ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಸ್ರೋದಲ್ಲಿ ಕನಸಿನ ಲೋಕ ಕಂಡ ಒಡಿಶಾದ ವಿದ್ಯಾರ್ಥಿಗಳು

By Mahesh
|
Google Oneindia Kannada News

ಬೆಂಗಳೂರು, ಮೇ 16: ಒಡಿಶಾ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಂಗಸಂಸ್ಥೆಯಾದ ಭುವನೇಶ್ವರದ ಪಥನಿ ಸಮಂತ ಪ್ಲಾನಿಟೋರಿಯಂನ ಸಹಯೋಗದಲ್ಲಿ ಟಾಟಾ ಸ್ಟೀಲ್ ಸಂಸ್ಥೆ ಯುವ ಮನಸುಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಒಡಿಶಾದ 20 ಪ್ರೌಢಶಾಲೆ ಮಕ್ಕಳನ್ನು ಬೆಂಗಳೂರಿನಲ್ಲಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಗೆ ಕರೆ ತಂದಿತ್ತು.

2015-16 ನೇ ಸಾಲಿನಲ್ಲಿ ಟಾಟಾ ಸ್ಟೀಲ್ ಸಂಸ್ಥೆ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಯಂಗ್ ಆಸ್ಟ್ರೋನೊಮರ್ ಟ್ಯಾಲೆಂಟ್ ಸರ್ಚ್(ವೈಎಟಿಎಸ್) ಸ್ಪರ್ಧೆಯಲ್ಲಿ ವಿಜೇತರಾದ ಈ 20 ವಿದ್ಯಾರ್ಥಿಗಳು ಇಸ್ರೋಗೆ ಭೇಟಿ ನೀಡುವ ಒಂದು ಅತ್ಯಮೂಲ್ಯವಾದ ಅವಕಾಶವನ್ನು ಪಡೆದುಕೊಂಡರು. ಇಸ್ರೋದಲ್ಲಿ ನಡೆಯುತ್ತಿರುವ ಭಾರತೀಯ ಬಾಹ್ಯಾಕಾಶ ಕ್ಷೇತ್ರದಲ್ಲಿ ಆಗುತ್ತಿರುವ ವಿದ್ಯಮಾನಗಳು ಮತ್ತು ಬಾಹ್ಯಾಕಾಶ ಸಂಶೋಧನೆಗಳ ಬಗ್ಗೆ ವಿದ್ಯಾರ್ಥಿಗಳು ಇಸ್ರೋದಲ್ಲಿ ಮಾಹಿತಿ ಪಡೆದುಕೊಂಡರು.

ಟಾಟಾ ಸ್ಟೀಲ್ ಅಧಿಕಾರಿಗಳನ್ನೊಳಗೊಂಡ ಪಥನಿ ಸಮಂತ ಪ್ಲಾನಿಟೋರಿಯಂನ ಉಪ ನಿರ್ದೇಶಕ ಡಾ. ಸುಭೇಂದು ಪಟ್ನಾಯಕ್ ಅವರ ನೇತೃತ್ವದ ತಂಡದ ಪ್ರವಾಸಕ್ಕೆ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಹಸಿರು ನಿಶಾನೆ ತೋರಿದರು. ವೈಎಟಿಎಸ್ ನ ವಿಜೇತ 20 ವಿದ್ಯಾರ್ಥಿಗಳು, ಮಾರ್ಗದರ್ಶಿ ಶಿಕ್ಷಕರು ಸೇರಿದಂತೆ ಒಟ್ಟು 40 ಸದಸ್ಯರ ತಂಡ ಇದಾಗಿತ್ತು. ದೇಶದಲ್ಲಿ ಉಪಗ್ರಹ ತಂತ್ರಜ್ಞಾನ ಅಭಿವೃದ್ಧಿ ಮತ್ತು ಉಡಾವಣೆಗೆ ಸಂಬಂಧಿಸಿದಂತೆ ನಿರಂತರವಾಗಿ ಸಂಶೋಧನೆ ನಡೆಸುತ್ತಿರುವ ಇಸ್ರೋದ ಸ್ಯಾಟಿಲೈಟ್ ಕೇಂದ್ರಕ್ಕೆ ಈ ತಂಡ ಭೇಟಿ ನೀಡಿ ಉಪಗ್ರಹಗಳಿಗೆ ಸಂಬಂಧಿಸಿದ ಹತ್ತು ಹಲವಾರು ಮಾಹಿತಿಗಳನ್ನು ಕಲೆ ಹಾಕಿತು.

Tata Steel Pathani Samanth Planetarium ISAC, Bengaluru

ಇಸ್ರೋ ಸ್ಯಾಟಿಲೈಟ್ ಸೆಂಟರ್‍ನ ಸ್ಮಾಲ್ ಸ್ಯಾಟಿಲೈಟ್ ಸಿಸ್ಟಮ್ಸ್(ಎಸ್‍ಎಸ್‍ಎಸ್)ನ ಯೋಜನಾ ನಿರ್ದೇಶಕ ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ವಿಜ್ಞಾನಿ ಅಮರೇಶ್ವರ್ ಖೇನೆಡ್ ಅವರು, ಬಾಹ್ಯಾಕಾಶ ವಿಜ್ಞಾನದ ಬಗ್ಗೆ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿಕೊಡುವ ನಿಟ್ಟಿನಲ್ಲಿ ಇಂತಹ ಪ್ರವಾಸ ಏರ್ಪಡಿಸಿರುವ ಟಾಟಾ ಸ್ಟೀಲ್ ಮತ್ತು ಪಥನಿ ಸಮಂತ ಪ್ಲಾನಿಟೋರಿಯಂನ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

ಐಸಾಕ್‍ನ ಹಿರಿಯ ವಿಜ್ಞಾನಿ ಎಚ್.ಎಲ್.ಶ್ರೀನಿವಾಸ ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ, ದೇಶದ ಸ್ಯಾಟಿಲೈಟ್ ಸಿಸ್ಟಮ್ ಯಾವ ರೀತಿ ಅಭಿವೃದ್ಧಿ ಹೊಂದುತ್ತಿದೆ. ಯಾವ ರೀತಿಯ ಸಂಶೋಧನೆಗಳು ಇಲ್ಲಿ ನಡೆಯುತ್ತಿವೆ ಎಂಬುದರ ಬಗ್ಗೆ ಸವಿವರವಾದ ಮಾಹಿತಿಗಳನ್ನು ನೀಡಿದರು.

ವಿದ್ಯಾರ್ಥಿಗಳು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‍ನ ಪಾರಂಪರಿಕ ಕೇಂದ್ರ ಮತ್ತು ಏರೋಸ್ಪೇಸ್ ಮ್ಯೂಸಿಯಂಗೂ ಭೇಟಿ ನೀಡಿದ್ದರು. ವೈಮಾನಿಕ ಕ್ಷೇತ್ರ ಬೆಳೆದು ಬಂದ ಬಗ್ಗೆ ಇರುವ ಛಾಯಾಚಿತ್ರ ಪ್ರದರ್ಶನ ವೀಕ್ಷಿಸಿ, ಅಪರೂಪದ ವಿಮಾನಗಳು, ತರೇಹಾವಾರಿ ವಿಮಾನಗಳನ್ನು ಕಂಡು ಬೆರಗಾದರು.

ಮೇ 10 ರಿಂದ 13 ರವರೆಗಿನ ನಾಲ್ಕು ದಿನಗಳ ಈ ಪ್ರವಾಸದಲ್ಲಿ ವಿದ್ಯಾರ್ಥಿಗಳು ವಿಶ್ವೇಶ್ವರಯ್ಯ ಇಂಡಸ್ಟ್ರಿಯಲ್ ಅಂಡ್ ಟೆಕ್ನಾಲಜಿಕಲ್ ಮ್ಯೂಸಿಯಂಗೆ ಭೇಟಿ ನೀಡಿ ಅಲ್ಲಿ ಪ್ರದರ್ಶಿಸಿರುವ 1903 ರಲ್ಲಿ ರೈಟ್ ಸೋದರರು ತಯಾರು ಮಾಡಿದ್ದ ವಿಮಾನದ ಪ್ರತಿಕೃತಿ ಮತ್ತು ಇನ್ನಿತರೆ ವೈಜ್ಞಾನಿಕ ಅಚ್ಚರಿಗಳನ್ನು ಕಂಡು ಅಬ್ಬಾ ನಮ್ಮ ವೈಜ್ಞಾನಿಕ ಕ್ಷೇತ್ರ ಎಷ್ಟು ಮುಂದುವರೆದಿದೆಯಲ್ಲಾ ಎಂದು ಮೂಗಿನ ಮೇಲೆ ಬೆರಳಿಟ್ಟರು.

ಇದಿಷ್ಟೇ ಅಲ್ಲದೇ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕೀಟಶಾಸ್ತ್ರ ವಿಭಾಗಕ್ಕೂ ಭೇಟಿ ನೀಡಿ, ಅಲ್ಲಿನ ಸಂಶೋಧಕರಾದ ಪ್ರೊ.ಕೆ.ಚಂದ್ರಶೇಖರ ಮತ್ತು ಪ್ರೊ.ವಿ.ವಿ. ಬೆಳವಾಡಿ ಅವರೊಂದಿಗೆ ಕೀಟಗಳ ಬಗ್ಗೆ ಮಾಹಿತಿ ಪಡೆದರು. ನಂತರ ಜವಾಹರಲಾಲ್ ನೆಹರೂ ಪ್ಲಾನಿಟೋರಿಯಂನಲ್ಲಿ ಅಲ್ಲಿನ ಜಂಟಿ ನಿರ್ದೇಶಕ ಪ್ರಮೋದ್ ಜಿ. ಗಲಗಲಿ ಮತ್ತು ಹಿರಿಯ ವಿಜ್ಞಾನಿ ಎಚ್.ಆರ್.ಮಧುಸೂದನ್ ಅವರು, ಹಲವಾರು ಅತ್ಯಂತ ಸೂಕ್ಷ್ಮ ಟೆಲಿಸ್ಕೋಪ್‍ಗಳ ಕಾರ್ಯನಿರ್ವಹಣೆ ಮತ್ತು ಕೆಲವು ವೈಜ್ಞಾನಿಕ ಪ್ರಯೋಗಗಳ ಪ್ರಾತ್ಯಕ್ಷಿಕೆ ನೀಡಿ ವಿದ್ಯಾರ್ಥಿಗಳನ್ನು ವೈಜ್ಞಾನಿಕ ಲೋಕಕ್ಕೆ ಕೊಂಡೊಯ್ದರು.

ಒಡಿಶಾದ ಎಂಟು ವಲಯಗಳಲ್ಲಿ ನಡೆದ ಮೂರು ಸುತ್ತಿನ ಸ್ಪರ್ಧೆಯಲ್ಲಿ 8 ರಿಂದ 10 ನೇ ತರಗತಿಯ ಸುಮಾರು 800 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಈ ಪೈಕಿ 20 ವೈಎಟಿಎಸ್ ವಿಜೇತರನ್ನು ಅಂತಿಮವಾಗಿ ಆಯ್ಕೆ ಮಾಡಲಾಯಿತು. ಒಡಿಶಾದ ಖ್ಯಾತ ಖಗೋಳಶಾಸ್ತ್ರಜ್ಞರಾಗಿದ್ದ ಪಥನಿ ಸಮಂತ ಅವರು ಬಾಹ್ಯಾಕಾಶ ಕ್ಷೇತ್ರಕ್ಕೆ ನೀಡಿರುವ ಕೊಡುಗೆಗಳನ್ನು ಹೆಚ್ಚು ಹೆಚ್ಚು ಜನಪ್ರಿಯಗೊಳಿಸುವತ್ತ ಮುನ್ನಡೆಯುತ್ತಿರುವ ಪಥನಿ ಸಮಂತ ಪ್ಲಾನಿಟೋರಿಯಂ ಸಹಯೋಗದಲ್ಲಿ ಟಾಟಾ ಸ್ಟೀಲ್ 2007 ರಲ್ಲಿ ಈ ವೈಎಟಿಎಸ್ ಸ್ಪರ್ಧೆಯನ್ನು ಏರ್ಪಡಿಸುತ್ತಾ ಬರುತ್ತಿದೆ.

ಈ ಮೂಲಕ ಖಗೋಳಶಾಸ್ತ್ರದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಯುವ ಪೀಳಿಗೆಗೆ ಉತ್ತೇಜನ ನೀಡಿ ಅವರು ಖಗೋಳ ವಿಜ್ಞಾನ ಮತ್ತು ಬಾಹ್ಯಾಕಾಶ ಕ್ಷೇತ್ರದ ಅಭಿವೃದ್ಧಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತೆ ಮಾಡುವ ಉದ್ದೇಶದಿಂದ ವೈಎಟಿಎಸ್ ಅನ್ನು ನಿರಂತರವಾಗಿ ಆಯೋಜಿಸುತ್ತಾ ಬರಲಾಗುತ್ತಿದೆ.

English summary
Tata Steel in association with Pathani Samanta Planetarium, Bhubaneswar, an entity of Science and Technology Department of Government of Odisha, organized an exposure visit of 20 high school students of Odisha to the Satellite Centre of Indian Space Research Organisation (ISAC) in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X