ಶವ ಅದಲು ಬದಲು, ಆಸ್ಪತ್ರೆಯಲ್ಲಿ ಗೊಂದಲ ಗೋಜಲು!

Posted By:
Subscribe to Oneindia Kannada

ಬೆಂಗಳೂರು, ಡಿ. 27 : ಆಸ್ಪತ್ರೆಗಳಲ್ಲಿ ಶಿಶುಗಳು ಅದಲು-ಬದಲಾಗಿ ಸುದ್ದಿಯಾಗುವುದು ನಿಗಮಗೆ ಗೊತ್ತು. ಆದರೆ, ಶವಗಳು ಅದಲು-ಬದಲಾಗಿ ಗೊಂದಲ ಉಂಟಾಗುವುದನ್ನು ನೋಡಿದ್ದಿರಾ? ಬೆಂಗಳೂರಿನ ಹೆಬ್ಬಾಳದಲ್ಲಿರುವ ಬ್ಯಾಪಿಸ್ಟ್ ಆಸ್ಪತ್ರೆಯಲ್ಲಿ ಇಂತಹ ಪ್ರಸಂಗ ನಡೆದಿದೆ. ಘಟನೆ ಬಹಿರಂಗವಾಗುವ ಮೊದಲೇ ಒಂದು ಮೃತದೇಹದ ಅಂತ್ಯ ಸಂಸ್ಕಾರ ಸಹ ನಡೆದು ಹೋಗಿದೆ.

ಯಲಹಂಕ ನಿವಾಸಿಯಾದ ನಿವೃತ್ತ ಸೇನಾಧಿಕಾರಿ ಸೋಹನ್‌ ಲಾಲ್‌ ಹಾಗೂ ಬಾಗಲೂರು ವಿನಾಯಕನಗರ ನಿವಾಸಿ ವೆಂಕಟರಾಜು, ಹೆಬ್ಬಾಳ ಬ್ಯಾಪ್ಟಿಸ್ಟ್‌ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫ‌ಲಕಾರಿಯಾಗದೆ ಮಂಗಳವಾರ ರಾತ್ರಿ ಇಬ್ಬರು ಮೃತಪಟ್ಟಿದ್ದರು. ಶವಾಗಾರದಲ್ಲಿ ಇವರ ಮೃತದೇಹ ಅದಲು- ಬದಲಾಗಿದ್ದು, ಸೋಹನ್‌ಲಾಲ್‌ ಮೃತದೇಹಕ್ಕೆ ವೆಂಕಟರಾಜು ಕುಟುಂಬ ಅಂತ್ಯಸಂಸ್ಕಾರ ಮಾಡಿ ಮುಗಿಸಿದೆ.

hospital

ಪ್ರಸಂಗ ಒಂದು : ಯಲಹಂಕ ನಿವಾಸಿಯಾದ ಪಂಜಾಬ್‌ ಮೂಲದ ನಿವೃತ್ತ ಸೇನಾಧಿಕಾರಿ ಸೋಹನ್‌ ಲಾಲ್‌ (85) ಮಧುಮೇಹದ ಕಾಯಿಲೆಯಿಂದ ಬ್ಯಾಪ್ಟಿಸ್ಟ್‌ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫ‌ಲಕಾರಿಯಾಗದೆ ಮಂಗಳವಾರ ರಾತ್ರಿ ಅವರು ಸಾವನ್ನಪ್ಪಿದ್ದಾರೆ. ಪಂಜಾಬ್‌ನಿಂದ ಸಂಬಂಧಿಕರು ಬರುವುದು ತಡವಾಗುತ್ತದೆ. ಹಾಗಾಗಿ ಮೃತ ದೇಹವನ್ನು ಗುರುವಾರ ಪಡೆಯುವುದಾಗಿ ಮೃತ ಲೆಫ್ಟಿನೆಂಟ್‌ ಕರ್ನಲ್‌ ಸೋಹನ್‌ಲಾಲ್‌ ಕುಟುಂಬದವರು ಆಸ್ಪತ್ರೆಗೆ ಸಿಬ್ಬಂದಿಗೆ ತಿಳಿಸಿದ್ದರು.

ಪ್ರಸಂಗ ಎರಡು : ಬಾಗಲೂರು ಸಮೀಪದ ವಿನಾಯಕ ನಗರ ನಿವಾಸಿ ವೆಂಕಟರಾಜು (75) ಸಹ ಬ್ಯಾಪಿಸ್ಟ್ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಸಹ ಸೋಹನ್‌ ಲಾಲ್‌ ಮೃತಪಟ್ಟ ಮಂಗಳವಾರ ರಾತ್ರಿ ಸಾವನ್ನಪ್ಪಿದ್ದಾರೆ. ವೆಂಕಟರಾಜು ಕುಟುಂಬದವರು, ಬುಧವಾರ ಬೆಳಗ್ಗೆ ಮೃತದೇಹ ಪಡೆಯುವುದಾಗಿ ಆಸ್ಪತ್ರೆ ಸಿಬ್ಬಂದಿಗೆ ತಿಳಿಸಿದ್ದರು.

ಇಬ್ಬರ ಶವಗಳನ್ನು ಆಸ್ಪತ್ರೆ ಸಿಬ್ಬಂದಿ ಶವಾಗಾರಕ್ಕೆ ಸಾಗಿಸಿದ್ದಾರೆ. ಅಲ್ಲಿ ಅಚಾತುರ್ಯ ನಡೆದಿದ್ದು, ಅದಲು-ಬದಲಾಗಿವೆ. ಬುಧವಾರ ಮೃತ ದೇಹ ಸ್ವೀಕರಿಸಲು ವೆಂಕಟರಾಜು ಕುಟುಂಬದವರು ಆಗಮಿಸಿದ್ದಾರೆ. ಆ ವೇಳೆ ಶವಾಗಾರದ ಸಿಬ್ಬಂದಿ, ಅವರಿಗೆ ಸೋಹನ್‌ಲಾಲ್‌ ದೇಹವನ್ನು ಹಸ್ತಾಂತರಿಸಿದ್ದಾರೆ. ನಂತರ ಹೆಬ್ಟಾಳದ ವಿದ್ಯುತ್‌ ಚಿತಾಗಾರದಲ್ಲಿ ಅಂತ್ಯಕ್ರಿಯೆಯನ್ನು ಕುಟುಂಬದವರು ನೆರವೇರಿಸಿದ್ದಾರೆ.

ಗುರುವಾರ ಸೋಹನ್ ಲಾಲ್ ಕುಟುಂಬದವರು ಶವವನ್ನು ಪಡೆಯಲು ಆಗಮಿಸಿದಾಗ ಅಚಾತುರ್ಯ ಬಹಿರಂಗಗೊಂಡಿದೆ. ವೆಂಕಟರಾಜು ಶವ ನೋಡಿದ ಸೋಹನ್ ಲಾಲ್ ಕುಟುಂಬದವರು ಇದು ತಮ್ಮ ಸಂಬಂಧಿಕರ ಶವವಲ್ಲ ಎಂದು ತಿಳಿಸಿದ್ದಾರೆ. ಆ ಹೊತ್ತಿಗಾಲಗೇ ಸೋಹನ್ ಲಾಲ್ ಅಂತ್ಯಕ್ರಿಯೆ ನಡೆದು ಹೋಗಿತ್ತು.

ಶವಾಗಾರದಲ್ಲಿ ದಾಖಲೆ ಪರಿಶೀಲಿಸಿದ ಸಿಬ್ಬಂದಿಗೆ, ಆಗಿರುವ ಅಚಾತುರ್ಯದ ಬಗ್ಗೆ ಗೊತ್ತಾಗಿದೆ ತಕ್ಷಣ ಅವರು ಹೆಬ್ಬಾಳ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಂದೆ ಸಾವಿನ ದುಃಖದಲ್ಲಿದ್ದ ನಾವು, ಮೃತದೇಹ ಸರಿಯಾಗಿ ಗಮನಿಸಿಲ್ಲ. ಶವಾಗಾರದ ಸಿಬ್ಬಂದಿ ನೀಡಿದ ದೇಹವನ್ನು ನಾವು ಸಂಸ್ಕಾರ ನಡೆಸಿರುವುದಾಗಿ ವೆಂಕಟರಾಜು ಕುಟುಂಬ ಹೇಳಿದೆ. ಸದ್ಯ ಪೊಲೀಸರು ಶವಗಳ ಅದಲು-ಬದಲಾದ ಕುರಿತು ಯಾವ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ತಲೆ ಕೆರೆದುಕೊಳ್ಳುತ್ತಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In a bizzare turn of events, the family of an elderly man who died at a Bangalore Baptist hospital took home the body of another man, a retired lieutenant colonel, and cremated it on Wednesday.
Please Wait while comments are loading...