ಹಾಲಿಗೆ ಹಾಲೇ ಪರ್ಯಾಯ ಹೊರತು ಹಾಲಾಹಲವಲ್ಲ

Written By:
Subscribe to Oneindia Kannada

ಬೆಂಗಳೂರು, ಆಗಸ್ಟ್ 22: ಹಾಲಿಗೆ ಹಾಲೇ ಪರ್ಯಾಯ, ಹೊರತು ಹಾಲಾಹಲವಲ್ಲ. ಶಂಕರ ತಳಿಯ ಹಸು ದಿನಕ್ಕೆ 20 ಲೀಟರ್ ಹಾಲು ಕೊಡುತ್ತದೆ. ಆದರೆ, ಅದು ಆರೋಗ್ಯಕ್ಕೆ ಪೂರಕವಲ್ಲ.

20 ಲೀಟರ್ ವಿಷವನ್ನು ಕುಡಿಯುವುದಕ್ಕಿಂತ 2 ಲೀಟರ್ ಅಮೃತ ಸದೃಶವಾದ ದೇಶೀಯ ಹಾಲಿನಲ್ಲಿ ಸಂತೃಪ್ತಿ ಪಡುವುದೇ ಜಾಣತನ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳು ಅಭಿಪ್ರಾಯ ಪಟ್ಟಿದ್ದಾರೆ.

ನಗರದಲ್ಲಿ ಸೋಮವಾರ (ಆ 22) ಗೋಚಾತುರ್ಮಾಸ್ಯದ 35ನೇ ದಿನದ ಧಾರ್ಮಿಕ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡುತ್ತಾ ರಾಘವೇಶ್ವರ ಶ್ರೀಗಳು, ತಾಯಿಗೆ - ಗೋವಿಗೆ - ಹಾಲಿಗೆ ಪರ್ಯಾಯವಿಲ್ಲ. ಹಾಲಿಗಾಗಿ ಹೋರಾಟವನ್ನು ಮಾಡಿ, ಹಾಲಲ್ಲದ್ದನ್ನು ಸ್ವೀಕರಿಸಬೇಡಿ ಎಂದು ಕರೆ ನೀಡಿದರು.

Raghaveshwara Seer of Ramachandrapura Math's 35th day speech

ಭಾರತ ತಾಯಿಯ ಮಕ್ಕಳಾದ ನಮಗೆಲ್ಲರಿಗೂ ಶುದ್ಧ ಹಸುವಿನ ಹಾಲು ಕುಡಿಯುವ ಹಕ್ಕಿದೆ. ಸಾಮೂಹಿಕ ಬೇಡಿಕೆ ಎದ್ದಾಗ ಪೂರೈಸುವ ವ್ಯವಸ್ಥೆ ತಾನಾಗಿಯೇ ಬೆಳೆಯುತ್ತದೆ.

ಶ್ರೀಮಠದ ಪ್ರೇರಣೆಯಿಂದ ಬೆಂಗಳೂರಿನ ಸುತ್ತಮುತ್ತ, ಜನರ ಹೆಸರಿನಲ್ಲಿ ಗೋವನ್ನು ಸಾಕುವ ಮತ್ತು ಅದರ ಹಾಲನ್ನು ಪೂರೈಸುವ ವ್ಯವಸ್ಥೆ ರೂಪುಗೊಂಡಿದೆ. ಇಂತಹ ಪ್ರಯತ್ನ ನಿಜಕ್ಕೂ ಶ್ಲಾಘನೀಯ ಎಂದು ರಾಘವೇಶ್ವರ ಶ್ರೀಗಳು ನುಡಿದಿದ್ದಾರೆ.

ಹಾಲಿಲ್ಲದ ಬದುಕು ಜೀವವಿಲ್ಲದ ಬದುಕು ಎಂದು ಆಯುರ್ವೇದ ಹೇಳುತ್ತದೆ, ಹಾಲು ಜೀವದ್ರವ ಎಂದಿರುವ ಆಯುರ್ವೇದ, ಹಾಲನ್ನು ಔಷಧಗಳ ಸಾರ ಎಂದು ಕೊಂಡಾಡಿದೆ.

ದೇಶೀಯ ಗೋವು ಸೂರ್ಯಕೇತು ನಾಡಿಯ ಮುಖಾಂತರ ಸೂರ್ಯಕಿರಣವನ್ನು ಹೀರಿಕೊಂಡು ಸತ್ವಯುತವಾದ ಹಾಲನ್ನು ನೀಡುತ್ತದೆ. ಆಧುನಿಕ ವಿಜ್ಞಾನವೂ ದೇಶೀಯ ಹಾಲಿನ ಗುಣವನ್ನು ಒಪ್ಪುತ್ತದೆ ಎನ್ನುವ ಸಂಶೋಧನೆಗಳ ಸಾರವನ್ನು ಶ್ರೀಗಳು ಈ ಸಂದರ್ಭದಲ್ಲಿ ಉಲ್ಲೇಖಿಸಿದರು.

'ಮಂಗಳ ಚಾತುರ್ಮಾಸ್ಯದ ಸೀಮೋಲ್ಲಂಘನದ ನಂತರ ಕರ್ನಾಟಕ ಸೇರಿದಂತೆ ಸಪ್ತರಾಜ್ಯಗಳಲ್ಲಿ 'ಗೋಕಿಂಕರ ಯಾತ್ರೆ' ಮತ್ತು 'ಮಂಗಳ ಗೋ ಯಾತ್ರೆ' ನಡೆಯಲಿದೆ. ಗೋವಿನ ಈ ಮಹಾಭಿಯಾನದಲ್ಲಿ ಎಲ್ಲರೂ ಭಾಗವಹಿಸಿ ಗೋಸಂರಕ್ಷಣಾ ಕಾರ್ಯದಲ್ಲಿ ಭಾಗಿಗಳಾಗಿ ಎಂದು ಭಕ್ತರಿಗೆ ಶ್ರೀಗಳು ಕರೆನೀಡಿದರು.

Raghaveshwara Seer of Ramachandrapura Math's 35th day speech

ಅರಕಲಗೂಡು ವಿರಕ್ತ ಮಠದ ಸ್ವತಂತ್ರ ಬಸವಲಿಂಗ ಶಿವಯೋಗಿಗಳು ಸಂತ ಸಂದೇಶ ನೀಡಿ, ಗೋಹತ್ಯೆಯನ್ನು ಬೆಂಬಲಿಸುವವರು, ತಮ್ಮ ಮಾತೆಯನ್ನು ಹತ್ಯೆಮಾಡಲು ಬೆಂಬಲಿಸುತ್ತಾರೆಯೇ ಎಂಬ ಅವಲೋಕನವನ್ನು ಮಾಡಿಕೊಳ್ಳಬೇಕು ಎಂದಿದ್ದಾರೆ. (ನಾವೆಲ್ಲಾ ಆಂಜನೇಯರಾಗಬೇಕಿದೆ)

ಅರಕಲುಗೂಡಿನ ತಮ್ಮ ಮಠದಲ್ಲೂ ಗೋಶಾಲೆಯನ್ನು ಸದ್ಯದಲ್ಲಿಯೇ ಆರಂಭಿಸಲಿದ್ದು, ಆ ಗೋಶಾಲೆಗೆ ಪ್ರಥಮ ಗೋವನ್ನು ಶ್ರೀರಾಮಚಂದ್ರಾಪುರ ಮಠದಿಂದ ಅನುಗ್ರಹಿಸಬೇಕು ಎಂದು ಬಸವಲಿಂಗ ಶಿವಯೋಗಿಗಳು ನಿವೇದಿಸಿಕೊಂಡರು.

ಹೊರನಾಡಿನ ಧರ್ಮಕರ್ತರಾದ ಶ್ರೀಭೀಮೇಶ್ವರ ಜೋಷಿ ದಂಪತಿಗಳಿಗೆ ಮತ್ತು ಬೆಂಗಳೂರು ನಗರದಲ್ಲಿ ದೇಶಿಯ ಹಸುವಿನ ಸಾಕಾಣೆಯಲ್ಲಿ ತೊಡಗಿಸಿಕೊಂಡಿರುವ ರಘು ಅವರುಗಳಿಗೆ ಶ್ರೀಗಳು ಗೋಸೇವಾ ಪುರಸ್ಕಾರವನ್ನು ಅನುಗ್ರಹಿಸಿದರು.

ಇದಕ್ಕೂ ಮುನ್ನ, 'ಗ್ರಾಮರಾಜ್ಯ'ದ ನೂತನ ಕಾರ್ಯಾಲಯ ಹಾಗೂ ವಿತರಣಾ ಕೇಂದ್ರವನ್ನುರಾಘವೇಶ್ವರ ಶ್ರೀಗಳು ಲೋಕಾರ್ಪಿತಗೊಳಿಸಿದರು.

ಹಳ್ಳಿಯಲ್ಲಿ ಬೆಳೆದ ವಿಷಮುಕ್ತವಾದ ಆಹಾರ ವಸ್ತುಗಳನ್ನು ಮತ್ತು ರಾಸಾಯನಿಕ ರಹಿತ ದಿನಬಳಕೆ ವಸ್ತುಗಳನ್ನು ನೇರವಾಗಿ ನಗರಗಳಿಗೆ ಪೂರೈಸುವ ಕಾರ್ಯವನ್ನು ಕಳೆದ ಕೆಲ ವರ್ಷಗಳಿಂದ 'ಗ್ರಾಮರಾಜ್ಯ' ಯೋಜನೆಯಡಿಯಲಿ ಮಾಡಿಕೊಂಡು ಬರಲಾಗುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Raghaveshwara Seer of Hosanagara Ramachandrapura Math's 35th day (Aug 22) religious speech at Bengaluru.
Please Wait while comments are loading...