ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಷ್ಟದ ಸೂಜಿಯಿಂದ ಸುಂದರ ಬದುಕು ಹೊಲಿಯುತ್ತಿರುವ ಯಲ್ಲಮ್ಮ

By ವನಿತ ವೈ ಜೈನ್
|
Google Oneindia Kannada News

"ಅಮ್ಮಾ...ನನಗೆ ಯಾರೂ ಇಲ್ಲ, ಹೆತ್ತ ತಂದೆ ತಾಯಿಯೂ ತೀರಿಹೋದರು,ಗಂಡನೂ ನನ್ನ ಅಗಲಿ 9 ವರ್ಷಗಳಾದವು, ಇಬ್ಬರು ಗಂಡು ಮಕ್ಕಳು 'ಅಮ್ಮ ನಮಗೆ ನೀನು ಬೇಡ' ಎಂದು ರೆಕ್ಕೆ ಬಲಿತ ಹಕ್ಕಿಗಳು ಗೂಡು ಬಿಡುವಂತೆ ಅವರವರ ಬದುಕಿನತ್ತ ಕಾಲು ಕಿತ್ತಿದ್ದಾರೆ ತಾಯೇ..."ಎಂದು ಹೇಳುವ 45 ವರ್ಷದ ಯಲ್ಲಮ್ಮ ಅವರ ಕಥೆ ಕೇಳಿದರೆ, ಎದುರಿದ್ದವರಿಗೆ ಗಂಟಲು ಬಿಗಿದು, ಕಣ್ಣಲ್ಲಿ ನೀರು ಜಿನುಗದೇ ಇರದು.

ಎದುರಿಗಿದ್ದವರ ಕಣ್ಣನ್ನು ತೇವವಾಗಿಸುವಂತೆ ಸಣ್ಣ ಮಕ್ಕಳಂತೆ ಬಿಕ್ಕಿ ಬಿಕ್ಕಿ ಕಣ್ಣೀರುಗರೆಯುವ ಯಲ್ಲಮ್ಮ ಕರಗದ ಕಷ್ಟಗಳ, ನೋವಿನ ಶಾಹಿಯಲ್ಲಿಯೇ ತಮ್ಮ 45 ವರ್ಷದ ಬದುಕಿನ ಹೊತ್ತಿಗೆ ಬರೆದಿದ್ದಾರೆ.[ಲಾಭದ ಹಂಗಿಲ್ಲದೆ ಹೊಟ್ಟೆ ತುಂಬಿಸುವ ಪಡ್ಡು ಸ್ಟಾಲ್ ಅಜ್ಜಿ!]

Touching story of a solitary woman, who is fighting against all odds

ಏಕಾಂಗಿಯಾಗಿ ಸಣ್ಣ ಪೆಟ್ಟಿಗೆಯಂತಹ ಚರ್ಮ ಕುಟೀರ (ಬ್ಯಾಗ್ ರಿಪೇರಿ ಶಾಪ್)ದಿಂದ ಬಾಳ ರಥ ಎಳೆಯುತ್ತಿರುವ ಇವರು 'ಭಗವಂತ ಎಲ್ಲಿ ನಡೆ ಎನ್ನುತ್ತಾನೋ ಆ ಕಡೆ ನಡೆಯುತ್ತೇನೆ'. ನನ್ನ ಬದುಕು ಗಾಳಿ ಬೀಸಿದತ್ತ ಹಾರುವ ತರಗೆಲೆಗಳ ರೀತಿ ಆಗಿದೆ ಎನ್ನುತ್ತಾ ಭಾವುಕರಾಗುತ್ತಾರೆ.

ಯಲ್ಲಮ್ಮ ಮೂಲತಃ ಬೆಂಗಳೂರಿನವರು. ಬಡತನ, ಹರಿದ ಬಟ್ಟೆಗಳ ನಡುವೆ ಬಾಲ್ಯ ಜೀವನ ಕಳೆದ ಇವರಿಗೆ ವಿದ್ಯಾಭ್ಯಾಸ ಎಂಬುದು ಕೈಗೆಟುಕದ ದೂರದ ಬೆಟ್ಟ. ಕಡು ಕಷ್ಟಕ್ಕೆ ತಂದೆ ತಾಯಿಗೆ ನೆರವಾಗುವ ಅನಿವಾರ್ಯತೆ. ಹಾಗಾಗಿ ಬದುಕಿನ ಬಂಡಿಗೆ ಆಯ್ದುಕೊಂಡದ್ದು ತಂದೆ ತಾಯಿ ಮಾಡುತ್ತಿದ್ದ ಗಾರೆಕೆಲಸ, ಮನೆಕೆಲಸವನ್ನು.

ನೋವು ಕಷ್ಟಗಳ ನಡುವೆ ಯೌವನದ ಹೊಸ್ತಿಲಿಗೆ ಕಾಲಿಟ್ಟ ಇವರು ಎಲ್ಲಾ ಯುವತಿಯರಂತೆ ನಾನಾ ಕನಸುಗಳನ್ನು ಕಣ್ಣಲ್ಲಿ ತುಂಬಿಕೊಂಡು ಮದುವೆ ಮಂಟಪದ ಹಸೆ ಮಣೆ ಏರಿದರು. ಆದರೆ ಗಂಡನ ಮನೆಯಲ್ಲಿಯೂ ಕನಸುಗಳು ಕನಸಾಗಿಯೇ ಉಳಿದವು.

ಮದುವೆ ಆದ ಮೇಲೆ ಎಲ್ಲವನ್ನು ಸಂಭಾಳಿಸಿಕೊಂಡು ಸಹಿಸಿಕೊಂಡು ಬಾಳುವುದೇ ಹೆಣ್ಣು ಮಕ್ಕಳ ಜಾಯಮಾನ ಎಂದು ಕುಡುಕ ಗಂಡನ ಜೊತೆಗೆ ಏಗುತ್ತಲೇ ಬಾಳುತ್ತಿದ್ದ ಯಲ್ಲಮ್ಮ ಬ್ಯಾಗ್, ಸೂಟ್‌ ಕೇಸ್ ರಿಪೇರಿ ಕಾಯಕವನ್ನೇ ಕಲಿತು ಅವರ ನೆರವಿಗೆ ನಿಂತರು. ಆದರೆ ಆವರು ಕುಡಿತದಿಂದ ಜಠರದ ತೊಂದರೆಗೆ ಒಳಗಾಗಿ ಮೃತಪಟ್ಟರು.[ಪುರುಷರಿಗಾಗಿ ಮಹಿಳೆ ಆರಂಭಿಸಿದ ಟೇಲರ್‌ಮ್ಯಾನ್]

Touching story of a solitary woman, who is fighting against all odds

ಈ ತಾಯಿಯ ಮಾತು, ಕೈತುತ್ತು, ಹಾರೈಕೆಯ ಮಾತು, ಲಾಲಿ ಹಾಡು ಬೇಡವಾದ ಇವರು ಈಕೆಯನ್ನು ಒಬ್ಬಂಟಿಯಾಗಿ ಬಿಟ್ಟು ಹೋಗಿದ್ದಾರೆ. ಯಲ್ಲಮ್ಮ ಇಬ್ಬರು ಗಂಡು ಮಕ್ಕಳಲ್ಲಿ ಒಬ್ಬ ಗಂಡು ಮಗನಿಗೆ ಮದುವೆ ಮಾಡಿಸಿ ಆ ಮದುವೆಯ 40,000 ಸಾಲ ಇವರ ತಲೆಯ ಮೇಲೆ.

ಯಲ್ಲಮ್ಮ ಅವರ ಅಂಧತ್ವದ ಬದುಕಿಗೆ ಬೆಳಕನ್ನು ಹೊತ್ತಿಸುತ್ತಿರುವ ಬ್ಯಾಗ್ ರಿಪೇರಿ ಅಂಗಡಿಯು ಪ್ರತಿದಿನ ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 9 ರವರೆಗೆ ತೆರೆದಿರುತ್ತದೆ. ಆದರೆ ಬ್ಯಾಗ್ ರಿಪೇರಿ ಮಷಿನ್ ಮೇಲೆ ಕೂರುವ ಇವರು ಗರ್ಭಕೋಶ, ಅನ್ನನಾಳ, ಕಿಡ್ನಿಯಲ್ಲಿನ ಕಲ್ಲಿನ ಸಮಸ್ಯೆಯಿಂದ 3 ಬಾರಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ.

"3 ಬಾರಿ ದೇಹ ಕೊಯ್ಯಿಸಿಕೊಂಡಿದ್ದೇನಮ್ಮ, ವೈದ್ಯರು ಮೆಷಿನ್ ಕೆಲಸ ಮಾಡ್ಬಾರದು ಅಂತಾರೆ. ಆದರೆ ನನ್ನ ನೋಡಿಕೊಳ್ಳೋರು ಯಾರು ಇಲ್ವಲ್ಲಾ. ನನ್ನ ಬದುಕನ್ನು ನಾನೇ ನೋಡ್ಕೋಬೇಕಲ್ವ.ಹಾಗಾಗಿಯೇ ನಾನೇ ದುಡಿದು ನನ್ನ ಅನ್ನವನ್ನು ನಾನೇ ಸಂಪಾದಿಸಿಕೊಳ್ಳುತ್ತಿದ್ದೇನೆ. ದಿನಕ್ಕೆ 300 ರಿಂದ 400 ರೂ ಸಂಪಾದನೆಯಾಗುತ್ತದೆ. ಬನ್ನೇರು ಘಟ್ಟದಲ್ಲಿನ 3000ರೂ ಬಾಡಿಗೆ ಮನೆಯೇ ಸದ್ಯಕ್ಕೆ ನನ್ನ ಅರಮನೆ" ಎನ್ನುತ್ತಾರೆ.

"ನನಗೆ ನನ್ನ ಆರೋಗ್ಯದ ಬಗ್ಗೆ ಚಿಂತೆ ಇಲ್ಲಾ. ನಾನು ಯಾರ ಅನ್ನಕ್ಕಾಗಿಯೂ ಕಾಯ್ಬರ್ದು. ಯಾರಿಗೂ ಮೋಸ ಮಾಡ್ಬಾರ್ದು. ಹೆಂಗಸರು ದುಡಿದು ತಿನ್ನಬಹುದು, ಗಂಡಸರ ಮೇಲೆ ಅವಲಂಬಿಸದೆ ಬದುಕಬಹುದು ಎಂದು ಜೀವನ ನಡೆಸಿ ತೋರಿಸುತ್ತೇನೆ.

ಈ ವೃತ್ತಿಯನ್ನು ಸಾಯುವವರೆಗೂ ಮಾಡ್ತೇನೆ. ಭಗವಂತ ತಾನಾಗಿಯೇ ಕರೆದುಕೊಳ್ಳುವವರೆಗೂ ನನ್ನ ಬದುಕು ನಿರಂತರ. ಆಯತಪ್ಪಿದ ಹಾದಿಗೆ ನಾನೇ ಆಯ ಕಟ್ಟಿಕೊಂಡಿದ್ದೇನೆ. ಯಾರ ಹಂಗಿನಲ್ಲಿಯೂ ಬದುಕನ್ನು ಸಾಗಿಸಲು ನಾನು ಸಿದ್ಧವಿಲ್ಲ" ಎಂದು ತನ್ನ ಗಂಡ ಮಕ್ಕಳಿಂದ ಆದ ಸಂಕಷ್ಟಗಳನ್ನು, ದುಃಖ ದುಮ್ಮಾನವನ್ನು ಕಣ್ಣೀರು ಹೊತ್ತ ಕಣ್ಣಲ್ಲಿ, ಗಂಟಲು ಬಿಗಿತದ ಮಾತಿನಲ್ಲಿಯೇ ತಮ್ಮ ಛಲವನ್ನು ಅನಾವರಣಗೊಳಿಸುತ್ತಾರೆ ಯಲ್ಲಮ್ಮ.

ಸಮತಾ ಸೈನಿಕ ದಳ ಹಾಗೂ ಬಿಬಿಎಂಪಿ ನೀಡಿದ ಕೊಂಚ ಸ್ಥಳದ ನೀಡಿದ್ದು, ಆದರೆ ಈ ಅಂಗಡಿ ನಿರ್ಮಿಸಲು ನಾನೇ ಸುಮಾರು 50,000ರೂ ಖರ್ಚು ಮಾಡಿದ್ದೇನೆ. ಅಂಗಡಿ ನಿರ್ಮಾಣ, ಆಪರೇಷನ್ ಸೇರಿದಂತೆ 1 ಲಕ್ಷ ಸಾಲ ಹೊರೆ ಹೊತ್ತ ಇವರು ಸಾಲದ ಬದುಕನ್ನು ಅಂಗಡಿ ಸುತ್ತಮುತ್ತಲ ಜನರ ಪ್ರೀತಿ ವಿಶ್ವಾಸದ ಮಾತುಗಳಿಂದ ನಗುನಗುತ್ತಲೇ ನೂಕುತ್ತಿದ್ದಾರೆ.

Touching story of a solitary woman, who is fighting against all odds

ಬದುಕಿನ ನೋವುಗಳಿಗೆ ಅನಾದಿ ಕಾಲದ ಮರದಂತೆ ದೃಢವಾಗಿ ನಿಂತ ಇವರ ಬಳಿ ಬೆಂಗಳೂರು ನಗರದ ಬನ್ನೇರು ಘಟ್ಟ, ಮೈಸೂರು ರಸ್ತೆ, ರಾಜರಾಜೇಶ್ವರಿ ನಗರ, ಇಂದಿರಾ ನಗರ, ಹಲಸೂರು ಸೇರಿದಂತೆ ಬಹಳ ಮಂದಿ ಗಿರಾಕಿಗಳಿದ್ದಾರೆ. 'ನಾ ಕೆಲಸದಲ್ಲಿ ತೋರಿದ ನಿಷ್ಠೆಯಿಂದ ಇಲ್ಲಿ ಓದಿ ವಿದೇಶದಲ್ಲಿ ನೆಲೆಸಿರುವ ಕೆಲವು ಮಕ್ಕಳು ಈಗಲೂ ಬ್ಯಾಗ್ ಹೊಲಿಸಿಕೊಳ್ಳಲು ಬರುತ್ತಾರೆ ಎಂದು ಬದುಕಿನ ಸಾರ್ಥಕತೆ ಬಗ್ಗೆ ಕೊಂಚ ನೆಮ್ಮದಿ ನಿಟ್ಟುಸಿರು ಬಿಡುತ್ತಾರೆ.

'ಊಟಕ್ಕಾಗಿ ಒಂದು ರೇಷನ್ ಕಾರ್ಡ್ ಬಿಟ್ಟರೆ ಸರ್ಕಾರದಿಂದ ಯಾವುದೇ ಸಹಾಯ ಸಹಕಾರ ಇವರ ಪಾಲಿಗೆ ಇಲ್ಲ. ಪಿಂಚಣಿಗಾಗಿ ಅರ್ಜಿ ಹಾಕಲು ಹೋದಾಗಲೆಲ್ಲ ಸಮಯ ಮುಗಿದಿದೆ, ನಿಮಗೆ ಬರಲ್ಲ ಹೋಗಮ್ಮ ಎಂದು ಹೇಳುವ ಅಧಿಕಾರಿಗಳು ನನ್ನನ್ನು ಅಸಡ್ಡೆಯಿಂದ ಕಾಣುತ್ತಾರೆ' ಎಂದು ಮರುಗುತ್ತಾರೆ ಯಲ್ಲಮ್ಮ.

30 ವರ್ಷದಿಂದ ಯಲ್ಲಮ್ಮ ಅವರನ್ನು ನೋಡುತ್ತಿರುವ ಡ್ರೈವರ್ ರಾಜು 'ಇವರು ಬ್ಯಾಗನ್ನು ತುಂಬಾ ಚೆನ್ನಾಗಿ ಹೊಲೆಯುತ್ತಾರೆ. ಆದರೆ ಇವರ ಬದುಕಿನ ಕಥೆ ಬರೆಯಲು ಕೂತರೆ 30 ವರ್ಷಗಳು ಸಾಕಾಗುವುದಿಲ್ಲ. ಅಷ್ಟಿದೆ ಅವರ ಕಷ್ಟ. ಆದರೆ ಇವರ ನೆರವಿಗೆ ಯಾರೂ ಇಲ್ಲ ಎನ್ನುತ್ತಾರೆ.

ಕೆಲಸದಲ್ಲಿ ನಿಷ್ಠೆ, ಸಾಧಿಸುವ ಛಲ, ಸಮಾಜದ ಜನರ ಪ್ರೀತಿ ವಿಶ್ವಾಸದ ಮಾತುಗಳು ಮನದಲ್ಲಿದ್ದರೆ ಎದುರಿಗೆ ನಿಂತ ಕಷ್ಟದ ಶಿಖರ, ಹಿಮದಂತೆ ಕರಗಿ ನೀರಾಗಿ ಸ್ವಚ್ಛಂದವಾಗಿ ಹರಿದು ಖುಷಿಯ ಸಾಗರ ಸೇರುತ್ತದೆ ಎಂಬ ಭಾವ ಅವರ ಪ್ರತಿಯೊಂದು ಮಾತುಗಳಲ್ಲಿಯೂ ಸಮ್ಮಿಳಿತವಾಗಿತ್ತು.

ನಗುವ ಮನಸ್ಸಿನ ಹಿಂದೆ ಹೇಳಿಕೊಳ್ಳಲಾರದಷ್ಟು ಅಳುವಿರುತ್ತದೆ. ದೂರದ ಬೆಟ್ಟ ನುಣ್ಣಗೆ ಕಾಣುತ್ತದೆ. ಆದರೆ ಹತ್ತಿರ ಹೋದಾಗಲೇ ಅದರ ನಿಜವಾದ ಸೌಂದರ್ಯದ ಅರಿವಾಗೋದು. ಇವರ ಪ್ರಸ್ತುತ ಅಂಗಡಿ ಬೆಂಗಳೂರಿನ ಜೈನ್ ದೇವಸ್ಥಾನದ ಎದುರು, 9ನೇ ಮುಖ್ಯರಸ್ತೆ, 30ನೇ ಅಡ್ಡ ರಸ್ತೆ, ಜಯನಗರದಲ್ಲಿದೆ.

ಗಂಡನಿಲ್ಲದ, ಮಕ್ಕಳಿದ್ದರೂ ಇಲ್ಲದಂತಿರುವ, ಸಂಬಂಧಿಕರಿಗೆ ಬೇಡವಾಗಿರುವ ಯಲ್ಲಮ್ಮ 'ಹೇಗೆ ಕೈಯಲ್ಲಿ ಐದು ಬೆರಳುಗಳು ಸಮನಾಗಿರುವುದಿಲ್ಲವೋ ಅದೇ ರೀತಿ ಸಂತೋಷ ದುಃಖ, ಸಿಹಿ ಕಹಿ ಈ ಬದುಕಿನಲ್ಲಿ ಮಾಮೂಲಿ. ನಾವು ಬದುಕಿನ ಬೆನ್ನು ಹತ್ತಬಾರದು, ಬದುಕು ನಮ್ಮನ್ನು ಹಿಂಬಾಲಿಸುವಂತೆ ಮಾಡಿಕೊಳ್ಳಬೇಕು ಎಂದು ಹೇಳುತ್ತಾ ನೋವಿನಲ್ಲಿ ಮುಳುಗಿರುವ, ಸಾಧಿಸಿರುವ ಮನಸ್ಸಿರುವ ಪ್ರತಿಯೊಬ್ಬ ಹೆಂಗಳೆಯರಿಗೂ ಇಂದು ಯಲ್ಲಮ್ಮ ಮಾದರಿಯಾಗಿದ್ದಾರೆ.

English summary
Here is a touching and heart wrenching story of a solitary woman, whose husband left for his heavenly abode, who has been abandoned by children in Bengaluru. This has never dimmer her spirit to live on her own terms. Meet Yallamma, the gallant woman in Jayanagar, Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X