ಬೆಂಗಳೂರು : ಗಣರಾಜ್ಯೋತ್ಸವ ಭದ್ರತೆಗೆ 5 ಸಾವಿರ ಪೊಲೀಸ್

Posted By:
Subscribe to Oneindia Kannada

ಬೆಂಗಳೂರು, ಜನವರಿ 25 : ಬೆಂಗಳೂರು ನಗರದಲ್ಲಿ ಐಎಸ್‌ಐಎಸ್ ಶಂಕಿತ ಉಗ್ರರನ್ನು ಬಂಧಿಸಿರುವ ಹಿನ್ನೆಲೆಯಲ್ಲಿ ಗಣರಾಜ್ಯೋತ್ಸವಕ್ಕೆ ವಿಶೇಷ ಭದ್ರತೆ ಒದಗಿಸಲಾಗಿದೆ. ಇದೇ ಮೊದಲ ಬಾರಿಗೆ ನೆಲ ಬಾಂಬ್ ಪತ್ತೆ ದಳವನ್ನು ಭದ್ರತೆಗೆ ಬಳಸಿಕೊಳ್ಳಲಾಗುತ್ತಿದೆ.

ಭಾನುವಾರ ಬೆಂಗಳೂರಿನಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಬಿಬಿಎಂಪಿ ಆಯುಕ್ತ ಎಂ.ಕುಮಾರ ನಾಯಕ್ ಮತ್ತು ನಗರ ಪೊಲೀಸ್ ಆಯುಕ್ತ ಎನ್‌.ಎಸ್.ಮೇಘರಿಕ್ ಅವರು ಮಾಣೆಕ್‌ ಷಾ ಪೆರೇಡ್‌ ಮೈದಾನದಲ್ಲಿ ನಡೆಯುವ ಗಣರಾಜ್ಯೋತ್ಸವದ ಕುರಿತು ಮಾಹಿತಿ ನೀಡಿದರು. [ಅಪ್ರತಿಮ ಯೋಧ, ಸ್ಫೂರ್ತಿಯ ನಾಯಕ ಮಾಣೆಕ್ ಷಾ]

ns megharikh

'ಜನವರಿ 26ರ ಮಂಗಳವಾರ ಬೆಳಗ್ಗೆ 8.58ಕ್ಕೆ ರಾಜ್ಯಪಾಲರು ಕಾರ್ಯಕ್ರಮಕ್ಕೆ ಆಗಮಿಸಲಿದ್ದು, 9 ಗಂಟೆಗೆ ಧ್ವಜಾರೋಹಣ ಮಾಡಲಿದ್ದಾರೆ. ಈ ವೇಳೆ ಭಾರತೀಯ ವಾಯುಪಡೆ ಹೆಲಿಕಾಪ್ಟರ್‌ ಮೂಲಕ ಪುಷ್ಪವೃಷ್ಟಿ ಮಾಡಲಾಗುತ್ತದೆ' ಎಂದು ಕುಮಾರ ನಾಯಕ್ ತಿಳಿಸಿದರು. [ಚಿತ್ರಗಳು : ಗಣರಾಜ್ಯೋತ್ಸವಕ್ಕೆ ಯೋಧರ ತಾಲೀಮು]

ಧ್ವಜಾರೋಹರಣ ನಂತರ ಪಥ ಸಂಚಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಪಥಸಂಚಲನದಲ್ಲಿ ಪೊಲೀಸ್‌ ಸ್ಕೌಟ್ಸ್‌, ಗೈಡ್ಸ್‌, ಎನ್‌ಸಿಸಿ, ಸೇವಾದಳ ಹಾಗೂ ವಿವಿಧ ಶಾಲೆಗಳ ಮಕ್ಕಳು ಪಾಲ್ಗೊಳ್ಳಲಿದ್ದಾರೆ. ಶಾಲಾ ಮಕ್ಕಳು ಒಟ್ಟು 4 ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲಿದ್ದು, 2,550 ಮಕ್ಕಳು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು. [ಚಿತ್ರಗಳು : ಗಣರಾಜ್ಯೋತ್ಸವಕ್ಕೆ ವಾಯುಪಡೆ ತಾಲೀಮು]

ಭದ್ರತೆಗೆ 5 ಸಾವಿರ ಪೊಲೀಸರು : 'ಗಣರಾಜ್ಯೋತ್ಸವದ ಭದ್ರತೆಗೆ 5 ಸಾವಿರ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಸೂಕ್ಷ್ಮ ಪ್ರದೇಶದಲ್ಲಿ ಸಿಸಿಟಿವಿ ಆಳವಡಿಸಲಾಗಿದೆ' ಎಂದು ನಗರ ಪೊಲೀಸ್ ಆಯುಕ್ತ ಎನ್‌.ಎಸ್.ಮೇಘರಿಕ್ ಅವರು ಹೇಳಿದರು.

ಮಾಣಿಕ್‌ ಷಾ ಪೆರೇಡ್‌ ಮೈದಾನದ ಸುತ್ತ 50 ಸಿಸಿ ಟಿವಿ ಕ್ಯಾಮರಾ ಅಳವಡಿಸಲಾಗಿದೆ. ಭದ್ರತೆಗಾಗಿ 9 ಡಿಸಿಪಿ, 16 ಎಸಿಪಿ, 48 ಪೊಲೀಸ್‌ ಇನ್ಸ್‌ಪೆಕ್ಟರ್‌, 101 ಪಿಎಸ್‌ಐ, 13 ಮಹಿಳಾ ಪಿಎಸ್‌ಐ, 77 ಎಎಸ್‌ಐ, 182 ಹೆಡ್‌ ಕಾನ್‌ಸ್ಟೆಬಲ್, 459 ಕಾನ್‌ಸ್ಟೆಬಲ್, 99 ಮಹಿಳಾ ಸಿಬ್ಬಂದಿಯೊಂದಿಗೆ 152 ಸಾದಾ ಉಡುಪಿನ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.

ಯಾವ ವಸ್ತು ತರುವಂತಿಲ್ಲ : ಭದ್ರತೆಯ ದೃಷ್ಟಿಯಿಂದಾಗಿ ಕಾರ್ಯಕ್ರಮಕ್ಕೆ ಬರುವ ಸಾರ್ವಜನಿಕರು ಬೆಳಗ್ಗೆ 7.30ರಿಂದ 8.30ರೊಳಗೆ ಮೈದಾನ ಪ್ರವೇಶಿಸಬೇಕು. ಬಳಿಕ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಮೈದಾನಕ್ಕೆ ಬರುವವರು ಸಿಗರೇಟ್‌, ಬೆಂಕಿಪೆಟ್ಟಿಗೆ, ಹರಿತ ವಸ್ತು, ಕರಪತ್ರ, ಕಪ್ಪುವಸ್ತ್ರ, ಬಣ್ಣದ ದ್ರಾವಣ, ತಿಂಡಿ-ತಿನಿಸು, ಕ್ಯಾಮರಾ, ನೀರಿನ ಬಾಟಲ್‌, ಪಟಾಕಿ, ಹೆಲ್ಮೆಟ್‌, ಮಾದಕ ವಸ್ತು, ಬಾವುಟ ಹಾಗೂ ಬ್ಯಾಗ್‌ಗಳನ್ನು ತರವುದನ್ನು ನಿಷೇಧಿಸಲಾಗಿದೆ.

ಡ್ರೋಣ್‌ ಕ್ಯಾಮೆರಾ ನಿಷೇಧ : 'ಭದ್ರತೆಯ ಕಾರಣಕ್ಕಾಗಿ ಈ ಬಾರಿ ಬೆಂಗಳೂರು ನಗರದಲ್ಲಿ ಸಾರ್ವಜನಿಕರು ಡ್ರೋಣ್‌ ಕ್ಯಾಮೆರಾ ಸಹಿತ ಯಾವುದೇ ರೀತಿಯ ಮಾನವ ರಹಿತ ವಾಹನ ಬಳಕೆ ಮಾಡುವುದನ್ನು ನಿಷೇಧಿಸಲಾಗಿದೆ. ಸಾರ್ವಜನಿಕರು ಡ್ರೋಣ್‌ ಸೇರಿದಂತೆ ಇತರೆ ಕ್ಯಾಮರಾ ಹೊಂದಿದ ವಸ್ತುಗಳನ್ನು ಹಾರಿಬಿಟ್ಟು ನಗರದ ದೃಶ್ಯಗಳನ್ನು ಸೆರೆಹಿಡಿಯಲು ಅವಕಾಶವಿಲ್ಲ' ಎಂದು ಮೇಘರಿಕ್ ಸ್ಪಷ್ಟಪಡಿಸಿದ್ದಾರೆ.

ಹೆಜ್ಜೆ ಹಾಕಲಿದೆ ಮಹಾರಾಷ್ಟ್ರದ ತುಕಡಿ : ಈ ಬಾರಿಯ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಶ್ವಾನದಳ ಹೆಜ್ಜೆ ಹಾಕಲಿದೆ. ಸಂಚಲನದಲ್ಲಿ 61 ತುಕಡಿಗಳು ಭಾಗವಹಿಸಲಿದ್ದು, ವಿಶೇಷವಾಗಿ ಮಹಾರಾಷ್ಟ್ರ ಸಶಸ್ತ್ರ ಪಡೆಯ ಒಂದು ತುಕಡಿ ಪಥಸಂಚಲನದಲ್ಲಿ ಪಾಲ್ಗೊಳ್ಳಲಿದೆ.

ಆಸನ ವ್ಯವಸ್ಥೆ : ಮಾಣಿಕ್ ಷಾ ಪರೇಡ್ ಮೈದಾನದ ಜಿ2 ಪ್ರವೇಶ ದ್ವಾರದಲ್ಲಿ ಅತಿಗಣ್ಯ ವ್ಯಕ್ತಿಗಳಿಗಾಗಿ 2000 ಆಸನ, ಜಿ1 ಪ್ರವೇಶ ದ್ವಾರದಲ್ಲಿ ಗಣ್ಯ ವ್ಯಕ್ತಿಗಳು, ಸ್ವಾತಂತ್ರ್ಯ ಹೋರಾಟಗಾರರು, ರಕ್ಷಣಾ ಇಲಾಖೆ ಅಧಿಕಾರಿಗಳು, ಪತ್ರಿಕಾ ಪ್ರತಿನಿಧಿಗಳಿಗೆ 2000 ಆಸನ, ಜಿ3 ಪ್ರವೇಶ ದ್ವಾರದಲ್ಲಿ ಇತರೆ ಇಲಾಖೆ ಅಧಿಕಾರಿಗಳು, ನಿವೃತ್ತ ಸೇನಾಧಿಕಾರಿಗಳು, ಬಿಎಸ್‌ಎಫ್ ಅಧಿಕಾರಿಗಳಿಗಾಗಿ 3000 ಆಸನ, ಜಿ4 ಪ್ರವೇಶ ದ್ವಾರದಲ್ಲಿ ಸಾರ್ವಜನಿಕರಿಗಾಗಿ 4000 ಆಸನ ಸೇರಿದಂತೆ ಒಟ್ಟು 11 ಸಾವಿರ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Bengaluru police commissioner N.S.Megharik said, elaborate security has been arranged to prevent any untoward incidents during the 67th Republic Day celebrations to be held at the Field Marshal Manekshaw Parade Ground on Tuesday, January 26,2016.
Please Wait while comments are loading...