ಜೀವನ್ಮರಣ ಮಧ್ಯೆ ಹೋರಾಡುತ್ತಿರುವ ಆನೆಯ ನೋಡಲು ನೂಕುನುಗ್ಗಲು

By: ಗಗನ್ ಪ್ರೀತ್
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 27: ಮಂಚನಬಲೆ ಅಣೆಕಟ್ಟು ನೋಡಲು ಹೇಗೆ ಜನ ಬರುತ್ತಾರೋ ಅದೇ ರೀತಿ ಮಾಗಡಿ ತಾಲೂಕಿನ ಅವರಳ್ಳಿ ಗ್ರಾಮ ಪ್ರವಾಸಿ ಸ್ಥಳದಂತಾಗಿದೆ. ತಮ್ಮ ಮನೆ ಮಗನಿಗೆ ಅರೋಗ್ಯ ಸರಿಯಿಲ್ಲ ಅಂದರೆ ಯಾವ ರೀತಿ ನಡೆದುಕೊಳ್ತಾರೋ ಅದೇ ರೀತಿಯೇ ಇಲ್ಲೂ ಆಗುತ್ತಿದೆ. ನೆಲಕ್ಕೆ ಒರಗಿರುವುದು ಗಂಡಾನೆ. ಅದರ ಹೆಸರು ಮುದ್ದೆ ಸಿದ್ದ. ಅದು ಹೇಗಿದೆಯೋ ಏನೋ ಎಂಬ ಧಾವಂತದಲ್ಲಿ ಪ್ರತಿ ದಿನವೂ ಜನರು ಬಂದು ನೋಡಿ ಹೋಗುತ್ತಿದ್ದಾರೆ.

ಈ ಸ್ಥಳಕ್ಕೆ ಹೋದಾಗ ಬೆಳಗ್ಗೆ 11 ಗಂಟೆ ಆಗಿತ್ತು. ಬಿಸಿಲು ಹೆಚ್ಚಿದ್ದರಿಂದ ಸಿದ್ದನ ಮೇಲೆ ಗೋಣಿ ಚೀಲ ಹಾಕಿ, ನೀರು ಸುರಿಯುತ್ತಿದ್ದರು. ಸುಮಾರು ಹೊತ್ತಿನಿಂದ ಹೀಗೆ ನೀರು ಸುರಿಯುತ್ತಿದ್ದ ಕಾರಣಕ್ಕೆ ಸುತ್ತಲಿನ ಮಣ್ಣು ಕೆಸರಿನಂತಾಗಿತ್ತು. ಸಿದ್ದನಿಗೆ ಮಲ ವಿಸರ್ಜನೆ ಕೂಡ ಕಷ್ಟವಾಗುತ್ತಿತ್ತು. ನಿತ್ರಾಣವಾಗಿರುವ ಸಿದ್ದನನ್ನು ಉಳಿಸಿಕೊಳ್ಳಲು ಒಂದು ಪ್ರಾಮಾಣಿಕ ಪ್ರಯತ್ನವಂತೂ ಕಾಣುತ್ತಿತ್ತು.[ಜೀವನ್ಮರಣ ಹೋರಾಟದಲ್ಲಿರುವ ಗಜರಾಜ ಸಿದ್ದನಿಗಾಗಿ ಪ್ರಾರ್ಥನೆ]

ಆರಣ್ಯ ಇಲಾಖೆಯು ವೈಲ್ಡ್ ಲೈಫ್ ಎಸ್ ಒಎಸ್ ಎಂಬ ಸಂಸ್ಥೆ ಸಹಕಾರದ ಜತೆಗೆ ಸಿದ್ದನ ಚಿಕಿತ್ಸೆ ನಡೆಸುತ್ತಿದೆ. ಈ ಸಿದ್ದ ಬನ್ನೇರುಘಟ್ಟದ ಕಾಡಾನೆ. ಇಪ್ಪತ್ತೈದರಿಂದ ಮೂವತ್ತು ವರ್ಷ ಇರಬಹುದು. ಇದಕ್ಕೆ ಬನ್ನೇರುಘಟ್ಟದ ಶಿಬಿರದ ಇತರ ಆನೆಗಳೊಂದಿಗೆ ಸ್ನೇಹ ಇತ್ತಂತೆ. ಅಲ್ಲಿ ಆ ಆನೆಗಳ ಜೊತೆಗೆ ಸಿದ್ದನಿಗೂ ಮುದ್ದೆ ನೀಡುತ್ತಿದ್ದರಂತೆ. ಅವರೆಲ್ಲ ಇವನಿಗೆ ಇಟ್ಟ ಹೆಸರು ಮುದ್ದೆ ಸಿದ್ದ.

ಆನೆಯೊಂದು ದಿನಕ್ಕೆ ನೂರು ಕೆ.ಜಿ. ಆಹಾರ ತೆಗೆದುಕೊಳ್ಳುತ್ತದೆ. ಮೂವತ್ತರಿಂದ ನಲವತ್ತು ಕಿಲೋಮೀಟರ್ ಸಂಚರಿಸುತ್ತದೆ. ಈ ಎರಡೂ ಸಿದ್ದನಿಂದ ಸಾಧ್ಯವಾಗುತ್ತಿಲ್ಲ.ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ, ಎರಡು ತಿಂಗಳ ಹಿಂದೆಯೇ ಡಿಎಫ್ ಒ ಅವರ ಜತೆ ಮಾತನಾಡಿದ್ದೇನೆ. ಕಾಡಾನೆ ಸಿದ್ದನ ಸ್ಥಿತಿ ಗಂಭೀರವಾಗಿದೆ ಎಂದು ಆಗಲೇ ಹೇಳಿದ್ದರು. ಆನೆ ಬದುಕುವುದು ಕಷ್ಟ. ಆದ್ದರಿಂದ ದಯಾಮರಣ ನೀಡಿದರೆ ಒಳ್ಳೆಯದುಎಂದು ಹೇಳಿದ್ದಾರೆ.

ಕಾಲು ಮುರಿಯಿತು

ಕಾಲು ಮುರಿಯಿತು

ಸಿದ್ದನ ಇಂದಿನ ಸ್ಥಿತಿಯ ಬಗ್ಗೆ ವಿವರಣೆ ನೀಡಿದ ಡಿಎಫ್ ಒ ಮಂಜುನಾಥ್, ಎರಡು ತಿಂಗಳ ಹಿಂದೆ ಸಿದ್ದ ಆಹಾರ ಹುಡುಕಿಕೊಂಡು ಬಂದಿದ್ದಾನೆ. ಆ ನಂತರ ವಾಪಸ್ ಹೋಗುವಾಗ ಆದ ಅನಾಹುತವಿದು. ಸುತ್ತಲೂ ಲೇಔಟ್ ಗಳು ಆಗಿವೆ. ಅಲ್ಲಿನ ಗುಂಡಿಯೊಂದರಲ್ಲಿ ಬಿದ್ದು ಕಾಲು ಮುರಿದು ಹೋಗಿದೆ ಎಂದರು.

ಅಪಾಯದ ಮುನ್ಸೂಚನೆ

ಅಪಾಯದ ಮುನ್ಸೂಚನೆ

ಯಾವುದೇ ಪ್ರಾಣಿಗೆ ಕಾಲು ಮುರಿಯುವುದು ದೊಡ್ಡ ಅನಾಹುತದ ಮುನ್ಸೂಚನೆ. ಯಾಕೆಂದರೆ ಅವುಗಳ ಆಹಾರ ಹುಡುಕುವ ಸಾಮರ್ಥ್ಯ ಅಲ್ಲಿಗೆ ಮುಗಿಯುತ್ತದೆ. ಆಹಾರ ಸಿಗದಿದ್ದರೆ ದೇಹಕ್ಕೆ ಶಕ್ತಿ ಹೇಗೆ ಸಿಗಲು ಸಾಧ್ಯ. ಅದರಲ್ಲೂ ಆನೆಯಂಥ ಪ್ರಾಣಿಗೆ. ಇಂಥ ಸಂದರ್ಭದಲ್ಲೇ ಇತರ ಮಾಂಸಾಹಾರಿ ಪ್ರಾಣಿಗಳಿಗೆ ಬಲಿಯಾಗುವ ಸಾಧ್ಯತೆಯೂ ಹೆಚ್ಚು.

ಸಮಿತಿ ರಚನೆ

ಸಮಿತಿ ರಚನೆ

ಇನ್ನು ಸಿದ್ದನ ವಿಚಾರಕ್ಕೆ ಬಂದರೆ, ಹಾಗೆ ಬಿದ್ದು ಗಾಯಗೊಂಡ ನಂತರ ಹಾಗೇ ಕುಂಟುತ್ತಲೇ ಅವರಳ್ಳಿ ಗ್ರಾಮದವರೆಗೆ ಬಂದಿದ್ದಾನೆ. ಆಗಿನಿಂದ ಅದಕ್ಕೆ ಅರಣ್ಯ ಇಲಾಖೆಯಿಂದಲೇ ಚಿಕಿತ್ಸೆ ನೀಡಲಾಗುತ್ತಿದೆ. ನೋವು ನಿವಾರಕ ಔಷಧ ಮತ್ತಿತರ ಔಷಧ ನೀಡಲಾಗುತ್ತಿದೆ. ಅರಣ್ಯ ಇಲಾಖೆಯು ಸಿದ್ದನ ಚಿಕಿತ್ಸೆಗಾಗಿಯೇ ಸಮಿತಿಯೊಂದನ್ನು ರಚಿಸಿದೆ. ಅದರಲ್ಲಿ ತಜ್ಞರು ಕೂಡ ಇದ್ದಾರೆ. ಗುವಾಹತಿಯಿಂದ ಡಾ.ಕುಶಾಲ್ ಶರ್ಮಾ, ಕೇರಳದಿಂದ ಡಾ.ಅರುಣ್ ಅವರು ಸಿದ್ದನ ಚಿಕಿತ್ಸೆಯಲ್ಲಿ ತೊಡಗಿದ್ದಾರೆ.

ಆಹಾರ ತಗೊಳ್ತಿಲ್ಲ

ಆಹಾರ ತಗೊಳ್ತಿಲ್ಲ

ಶಿಬಿರದಿಂದ ಆನೆಗಳನ್ನು ಕರೆಸಿ ಸಿದ್ದನನ್ನು ನಿಲ್ಲಿಸುವ ಯತ್ನ ಕೂಡ ಮಾಡಲಾಗಿದೆ. ಅದರೆ ಸಮಸ್ಯೆ ಆಗುತ್ತಿರುವುದು ಸಿದ್ದ ಆಹಾರ ತೆಗೆದುಕೊಳ್ಳುವ ಪ್ರಮಾಣದಲ್ಲಿ ಗಣನೀಯವಾಗಿ ಕಡಿಮೆ ಆಗಿರುವುದರಲ್ಲಿ.

ತೂಕ ಇಳಿಯುತ್ತದೆ

ತೂಕ ಇಳಿಯುತ್ತದೆ

ಸಿದ್ದನ ವಯಸ್ಸಿನ ಆನೆಗಳು ಸಾಮಾನ್ಯವಾಗಿ ಎಂಟು ಟನ್ ಇರುತ್ತವೆ. ಆದರೆ ಈತನ ತೂಕ ಐದರಿಂದ ಆರು ಟನ್ ಆಗಿದೆ. ಸದ್ಯಕ್ಕೇನೋ ಗ್ಲೂಕೋಸ್ ನೀಡಿ, ಸ್ಟಾರ್ಚ್ ನೀಡಲಾಗುತ್ತಿದೆ. ಆದರೆ ಸಿದ್ದನ ಸ್ಥಿತಿಯಲ್ಲಿ ಸಂಭ್ರಮ ಪಡುವಂಥ ಬದಲಾವಣೆ ಕಾಣುತ್ತಿಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Thosands of vistors throng Manchanabale to wish speedy recovery to the ailing elephant Sidda battling for Life. The elephant suffered a leg fracture, while roaming for food.
Please Wait while comments are loading...