ಚಿತ್ರಗಳು : ರಾಜಧಾನಿಯಲ್ಲಿ ಕಳಸಾ-ಬಂಡೂರಿ ಕಿಚ್ಚು

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 26 : ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಕಳಸಾ-ಬಂಡೂರಿ ಹೋರಾಟದ ಕಿಚ್ಚು ಹತ್ತಿದೆ. ಕನ್ನಡಪರ ಸಂಘಟನೆಗಳು ಯೋಜನೆ ಬಗ್ಗೆ ತೀರ್ಮಾನ ಕೈಗೊಳ್ಳಲು ಕೇಂದ್ರ ಸರ್ಕಾರಕ್ಕೆ 15 ದಿನಗಳ ಗಡುವು ಕೊಟ್ಟಿವೆ. [ಸುದ್ದಿ ದನಿ : ಕಳಸಾ ಕಿಚ್ಚು]

ಕಳಸಾ ಬಂಡೂರಿ ಯೋಜನೆ ಜಾರಿಗೆ ಒತ್ತಾಯಿಸಿ ನಗರದಲ್ಲಿ ಶನಿವಾರ ಬೃಹತ್ ಪ್ರತಿಭಟನೆ ನಡೆಯಿತು. ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ, ಟೌನ್‌ಹಾಲ್‌ನಿಂದ ನಗರ ಕೇಂದ್ರ ರೈಲು ನಿಲ್ದಾಣದವರೆಗೆ ಕನ್ನಡ ಪರ ಸಂಘಟನೆಗಳ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. [ಏನಿದು ಕಸಳಾ-ಬಂಡೂರಿ ಯೋಜನೆ?]

mahadayi

ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ವಾಟಾಳ್ ನಾಗರಾಜ್ ಮತ್ತು ಅಖಿಲ ಕರ್ನಾಟಕ ಸಾ.ರಾ.ಗೋವಿಂದು ಅಭಿಮಾನಿಗಳ ಸಂಘದವರು ರೈಲು ತಡೆ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಅತ್ತ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಣದವರು ಕಂಟೋನ್ಮೆಂಟ್ ನಿಲ್ದಾಣದಲ್ಲಿ ಕೆಲ ಕಾಲ ರೈಲು ತಡೆ ನಡೆಸಿದರು. [ಕಳಸಾ-ಬಂಡೂರಿಗಾಗಿ ಏ.18ರಂದು ಕರ್ನಾಟಕ ಬಂದ್]

-
-
-
-
-
-
-

ವಾಚ್ ಮಾತ್ರ ಕಾಣಿಸುತ್ತದೆ : ಫ್ರೀಡಂಪಾರ್ಕ್‌ನಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ವಾಟಾಳ್ ನಾಗರಾಜ್ ಅವರು, 'ಬಿಜೆಪಿ ನಾಯಕರಿಗೆ ಸಿದ್ದರಾಮಯ್ಯ ಅವರ ವಾಚ್ ಮಾತ್ರ ಕಾಣಿಸುತ್ತದೆ. ಅವರಿಗೆ ನೀರಿನ ಸಮಸ್ಯೆ ಕಾಣುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಾ ಈ ವಿಚಾರದಲ್ಲಿ ಸುಮ್ಮನಿದ್ದಾರೆ. ಸರ್ಕಾರ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲಾಗುತ್ತದೆ' ಎಂದು ಎಚ್ಚರಿಕೆ ನೀಡಿದರು. [ಕಳಸಾ-ಬಂಡೂರಿ : ಮೋದಿ ಭೇಟಿಯಾದ ದೇವೇಗೌಡ]

'ಯೋಜನೆ ಜಾರಿಗಾಗಿ ಜೈಲಿಗೆ ಹೋಗಲು ನಾವು ಸಿದ್ಧರಿದ್ದೇವೆ. ಪ್ರಧಾನಿ ನರೇಂದ್ರ ಮೋದಿಯವರು ಎರಡು ಬಾರಿ ರಾಜ್ಯಕ್ಕೆ ಬಂದರೂ ಕಳಸಾ ಬಂಡೂರಿ ಯೋಜನೆ ಬಗ್ಗೆ ಚಕಾರ ಎತ್ತದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ರಾಜ್ಯದ ಬಿಜೆಪಿ ಸಂಸದರು ಪ್ರಧಾನಿಯವರಿಗೆ ಯೋಜನೆ ಬಗ್ಗೆ ಮನವೊಲಿಸಲು ವಿಫಲರಾಗುತ್ತಿದ್ದಾರೆ' ಎಂದು ವಾಟಾಳ್ ಆರೋಪಿಸಿದರು.

'ಕಳಸಾ-ಬಂಡೂರಿ ಕುಡಿಯುವ ನೀರಿನ ಯೋಜನೆ ಹೋರಾಟಕ್ಕೆ ತಾರ್ಕಿಕ ಅಂತ್ಯ ಕಾಣಿಸಲು ಎಲ್ಲಾ ಕನ್ನಡ ಪರ ಸಂಘಟನೆಗಳು ಹಾಗೂ ರೈತ ಸಂಘಟನೆಗಳು ಸಜ್ಜಾಗಿವೆ. ಎಷ್ಟು ಹೋರಾಟ ಮಾಡಿದರೂ ಸರ್ಕಾರ ಸ್ಪಂದಿಸುತ್ತಿಲ್ಲ. 15 ದಿನದೊಳಗೆ ಕೇಂದ್ರ ಸರ್ಕಾರ ಅಂತಿಮ ನಿರ್ಧಾರ ತೆಗೆದುಕೊಳ್ಳದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುತ್ತದೆ' ಎಂದು ವಾಟಾಳ್ ಹೇಳಿದರು.

ಸಾ.ರಾ.ಗೋವಿಂದು, ಕೆ.ಆರ್.ಕುಮಾರ್, ಶಿವರಾಮೇಗೌಡ, ಪ್ರವೀಣ್‌ ಕುಮಾರ್ ಶೆಟ್ಟಿ, ಗಿರೀಶ್‌ ಗೌಡ ಮುಂತಾದವರು ಇಂದಿನ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka Rakshana Vedike and other pro-Kannada organizations members staged a protest at the Bengaluru city railway station on Saturday and demanded the central government to implement the Kalasa Banduri drinking water project.
Please Wait while comments are loading...