ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಂಗಾಯಣದಿಂದ ರಂಗಶಂಕರದಲ್ಲಿ ಮೂರು ನಾಟಕಗಳು

By Prasad
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 17 : ಮೈಸೂರು ರಂಗಾಯಣದ ಮೂರು ಮಹತ್ವದ ಪ್ರಯೋಗಗಳ ನಾಟಕೋತ್ಸವವನ್ನು 2016ರ ಸೆಪ್ಟೆಂಬರ್ 20, 21, 22ರಂದು ಪ್ರತಿದಿನ ಸಂಜೆ 7.30ಕ್ಕೆ ರಂಗಶಂಕರ ರಂಗಮಂದಿರದಲ್ಲಿ ಬೆಂಗಳೂರಿನ ರಂಗಾಸಕ್ತರಿಗಾಗಿ ಆಯೋಜಿಸಲಾಗಿದೆ.

ಹೆಚ್ಚಿನ ಸಂಖ್ಯೆಯಲ್ಲಿ ಬಂದು ಈ ವಿಶಿಷ್ಟ ರಂಗ ಪ್ರಯೋಗಗಳನ್ನು ವೀಕ್ಷಿಸಬೇಕೆಂಬುದು ರಂಗಾಯಣದ ಬಯಕೆಯಾಗಿದ್ದು, ಪ್ರದರ್ಶನಗೊಳ್ಳುವ ನಾಟಕಗಳ ವಿವರ ಈ ಕೆಳಕಂಡಂತಿರುತ್ತದೆ. ಬುಧವಾರ, ಗುರುವಾರ ಮತ್ತು ಶುಕ್ರವಾರ ಈ ರಂಗಪ್ರಯೋಗಗಳು ನಡೆಯಲಿವೆ.

Three Kannada plays for Bengaluru drama enthusiasts

ಸೆಪ್ಟೆಂಬರ್ 20 : ತಲೆದಂಡ

ಹನ್ನೆರಡನೆಯ ಶತಮಾನವು ಕರ್ನಾಟಕ ಇತಿಹಾಸದಲ್ಲಿ ಬಹಳ ಮಹತ್ವದ ಕಾಲ. ಬಸವಯುಗ, ವಚನಕಾರರ ಯುಗ ಎಂದೇ ಪ್ರಸಿದ್ಧವಾಗಿರುವ ಆ ಯುಗದ ಶರಣ ಚಳವಳಿ ಮತ್ತು ಅಂದಿನ ರಾಜಕೀಯ ನಡುವಿನ ಮುಖಾಮುಖಿಯಲ್ಲಿ ಆಧ್ಯಾತ್ಮ, ಅನುಭವ, ಸಮಾಜ ಸುಧಾರಣೆ ಹಾಗೂ ರಾಜಕಾರಣದ ಅನೇಕ ಮೂಲಭೂತ ಪ್ರಶ್ನೆಗಳು ಈ ನಾಟಕದಲ್ಲಿ ಹೊಚ್ಚ ಹೊಸದಾದ ಪ್ರಖರವಾದ ಬೆಳಕಿನಲ್ಲಿ ಚರ್ಚಿಸಲ್ಪಡುತ್ತವೆ.

ನಾಟಕರಾರ ಗಿರೀಶ್ ಕಾರ್ನಾಡ ಅವರೇ ಸ್ವತಃ ಹೇಳುವಂತೆ- ನೋಯುವ ಹಲ್ಲಿಗೆ ನಾಲಿಗೆ ಮತ್ತೆ ಮತ್ತೆ ಹೊರಳುವಂತೆ ಪ್ರತಿಯೊಬ್ಬ ಕನ್ನಡಿಗ, ಮತ್ತೆ ಮತ್ತೆ ಆ ಯುಗದ ಬೆರಗುಗೊಳಿಸುವ ಪ್ರತಿಭೆಗೆ, ಉತ್ಸಾಹಕ್ಕೆ ಮೌಲಿಕ ಪ್ರಶ್ನೆಗಳನ್ನು ಕೇಳುವ ಎದೆಗಾರಿಕೆ, ಗೆಲುವಿಗೆ, ನೋವಿಗೆ ಮರಳುವುದು, ಅದನ್ನು ಹೊಸ ಸಂದರ್ಭದಲ್ಲಿ ಅರ್ಥೈಸಲು ಯತ್ನಿಸುವುದು ಅನಿವಾರ್ಯ.

ರಚನೆ : ಡಾ. ಗಿರೀಶ್ ಕಾರ್ನಾಡ್
ಸಂಗೀತ : ಬಿ.ವಿ. ಕಾರಂತ
ನಿರ್ದೇಶನ : ಜಯತೀರ್ಥ ಜೋಶಿ

Three Kannada plays for Bengaluru drama enthusiasts

ಸೆಪ್ಟೆಂಬರ್ 21 : ಸಂಸ್ಕಾರ

ಡಾ. ಯುಆರ್ ಅನಂತಮೂರ್ತಿ ಕಾದಂಬರಿ ಆಧಾರಿತ ನಾಟಕ ಸಂಸ್ಕಾರದಲ್ಲಿ ಕೇಂದ್ರ ಸಂಕೇತವಾಗಿರುವ ಪ್ಲೇಗ್ ರೋಗ ಭಾರತದ ಜಡ್ಡುಗಟ್ಟಿದ ಸಂಪ್ರದಾಯಗಳನ್ನು ಸಂಕೇತಿಸುತ್ತ, ಅದನ್ನು ನಿರ್ನಾಮಗೊಳಿಸುವಾಗ ಹೊಸದೊಂದು ರೋಗ ಹುಟ್ಟುವುದರ ಸಂಕೇತವಾಗಿಯೂ ಬಳಕೆಯಾಗಿದೆ. ಮನುಷ್ಯನ ಬದುಕಿನ ಸಂದಿಗ್ಧ ಸ್ಥಿತಿಯನ್ನು ಅನಾವರಣಗೊಳಿಸುತ್ತ, ರೂಢಿಗತ ಸಂಪ್ರದಾಯದೊಳಗಿನ ಸಂಘರ್ಷಗಳನ್ನು, ವೈರುಧ್ಯಗಳನ್ನು ಹಾಗೂ ತೀಕ್ಷ್ಣ ವೈಚಾರಿಕತೆಗಳ ಮುಖಾ-ಮುಖಿಯಾಗಿಸಲು ರಂಗಭೂಮಿಯ ಮೂಲಕ ಪ್ರೇರಿತಗೊಳಿಸಲು ಪ್ರಯತ್ನಿಸಲಾಗಿದೆ.

ಇದು ಒಂದು ಅಗ್ರಹಾರದ ಕತೆಯಲ್ಲ, ಒಂದು ಸಮಾಜದ ಕೊಳೆಯುವಿಕೆ ಹಾಗೂ ಅಲ್ಲೇ ಹುಟ್ಟು ಪಡೆವ ಚಲನಶೀಲತೆ ಆ ಮೂಲಕ ಹೊಸದೊಂದು ಹುಟ್ಟಿನ ಸಂಕೇತಗಳನ್ನು ಮೂಡಿಸುತ್ತ ಜಾತಿ ವಿನಾಶದ ತುಡಿತಗಳ ಪಠ್ಯವಾಗಿದೆ. ಕಾಲ, ಕ್ರಿಯೆ, ಸ್ಥಳದ ಐಕ್ಯಗಳನ್ನು ಕಾಪಾಡಿಕೊಂಡು ನಾಟಕವಾಗಿ ರೂಪಗೊಳ್ಳಲು ಸಹಕಾರಿಯಾಗಿದೆ. ರಂಗಾಯಣವು ಸಾಮಾಜಿಕ ಪ್ರಜ್ಞೆಯ ನೆಲೆಯಿಂದ ಆಲೋಚನೆಗಳನ್ನು ರಂಗಭೂಮಿಯ ಮೂಲಕ ವಿಸ್ತರಿಸುವ ದೃಷ್ಟಿಯಿಂದ ಸಂಸ್ಕಾರ ನಾಟಕವನ್ನು ಪ್ರಸ್ತುತ ಲೋಕಾರ್ಪಣೆಗೊಳಿಸುತ್ತಿದೆ.

ಕಾದಂಬರಿ : ಡಾ. ಯು.ಆರ್. ಅನಂತಮೂರ್ತಿ
ರಂಗರೂಪ : ಓ.ಎಲ್. ನಾಗಭೂಷಣ ಸ್ವಾಮಿ, ಎಂ.ಸಿ. ಕೃಷ್ಣಪ್ರಸಾದ್
ವಿನ್ಯಾಸ : ಎಚ್.ಕೆ. ದ್ವಾರಕಾನಾಥ್
ಸಂಗೀತ/ನಿರ್ದೇಶನ : ಎಚ್. ಜನಾರ್ಧನ್ (ಜನ್ನಿ)

ಸೆಪ್ಟೆಂಬರ್ 22 : ಜೂಲಿಯಸ್ ಸೀಸರ್

ಜೂಲಿಯಸ್ ಸೀಸರ್ ಸುಮಾರು 1599ರಲ್ಲಿ ರಚನೆಯಾದ ನಾಟಕ ಎಂದು ಹೇಳಲಾಗಿದೆ. ಅಷ್ಟರೊಳಗಾಗಿಯೇ ಶೇಕ್ಸ್‌ಪಿಯರ್ ಎಂಟು ಐತಿಹಾಸಿಕ ನಾಟಕಗಳನ್ನು ರಚಿಸಿ ಆಗಿದ್ದಿತು. ಈ ಇಷ್ಟು ನಾಟಕಗಳು ಇಂಗ್ಲೆಂಡನ್ನು ಕುರಿತಾಗಿದ್ದವು. ಮೊದಲ ಬಾರಿಗೆ ಇತಿಹಾಸದ ವಸ್ತುವೊಂದನ್ನು ಇಂಗ್ಲೆಂಡಿನ ಹೊರಗಿನಿಂದ ಆರಿಸಿಕೊಂಡು ಶೇಕ್ಸ್‌ಪಿಯರ್ ಒಂದು ನಾಟಕ ರಚಿಸಿದ. ರೋಮ್ ಒಂದು ಗಣರಾಜ್ಯ ರಾಜಕೀಯ ವಿನ್ಯಾಸ ಇಂಗ್ಲೆಂಡಿಗಿಂತ ಭಿನ್ನವಾದದ್ದು. ಪ್ರಜಾ ರಾಜ್ಯವಾದದ್ದರಿಂದ ಇಲ್ಲಿ ರಾಜ ಮಹಾರಾಜರುಗಳಿಗೆ ಚಕ್ರವರ್ತಿಗಳಿಗೆ ಅವಕಾಶವಿಲ್ಲ. ನಿರಂಕುಶ ಸಾರ್ವಭೌಮತ್ವದ ಮಾತೆ ಇಲ್ಲಿ ಸಲ್ಲ.

ಆತ ಬರೆದ ಇಂಗ್ಲೆಂಡ್ ಇತಿಹಾಸ ಕುರಿತಾದ ನಾಟಕಗಳನ್ನು ಐತಿಹಾಸಿಕ ನಾಟಕಗಳೆಂದು ಗುರುತಿಸಿರುವುದರಿಂದ ಜೂಲಿಯಸ್ ಸೀಸರ್ ನಾಟಕವನ್ನು ಶೇಕ್ಸ್‌ಪಿಯರ್ ರಚಿಸಿದ ಪ್ರಪ್ರಥಮ ರಾಜಕೀಯ ನಾಟಕ ಎನ್ನಬಹುದಾಗಿದೆ. ಇದು ಕೇವಲ ರಾಜಕೀಯ ನಾಟಕವಷ್ಟೇ ಅಲ್ಲ, ಆ ವಿವರಣೆಗೆ ಸಲ್ಲಬಹುದಾದ ನಾಟಕಗಳಲ್ಲಿ ಅತ್ಯಂತ ಅಗ್ರಗಣ್ಯ ನಾಟಕವು ಹೌದು. ಜೂಲಿಯಸ್ ಸೀಸರ್ ನಾಟಕ ರೋಮ್ ರಾಜಕೀಯ ವ್ಯವಸ್ಥೆಯನ್ನು ಹಿನ್ನೆಲೆಯಾಗಿ ಇಟ್ಟುಕೊಂಡು ಬರೆದ ರಾಜಕೀಯ ನಾಟಕವಾದರೂ ಇಂದಿಗೂ ಸರ್ವ ವಿಧದಲ್ಲೂ, ಸರ್ವ ದೇಶಕ್ಕೂ ಸಲ್ಲುವ ಅತ್ಯಂತ ಮಹತ್ವದ ರಾಜಕೀಯ ನಾಟಕವಾಗಿದೆ.

ಅನುವಾದ : ಓ.ಎಲ್. ನಾಗಭೂಷಣ ಸ್ವಾಮಿ
ವಿನ್ಯಾಸ : ಎಚ್.ಕೆ. ದ್ವಾರಕಾನಾಥ್
ನಿರ್ದೇಶನ : ಪ್ರೊ. ಜಿಕೆ ಗೋವಿಂದರಾವ್

English summary
Rangayana of Mysuru is presenting 3 Kannada plays at Rangashanara in Bengaluru on 20, 21, 22 of Sepbember. Girish Karnad's Taledanda, Shakespear's Julius Caesar and Samskara, based on UR Anantha Murthy's Kannada novel. All the three drama's will be played at 7.30 PM.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X