ವಿಬ್ ಗಯಾರ್ ಶಾಲೆಗೆ ನುಗ್ಗಿದ್ದ ಚಿರತೆ ಸೆರೆ ಸಿಕ್ಕಿದ್ದು ಹೇಗೆ?

Posted By:
Subscribe to Oneindia Kannada

ಬೆಂಗಳೂರು, ಫೆಬ್ರವರಿ 10 : ಬೆಂಗಳೂರಿನ ವಿಬ್ ಗಯಾರ್ ಶಾಲೆಗೆ ಭಾನುವಾರ ನುಗ್ಗಿದ ಚಿರತೆಯನ್ನು ಜೀವಂತವಾಗಿ ಸೆರೆ ಹಿಡಿದು ಬನ್ನೇರುಘಟ್ಟ ಉದ್ಯಾನವನಕ್ಕೆ ಸಾಗಿಸಲಾಗಿದೆ. ಚಿರತೆ ಹಿಡಿಯಲು ನಡೆದ ಕಾರ್ಯಾಚರಣೆಯ ವೇಳೆ ಇಬ್ಬರು ಗಾಯಗೊಂಡಿದ್ದಾರೆ. ಈ ಕಾರ್ಯಾಚರಣೆ ನಡೆಸಿದ್ದು ಹೇಗೆ? ಎಂಬುದು ಕುತೂಹಲದ ವಿಷಯ.

ಚಿರತೆಯನ್ನು ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ವನ್ಯಜೀವಿ ತಜ್ಞ ಸಂಜಯ್‌ ಗುಬ್ಬಿ ಅವರ ಮೇಲೆ ಚಿರತೆ ದಾಳಿ ಮಾಡಿದೆ. ಸುಮಾರು 16 ಕಡೆ ಚಿರತೆ ಅವರನ್ನು ಕಚ್ಚಿದೆ. ಸದ್ಯ, ವೈಟ್‌ಫೀಲ್ಡ್‌ನಲ್ಲಿರುವ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂಜಯ್ ಗುಬ್ಬಿ ಅವರು ಸುಧಾರಿಸಿಕೊಳ್ಳಲು 6 ರಿಂದ 8 ವಾರಗಳು ಬೇಕು ಎಂದು ವೈದ್ಯರು ಹೇಳಿದ್ದಾರೆ. [ಚಿತ್ರಗಳು : ಬೆಂಗಳೂರು ಶಾಲೆಗೆ ಲಗ್ಗೆ ಹಾಕಿದ ಚಿರತೆ]

leopard

ಮೊದಲ ಕರೆ ಬಂತು : ಅಂದು ಫೆಬ್ರವರಿ 7ರ ಭಾನುವಾರ. ಸಂಜೆ 4.15ರ ಸುಮಾರಿಗೆ ತಾಯಿಯನ್ನು ಗುಬ್ಬಿ ಬಸ್ಸಿಗೆ ಹತ್ತಿಸುತ್ತಿದ್ದಂತೆ ಸಂಜಯ್ ಗುಬ್ಬಿ ಅವರಿಗೆ ಅರಣ್ಯ ಇಲಾಖೆಯಿಂದ ಕರೆ ಬಂತು. ವಿಬ್ ಗಯಾರ್ ಶಾಲೆಗೆ ಚಿರತೆ ನುಗ್ಗಿದ್ದು, ತಕ್ಷಣ ಆಗಮಿಸುವಂತೆ ಮನವಿ ಮಾಡಲಾಯಿತು. [ಶಾಲೆಗೆ ನುಗ್ಗಿದ ಚಿರತೆ ಸೆರೆ ಸಿಕ್ಕಿತು]

5.15ರ ಸುಮಾರಿಗೆ ವಿಬ್ ಗಯಾರ್ ಶಾಲೆ ತಲುಪಿದ ಸಂಜಯ್ ಗುಬ್ಬಿ ಅವರು, ಅಲ್ಲಿ ಅಡಗಿದ್ದ ಚಿರತೆಯನ್ನು ಹಿಡಿಯುವ ಕಾರ್ಯಾಚರಣೆ ಆರಂಭಿಸಿದರು. ಅವರು ಸೂಚಿಸಿದ್ದಂತೆ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡಿದ್ದರೆ. ಯಾರಿಗೂ ಗಾಯವಾಗದಂತೆ ಚಿರತೆಯನ್ನು ಸೆರೆ ಹಿಡಿಯಬಹುದಾಗಿತ್ತು. ಅಧಿಕಾರಿಗಳ ನಿರ್ಲಕ್ಷ್ಯತನದಿಂದಾಗಿ ಇಬ್ಬರ ಮೇಲೆ ಚಿರತೆ ದಾಳಿ ಮಾಡುವಂತಾಯಿತು.

ಸೂಚನೆ ನೀಡಿದರು : ಸಂಜಯ್ ಗುಬ್ಬಿ ಅವರು ಕಾರ್ಯಾಚರಣೆ ಆರಂಭಿಸುವ ಮೊದಲೇ ಆಂಬ್ಯುಲೆನ್ಸ್ ಮತ್ತು ಅಗ್ನಿ ಶಾಮಕ ದಳವ ವಾಹನವನ್ನು ಕರೆಸುವಂತೆ ಸೂಚನೆ ನೀಡಿದರು. 144 ಸೆಕ್ಷನ್ ಜಾರಿಗೊಳಿಸಿ ಸ್ಥಳದಿಂದ ಜನರನ್ನು ದೂರ ಸರಿಸುವಂತೆ ಪೊಲೀಸರಿಗೆ ಸೂಚಿಸಿದರು. ಸ್ವಿಮ್ಮಿಂಗ್ ಪೂಲ್‌ನಲ್ಲಿದ್ದ ನೀರನ್ನು ಖಾಲಿ ಮಾಡುವಂತೆ ಶಾಲೆಯ ಸಿಬ್ಬಂದಿಗಳಿಗೆ ಸೂಚಿಸಿದರು. ಆದರೆ, ಇವುಗಳನ್ನು ಯಾರೂ ಪಾಲಿಸಲಿಲ್ಲ.

ಯೋಜನೆ ಯಶಸ್ವಿಯಾಗಲಿಲ್ಲ : ಶಾಲೆಯ ಎಲ್ ಅಕಾರದ ಶೌಚಾಲಯದಲ್ಲಿ ಅಡಗಿದ್ದ ಚಿರತೆಗೆ ಅಲ್ಲಿಯೇ ಅರವಳಿಕೆ ಮದ್ದು ನೀಡಿ ಹಿಡಿಯುವ ಯೋಜನೆಯನ್ನು ಅವರು ಹಾಕಿದ್ದರು. ಆದರೆ, ಜನರ ಕೂಗಾಟ ಕೇಳಿದ ಚಿರತೆ ಶೌಚಾಲಯದಿಂದ ಜಿಗಿದು ಆಚೆ ಬಂದಿತು. ಅರಣ್ಯ ಇಲಾಖೆಯ ಚಾಲಕ ಮತ್ತು ಟಿವಿ ವಾಹಿನಿಯ ಕ್ಯಾಮರಾಮನ್ ಮೇಲೆ ದಾಳಿ ಮಾಡಲು ಮುಂದಾಯಿತು.

ಇದರಿಂದ ಆತಂಕಗೊಂಡ ಅವರು ಓಡಲಾರದೇ ಕೆಳಗೆ ಬಿದ್ದರು. ಅಷ್ಟರಲ್ಲೇ ಗೇಟ್ ಹತ್ತಿ ಜಿಗಿಯಲು ಪ್ರಯತ್ನ ನಡೆಸುತ್ತಿದ್ದ ಸಂಜಯ್ ಗುಬ್ಬಿ ಅವರ ಮೇಲೆ ಚಿರತೆ ದಾಳಿ ಮಾಡಿತು. ಅವರ ಎಡಗಾಲಿಗೆ ಬಾಯಿ ಹಾಕಿದ ಚಿರತೆ ಅವರನ್ನು ಕೆಳಕ್ಕೆ ಕೆಡವಿ ಬಲಗೈಗೆ ಕಚ್ಚಿತು. ಆತಂಕಗೊಳ್ಳದೆ ಅವರು ತಪ್ಪಿಸಿಕೊಳ್ಳುವ ವೇಳೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಗೆ ಅರವಳಿಕಗೆ ಮದ್ದನ್ನು ಶೂಟ್ ಮಾಡಿದರು.

ಸಂಜಯ್ ಅವರ ಮನವಿಯಂತೆ ಆಂಬ್ಯುಲೆನ್ಸ್ ಬಂದಿರಲಿಲ್ಲ. ಕಾರಿನ ಮೂಲಕ ಅವರನ್ನು ಆಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಯಿತು. ನಂತರ ಅಲ್ಲಿಂದ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಸ್ಥಳಾಂತರ ಮಾಡಲಾಯಿತು. 9.45ರಿಂದ ರಾತ್ರಿ ಒಂದು ಗಂಟೆ ತನಕ ವೈದ್ಯರು ಅವರಿಗೆ ಚಿಕಿತ್ಸೆ ನೀಡಿದರು. ಬಗಲೈ, ಎಡಗಾಲು ಸೇರಿದಂತೆ 16 ಕಡೆ ಅವರಿಗೆ ಕಚ್ಚಿ ಚಿರತೆಗಾಯಗೊಳಿಸಿತ್ತು.

ಇದೇ ಮೊದಲ ಬಾರಿಗೆ ಚಿರತೆ ದಾಳಿಗೆ ಒಳಗಾಗಿದ್ದೇನೆ. ಸರಿಯಾದ ಸಲಕರಣೆಗಳು, ಪರಿಣಿತರು, ಯೋಜನೆ ಹಾಕಿಕೊಂಡಿದ್ದರೆ, ಯಾರಿಗೂ ಗಾಯವಾಗದಂತೆ ಚಿರತೆಯನ್ನು ಸೆರೆಹಿಡಿಯಬಹುದಾಗಿತ್ತು ಎನ್ನುತ್ತಾರೆ ಸಂಜಯ್ ಗುಬ್ಬಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
After a 13 hour long operation Leopard caught alive at Vibgyor school at Kundalahalli near Whitefield, Bengaluru on Sunday. Sanjay Gubbi, a wildlife conservationist who attacked during the operation unveils how operation taken in school.
Please Wait while comments are loading...