿಸಿದರು.

ಅಧಿಕಾರಿಗಳು, ಜನಮುಖಂಡರು ಹಾಜರು

ಅಧಿಕಾರಿಗಳು, ಜನಮುಖಂಡರು ಹಾಜರು

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯರಾದ ರಾಮಚಂದ್ರೇಗೌಡ, ಚಾಮರಾಜಪೇಟೆ ಶಾಸಕ ಜಮೀರ್ ಅಹಮ್ಮದ್ ಖಾನ್, ಚಾಮರಾಜಪೇಟೆ ಬಿ.ಬಿ.ಎಂ.ಪಿ ಸದಸ್ಯರಾದ ಕೋಕಿಲಾ ಚಂದ್ರಶೇಖರ್, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಾದ ವಿ. ಮಂಜುಳಾ, ಬಿ.ಎಮ್.ಆರ್.ಸಿ.ಎಲ್. ವ್ಯವಸ್ಥಾಪಕ ನಿರ್ದೇಶಕರಾದ ಪ್ರದೀಪ್ ಸಿಂಗ್ ಕರೋಲಾ, ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ಡಾ. ಎಸ್. ಸಚ್ಚಿದಾನಂದ, ನೆಫ್ರೋ-ಯುರಾಲಜಿ ಸಂಸ್ಥೆಯ ಪ್ರಾಧ್ಯಾಪಕರಾದ ಡಾ. ಎಮ್. ಶಿವಲಿಂಗಯ್ಯ ಉಪಸ್ಥಿತರಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Uniform health fecility to be launched in Karnataka from November 1, 2017, assures Chief Minister Siddaramaiah on September 15, 2017.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ