ಡಿಕೆ ಸುರೇಶ್ ಗೆ ಡಾನ್ ರವಿ ಪೂಜಾರಿ ಹೆಸರಿನಲ್ಲಿ ಬೆದರಿಕೆ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 16 : ಇಂಧನ ಸಚಿವ ಡಿ.ಕೆ. ಶಿವಕುಮಾರ್ ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಸಂಸದ ಡಿ.ಕೆ. ಸುರೇಶ್ ಅವರಿಗೆ ಭೂಗತ ಜಗತ್ತಿನಿಂದ ಬೆದರಿಕೆ ಕರೆ ಬಂದಿದೆ. ಭೂಗತ ಪಾತಕಿ ರವಿ ಪೂಜಾರಿಯಿಂದ ಜೀವ ಬೆದರಿಕೆ ಒಡ್ಡಿದ್ದಾನೆ ಎಂದು ವರದಿಯಾಗಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.

ಆದಾಯ ತೆರಿಗೆ ಇಲಾಖೆಯ ದಾಳಿಯಿಂದ ಕಂಗಾಲಾಗಿ ಚೇತರಿಸಿಕೊಳ್ಳುತ್ತಿರುವ ಡಿಕೆಎಸ್ ಬ್ರದರ್ಸ್ ಮೇಲೇಕೆ ರವಿ ಪೂಜಾರಿ ಕಣ್ಣು ಎಂಬ ಪ್ರಶ್ನೆ ಎದ್ದಿದೆ. ಸಾಮಾನ್ಯವಾಗಿ ಬಾಲಿವುಡ್ ನಟ, ನಟಿ, ನಿರ್ಮಾಪಕರು ಸೆಲೆಬ್ರಿಟಿಗಳಿಗೆ ಬೆದರಿಕೆ ಹಾಕಿ ಹಫ್ತಾ ವಸೂಲಿ ಮಾಡುವ ಪೂಜಾರಿ ಗ್ಯಾಂಗ್ ಈ ಬಾರಿ ಕರ್ನಾಟಕದ ರಾಜಕಾರಣಿಗಳ ಮೇಲೆ ಕಣ್ಣಿಟ್ಟಿದೆ.

Underworld Don Ravi Poojari extortion call

ಡಿ.ಕೆ. ಸುರೇಶ್ ಸಹಾಯಕ ಅರುಣ್ ದೇವ್‌ ಅವರು ಈ ಕರೆಯನ್ನು ಸ್ವೀಕರಿಸಿದ್ದಾರೆ. 14 ಸಂಖ್ಯೆಯ ನಂಬರ್‌ನಿಂದ ಕಾಲ್ ಮಾಡಿ ಹಣ ನೀಡುವಂತೆ ಅನಾಮಿಕನೊಬ್ಬ ಬೆದರಿಕೆ ಹಾಕಿದ್ದಾನೆ. 'ನಾನು ರವಿ ಪೂಜಾರಿ. ಹಣಕ್ಕಾಗಿ ಕರೆ ಮಾಡಿದ್ದೇನೆ' ಎಂದು ಆ ವ್ಯಕ್ತಿ ಹಿಂದಿ ಹಾಗೂ ಇಂಗ್ಲೀಷ್ ಮಿಶ್ರಿತ ಭಾಷೆ ಮಾತನಾಡಿದ್ದಾನೆ.

ಭೂಗತ ಪಾತಕಿ ರವಿ ಪೂಜಾರಿ ಹೆಸರಿನಲ್ಲಿ ಕರೆ ಮಾಡಿದ್ದ ವೇಳೆ, ಸುರೇಶ್ ಅವರು ಈಗಲ್‌ಟನ್ ರೆಸಾರ್ಟ್‌ನಲ್ಲಿದ್ದರು. ಈ ಬಗ್ಗೆ ಆಗಸ್ಟ್ 8 ರಂದು ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ರವಿ ಪೂಜಾರಿ ವಿರುದ್ಧ ದೂರು ನೀಡಲಾಗಿದೆ.

ಎರಡು ವರ್ಷಗಳ ಹಿಂದೆ ಮಾಜಿ ಸಚಿವ ಮತ್ತು ಕಾಂಗ್ರೆಸ್ ಧುರೀಣ ಎಚ್.ಎಂ. ರೇವಣ್ಣನವರಿಗೆ 10 ಕೋಟಿ ರೂ.ಗಳ ಹಫ್ತಾ ವಸೂಲಿಗಾಗಿ ಕರೆ ಮಾಡಿದ್ದ ರವಿ ಪೂಜಾರಿ ಗ್ಯಾಂಗ್ ಮತ್ತೆ ಈ ಕಡೆ ತಿರುಗಿರಲಿಲ್ಲ.

ಮಂತ್ರಿ ಡೆವಲಪರ್ಸ್ ಸಂಸ್ಥೆಯ ಮುಖ್ಯ ಕಚೇರಿ ಮಂತ್ರಿ ಹೌಸ್ ಮೇಲೆ ಕೆಲವು ವರ್ಷಗಳ ಹಿಂದೆ ರವಿ ಪೂಜಾರಿ ಗ್ಯಾಂಗ್ ಗುಂಡಿನ ದಾಳಿ ನಡೆಸಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Underworld Don Ravi Poojari called up DK Suresh, MP from Bengaluru Rural and brother of Power minister DK Shivakumar. Don Ravi known to make extortion calls to businessmen and celebrities.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ