ಸ್ಟೀಲ್ ಫ್ಲೈಓವರ್ ವಿರೋಧಿಸಿ ಜಾರ್ಜ್‌ಗೆ ಅನಂತ್ ಪತ್ರ

Posted By:
Subscribe to Oneindia Kannada

ಸನ್ಮಾನ್ಯ ಶ್ರೀ ಕೆಜೆ ಜಾರ್ಜ್‌ರವರೆ,

ಬೆಂಗಳೂರಿನ ಬಸವೇಶ್ವರ ವೃತ್ತದಿಂದ ಹೆಬ್ಬಾಳದವರೆಗೆ ಪ್ರಸ್ತಾವಿತ ಮೇಲು ಸೇತುವೆ (ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ) ಯೋಜನೆಯ ಕುರಿತಂತೆ ದಿನಾಂಕ 25ನೇ ಅಕ್ಟೋಬರ್, 2016ರಂದು ಕರೆಯಲಾಗಿರುವ ಬೆಂಗಳೂರಿನ ಜನಪ್ರತಿನಿಧಿಗಳ ಸಭೆಯ ತಿಳುವಳಿಕೆ ಪತ್ರ ತಲುಪಿದೆ.

ಈಗಾಗಲೇ ತಮಗೆ ತಿಳಿದಿರುವಂತೆ ಬೆಂಗಳೂರಿನ ನಾಗರಿಕರು, ಸಂಘ-ಸಂಸ್ಥೆಗಳು ಪ್ರಸ್ತಾವಿತ ಸ್ಟೀಲ್ ಬ್ರಿಡ್ಜ್ ಯೋಜನೆಯ ಬಗ್ಗೆ ತಮ್ಮ ಆಕ್ಷೇಪಣೆಯನ್ನು ಎತ್ತಿದ್ದಾರೆ. ಸ್ಟೀಲ್ ಬ್ರಿಡ್ಜ್ ನಿರ್ಮಾಣದ ಯೋಜನೆಯ ವಿವರಗಳನ್ನು ಸಾರ್ವಜನಿಕರಿಗೆ ಕಂತುಗಳಲ್ಲಿ ನೀಡಿರುವುದು ಸಾರ್ವಜನಿಕರಲ್ಲಿ ಯೋಜನೆಯ ಬಗ್ಗೆ ಮಾಹಿತಿಗಿಂತ ಹೆಚ್ಚಾಗಿ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಸಾರ್ವಜನಿಕರು ಮತ್ತು ಸಂಘ ಸಂಸ್ಥೆಗಳೊಂದಿಗೆ ಯಾವುದೇ ಸಮಾಲೋಚನೆ ನಡೆಸಿಲ್ಲ ಮತ್ತು ಯೋಜನೆಯ ಸಂಬಂಧಿತ ಸಮರ್ಪಕ ವಿವರಗಳನ್ನು ಸಾರ್ವಜನಿಕರಿಗೆ ತಿಳಿಸಿಲ್ಲ ಎಂದು ಸ್ಟೀಲ್ ಬ್ರಿಡ್ಜ್ ಯೋಜನೆಯ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸುತ್ತಿರುವ ಸಾರ್ವಜನಿಕರು ಮತ್ತು ಸಂಘ-ಸಂಸ್ಥೆಗಳು ತಿಳಿಸಿವೆ. [ಉಕ್ಕಿನ ಸೇತುವೆಗೂ ಟೋಲ್]

Steel Flyover : Letter by Ananth Kumar to KJ George

ಈ ಯೋಜನೆಗೆ ನಗರದ 812 ಮರಗಳನ್ನು ಕತ್ತರಿಸಬೇಕಾಗಿದೆ, ಪರ್ಯಾಯವಾಗಿ ಬಿಡಿಎ 60,000 ಅಲಂಕಾರಿಕ ಗಿಡಗಳನ್ನು ನೆಡುವ ಯೋಜನೆ ಹಾಕಿಕೊಂಡಿದೆ! ಸಾರ್ವಜನಿಕರು ಮತ್ತು ತಜ್ಞರುಗಳ ತೀವ್ರ ವಿರೋಧದ ನಡುವೆಯೂ ಸ್ಟೀಲ್‌ಬ್ರಿಡ್ಜ್ ನಿರ್ಮಾಣಕ್ಕೆ ಸರ್ಕಾರ ತೋರುತ್ತಿರುವ ಆತುರ ಮತ್ತು ಅದರ ಒಟ್ಟು ವೆಚ್ಚದ ತೀವ್ರ ಹೆಚ್ಚಳ ಮತ್ತು ಸಾರ್ವಜನಿಕರಿಗೆ ಈ ಬಗ್ಗೆ ಮಾಹಿತಿ ನೀಡದಿರುವುದು ಸಾರ್ವಜನಿಕರು ಪ್ರತಿಭಟನೆಯ ಹಾದಿಯನ್ನು ಹಿಡಿಯುವಂತೆ ಮಾಡಿದೆ.

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಗರದ ವಿವಿಧ ಭಾಗಗಳಿಂದ ಪರ್ಯಾಯ ಸಾರಿಗೆ ವ್ಯವಸ್ಥೆಯನ್ನು ಮೆಟ್ರೋ ಯೋಜನೆ ಸೇರಿದಂತೆ ರೂಪಿಸುವತ್ತ ಗಮನಹರಿಸಬೇಕಾಗಿದೆ. ಬೆಂಗಳೂರಿನ ಕೇಂದ್ರ ಭಾಗ ಮತ್ತು ಇತರ ಕಡೆಗಳಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಸಮಗ್ರವಾಗಿ ರೈಲು, ಬಸ್ ಮತ್ತು ಮೆಟ್ರೋ ಸಂಚಾರಗಳ ಸಮರ್ಪಕ ಜಾಲ ನಿರ್ಮಾಣ ಸೇರಿದಂತೆ ಮೂಲಸೌಕರ್ಯಗಳ ಅಭಿವೃದ್ಧಿಯತ್ತ ಗಮನಹರಿಸಬೇಕಾಗಿದೆ.

ರಾಜ್ಯ ಸರ್ಕಾರ ಸಾರ್ವಜನಿಕರೊಂದಿಗೆ ವಿಸ್ತೃತ ಸಮಾಲೋಚನೆಯನ್ನು ನಡೆಸಬೇಕು ಮತ್ತು ಇದಕ್ಕೂ ಮುನ್ನ ಯೋಜನೆಯ ಬಗ್ಗೆ ಸಂಪೂರ್ಣ ವಿವರಗಳನ್ನು ಮುಂಚಿತವಾಗಿ ನೀಡಬೇಕು. ಸಾರ್ವಜನಿಕರಿಗೆ ಮುಂಚಿತವಾಗಿ ಯೋಜನೆಯ ಸಂಬಂಧಿತ ವಿವರಗಳನ್ನು ನೀಡದೆ ಸಮಾಲೋಚನೆ ನಡೆಸಿದರೆ ಅದಕ್ಕೆ ಯಾವುದೇ ಅರ್ಥವಿರುವುದಿಲ್ಲ.

ನಾವು ಈಗಾಗಲೇ ಹವಾಮಾನದ ಬದಲಾವಣೆಯ ಪರಿಣಾಮಗಳನ್ನು ಅನುಭವಿಸುತ್ತಿರುವುದರಿಂದ ಸರ್ಕಾರದ ಕ್ರಮಗಳು ಪರಿಸರ ಸ್ನೇಹಿಯಾಗಿರಬೇಕು. ಪರಿಸರದ ಮೇಲೆ ಉಂಟಾಗುವ ವ್ಯತಿರಿಕ್ತ ಪರಿಣಾಮಗಳ ಬಗ್ಗೆ ಯಾವುದೇ ಅಧ್ಯಯನ ನಡೆಸದೆ ಯೋಜನೆಯನ್ನು ರೂಪಿಸುತ್ತಿರುವುದು ಈ ಯೋಜನೆಯ ಕೊರತೆ.

ಸಾರ್ವಜನಿಕರು ಹಾಗು ಸಂಘಸಂಸ್ಥೆಗಳೊಂದಿಗೆ ವಿಸ್ತೃತವಾಗಿ ಈ ಯೋಜನೆಯ ಬಗ್ಗೆ ಚರ್ಚಿಸದೆ ಹಾಗೂ ಯೋಜನೆಯ ಬಗ್ಗೆ ಸರಿಯಾದ ಮಾಹಿತಿ ನೀಡದೆ ಮತ್ತು ಪರಿಸರದ ಮೇಲೆ ಉಂಟಾಗುವ ವ್ಯತಿರಿಕ್ತ ಪರಿಣಾಮಗಳ ಬಗ್ಗೆ ಸರಿಯಾಗಿ ಅಧ್ಯಯನ ನಡೆಸದೆ ಈ ಯೋಜನೆಯನ್ನು ಮುಂದುವರೆಸಬಾರದೆಂದು ನಾನು ಸರ್ಕಾರವನ್ನು ಆಗ್ರಹಿಸುತ್ತೇನೆ.

ವಂದನೆಗಳೊಂದಿಗೆ,

ತಮ್ಮ ವಿಶ್ವಾಸಿ

ಅನಂತ್ ಕುಮಾರ್, ಕೇಂದ್ರ ಸಚಿವ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Ananth Kumar, Union minister of Chemicals and Fertilizers, who represents Bengaluru South Lok Sabha constituency, has written a letter to KJ George, minister for Bengaluru Development and Town Planning pertaining to proposed Steel Flyover in Bengaluru.
Please Wait while comments are loading...