ಟ್ರಾಫಿಕ್ ನಿಯಮ ಉಲ್ಲಂಘಿಸುವ ಪಡ್ಡೆಗಳ ಹಿಡೀರಿ ನೋಡೋಣ!

Posted By:
Subscribe to Oneindia Kannada

ಬೆಂಗಳೂರು, ಫೆಬ್ರವರಿ 13 : ಸೌತ್ ಎಂಡ್ ಸರ್ಕಲ್ ಬಳಿಯಿರುವ ಡಾ. ರಾಜ್ ಕುಮಾರ್ ಪುತ್ಥಳಿಯ ನೆತ್ತಿಯ ಬಳಿಯಿರುವ ಹೈಟೆಕ್ ಕ್ಯಾಮೆರಾ ಕೆಲಸ ಮಾಡುತ್ತಿದೆಯಾ? ಕೆಲಸ ಮಾಡುತ್ತಿದೆಯೆಂದಾದರೆ, ಟ್ರಾಫಿಕ್ ಪೊಲೀಸರು ಇಲ್ಲಿ ನಿಮಯಗಳನ್ನು ಉಲ್ಲಂಘಿಸುವವರ ಮೇಲೆ ಕ್ರಮ ತೆಗೆದುಕೊಳ್ಳುತ್ತಿದ್ದಾರಾ?

ಎರಡರ ಮೇಲೂ ಅನುಮಾನವಿದೆ. ಬೇರೆ ಸರ್ಕಲ್ ಗಳಲ್ಲಿ ಹೇಗಿದೆಯೋ ಗೊತ್ತಿಲ್ಲ, ಆದರೆ ಬಿಎಂಶ್ರೀ ವೃತ್ತವೆಂದೂ ಕರೆಯುವ, ಆರು ರಸ್ತೆಗಳು ಸೇರುವ ಇಲ್ಲಿ ಆಗುತ್ತಿರುವ ಸಂಚಾರ ನಿಯಮ ಉಲ್ಲಂಘನೆಯ ಮೇಲೆ ಅಂಕುಶವೇ ಇಲ್ಲ. ಟ್ರಾಫಿಕ್ ನಿರ್ವಹಣಾ ಕೇಂದ್ರ ಏನು ಮಾಡುತ್ತಿದೆ? ಇಲ್ಲಿ ನಿಮಿಷಕ್ಕೊಂದು ಟ್ರಾಫಿಕ್ ಉಲ್ಲಂಘನೆ ನಡೆಯುತ್ತಲೇ ಇರುತ್ತದೆ.

ಪೊಲೀಸರೀಗ ಪೇಪರ್ ಲೆಸ್: ದಂಡ ವಿಧಿಸಿದರೆ ರಸೀದಿ ಬದಲು ಎಸ್ಎಂಎಸ್

ಸೌತ್ ಎಂಡ್ ಸರ್ಕಲ್ ನಲ್ಲಿ ಯಾವ ರೀತಿ ಟ್ರಾಫಿಕ್ ನಿಮಯಗಳು ಉಲ್ಲಂಘನೆಯಾಗುತ್ತಿವೆ ಎಂಬುದಕ್ಕೆ ಮೂರು ನಿದರ್ಶನಗಳು ಇಲ್ಲಿವೆ. ಇವು ಅಕ್ಷರಶಃ ಕಣ್ಣಾರೆ ನೋಡಿದಂಥ ದೃಶ್ಯಗಳು.

South End Circle and numerous traffic violations

ದೃಶ್ಯ 1 : ಲಾಲ್ ಬಾಗ್ ಕಡೆಯಿಂದ ಬರುವ ವಾಹನಗಳಿಗೆ ಇಲ್ಲಿ ಬಲತಿರುವಾಗಲಿ, ಯೂಟರ್ನ್ ಆಗಲಿ ಇಲ್ಲವೇ ಇಲ್ಲ. ನೋ ಯೂಟರ್ನ್ ಬೋರ್ಡ್ ಹಾಕಿದ್ದರೂ, ಟ್ಯಾಕ್ಸಿ ಡ್ರೈವರುಗಳು, ಆಟೋ ಚಾಲಕರು, ಪಡ್ಡೆಗಳು ನೈಯಾ ಪೈಸೆಯ ಕಿಮ್ಮತ್ತು ನೀಡುವುದಿಲ್ಲ. ಅಲ್ಲಿ ಅವರನ್ನು ನಿಯಂತ್ರಿಸಲು ಪೊಲೀಸರೂ ಇರುವುದಿಲ್ಲ.

ಸೋಮವಾರ ಸಂಜೆ ಟ್ಯಾಕ್ಸಿ ಚಾಲಕನೊಬ್ಬ ಯೂಟರ್ನ್ ತೆಗೆದುಕೊಳ್ಳುತ್ತಿದ್ದಾಗ, ಎದುರಿನಿಂದ ಬಂದ ಮತ್ತೊಂದು ಟ್ಯಾಕ್ಸಿಗೆ ಗುದ್ದಿದೆ. ಟ್ಯಾಕ್ಸಿ ಅಲ್ಲೇ ನಿಲ್ಲಿಸಿದ ಚಾಲಕ ಪೊಲೀಸರಿಗೆ ಫೋನ್ ಮಾಡಲು ಆರಂಭಿಸಿದ. ತಗೊಳ್ಳಿ, ಅಲ್ಲಿ ಭರ್ತಿ ಟ್ರಾಫಿಕ್ ಜಾಮ್. ಬೈಕ್ ಚಾಲಕನೊಬ್ಬ ಬಾಯಿಗೆ ಬಂದಂತೆ ಉಗಿದ ಮೇಲೆ ಇಬ್ಬರೂ ಅಲ್ಲಿಂದ ಕಾರು ತೆಗೆದಿದ್ದಾರೆ.

ಅದೇ ಸಮಯದಲ್ಲಿ ಕೃಷ್ಣರಾವ್ ಪಾರ್ಕ್ ಕಡೆಯಿಂದ, ಪಟಾಲಮ್ಮ ರಸ್ತೆಯ ಮೇಲೆ ಆಂಬ್ಯುಲೆನ್ಸ್ ಕೂಡ ಬರಬೇಕೆ? ಈ ವೃತ್ತದ ಸುತ್ತಮುತ್ತ ಏನಿಲ್ಲವೆಂದರೂ ಐದಾರು ದೊಡ್ಡ ಆಸ್ಪತ್ರೆಗಳಿವೆ. ಆಂಬ್ಯುಲೆನ್ಸ್ ಗಳು ಅರ್ಧಗಂಟೆಗೊಂದರಂತೆ ಚಲಿಸುತ್ತಿರುತ್ತವೆ. ಅವುಗಳಿಗೆ ದಾರಿ ಮಾಡಿಕೊಡುವವರಾರು?

ಡಿಜಿ ಲಾಕರ್ ಗೆ ಅಧಿಕೃತ ಮಾನ್ಯತೆ: ಡಿಎಲ್, ಆರ್‌ಸಿ ಆ್ಯಪ್ ನಲ್ಲೇ ಲಭ್ಯ

ದೃಶ್ಯ 2 : ಹಿತಕರವಾದ ಮಾಗಿಯ ಬಿಸಿಲಿದ್ದ ಸಮಯದಲ್ಲಿ ಪ್ರತಿ ಬೈಕಿನ ಮೇಲೆಯೂ, ಓರ್ವ ಹುಡುಗಿ ಸೇರಿದಂತೆ ಮೂರು ಜನರು ಕುಳಿತಿದ್ದ ಮೂರು ಬೈಕುಗಳು ಸಿಗ್ನಲ್ ಜಂಪ್ ಮಾಡಿಕೊಂಡು, ಅಲ್ಲೇ ಟ್ರಾಫಿಕ್ ಪೊಲೀಸರು ಇದ್ದುದನ್ನು ಲಕ್ಷಿಸದೆ ಕೇಕೆ ಹಾಕಿಕೊಂಡು ರವ್ವನೆ ಬೈಕ್ ಚಲಾಯಿಸಿಕೊಂಡು ಹೋದರು. ಇವರನ್ನು ಹಿಡಿಯುವ ತಾಕತ್ತು ಟ್ರಾಫಿಕ್ ಪೊಲೀಸರಿಗೆ ಇದೆಯಾ?

ಯಾವೊಬ್ಬನ ತಲೆಯ ಮೇಲೂ ಹೆಲ್ಮೆಟ್ ಇರಲಿಲ್ಲ. ಓಡಿಸುವವರ ಬಳಿ ಲೈಸೆನ್ಸ್ ಆದರೂ ಇರುತ್ತದಾ? ಡೌಟು. ಅಲ್ಲಿ ನಿಂತಿದ್ದ ಟ್ರಾಫಿಕ್ ಪೊಲೀಸರನ್ನು ಅಕ್ಷರಶಃ ಅಪಹಾಸ್ಯ ಮಾಡಿಕೊಂಡು, ತಮ್ಮನ್ನು ಹಿಡಿಯುವವರು ಯಾರೂ ಇಲ್ಲವೆಂಬಂತೆ ದುರ್ವರ್ತನೆ ಇತ್ತು ಅವರದ್ದು. ಇವರಿಗೆ ಬೈಕು, ಡಿಯೋ ಸ್ಕೂಟರು ಕೊಡಿಸಿದ ಆ ಬೇಜವಾಬ್ದಾರಿ ಅಪ್ಪಂದಿರಿಗೊಂದು ದೊಡ್ಡ ನಮಸ್ಕಾರ.

ಅಲ್ಲೇ ನಿಂತಿದ್ದ ಟ್ರಾಫಿಕ್ ಕಾನ್ ಸ್ಟೇಬಲ್ ನನ್ನು ಈ ಬಗ್ಗೆ ಮಾತಿಗೆಳೆದಾಗ, ವಿಜಯಪುರದ ಕನ್ನಡದಲ್ಲಿ ಮಾತನಾಡುತ್ತಿದ್ದ ಆತ, ಬೆನ್ನತ್ತಿ ಹಿಡಿಯಬಹುದು ಸಾರ್, ಆದರೆ ಅವರು ಬಿದ್ದುಹೋದರೆ ಯಾರು ಜವಾಬ್ದಾರರು? ಅಲ್ಲದೆ, ಅವರನ್ನು ಹಿಡಿದರೆ ಜಗಳಕ್ಕೇ ಬರುತ್ತಾರೆ. ಅಂಥವರ ಸಹವಾಸವೇ ಬೇಡ ಎಂಬಂತೆ. ನೂರು ರುಪಾಯಿ ದಂಡ ಬಿಸಾಕಿ ಹೋಗ್ತಾರೆ, ಏನು ಮಾಡೋಣ ಅಂತ ಅಸಹಾಯಕತೆ ತೋರಿಸಿದರು.

ಸಂಚಾರ ನಿಯಮ ಉಲ್ಲಂಘನೆ: ದಂಡ ಕ್ರಮ ರಾಜ್ಯಾದ್ಯಂತ ಏಕೀಕೃತ

ದೃಶ್ಯ 3 : ಇನ್‌ಸ್ಪೆಕ್ಟರೊಬ್ಬರು ಎಲೆಫೆಂಟ್ ರಾಕ್ ರಸ್ತೆಯಲ್ಲಿ, ಸಿಗ್ನಲ್ ಜಂಪ್ ಮಾಡುವವರನ್ನು ಹಿಡಿಯುವುದನ್ನು ಬಿಟ್ಟು ಸಿಗ್ನಲ್ ನಲ್ಲಿ ನಿಂತಿದ್ದವರನ್ನು ಹಿಡಿದು ಅವರ ಯೋಗಕ್ಷೇಮ ವಿಚಾರಿಸಿಕೊಳ್ಳುತ್ತಿದ್ದರು. ಅಷ್ಟರಲ್ಲಿ ಮಾಧವನ್ ಪಾರ್ಕ್ ಕಡೆಯಿಂದ ಡಿಯೋ ಮೇಲೆ ಹೆಲ್ಮೆಟ್ ಇಲ್ಲದೆ ಕುಳಿತಿದ್ದ ಜೋಡಿಗೆ, ಸಾಹೇಬ್ರ ಬಳಿ ಬರಲು ಹೇಳಿದ್ದಾರೆ.

ಗೋಟಿ ಗಡ್ಡ ಬಿಟ್ಟಿದ್ದ, ಬರ್ಮುಡಾ ತೊಟ್ಟಿದ್ದ ಯುವಕ ಕ್ಯಾರೆ ಅಂದಿಲ್ಲ. ಮುಸಿಮುಸಿ ನಗುತ್ತಿದ್ದ ಹಿಂದಿದ್ದ ಯೌವನ ತುಂಬಿದ ಯುವತಿ, ಪ್ಲೀಸ್ ಸಾರ್ ಇದೊಂದು ಸಾರಿ ಬಿಟ್ಟುಬಿಡಿ ಎಂದು ಅಂಗಲಾಚಿದ್ದಾಳೆ. ಪೇದೆಗೆ ಹುಡುಗಿಯ ಮೇಲೆ ಅದೆಲ್ಲಿಂದ ಬಂತೋ ಕರುಣೆ... ಸರಿ ಹೋಗಿ ಅಂತ ಸಾಗಹಾಕಿದ್ದಾರೆ. ಸಿಕ್ಕಿದ್ದೇ ಚಾನ್ಸ್ ಅಂತ ಪಡ್ಡೆ ಸಿಗ್ನಲ್ ಕೂಡ ನೋಡದೆ ಪರಾರಿಯಾಗಿದ್ದಾನೆ. ಬಹುಮಾನ ಕೊಡಬೇಕೋ ಬೇಡವೋ?

ಇಂಥ ದೃಶ್ಯಾವಳಿಗಳ ಧಾರಾವಾಹಿಯನ್ನು ತಯಾರಿಸಿಬಿಡಬಹುದು. ಪೊಲೀಸರು ನಿಜಕ್ಕೂ ಇಂಥವರ ಮೇಲೆ ದಂಡ ಹಾಕುತ್ತಿದ್ದಾರಾ? ಪದೇಪದೇ ನಿಯಮ ಉಲ್ಲಂಘಿಸುತ್ತಿರುವವರನ್ನು ಗುರುತಿಸಿ ಅವರ ಲೈಸೆನ್ಸ್ ಕಸಿದುಕೊಳ್ಳುತ್ತಿದ್ದಾರಾ? ಇಂಥ ಕೂಗುಗಳಿಗೆ ಪೊಲೀಸರು ಹಲವಾರು ಬಾರಿ ಸ್ಪಂದಿಸಿದ್ದಾರೆ. ಇಲ್ಲವೆಂದು ಹೇಳುವುದಿಲ್ಲ. ಆದರೆ, ಇಂಥವರ ಮೇಲೆ ಕಠಿಣ ಕ್ರಮ ಏಕೆ ತೆಗೆದುಕೊಳ್ಳುತ್ತಿಲ್ಲ ಎಂಬುದೇ ಚಿದಂಬರ ಪ್ರಶ್ನೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
What traffic police doing in South End Circle in Bengaluru. In front your eyes only hundreds of people will be violating the traffic rules, but fines are not being imposed. In fact, the riders have no respect for the traffic rules at all. Bengaluru Traffic Police do something.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ