ಹೀಗೊಂದು ಅಪರೂಪದ ಮದುವೆಗೆ ಸರಕಾರದ್ದೇ ಪೌರೋಹಿತ್ಯ

Subscribe to Oneindia Kannada

ಬೆಂಗಳೂರು, ಮೇ 18: ಅದೊಂದು ಅಪರೂಪದ ಮದುವೆ; ಮಾನವೀಯ ತುಡಿತವನ್ನು ಸಾಕ್ಷೀಕರಿಸಿದ ಕ್ಷಣವೂ ಹೌದು. ಆಕೆ ಬಾಲಕಾರ್ಮಿಕ ಪದ್ದತಿಗೆ ಸಿಲುಕಿ ಸಂಕಷ್ಟದಿಂದ ಪಾರಾಗಿ ಬಾಲ ಮಂದಿರ ಸೇರಿದ ಅನಾಥ ಹೆಣ್ಣುಮಗಳು. ಈತ ಸಾಮಾಜಿಕ ತುಡಿತ ಇಟ್ಟುಕೊಂಡ ಸಹೃದಯ ಯುವಕ; ಅನಾಥೆಗೆ ಬಾಳು ಕೊಡಬೇಕೆಂಬ ಸಂಕಲ್ಪ ಮಾಡಿದ. ಪೋಷಕರು ಪುತ್ರನ ಅಪೇಕ್ಷೆಗೆ ತೆಗೆದುಕೊಂಡ ನಿರ್ಧಾರ ಪರಿಣಾಮವೇ ಈ ಮದುವೆ.

ಬಾಲಕಾರ್ಮಿಕ ಪದ್ದತಿಯ ಶೋಷಣೆಗೊಳಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಸ್ವೀಕಾರ ಕೇಂದ್ರದಲ್ಲಿ ಚೈತ್ರಾ ಕೆ.ಎಸ್ ಆಶ್ರಯ ಪಡೆದಿದ್ದರು. ಈ ಅನಾಥೆಗೆ ಬಾಳು ಕೊಡಬೇಕೆಂಬ ದೃಢ ಸಂಕಲ್ಪ ಕೈಗೊಂಡಿದ್ದರು ರೂಪೇಶ್ ಕುಮಾರ ಕೆ.ಸಿ.[ದೇಗುಲಕ್ಕೊಬ್ಬ ಜ್ಯೋತಿಷಿ ನೇಮಿಸಲು ಮುಂದಾದ ಸಿದ್ದು ಸರ್ಕಾರ]

ಇವತ್ತು ಇವರಿಬ್ಬರ ವಿವಾಹ ಬೆಂಗಳೂರಿನ ಹೊಸೂರು ರಸ್ತೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಸ್ವೀಕಾರ ಕೇಂದ್ರದ ಆವರಣದಲ್ಲಿರುವ ಗಣಪತಿ ದೇವಾಲಯದಲ್ಲಿ ನೆರವೇರಿತು.

 Rare wedding, Man tied knot with orphanage girl in Bengaluru

ಇಲಾಖೆಯ ಉಪನಿರ್ದೇಶಕಿ ರತ್ನಾ ಬಿ. ಕಲಮದಾನಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಅಧಿಕಾರಿ ಗೀತಾ ಪಾಟೀಲ್ ಮತ್ತು ಸ್ವೀಕಾರ ಕೇಂದ್ರದ ಅಧೀಕ್ಷಕಿ ಪುಟ್ಟರತ್ನ ಜಿ ಸೇರಿದಂತೆ ವರನ ತಂದೆ, ತಾಯಿ ಬಂಧು ಬಳಗ, ಸ್ವೀಕಾರ ಕೇಂದ್ರದ ಸಿಬ್ಬಂದಿಗಳೂ ಸೇರಿದಂತೆ ಸುಮಾರು ನೂರು ಮಂದಿ ಈ ಅಪರೂಪದ ಮದುವೆಗೆ ಸಾಕ್ಷಿಯಾದರು.

ಅನಾಥೆಗೆ ಬಾಳು ನೀಡಿದ ರೂಪೇಶ್

ಬೆಂಗಳೂರಿನಲ್ಲಿ ಖಾಸಗಿ ಸಂಸ್ಥೆಯಲ್ಲಿ ನೌಕರಿಯಲ್ಲಿರುವ ಮತ್ತು ಸ್ವಂತ ಮನೆಯನ್ನೂ ಸಹ ಹೊಂದಿರುವ ರೂಪೇಶ್ ಕುಮಾರ್ ಗೆ ಬಹಳ ಹಿಂದಿನಿಂದಲೂ ಓರ್ವ ಅನಾಥೆಗೆ ಬಾಳು ಕೊಡಬೇಕೆಂಬ ಬಲವಾದ ಇಚ್ಚೆ ಇತ್ತು. ಅಂತೆಯೇ ತಮ್ಮ ಮನದ ಇಂಗಿತವನ್ನು ತಮ್ಮ ಪೋಷಕರ ಮುಂದೆ ತೋಡಿಕೊಂಡಿದ್ದರು. ಮಗನ ಮನದಾಸೆಯನ್ನು ಅರ್ಥ ಮಾಡಿಕೊಂಡ ಪೋಷಕರು ಕಿಂಚಿತ್ತೂ ವಿರೋಧ ವ್ಯಕ್ತಪಡಿಸದೆ ತಮ್ಮ ಮಗನ ಮನೋಭಿಲಾಷೆಯನ್ನು ಸಾಕಾರಗೊಳಿಸಲು ನಿರ್ಧರಿಸಿದ್ದರು.

ಅದರಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಸ್ವೀಕಾರ ಕೇಂದ್ರದಲ್ಲಿರುವ ತಮ್ಮ ಸಂಬಂಧಿಕರೊಬ್ಬರಿಗೆ ಈ ವಿಚಾರವನ್ನು ತಿಳಿಸಿದ್ದರು. ಹೀಗೆ ಒಂದು ದಿನ ಸ್ವೀಕಾರ ಕೇಂದ್ರಕ್ಕೆ ಭೇಟಿ ನೀಡಿ ಚೈತ್ರಾಳನ್ನು ನೋಡಿದ್ದರು.

ಚೈತ್ರಾ ಬಾಲ ಕಾರ್ಮಿಕ ಪದ್ದತಿಯ ಶೋಷಣೆಗೊಳಪಟ್ಟು ತಾನು ಕೆಲಸ ಮಾಡುತ್ತಿದ್ದ ಮನೆಯಿಂದ ತಪ್ಪಿಸಿಕೊಂಡು ಬಂದು ಸಾರ್ವಜನಿಕರು, ಪೊಲೀಸರ ಮುಖಾಂತರ ಬಾಲಕಿಯರ ಬಾಲ ಮಂದಿರಕ್ಕೆ ಸೇರಿಕೊಂಡಿದ್ದವರು. ತದನಂತರ ಸ್ವೀಕಾರ ಕೇಂದ್ರಕ್ಕೆ ದಾಖಲೆಗೊಂಡಿದ್ದರು.

ಚೈತ್ರಳನ್ನು ನೋಡಿ ರೂಪೇಶ್ ಕುಮಾರ್ ಮದುವೆಗೆ ಒಪ್ಪಿದ್ದರು. ಪರಸ್ಪರ ಇಬ್ಬರೂ ಒಪ್ಪಿಗೆ ವ್ಯಕ್ತಪಡಿಸಿದ ನಂತರ ಕಾನೂನಾತ್ಮಕ ಪ್ರಕ್ರಿಯೆ ಪೂರ್ಣಗೊಂಡು ಇಂದು ವಿವಾಹ ಏರ್ಪಡಿಸಲಾಗುತ್ತು. ಇದೀಗ ಇಬ್ಬರೂ ಸತಿಪತಿಗಳಾಗಿದ್ದಾರೆ.

"ಹದಿನೆಂಟು ವರ್ಷ ಪೂರ್ತಿಗೊಳಿಸಿದ್ದ ಕು.ಚೈತ್ರಾಳಿಗೆ ನಿಯಮಾನುಸಾರ ವಿವಾಹ ಮಾಡಲು ನಿಶ್ಚಯಿಸಿ ವರಾನ್ವೇಷಣೆ ನಡೆಸಿದ್ದೆವು. ಅದರಂತೆ ರೂಪೇಶ್ ಕುಮಾರ್ ಎಂಬವರು ಅವರ ತಂದೆ ತಾಯಿ ಜೊತೆ ಈ ಸಂಸ್ಥೆಗೆ ಬಂದು ಕು.ಚೈತ್ರಾಳನ್ನು ನೋಡಿ ಮದುವೆಯಾಗಲು ಸಮ್ಮತಿ ನೀಡಿದ್ದರು. ಸರ್ಕಾರದ ನಿಯಮಾನುಸಾರ ಪ್ರಸ್ತಾವನೆ ಸಲ್ಲಿಸಿ ಸರ್ಕಾರದ ಅನುಮತಿ ಪಡೆದು ಈ ವಿವಾಹ ನಡೆಸಲಾಗಿದೆ," ಎನ್ನುತ್ತಾರೆ ಸ್ವೀಕಾರ ಕೇಂದ್ರದ ಅಧೀಕ್ಷಕಿ ಪುಟ್ಟರತ್ನ.

'ನಿಯಮನುಸಾರ ಸರ್ಕಾರ ನೀಡುವ ಇಪ್ಪತ್ತು ಸಾವಿರ ಅನುದಾನದಲ್ಲಿ ಹದಿನೈದು ಸಾವಿರ ರೂ.ಗಳನ್ನು ನೂತನ ದಂಪತಿಗಳಿಬ್ಬರ ಹೆಸರಿನಲ್ಲಿ ಫಿಕ್ಸೆಡ್ ಡೆಪಾಸಿಟ್ ಇಡಲಿದ್ದು, ಉಳಿದ ಐದು ಸಾವಿರದಲ್ಲಿ ವಿವಾಹದ ಖರ್ಚು ವೆಚ್ಚ ನೋಡಿಕೊಳ್ಳಲಾಗುವುದು. ಸಾಂಪ್ರದಾಯಿಕ ಮದುವೆಯ ನಂತರ ವಿವಾಹ ನೋಂದಣಾಧಿಕಾರಿ ಕಚೇರಿಯಲ್ಲಿ ವಿವಾಹವನ್ನು ನೋಂದಣಿ ಮಾಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ನಿಮಗೂ ಇಚ್ಚೆ ಇದೆಯಾ?

ಅನಾಥರನ್ನು ಮದುವೆಯಾಗಬೇಕು ಎಂದು ಇಚ್ಚಿಸುವವರಿಗೆ ಅವಕಾಶವಿದೆ. ಮೊದಲಿಗೆ ವಿವಾಹವಾಗಲು ಅಪೇಕ್ಷಿಸಿ ಬರುವ ವರನ ಸಂಪೂರ್ಣ ವಿವರವನ್ನು ಕಲೆ ಹಾಕಲಾಗುತ್ತದೆ. ವರ ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯವಾಗಿದ್ದು, ತಾವು ವಿವಾಹವಾಗುವ ಹುಡುಗಿಯನ್ನು ಸಾಕಲು ಆರ್ಥಿಕವಾಗಿ ಸಬಲರಾಗಿರಬೇಕು.

ಎಲ್ಲಕ್ಕಿಂತ ಮುಖ್ಯವಾಗಿ ಯಾವುದೇ ಅಪರಾಧ ಹಿನ್ನಲೆಯುಳ್ಳವನಾಗಿರಬಾರದು ಮತ್ತು ಈ ಕುರಿಂತಂತೆ ಪೊಲೀಸ್ ಇಲಾಖೆಯಿಂದ ಪ್ರಮಾಣ ಪತ್ರ ತರಬೇಕು. ಈ ಎಲ್ಲ ಪ್ರಕ್ರಿಯೆ ಪೂರ್ಣಗೊಂಡ ನಂತರ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಅಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿ ಅನುಮತಿ ಪಡೆಯಬೇಕು. ಹೀಗೆ ಒಪ್ಪಿಗೆ ದೊರೆತ ನಂತರ ಮುಂದೆ ವಿವಾಹ ಪ್ರಕ್ರಿಯೆ ನಡೆಸಲಾಗುತ್ತದೆ.

ಇದುವರೆಗೆ ಸ್ವೀಕಾರ ಕೇಂದ್ರದಲ್ಲಿ ನಾಲ್ಕು ವಿವಾಹಗಳು ನಡೆದಿದ್ದು, ಚೈತ್ರ ಮತ್ತು ರೂಪೇಶ್‍ಕುಮಾರ್ ಅವರದ್ದು ಈ ಸಾಲಿನ ಮೊದಲ ಮದುವೆ. ಸ್ವೀಕಾರ ಕೇಂದ್ರದ ಮತ್ತಿಬ್ಬರು ಹುಡುಗಿಯರಿಗೆ ಸದ್ಯದಲ್ಲೇ ಕಂಕಣ ಬಲ ಕೂಡಿ ಬರಲಿದೆ. ಈ ನಿಟ್ಟಿನಲ್ಲಿ ಸರ್ಕಾರದ ನಿಯಮಾನುಸಾರ ಮದುವೆ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಅಧೀಕ್ಷಕಿ ಪುಟ್ಟರತ್ನ ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
In a rare occasion a man came forward to marry an orphanage girl in Bengaluru. They tied knot in ‘Sweekara Kendra’ in front of Women and Child Welfare Department officials here Hosur road.
Please Wait while comments are loading...