ರಾಜ ಕಾಲುವೆ ಒತ್ತುವರಿ, ಈಗ ಅಧಿಕಾರಿಗಳಿಗೆ ಶಿಕ್ಷೆ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 10 : ಬೆಂಗಳೂರು ನಗರದಲ್ಲಿ ರಾಜ ಕಾಲುವೆ ಒತ್ತುವರಿ ತೆರವು ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಒಂದು ಕಡೆ ಜೆಸಿಬಿಗಳು ಘರ್ಜನೆ ನಡೆಸುತ್ತಿದ್ದರೆ, ಮತ್ತೊಂದು ಕಡೆ ಒತ್ತುವರಿಗೆ ಸಹಾಯ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ ನೀಡಿದ್ದಾರೆ.

ರಾಜ ಕಾಲುವೆ ಒತ್ತುವರಿ ಸಂಬಂಧ 20 ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಒಪ್ಪಿಗೆ ನೀಡಲಾಗಿದೆ. ಇವರಲ್ಲಿ 13 ಮಂದಿ ಹಾಲಿ ಮತ್ತು 7 ಮಂದಿ ನಿವೃತ್ತ ಅಧಿಕಾರಿಗಳು ಸೇರಿದ್ದಾರೆ. ಹಾಲಿ ಅಧಿಕಾರಿಗಳನ್ನು ಅಮಾನತು ಮಾಡಲು ಸಿದ್ದರಾಮಯ್ಯ ಸೂಚನೆ ಕೊಟ್ಟಿದ್ದಾರೆ.[ರಾಜ ಕಾಲುವೆ ಒತ್ತುವರಿ ತೆರವು ಸಮರ್ಥಿಸಿಕೊಂಡ ಸಿದ್ದರಾಮಯ್ಯ]

bbmp

ನಗರದಲ್ಲಿ ರಾಜ ಕಾಲುವೆಗಳನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಿದ ಮನೆಗಳನ್ನು ತೆರವು ಮಾಡಲಾಗುತ್ತಿದೆ. ಅಕ್ರಮವಾಗಿ ಮನೆ, ಕಟ್ಟಡ ನಿರ್ಮಾಣ ಮಾಡಲು ಸಹಕರಿಸಿದ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ.[ಒತ್ತುವರಿ ತೆರವಿನಲ್ಲೂ ಪ್ರಭಾವದ ಒಳಸುಳಿ]

ಒತ್ತುವರಿ ಮಾಡಿ ನಿರ್ಮಿಸಿರುವ ಬಡಾವಣೆಗಳಲ್ಲಿ ಮನೆಗಳನ್ನು ಕಟ್ಟಿಕೊಳ್ಳಲು ಸಹಕರಿಸಿದ ಆರೋಪ ಅಧಿಕಾರಿಗಳ ಮೇಲಿದೆ. ಜೊತೆಗೆ ಅಕ್ರಮವಾಗಿ ನಿರ್ಮಿಸಿರುವ ಕಟ್ಟಡಗಳಿಗೆ ಈ ಅಧಿಕಾರಿಗಳು ನಕ್ಷೆ ಮಂಜೂರು ಮಾಡಿದ್ದಾರೆ. ಖಾತಾ ಸಹ ಮಾಡಿಕೊಟ್ಟಿದ್ದಾರೆ ಎಂಬ ಆರೋಪಗಳಿವೆ.[ಮನೆ ಕಳೆದುಕೊಂಡವರಿಂದ ಬಿಬಿಎಂಪಿಗೆ ಪ್ರಶ್ನೆಗಳ ಸುರಿಮಳೆ]

ಜುಲೈ ತಿಂಗಳ ಅಂತ್ಯದಲ್ಲಿ ಬೆಂಗಳೂರಿನಲ್ಲಿ ಸುರಿದ ಮಳೆಯಿಂದ ಭಾರೀ ಅನಾಹುತ ನಡೆದಿತ್ತು. ಬಿಬಿಎಂಪಿ ಅಧಿಕಾರಿಗಳ ಸಭೆ ನಡೆಸಿದ್ದ ಸಿದ್ದರಾಮಯ್ಯ ಅವರು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು. ಜೊತೆಗೆ ಅಕ್ರಮ ನಿರ್ಮಾಣಗಳಿಗೆ ಸಹಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ವರದಿ ಸಲ್ಲಿಸಲು ಸೂಚನೆ ನೀಡಿದ್ದರು.

'ರಾಜ ಕಾಲುವೆ, ಕೆರೆ ತೆರವು ಮಾಡದಿದ್ದರೆ ಮುಂದೊಂದು ದಿನ ಚೆನ್ನೈ ನಗರದ ಪರಿಸ್ಥಿತಿ ನಮಗೂ ಬರಬಹುದು. ಒತ್ತುವರಿ ತೆರವಿನಿಂದ ಕೆಲವರಿಗೆ ತೊಂದರೆ ಆಗಿರಬಹುದು. ಹಲವರಿಗೆ ಅನುಕೂಲವೇ ಆಗಲಿದೆ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Karnataka government has given its nod for registration of criminal cases against 20 officers responsible for the encroachment of raja kaluves in Bengaluru city.
Please Wait while comments are loading...