ಊರ್ಧ್ವಮುಖಿಯಾಗಿರುವ ಬೆಂಗಳೂರು ರಿಯಲ್ ಎಸ್ಟೇಟ್

Posted By:
Subscribe to Oneindia Kannada

ಬೆಂಗಳೂರು, ಜುಲೈ 12 : ಕಳೆದ ಕೆಲವು ವರ್ಷಗಳಿಂದ ಸ್ಥಿರವಾಗಿದ್ದ ರಿಯಲ್ ಎಸ್ಟೇಟ್ ಉದ್ಯಮ 2016ರ ಜನವರಿಯಿಂದ ಮಾರ್ಚ್ ವೇಳೆಯ ಮೊದಲ ತ್ರೈಮಾಸಿಕದಲ್ಲಿ ಚೇತರಿಕೆ ಕಂಡಿದ್ದು, ಗಮನಾರ್ಹವಾಗಿ ಪ್ರಗತಿ ಕಂಡಿದೆ. ಹಾಗೆಯೆ, ಆಸ್ತಿ ಕೊಳ್ಳುವವರ ಮುಖದಲ್ಲಿ ಮಂದಹಾಸವನ್ನೂ ಮೂಡಿಸಿದೆ.

ಅಂತಾರಾಷ್ಟ್ರೀಯ ಪ್ರಾಪರ್ಟಿ ಕನ್‌ಸಲ್ಟೆಂಟ್ ಏಜೆನ್ಸಿಯಾಗಿರುವ ಜೋನ್ಸ್ ಲಾಂಗ್ ಲಾಸಲ್ಲೆ (ಜೆಎಲ್‌ಎಲ್)ಸಂಸ್ಥೆ ಇತ್ತೀಚೆಗೆ ಬಿಡುಗಡೆ ಮಾಡಿರುವ ಅಂಕಿಅಂಶಗಳು ಈ ಬೆಳವಣಿಗೆಯನ್ನು ತೋರಿಸಿವೆ.

2016ನೇ ಸಾಲಿನ ಮೊದಲ ತ್ರೈಮಾಸಿಕದಲ್ಲಿ ವಸತಿ(ಮನೆ) ಕ್ಷೇತ್ರದಲ್ಲಿ ಮನೆಗಳ ಮಾರಾಟದಲ್ಲಿ ಶೇ.9ರಷ್ಟು ಹೆಚ್ಚಳವಾಗಿದೆ. ಅಂದರೆ, ಈ ಅವಧಿಯಲ್ಲಿ 42,521 ಮನೆಗಳು ಮಾರಾಟವಾಗಿದ್ದರೆ, ಕಳೆದ ಸಾಲಿನ ಇದೇ ಅವಧಿಯಲ್ಲಿ 39,001 ಮನೆಗಳು ಮಾರಾಟವಾಗಿದ್ದವು. [ಬೆಂಗಳೂರಲ್ಲಿ ಮನೆ, ನಿವೇಶನ ಕೊಳ್ಳುವ ಕನಸು ನುಚ್ಚುನೂರು]

Real estate in Bangalore : Cheer to buyers

2015-16ನೇ ಸಾಲಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಮಾರಾಟ ಮತ್ತು ದರಗಳು ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡಿದ್ದವು. ಬೇಡಿಕೆಯಲ್ಲಿ ಇಳಿಕೆ ಮತ್ತು ಸೀಮಿತ ಲಿಕ್ವಿಡಿಟಿ ಇದ್ದ ಕಾರಣ ಹೊಸ ಯೋಜನೆಗಳ ಅನುಷ್ಠಾನಕ್ಕೆ ಅಡ್ಡಿಯಾಗಿದ್ದವು. ದೇಶದ ಆರ್ಥಿಕ ವ್ಯವಸ್ಥೆಯ ಪುನರ್‌ಸಮೀಕರಣ, ಹಣದುಬ್ಬರದಲ್ಲಿ ಇಳಿಕೆ ಮತ್ತು ಮನೆಗಳ ಬೆಲೆಯಲ್ಲಿ ಇಳಿಕೆ ಕಂಡುಬಂದಿರುವುದರಿಂದ ರಿಯಲ್ ಎಸ್ಟೇಟ್ ಉದ್ಯಮ ಮತ್ತೆ ಚೇತರಿಕೆ ಹಾದಿ ಹಿಡಿದಿದೆ ಎಂದು ಜೆಎಲ್‌ಎಲ್ ಅಂಕಿಅಂಶಗಳು ದೃಢಪಡಿಸುತ್ತಿವೆ.

ಸ್ಮಾರ್ಟ್ ಸಿಟಿ, ಅಮೃತ್ ಮತ್ತು 2022ರ ವೇಳೆಗೆ ಸರ್ವರಿಗೂ ವಸತಿಯಂತಹ ಸರ್ಕಾರದ ಯೋಜನೆಗಳಿಂದಾಗಿ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಸಕಾರಾತ್ಮಕವಾದ ಪರಿಣಾಮ ಬೀರಿದಂತಾಗಿದೆ. ಮತ್ತೊಂದು ಪ್ರಮುಖ ಅಂಶವೆಂದರೆ, ಬ್ಯಾಂಕುಗಳು ಬಡ್ಡಿ ದರವನ್ನು ಕಡಿಮೆ ಮಾಡಿರುವುದರಿಂದ ಸಾರ್ವಜನಿಕರು ರಿಯಲ್ ಎಸ್ಟೇಟ್ ಉದ್ಯಮದ ಮೇಲೆ ಅಂದರೆ, ಮನೆ ಖರೀದಿಗೆ ಬಂಡವಾಳ ತೊಡಗಿಸಲು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. [ದೇವನಹಳ್ಳಿ ಸಮೀಪದ 'ಕ್ಯಾಲಿಪೋರ್ನಿಯಾ'ಕ್ಕೆ ಹೋಗೋಣ ಬನ್ನಿ]

Real estate in Bangalore : Cheer to buyers

ಬೆಂಗಳೂರು ಮೂಲದ ಬ್ರಿಗೇಡ್ ಎಂಟರ್‌ಪ್ರೈಸಸ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಓಂ ಅಹುಜಾ ಅವರು ಹೇಳುವಂತೆ, 2015-16ನೇ ಸಾಲಿನಲ್ಲಿ 11 ದಶಲಕ್ಷಕ್ಕೂ ಅಧಿಕ ಕಚೇರಿ ಕಟ್ಟಡಗಳನ್ನು ಲೀಸ್‌ಗೆ ನೀಡಲಾಗಿದೆ. ಇದರಿಂದ 1.1 ಲಕ್ಷ ಜನರಿಗೆ ಉದ್ಯೋಗ ದೊರಕಿದಂತಾಗಿದ್ದು, ಬೆಂಗಳೂರಿನಲ್ಲಿ ಇದೇ ಪ್ರಗತಿ ಮುಂದಿನ ನಾಲ್ಕೈದು ವರ್ಷಗಳವರೆಗೆ ಮುಂದುವರೆಯಲಿದೆ ಎಂಬ ಆಶಾಭಾವನೆ ವ್ಯಕ್ತಪಡಿಸುತ್ತಾರೆ.

ಕ್ರೆಡಾಯ್ ಬೆಂಗಳೂರಿನ ಕಾರ್ಯದರ್ಶಿ ಸುರೇಶ್ ಹರಿ ಅವರು ಈ ಬಗ್ಗೆ ಪ್ರಸ್ತಾಪ ಮಾಡಿ, "ಪ್ರಸಕ್ತ ಹಣಕಾಸು ಸಾಲಿನಲ್ಲಿ ಆಗಿರುವ ಬೆಳವಣಿಗೆ ವರ್ಷದ ಸಮಗ್ರ ಪ್ರಗತಿಗೆ ದಿಕ್ಸೂಚಿಯಾಗಿದೆ. ಜಿಎಸ್‌ಟಿ ಜಾರಿಗೆ ಬರುವ ಸಾಧ್ಯತೆ ಇದ್ದು, ಉತ್ತಮ ಮುಂಗಾರು ಆಗುತ್ತಿರುವುದರಿಂದ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಉತ್ತಮ ಬೆಳವಣಿಗೆಯ ಮುನ್ಸೂಚನೆಯನ್ನು ನೀಡಿದೆ. ಬಹತೇಕ ಎಲ್ಲಾ ಚುನಾವಣೆ ಮುಗಿದಿದ್ದು, ಅನಿಶ್ಚಿತತೆ ದೂರ ಸರಿದಿದೆ. ಹೀಗಾಗಿ ಎಲ್ಲಾ ಕ್ಷೇತ್ರಗಳಲ್ಲಿ ಪ್ರಗತಿಗೆ ಪೂರಕವಾದ ವಾತಾವರಣ ಸೃಷ್ಟಿಯಾಗಿದೆ" ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ರಿಯಲ್ ಎಸ್ಟೇಟ್ ಉದ್ಯಮ ಗಣನೀಯ ಪ್ರಮಾಣದಲ್ಲಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಇದಕ್ಕೆ ಅಗತ್ಯವಾದ ಪ್ರಕ್ರಿಯೆಗಳು ನಡೆಯಬೇಕಿದೆ. ಅಂದರೆ, ಮೆಟ್ರೋ ರೈಲು ಸಂಪರ್ಕ ಮತ್ತಷ್ಟು ಹೆಚ್ಚಾಗಬೇಕಿದೆ. ಇದು ಭೂಮಿಯ ಬೆಲೆಯನ್ನು ಹೆಚ್ಚಿಸಲಿದೆ. ಆರ್ಥಿಕ ಪ್ರಗತಿ, ಕೈಗೆಟುಕುವ ದರದಲ್ಲಿ ಮನೆ ಲಭ್ಯತೆ, ಅಗತ್ಯ ಮೂಲಸೌಕರ್ಯಗಳ ಅಭವೃದ್ಧಿಗೆ ಪೂರಕವಾದ ಸುಧಾರಣಾ ಕ್ರಮಗಳನ್ನು ಸರ್ಕಾರ ಕೈಗೊಂಡರೆ ಹೆಚ್ಚು ಸಾರ್ವಜನಿಕರು ಮನೆಗಳ ಖರೀದಿಗೆ ಮುಂದಾಗುತ್ತಾರೆ ಎನ್ನುತ್ತಾರೆ ರಿಯಲ್ ಎಸ್ಟೇಟ್ ಉದ್ಯಮದ ಪರಿಣಿತರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Here is good news for property buyers in Bengaluru. Real estate in Bangalore is on the rise due to reduction in bank loan rate, reduction in inflation etc. The first quarter of 2016-17 has seen an unward trend in real estate business.
Please Wait while comments are loading...