ದೀಪಿಕಾಳಿಂದ ದಿ ಲಿವ್ ಲವ್ ಲಾಫ್ ಫೌಂಡೇಷನ್

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 13 : ಇಂದಿನ ಜೀವನ ಎಷ್ಟು ಕ್ಲಿಷ್ಟಕರವಾಗಿದೆಯೆಂದರೆ ಒತ್ತಡದಿಂದ ಬಳಲುವುದು, ಖಿನ್ನತೆಗೆ ಜಾರುವುದು, ಜೀವನವೇ ಬೇಡವೆನಿಸುವುದು ಅತ್ಯಂತ ಸಹಜವಾಗಿದೆ. ಅದರಲ್ಲೂ ಇಂದಿನ ಯುವಪೀಳಿಗೆ ಸಣ್ಣಪುಟ್ಟ ಕಾರಣಗಳಿಗೆಲ್ಲ ಮಾನಸಿಕ ಖಿನ್ನತೆಗೊಳಗಾಗುತ್ತಿರುವುದು ಕಳವಳಕಾರಿ ಸಂಗತಿ.

ಇದಕ್ಕೆ ಪರಿಹಾರವಿಲ್ಲವೆ? ಇಂದಿನ ಯುವಪೀಳಿಗೆಯನ್ನು ಮನೋವೇದನೆಯಿಂದ ಹೊರತರುವುದು ಹೇಗೆ? ಆತ್ಮಹತ್ಯೆ ಮಾಡಿಕೊಳ್ಳಬೇಕೆಂಬ ಮನೋಸ್ಥಿತಿಗೆ ಜಾರುವವರಲ್ಲಿ ಮರಳಿ ಜೀವನಪ್ರೀತಿ ಹುಟ್ಟಿಸುವುದು ಹೇಗೆ? ಒತ್ತಡಕ್ಕೊಳಗಾದವರಲ್ಲಿ ಆತ್ಮವಿಶ್ವಾಸ ತುಂಬಿ ಪ್ರೀತಿಯ ಸೆಲೆ ಉಕ್ಕಿಸುವುದು ಹೇಗೆ?

ಈ ಎಲ್ಲ ಸಮಸ್ಯೆಗಳಿಗೂ ಸೂಕ್ತ ಪರಿಹಾರವಿದ್ದೇ ಇದೆ. 'ಇನ್ನೇನು ಮುಗಿದೇ ಹೋಯಿತು' ಎಂಬ ಹಂತ ಮುಟ್ಟಿ, ಈ ಜಗತ್ತೇ ಬೇಡ ಎಂಬ ನಿರ್ಧಾರ ತಳೆದವರಲ್ಲಿಯೂ ಜೀವನಪ್ರೀತಿ ಉಕ್ಕಿಸಲು ಸಾಧ್ಯವಿದೆ ಎಂಬ ಧ್ಯೇಯ ಇಟ್ಟುಕೊಂಡು ಬೆಂಗಳೂರಿನಲ್ಲಿ ದಿ ಲಿವ್ ಲವ್ ಲಾಫ್ ಫೌಂಡೇಷನ್ (The Live Love Laugh Foundation) ಅನ್ನು ಗುರುವಾರ ಹುಟ್ಟುಹಾಕಲಾಗಿದೆ. [ಡಿವೈಎಸ್ಪಿ ಗಣಪತಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರೆ?]

The Live Love Laugh Foundation by Deepika Padukone

ಈ ಫೌಂಡೇಷನ್‌ನ ಸಂಸ್ಥಾಪಕರು ಬೆಂಗಳೂರಿನವರೇ ಆದ ಖ್ಯಾತ ಚಿತ್ರನಟಿ ದೀಪಿಕಾ ಪಡುಕೋಣೆ. ಚಿತ್ರರಂಗದಲ್ಲಿ ಉತ್ತುಂಗದಲ್ಲಿರುವಾಗಲೇ ಖುದ್ದು ವಿಪರೀತ ಖಿನ್ನತೆಗೆ ಜಾರಿ ಅದರಿಂದ ಯಶಸ್ವಿಯಾಗಿ ಹೊರಬಂದಿರುವ ದೀಪಿಕಾ ಪಡುಕೋಣೆ, ಖಿನ್ನತೆಗೊಳಗಾದವರ ಬಾಳಿಕೆ ಆಶಾಕಿರಣವಾಗಬೇಕೆಂಬ ಉದ್ದೇಶದಿಂದ ಈ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ.

"ವಿಪರೀತ ಖಿನ್ನತೆಗೊಳದಾದವರು, ಒತ್ತಡದಿಂದ ಬಳಲುತ್ತಿರುವವರು ತಮ್ಮ ಬಗ್ಗೆಯೇ ಹೆಚ್ಚು ಆಳವಾಗಿ ತಿಳಿದುಕೊಳ್ಳುವ ಅಗತ್ಯವಿದೆ. ಸಹಾಯವಿದೆ ಎಂದು ಅವರಿಗೆ ಮನವರಿಕೆಯಾಗಬೇಕು. ಈ ಕುರಿತು ಸಮಗ್ರ ಜ್ಞಾನ ನೀಡುವ, ವೃತ್ತಿನಿರತರೊಡನೆ ಸಂಪರ್ಕ ಸಾಧಿಸುವ ಮತ್ತು ಏಕಾಂಗಿಯಾಗಿರುವವರಲ್ಲಿಯೂ ಆತ್ಮೀಯತೆ ತುಂಬುವ ಸಂಸ್ಥೆಯೇ ದಿಎಲ್ಎಲ್ಎಲ್ ಫೌಂಡೇಷನ್" ಎಂಬ ಸಂದೇಶ ನೀಡಿದ್ದಾರೆ ದೀಪಿಕಾ ಪಡುಕೋಣೆ.


ಇಂದು ಆರಂಭಿಸಲಾಗಿರುವ ವೆಬ್ ಸೈಟಿನಲ್ಲಿ ಖಿನ್ನತೆ, ಒತ್ತಡದಿಂದ ಬಳಲಿಯೂ ಹೊರಬಂದಿರುವವರ ಸ್ಫೂರ್ತಿದಾಯಕ ಕಥಾನಕಗಳಿವೆ, ಮನೋವೈದ್ಯರ ಸಲಹೆಗಳು ಲಭ್ಯವಿವೆ, ಮಾನಸಿಕ ಖಿನ್ನತೆಯೆಂದರೇನು ಎಂಬ ಬಗ್ಗೆ ತಿಳಿವಳಿಕೆ ನೀಡುವ ಮಾಹಿತಿಯಿದೆ. ಯಾವುದು ಸರಿ, ಯಾವುದು ತಪ್ಪು ಎಂಬುದರ ಪರಾಮರ್ಶೆಗೆ ಚರ್ಚಾಕೂಟವೂ ಇದೆ.

ಸದ್ಯಕ್ಕೆ ಈ ವೆಬ್ ತಾಣ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತ್ರ ಲಭ್ಯವಿದೆ, ಕನ್ನಡದಲ್ಲಿ ಲಭ್ಯವಿಲ್ಲ! ಬೆಂಗಳೂರಿನವರಾದರೂ ಕನ್ನಡವನ್ನು ದೀಪಿಕಾ ಪಡುಕೋಣೆ ಏಕೆ ಕಡೆಗಣಿಸಿದ್ದಾರೋ?

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bollywood actress and Bengaluru girl Deepika Padukone has launched a wabsite, and an organization The Live Love Laugh Foundation in Bengaluru, on 13th October, to help people who are suffering from depression, pressure, anxiety.
Please Wait while comments are loading...