ಎಸ್.ಬಂಗಾರಪ್ಪ ಪತ್ನಿ ಶಕುಂತಲಾ ಬಂಗಾರಪ್ಪ ವಿಧಿವಶ

Posted By:
Subscribe to Oneindia Kannada

ಬೆಂಗಳೂರು, ಏ. 22 : ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ದಿ.ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಪತ್ನಿ ಶಕುಂತಲಾ ಬಂಗಾರಪ್ಪ ವಿಧಿವಶರಾಗಿದ್ದಾರೆ. ಮಂಗಳವಾರ ಮಧ್ಯಾಹ್ನ ಬೆಂಗಳೂರಿನ ಮಲ್ಯ ಆಸ್ಪತ್ರೆಯಲ್ಲಿ ಅವರು ಮೃತಪಟ್ಟಿದ್ದಾರೆ.

ಹಲವು ದಿನಗಳಿಂದ ಶಕುಂತಲಾ ಬಂಗಾರಪ್ಪ (70) ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಮಂಗಳವಾರ ಅವರನ್ನು ಚಿಕಿತ್ಸೆಗಾಗಿ ಮಲ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಧ್ಯಾಹ್ನ 3.40ರ ಸುಮಾರಿಗೆ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

Shakuntala Bangarappa

ಪುತ್ರರಾದ ಮಧು ಬಂಗಾರಪ್ಪ, ಕುಮಾರ್ ಬಂಗಾರಪ್ಪ, ಪುತ್ರಿ ಗೀತಾ ಶಿವರಾಜ್ ಕುಮಾರ್ ಮುಂತಾದ ಕುಟುಂಬ ಸದಸ್ಯರನ್ನು ಶಕುಂತಲಾ ಬಂಗಾರಪ್ಪ ಅಗಲಿದ್ದಾರೆ. ಶಿವಮೊಗ್ಗ ಲೋಕಸಭೆ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪುತ್ರಿ ಗೀತಾ ಶಿವರಾಜ್ ಕುಮಾರ್ ಅವರ ಪರವಾಗಿ ಶಕುಂತಲಾ ಬಂಗಾರಪ್ಪ ಏ.11ರಂದು ಪ್ರಚಾರ ನಡೆಸಿದ್ದರು. [ಗೀತಾ ಶಿವರಾಜ್ ಕುಮಾರ್ ಸಂದರ್ಶನ ಓದಿ]

ಮಲ್ಯ ಆಸ್ಪತ್ರೆಗೆ ರಾಘವೇಂದ್ರ ರಾಜ್ ಕುಮಾರ್, ನಿರ್ದೇಶಕ ಗುರುದತ್ ಭೇಟಿ ನೀಡಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದಿದ್ದಾರೆ. ಗೀತಾ ಶಿವರಾಜ್ ಕುಮಾರ್, ಮಧು ಬಂಗಾರಪ್ಪ ಆಸ್ಪತ್ರೆಗೆ ಆಗಮಿಸಿದ್ದಾರೆ.

ಮಂಗಳವಾರ ಸಂಜೆ ಸದಾಶಿವನಗರದಲ್ಲಿರುವ ಎಸ್.ಬಂಗಾರಪ್ಪ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬುಧವಾರ ಶಿವಮೊಗ್ಗ ಜಿಲ್ಲೆಯ ಸೊರಬದ ಬಂಗಾರಧಾಮದಲ್ಲಿ ಶಕುಂತಲಾ ಬಂಗಾರಪ್ಪ ಅವರ ಅಂತ್ಯಕ್ರಿಯೆ ನಡೆಯಲಿದೆ. ಎಸ್.ಬಂಗಾರಪ್ಪ ಅವರ ಅಂತ್ಯಕ್ರಿಯೆಯು ಇಲ್ಲಿಯೇ ನಡೆದಿತ್ತು.

ಅಂತಿಮ ದರ್ಶನ ಪಡೆದ ಕುಮಾರ್ ಬಂಗಾರಪ್ಪ : ಶಕುಂತಲಾ ಬಂಗಾರಪ್ಪ ಅವರ ಪುತ್ರ ಕುಮಾರ್ ಬಂಗಾರಪ್ಪ ಸದಾಶಿವನಗರದಲ್ಲಿನ ನಿವಾಸಕ್ಕೆ ಆಗಮಿಸಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು. ಶಕುಂತಲಾ ಬಂಗಾರಪ್ಪ ಅಳಿಯ ಶಿವರಾಜ್ ಕುಮಾರ್, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ನಿವಾಸಕ್ಕೆ ಭೇಟಿ ನೀಡಿ ಅಂತಿಮ ದರ್ಶನ ಪಡೆದರು.

ಚುನವಣೆಗೆ ಸ್ಪರ್ಧಿಸಲು ನಿರಾಕರಿಸಿದ್ದರು : ಲೋಕಸಭೆ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ಶಿವಮೊಗ್ಗ ಕ್ಷೇತ್ರದಿಂದ ಶಕುಂತಲಾ ಬಂಗಾರಪ್ಪ ಅವರನ್ನು ನಿಲ್ಲಿಸಲು ಪಕ್ಷ ನಿರ್ಧರಿಸಿತ್ತು. ಈ ಕುರಿತು ಅವರೊಂದಿಗೆ ಮಾತುಕತೆಯನ್ನು ನಡೆಸಿತ್ತು. ಆದರೆ, ಅನಾರೋಗ್ಯದ ಕಾರಣ ತಾವು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಶಕುಂತಲಾ ಬಂಗಾರಪ್ಪ ಹೇಳಿದ್ದರು.

ಬಂಗಾರಪ್ಪ ಕುಟುಂಟ ಸದಸ್ಯರಿಗೆ ಲೋಕಸಭೆ ಚುನಾವಣೆ ಟಿಕೆಟ್ ಎಂದು ಘೋಷಿಸಿದ್ದ ಜೆಡಿಎಸ್ ಪಕ್ಷ ಬಂಗಾರಪ್ಪ ಪುತ್ರ ಮತ್ತು ಸೊರಬ ಕ್ಷೇತ್ರದ ಶಾಸಕ ಮಧು ಬಂಗಾರಪ್ಪ ಅವರೊಂದಿಗೆ ಚರ್ಚಿಸಿ ಅಂತಿಮವಾಗಿ ಬಂಗಾರಪ್ಪ ಪುತ್ರಿ ಗೀತಾ ಶಿವರಾಜ್ ಕುಮಾರ್ ಅವರಿಗೆ ಟಿಕೆಟ್ ನೀಡಿ, ಚುನಾವಣೆ ಅಖಾಡಕ್ಕೆ ಇಳಿಸಿತ್ತು. ಏ.11ರಂದು ಗೀತಾ ಪರವಾಗಿ ಸೊರಬದಲ್ಲಿ ಪ್ರಚಾರ ನಡೆಸಿದ್ದ ಶಕುಂತಲಾ ಬಂಗಾರಪ್ಪ "ನನ್ನ ಮಗಳನ್ನು ಗೆಲ್ಲಿಸಿ" ಎಂದು ಜನರಿಗೆ ಮನವಿ ಮಾಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Former chief minister Late S. Bangarappa's wife Shakuntaka Bangarappa (70) passed away in Bangalore on 22nd April at Mally hospital. She was suffering from Cancer for a long time. Last rites will be done at 'Bangaradhama' in Sorab in Shimoga district on 23rd April.
Please Wait while comments are loading...