ನಾವು ಎಲ್ಲಿ ಹೋಗಿ ಬಿದ್ದು ಸಾಯಬೇಕು ? ದಯವಿಟ್ಟು ತಿಳಿಸಿ

By: ಶಿವಾನಂದ ಕಳವೆ
Subscribe to Oneindia Kannada

ಬೆಂಗಳೂರಿನ ಮಲ್ಲೇಶ್ವರದ ರಸ್ತೆಯಲ್ಲಿ ನಾನು ಗಾಳಿಗೆ ಉರುಳಿ ಬಿದ್ದು ಒಂದು ಸಾವು ಸಂಭವಿಸಿದೆ. ನಾನೀಗ ನಿಮ್ಮ ಟಿವಿ ಚಾನಲ್ ನಿರೂಪಕರ ಬಾಯಲ್ಲಿ ಕೊಲೆಗಾರನಾಗಿದ್ದೇನೆ, ನನ್ನ ನೆಟ್ಟು ಬೆಳೆಸಿದವರಲ್ಲಿ ನನ್ನನ್ನು ಏಕೆ ಮುಂಚಿತವಾಗಿ ಕಡಿಯಲಿಲ್ಲ ? ಎಂಬ ಪ್ರಶ್ನೆಗಳನ್ನು ಅವರು ಕೇಳುತ್ತಿದ್ದಾರೆ !

50 ವರ್ಷ ವಯಸ್ಸಿನ ಆಕಾಶ ಮಲ್ಲಿಗೆ ನಾನು, ಮೃದು ಜಾತಿಯ ಕುಲದವಳು. ಎತ್ತರಕ್ಕೆ ಬೆಳೆದ ನಾನು ಮೇಲ್ನೋಟಕ್ಕೆ ಆರೋಗ್ಯವಂತನಾಗಿದ್ದೆ, ಇಂದು ಕೆಟ್ಟ ಕಾಲ ಉರುಳಿದೆ. ಬೆಳಗಿನಿಂದ ಟಿವಿ ಸುದ್ದಿಯ ಪ್ರಕಾರ ರಾಜ್ಯದ ಎಲ್ಲರೂ ಮೈಸೂರುರಾಜರ ಮದುವೆಗೆ ಹೋಗಿದ್ದಾರೆಂದು ಭಾವಿಸಿದ್ದೆ. ಹೀಗಾಗಿ ನೆಲಕ್ಕೆ ಬಿದ್ದು ಸುದ್ದಿಯಾದೆ ! ಒಂದು ಜೀವ ತೆಗೆದ ಅಪರಾಧಿ ಪ್ರಜ್ಞೆ ಕಾಡುತ್ತಿದೆ, ಕ್ಷಮಿಸಿರಿ.[ಬೆಂಗಳೂರು : ಮರ ಬಿದ್ದು ಬೈಕ್ ಸವಾರ ಸಾವು]

tree

ಇಷ್ಟು ವರ್ಷ ನನ್ನ ಟೊಂಗೆ ಟಿಸಿಲುಗಳಲ್ಲಿ ಕೀಟ, ಪಕ್ಷಿ , ಇರುವೆಗಳು ಬದುಕಿದ್ದವು. ಹೂವರಳಿದಾಗ ಸುತ್ತೆಲ್ಲ ಪರಿಮಳವಿತ್ತು. ಬಿಸಿಲಲ್ಲಿ ಬಳಲಿದ ಜೀವಗಳು ನನ್ನ ನೆರಳಲ್ಲಿ ನೆಮ್ಮದಿ ಕಂಡಿದ್ದವು. ಲಕ್ಷಾಂತರ ವಾಹನಗಳ ಹೊಗೆ ನುಂಗಿ ನಾನು ಹೇಗೆ ಬದುಕಿದೆಯೆಂದು ನೀವು ಒಮ್ಮೆಯೂ ಕೇಳಲು ಬರಲಿಲ್ಲ. ಆಕಸ್ಮಿಕವಾಗಿ ನಾನು ಉರುಳಿ ಬಿದ್ದು ಮನುಷ್ಯರ ಸಾವು ಘಟಿಸಿದಾಗ ಹೇಗೆಲ್ಲ ಚರ್ಚೆ ನಡೆಯುತ್ತಿದೆ! ಕಾಡಿನಿಂದ ನಾಡಿಗೆ ಬಂದಿದ್ದ ನಮ್ಮ ಹುಲಿಯಣ್ಣ , ಗಜರಾಜ ಎಲ್ಲರೂ ಈ ಹಿಂದೆಯೇ ಇಂಥ ಮಾತು ಕೇಳಿಸಿಕೊಂಡಿದ್ದಾರೆ.[ಮುಂಗಾರು ಮಳೆ ಎದುರಿಸಲು ನಮ್ಮ ಬೆಂಗಳೂರು ಸಿದ್ಧವೇ?]

ಮರ ಮತ್ತು ಮನುಷ್ಯರ ನಡುವೆ ನ್ಯಾಯ ತೀರ್ಮಾನ ನಡೆದಾಗೆಲ್ಲ ಮರವಾದ ನಾವೇ ಅಪರಾಧಿಯಾಗುತ್ತೇವೆ. ಆತ್ಮೀಯ ಚಾನಲ್ ನಿರೂಪಕರೇ , ನಾಳೆ ರಸ್ತೆಯಲ್ಲಿ ನಡೆದು ಬನ್ನಿರಿ . ನಮ್ಮ ಮೈಗೆ ಎಷ್ಟು ಮೊಳೆಗಳಿವೆ , ಬೇರು ಬೆಳೆಯದಂತೆ ಹೇಗೆ ಕಾಂಕ್ರೀಟ್ ಹಾಕಿದ್ದಾರೆ ? ಕಡಿಯುತ್ತ , ಬಡಿಯುತ್ತ ಬದುಕಿದ ನಿಮ್ಮ ವರ್ತನೆಯ ಮಧ್ಯೆ ಮನುಕುಲದ ಒಳಿತಿಗೆ ದುಡಿದ ನಮ್ಮ ನೋವು ಸ್ವಲ್ಪ ಆಲಿಸಿರಿ !

'ನಗರದ ಮರಗಳೆಲ್ಲ ಮನುಷ್ಯರನ್ನು ಸಾಯಿಸುತ್ತವೆ' ಎಂದು ಹೇಳುತ್ತಾ , ಒದರುತ್ತಾ ನೀವು ಹೀಗೆ ಕಾಲ ಹಾಕಿದರೆ ನಾಳೆ ನನ್ನ ಮುಂದಿನ ಸಾಲಿನ ಎಲ್ಲರೂ ಸಾವಿನ ದಾರಿಗೆ ಸಾಗುತ್ತೇವೆ. ಬೇಸಿಗೆಯಲ್ಲಿ ಮರ ಬೇಕು , ಮಳೆಗಾಲದಲ್ಲಿ ಬೇಡವೆಂಬ ವರ್ತನೆ ನಿಮ್ಮದಾದರೆ ಹೇಗೆ ? ಬದುಕಿನಲ್ಲಿ ಸೋತ ಬಳಿಕ ನಾವು ಎಲ್ಲಿ ಹೋಗಿ ಬಿದ್ದು ಸಾಯಬೇಕು ? ದಯವಿಟ್ಟು ತಿಳಿಸಿರಿ.

ವಂದನೆಗಳು
ದಿ. ಆಕಾಶಮಲ್ಲಿಗೆ -50, ಮಲ್ಲೇಶ್ವರಂ
ಬೆಂಗಳೂರು

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A large tree fell on a biker in Malleswaram 18th cross on Monday June 27. Biker Asavulla Shariff killed on spot. After this incident environmentalist Shivanand Kalave wrote a open letter in his Facebook Page.
Please Wait while comments are loading...