ಸ್ಟೀಲ್ ಫ್ಲೈಓವರ್ ಬೇಡ, ರಾಹುಲ್ ಗಾಂಧಿಗೆ ಎಎಪಿ ಪತ್ರ

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 28: ಬೆಂಗಳೂರಿನ ಹೃದಯಭಾಗದಲ್ಲಿ ಕರ್ನಾಟಕ ಸರಕಾರ ಸುಮಾರು ರೂ.2,000 ಕೋಟಿ ವೆಚ್ಚದಲ್ಲಿ ಕಟ್ಟಲು ಉದ್ದೇಶಿಸಿರುವ ಹುಚ್ಚುತನದ ಉಕ್ಕಿನ ಮೇಲ್ಸೇತುವೆ ಕಾಮಗಾರಿಗೆ ತಡೆ ಒಡ್ಡಲು ಆಮ್ ಆದ್ಮಿ ಪಕ್ಷ ಯತ್ನಿಸುತ್ತಿದ್ದು, ಈ ಬಗ್ಗೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದಿದೆ.
ಗೆ:

ಶ್ರೀಯುತ ರಾಹುಲ್ ಗಾಂಧಿ
ಉಪಾಧ್ಯಕ್ಷರು,
ಇಂಡಿಯನ್ ನ್ಯಾಷನಲ್ ಕಾಂಗ್ರೆಸ್,
ನಂ.12, ತುಘಲಕ್ ಲೇನ್,
ನವದೆಹಲಿ.

ಶ್ರೀಯುತ ಗಾಂಧಿಯವರೆ,

ಬೆಂಗಳೂರಿನ ಹೃದಯಭಾಗದಲ್ಲಿ ಕರ್ನಾಟಕ ಸರಕಾರ ಸುಮಾರು ರೂ.2,000 ಕೋಟಿ ವೆಚ್ಚದಲ್ಲಿ ಕಟ್ಟಲು ಉದ್ದೇಶಿಸಿರುವ ಹುಚ್ಚುತನದ ಉಕ್ಕಿನ ಮೇಲ್ಸೇತುವೆಗೆ ಜನರಿಂದ ವ್ಯಕ್ತವಾಗುತ್ತಿರುವ ಬ್ರಹತ್ ಪ್ರತಿಭಟನೆಯ ಬಗ್ಗೆ ತಮಗೆ ಈವರೆಗೆ ತಿಳಿದಿರಬಹುದು.

ಮೊದಲಿಗೆ ಸುಮಾರು ರೂ.1,300 ಕೋಟಿ ತಗಲಬಹುದು ಎಂದು ಅಂದಾಜು ಮಾಡಿದ್ದ ಸೇತುವೆ, ನಿರ್ಮಾಣ ಕಾರ್ಯ ಪ್ರಾರಂಭವಾಗುವ ಮುನ್ನವೇ, ರೂ.1,800 ಕೋಟಿ ದಾಟಿದೆ ಮತ್ತು ಈಗಾಗಲೇ ರೂ.2,100 ಕೋಟಿ ಎಂದು ಕೇಳಿಬರುತ್ತಿದೆ.

ಈ ಯೋಜನೆಯಲ್ಲಿ ಇದುವರೆಗೆ ಆಗಿರುವ ಅನೇಕ ಕಾನೂನುಗಳ ಉಲ್ಲಂಘನೆಗಳಿಂದ ರೊಚ್ಚಿಗೆದ್ದು ಪ್ರತಿಭಟಿಸಲು ಜನರು ರಸ್ತೆಗಿಳಿಯತೊಡಗಿದ್ದಾರೆ. ಶಾಸ್ತ್ರಕ್ಕೆನಡೆಸಲಾಗಿದೆ ಎನ್ನಲಾದ ಎರಡು ದಿನದ ಆನ್-ಲೈನ್ ಜನಾಭಿಪ್ರಾಯ ಸಂಗ್ರಹದಲ್ಲಿ 229 ಜನರ ಪೈಕಿ 73% ಜನ ಒಪ್ಪಿದ್ದಾರೆ ಎನ್ನುವ ಕರ್ನಾಟಕ ಸರಕಾರಕ್ಕೆ, 10,000ಕ್ಕೂ ಹೆಚ್ಚು ಜನ 'ಉಕ್ಕಿನ ಸೇತುವೆ ಬೇಡ' ಎಂದು ಮಾಡಿದ ಮಾನವ ಸರಪಳಿ ಮತ್ತು 50,000ಕ್ಕೂ ಹೆಚ್ಚು ಜನ ಪಾಲ್ಗೊಂಡು "ಬೇಡ" ಎಂದು ಹೇಳಿದ ಸಮೀಕ್ಷೆ, ಏಕೆ ಕಣ್ಣಿಗೆ ಕಾಣುತ್ತಿಲ್ಲ.

AAP-Karnataka State Convener writes letter to AICC Vice President

ಈ ಯೋಜನೆಯನ್ನು ಮುಂದುವರೆಸಲು ರಾಜ್ಯ ಸರಕಾರ ತೋರುತ್ತಿರುವ ಉತ್ಸಾಹ ನೋಡಿದರೆ ದೆಹಲಿಯಲ್ಲಿ ಕಾಂಗ್ರೆಸ್ ಸರಕಾರದ ಕಾಮನ್ ವೆಲ್ತ್ ಕ್ರೀಡಾಕೂಟದ ಕಾಮಗಾರಿಯ ನೆನೆಪು ಮರುಕಳಿಸುತ್ತದೆ. ಅದರೊಂದಿಗೆ ನಿಮ್ಮ ಸರಕಾರ ಅಂದು ತೋರಿದ ಅಸಡ್ಡೆತನ ಮತ್ತು ಅದಕ್ಕೆ ಪ್ರತ್ಯುತ್ತರವಾಗಿ ಸಿಡಿದೆದ್ದ ಮತದಾರರ ಉತ್ತರವೂ ಗೋಚರಿಸುತ್ತದೆ.

ಇಲ್ಲೂ ಅದೇ ಪರಿಣಾಮ ನಿಮ್ಮನ್ನು ಎದುರು ನೋಡುತ್ತಿದೆ. ಆದರೆ ಅಲ್ಲಿಯವರೆಗೆ ನಾವು ಈ ದುರ್ನೀತಿಯ ಕೆಲಸವನ್ನು ನೋಡುತ್ತಾ,ಕೈಚೆಲ್ಲಿ ಕುಳಿತಿರಲು ಸಾಧ್ಯವಿಲ್ಲ.

ಜನಸಾಮಾನ್ಯರ ಅನಿಸಿಕೆಯಂತೆ ಹಾಗೂ ಕಾಂಗ್ರೆಸ್ ಅಧಿಕಾರದಲ್ಲಿಇರುವ ದೊಡ್ಡ ರಾಜ್ಯಗಳ ಪೈಕಿ ಈಗ ಕರ್ನಾಟಕವೊಂದೇ ಉಳಿದಿರುವುದರಿಂದ, ಉತ್ತರ ಪ್ರದೇಶ ಮತ್ತಿತರ ರಾಜ್ಯಗಳಲ್ಲಿ ಮುಂಬರುವ ಚುನಾವಣೆಗೆ ಸ್ಪರ್ಧಿಸಲು ಈ ಯೋಜನೆಯಿಂದ ಸಾಧ್ಯವಾದಷ್ಟು ಹಣ ಬಾಚುವ ಪ್ರಯತ್ನವೆಂದು ಕೇಳಿ ಬರುತ್ತಿದ್ದು, ಇದೊಂದು ಅನಿವಾರ್ಯ ಆಯ್ಕೆಯೆಂಬಂತೆ ಗೋಚರಿಸುತ್ತಿದೆ.

ಕಾಳಜಿಯುಳ್ಳ ನಾಗರಿಕ ಮತ್ತು ಕರ್ನಾಟಕದಲ್ಲಿ ವಿರೋಧ ಪಕ್ಷದ ಸಂಚಾಲಕನಾಗಿ, ನಿಮ್ಮ ಪಕ್ಷದ ಜನಾನುರಾಗದ ಕ್ಷೀಣತೆಯ ದುಷ್ಪರಿಣಾಮವನ್ನು ನಾವೇಕೆ ಭರಿಸಬೇಕು ಎಂಬದಕ್ಕೆ ಕಾರಣ ತಿಳಿಯುತ್ತಿಲ್ಲ. ಆದ್ದರಿಂದ ತಾವು ಕೂಡಲೇ ಕೆಳಕಂಡ ಕ್ರಮ ತೆಗೆದುಕೊಳ್ಳಬೇಕೆಂದು ಕೋರುತ್ತೇವೆ:

*ಬೇರೆ ರಾಜ್ಯಗಳ ರಾಜಕೀಯ ಅನಿವಾರ್ಯತೆಗಾಗಿ ಕರ್ನಾಟಕದ ರಾಜ್ಯ ಬೊಕ್ಕಸ ಬರಿದಾಗಿಸಬೇಡಿ.

· ಕಳೆದ ಬಾರಿ ನಿಮಗೆ ಮತ ನೀಡಿದ ಉದ್ದೇಶವಾದ ಒಳ್ಳೆಯ ಆಡಳಿತದ ಮೇಲೆ ನಿಮ್ಮ ಗಮನವನ್ನುಕೇಂದ್ರೀಕರಿಸಿ.

· ರಾಜ್ಯಕ್ಕೆ ಒಳ್ಳೆಯ ಕೆಲಸ ಮಾಡಲು ಸಾಧ್ಯವಾಗದಿದ್ದಲ್ಲಿ, ಕೆಟ್ಟದ್ದನ್ನು ಮಾಡಬೇಡಿ, ಮುಂಬರುವ ಸರಕಾರ ನಿಮ್ಮ ತಪ್ಪುಗಳ ಭಾರಹೊರುವಂತೆ ಮಾಡಬೇಡಿ.

ಪ್ರಜಾಪ್ರಭುತ್ವ ಎನ್ನುವುದು ಅಧಿಕಾರದ ಆಟವಲ್ಲ. ಇದು ಮತದಾರರ ಮತ್ತು ಜನಪ್ರತಿನಿಧಿಗಳ ನಡುವಣ ಒಪ್ಪಂದ.

ಇತ್ತೀಚೆಗೆ ಕಂಡುಬರುತ್ತಿರುವಂತೆ ಕಾಂಗ್ರೆಸ್ ಸರಕಾರ ಹೊರಟಿರುವ ಕೆಲಸಗಳು ಈ ಗೌರವಯುತ ಒಪ್ಪಂದಕ್ಕೆ ಸಲ್ಲಿಸುತ್ತಿರುವ ಅಗೌರವ ಮತ್ತು ರಾಜ್ಯದ ಜನತೆಗೆ ಮಾಡುತ್ತಿರುವ ಅವಮಾನ. ಇದನ್ನು ಕೂಡಲೇ ನಿಲ್ಲಿಸಿ.

ಪೃಥ್ವಿ ರೆಡ್ಡಿ
ರಾಜ್ಯ ಸಂಚಾಲಕರು ಆಮ್ ಆದ್ಮಿ ಪಾರ್ಟಿ - ಕರ್ನಾಟಕ

(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
constructing a Steel Bridge from Chalukya Circle to Hebbal which is pure waste of public money. Concerned about such mismanage of Public Money, AAP Karnataka State Convener Prithvi Reddy has written a letter to AICC Vice-President Rahul Gandhi demanding him to re-direct the Congress Government to stop such nuisance.
Please Wait while comments are loading...