ಚುನಾವಣೆ ಖರ್ಚಿಗೆ ಸ್ಟೀಲ್ ಮೇಲ್ಸೇತುವೆ?: ಸುರೇಶ್ ಕುಮಾರ್

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 14: ರಾಜ್ಯ ಸರಕಾರ ನಿರ್ಮಿಸಲು ಉದ್ದೇಶಿರುವ ಸ್ಟೀಲ್ ಮೇಲ್ಸೇತುವೆಗೆ ದಿನದಿಂದ ದಿನಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಚಾಲುಕ್ಯ ವೃತ್ತದಿಂದ ಹೆಬ್ಬಾಳವರೆಗೆ ನಿರ್ಮಿಸಲು ಉದ್ದೇಶಿಸಿರುವ 1,800 ಕೋಟಿ ಮೊತ್ತದ ಈ ಯೋಜನೆಗೆ ಉದ್ಯಾನ ನಗರಿಯ 862 ಮರಗಳ ಜೀವ ತೆಗೆಯಬೇಕಾಗುತ್ತದೆ.

ಮೇಲ್ಸೇತುವೆ ನಿರ್ಮಾಣದ ಪ್ರಸ್ತಾವ ಹೊರಬೀಳುತ್ತಿದ್ದಂತೆಯೇ ಬೆಂಗಳೂರಿಗರು ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಯೋಜನೆ ಮುಂದುವರಿಸಬೇಡಿ ಎಂದು ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಸಹ ಬರೆಯಲಾಗಿದೆ. ಆದರೆ ಇದರಿಂದ ಸಂಚಾರ ದಟ್ಟಣೆ ಕಡಿಮೆ ಆಗುತ್ತದೆ ಎಂಬುದು ಸರಕಾರದ ವಾದ. ಜತೆಗೆ ಒಂದು ಮರ ಕಡಿಯುವುದಕ್ಕೆ ಪ್ರತಿಯಾಗಿ ಹತ್ತು ಸಸಿ ನೆಡ್ತೀವಿ ಎಂದು ಭರವಸೆ ಕೂಡ ನೀಡುತ್ತಿದೆ.[ಸ್ಟೀಲ್ ಬ್ರಿಡ್ಜ್ ಟೆಂಡರ್ ಗೊಂದಲಕ್ಕೆ ಜಾರ್ಜ್ ಕೊಟ್ಟ ಉತ್ತರವೇನು?]

Suresh kumar

ಪ್ರತಿಭಟನೆ ಭಾಗವಾಗಿ ಅಕ್ಟೋಬರ್ 16ರಂದು ಮಾನವಸರಪಳಿ ರಚಿಸಿ, ಆಕ್ರೋಶ ದಾಖಲಿಸುವುದಕ್ಕೆ ನಿರ್ಧರಿಸಲಾಗಿದೆ. ಸ್ವಾತಂತ್ರ್ಯ ಹೋರಾಟಗಾರರು, ಶಾಸಕರು, ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. 'ಬೇಡ' ಎಂಬುದು ಈ ಅಭಿಯಾನದ ಘೋಷವಾಕ್ಯ ಆಗಿರಲಿದೆ. ಚಾಲುಕ್ಯ ವೃತ್ತ, ಬಿಡಿಎ, ಮೇಖ್ರಿ ವೃತ್ತ ಹಾಗೂ ಕಾವೇರಿ ಚಿತ್ರಮಂದಿರದ ಬಳಿ ಏಕ ಕಾಲಕ್ಕೆ ಪ್ರತಿಭಟನೆ ನಡೆಯಲಿದೆ.

ಆಯೋಜಕರು ತಿಳಿಸಿರುವಂತೆ, ಅಪಾರ ಸಂಖ್ಯೆಯಲ್ಲಿ ಜನರು ಪ್ರತಿಭಾಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಆದರೆ ಮೌನದ ಮೂಲಕವೇ ಸರಕಾರಕ್ಕೆ ಸಂದೇಶ ಮುಟ್ಟಿಸುವುದು ಈ ಹೋರಾಟದ ಉದ್ದೇಶವಾಗಿದೆ. ನಮ್ಮ ಮನವಿಯನ್ನು ಸರಕಾರ ಕೇಳಿಸಿಕೊಳ್ಳುತ್ತದೆ ಎಂಬ ನಂಬಿಕೆ ಇದೆ ಎನ್ನುತ್ತಾರೆ ಆಯೋಜಕರು, ಕಾರ್ಯಕರ್ತರು. ಈ ಪ್ರತಿಭಟನೆ ಹಿನ್ನೆಲೆಯಲ್ಲಿ ಮಾಜಿ ಕಾನೂನು ಸಚಿವ ಸುರೇಶ್ ಕುಮಾರ್ ಮುಖ್ಯಮಂತ್ರಿಗೆ ಪತ್ರ ಬರೆದಿದ್ದು, ಮೇಲ್ಸೇತುವೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.[ಸ್ಟೀಲ್ ಮೇಲ್ಸೇತುವೆ ನಿರ್ಮಾಣ ವಿರೋಧಿಸಿ ಅಕ್ಟೋಬರ್ 16ಕ್ಕೆ ಪ್ರತಿಭಟನೆ]

Siddaramaiah, steel flyover Don't want

ಪ್ರಮುಖ ಅಂಶಗಳನ್ನು ಪತ್ರದಲ್ಲಿ ಪ್ರಸ್ತಾವಿಸಿರುವ ಅವರು, ಇಂಥ ದೊಡ್ಡ ಯೋಜನೆ ಕೈಗೆತ್ತಿಕೊಳ್ಳುವ ಮುನ್ನ ಜನಾಭಿಪ್ರಾಯ ಪಡೆಯಬೇಕು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಸಂಚಾರ ಸಮಸ್ಯೆಗೆ ಪರ್ಯಾಯ ಮಾರ್ಗಗಳು ಇದ್ದರೂ ಯಾರದೋ ಹಿತಾಸಕ್ತಿ ಕಾಯುವ ಉದ್ದೇಶದಿಂದ ಸಲಹೆಗಳು ಸರಕಾರವನ್ನು ತಲುಪುತ್ತಿಲ್ಲ. ಈಗ ಕೆಡವುವ ಮರದ ಹತ್ತರಷ್ಟು ಸಸಿಗಳನ್ನು ನೆಡುವ ಭರವಸೆ ಖಂಡಿತಾ ಈಡೇರುವುದಿಲ್ಲ ಎಂದಿದ್ದಾರೆ.

ಬೆಂಗಳೂರು-ಮೈಸೂರು ಹೆದ್ದಾರಿ ವಿಸ್ತರಣೆಯನ್ನು ಉದಾಹರಣೆಯಾಗಿ ನೀಡಿರುವ ಸುರೇಶ್ ಕುಮಾರ್, ಆ ಸಂದರ್ಭದಲ್ಲಿ ನೀಡಿದ ಸಸಿ ನೆಡುವ ಭರವಸೆ ಕೂಡ ಈಡೇರಲಿಲ್ಲ. ಇನ್ನು 1800 ಕೋಟಿ ರುಪಾಯಿಯ ಯೋಜನೆ ಎಂಬ ಬಗ್ಗೆಯೇ ಗುಮಾನಿ ಎದ್ದಿದೆ. ಈ ಯೋಜನೆ ಹಿಂದೆಯೇ ಯಾವುದೋ ಉದ್ದೇಶ ಇದೆ. ಇದು ಗುತ್ತಿಗೆದಾರರಿಗೆ, ಚುನಾವಣೆಗೆ ಹಣ ಹೊಂದಿಸಿಕೊಳ್ಳುವುದಕ್ಕೆ ಮಾಡಿದ ಮೇಲ್ಸೇತುವೆ ಯೋಜನೆ ಇದ್ದಂತಿದೆ ಎಂದು ಆರೋಪಿಸಿದ್ದಾರೆ.[ಸ್ಟೀಲ್ ಫ್ಲೈ ಓವರ್ ನಿಂದ ತೆರಿಗೆ ಹಣ ಲೂಟಿ : ಎಎಪಿ]

ಮೇಲ್ಸೇತುವೆ ನಿರ್ಮಾಣದ ಯೋಜನೆ ವಿರೋಧಿಸಿ ನಡೆಯುತ್ತಿರುವ ಹೋರಾಟವನ್ನು ಬಿಜೆಪಿ ಬೆಂಬಲಿಸುತ್ತದೆ. ಭಾನುವಾರ ನಡೆಯುವ ಮಾನವ ಸರಪಳಿಯನ್ನು ಸರಕಾರ ನಿರ್ಲಕ್ಷಿಸಿದರೆ ಭಾರೀ ಬೆಲೆ ತೆರಬೇಕಾಗುತ್ತದೆ. ಸಾರ್ವಜನಿಕರ ಒಪ್ಪಿಗೆ ಪಡೆಯದೆ ಈ ಯೋಜನೆಯ ಬಗ್ಗೆ ಇನ್ನು ಒಂದೇ ಒಂದು ಹೆಜ್ಜೆ ಕೂಡ ಸರಕಾರ ಮುಂದಿಡಬಾರದು ಎಂದು ಸುರೇಶ್ ಕುಮಾರ್ ಆಗ್ರಹಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Suresh Kumar, BJP MLA alleged that, Bengaluru steel flyover plan between Chalukya circle to Hebbal is made for kickback. He has written a letter to CM Siddaramaiah about this, and alleged that, steel flyover benefits only contractor and persons who have vested interest in it.
Please Wait while comments are loading...