ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಾಷಾ ನೀತಿ ಹುಳುಕು ತೋರಿಸಲು ಮುಂದಾದ ಬನವಾಸಿ ಬಳಗ

By Mahesh
|
Google Oneindia Kannada News

ಬೆಂಗಳೂರು, ಜ. 21: ಭಾರತ ಒಂದು ಬಹುಭಾಷಿಕ ಒಕ್ಕೂಟ. ವೈವಿಧ್ಯತೆಯೇ ಈ ದೇಶದ ಜೀವಾಳ. ವಿವಿಧತೆಯಲ್ಲಿ ಏಕತೆ ಅನ್ನುವ ಮಂತ್ರವನ್ನು ಶಾಲಾ ದಿನದಿಂದಲೂ ನಾವೆಲ್ಲ ಕೇಳುತ್ತಲೇ ಬಂದಿದ್ದೇವೆ.

ಆದರೆ, ಆಚರಣೆಯ ವಿಷಯಕ್ಕೆ ಬಂದಾಗ ಈ ವೈವಿಧ್ಯತೆಯನ್ನು ನಿಜಕ್ಕೂ ಒಂದು ವರದಂತೆ ಕಾಣದೇ ಶಾಪದಂತೆ ಕಾಣುವ ಮನಸ್ಥಿತಿಯಿದೆ ಅನ್ನುವುದು ಮನವರಿಕೆಯಾಗುತ್ತೆ. ಇದು ಸರಿಯೇ? [ವಿಡಿಯೋ: ಭಾಷಾ ಹುಳುಕು ನೀತಿ ಖಂಡಿಸಬೇಕು ಹೇಗೆ? ಏಕೆ?]

ಕಳೆದ ಅರವತ್ತು ವರ್ಷಗಳಿಂದಲೂ ಕೇಂದ್ರ ಸರ್ಕಾರ ತನ್ನ ಆಡಳಿತಕ್ಕೆಂದು ನಿಗದಿ ಮಾಡಿಕೊಂಡು ಬಳಸುತ್ತಿರುವ ಭಾಷಾ ನೀತಿ ಕೇವಲ ಇಂಗ್ಲಿಷ್ ಮತ್ತು ಹಿಂದಿ ಎರಡೇ ಭಾಷೆಗಳಿಗೆ ಮಾನ್ಯತೆ ಕಲ್ಪಿಸಿದೆ. ಹೀಗೆ ಎರಡೇ ಭಾಷೆಗೆ ಆದ್ಯತೆ ಕೊಡುವ ನಿಲುವು ಹಂತ ಹಂತವಾಗಿ ಇನ್ನುಳಿದ ಎಲ್ಲ ಭಾಷೆಗಳಿಗೂ ಅವುಗಳ ಮೂಲ ಸ್ಥಾನದಲ್ಲೇ ಕೊಡಲಿಯೇಟು ಹಾಕುವ ಕೆಲಸ ಮಾಡುತ್ತಿದೆ.

ದೇಶಕ್ಕೊಂದು ಭಾಷೆ ಬೇಕು ಮತ್ತದು ಹಿಂದಿಯೇ ಆಗಬೇಕು ಅನ್ನುವ ಯುರೋಪಿಯನ್ ಮಾದರಿಯ ರಾಷ್ಟ್ರೀಯತೆಯನ್ನು ಮುನ್ನೆಲೆಗೆ ತರುವ ಪ್ರಯತ್ನವೂ ಇದರ ಹಿಂದಿದೆ.

ಈ ರೀತಿ ಒಂದು ಭಾಷೆಯ ಬೆನ್ನಿಗೆ ಸರ್ಕಾರವೇ ನಿಲ್ಲುವುದು ಇತರೆ ಭಾಷಿಕರಿಗೆ ಅನ್ಯಾಯ ಮಾಡುತ್ತದೆ ಅನ್ನುವ ಕೂಗನ್ನು ತಣ್ಣಗಾಗಿಸಲು, ಒಲ್ಲದ ಮನಸ್ಸಿನಿಂದಲೇ ಹಿಂದಿ ಜೊತೆ ಇಂಗ್ಲಿಷ್ ಉಳಿಸಿಕೊಳ್ಳುವ ನಿಲುವಿಗೆ ಕೇಂದ್ರ ಸರ್ಕಾರ ಬಂದಿತ್ತು. ಆದರೆ ಗಮನಿಸಬೇಕಾಗಿರುವ ಅಂಶವೆನೆಂದರೆ, ಹಿಂದಿ/ಇಂಗ್ಲಿಷ್ ಎರಡೂ ಹಿಂದಿಯೇತರ ಭಾಷಿಕರಿಗೆ ಹೊರಗಿನ ನುಡಿಗಳು. ಈ ಎರಡು ನುಡಿಯಾಡದ ಜನರೇ ಭಾರತದ ಬಹುಸಂಖ್ಯಾತರು.

Photo Exhibition Show case Hindi English Language Policy Flaws Banasi Balaga

ಪ್ರಜಾಪ್ರಭುತ್ವದ ಯಶಸ್ಸಿಗೆ ಪ್ರಭುತ್ವ ಮತ್ತು ಜನರ ನಡುವಿನ ಅಂತರ ಕಡಿಮೆಯಾಗುವುದು ಬಲು ಮುಖ್ಯ ಮತ್ತು ಆ ಅಂತರವನ್ನು ಕಡಿಮೆಯಾಗಿಸುವಲ್ಲಿ ಜನರ ಭಾಷೆ ಬಹಳ ಮುಖ್ಯ ಪಾತ್ರವಹಿಸುತ್ತೆ. ಭಾರತೀಯರನ್ನೆಲ್ಲ ಹಿಂದಿ/ಇಂಗ್ಲಿಷ್ ಮೂಲಕವೇ ತಲುಪುತ್ತೇವೆ ಅನ್ನುವುದು ಮೂರ್ಖತನವೇ ಸರಿ. ಯಾಕೆ ಅಂತೀರಾ? ಕೇಂದ್ರ ಸರ್ಕಾರ ಇಂದು ಅಂಚೆ, ಬ್ಯಾಂಕು, ವಿಮೆ, ಪಿಂಚಣಿ, ತೆರಿಗೆ, ರೈಲು, ವಿಮಾನ ಸೇವೆ, ಹೆದ್ದಾರಿ, ತೈಲೋತ್ಪನ್ನಗಳು ಹೀಗೆ ಹತ್ತಾರು ಬಗೆಯ ನಾಗರೀಕ ಸೇವೆಗಳನ್ನು ಒದಗಿಸುತ್ತಿದೆ.

ಆದರೆ, ಈ ಎಲ್ಲ ಸೇವೆಗಳು ಸರಿಯಾಗಿ, ಪ್ರಾಮಾಣಿಕವಾಗಿ ಭಾರತದ ಬೇರೆ ಬೇರೆ ಭಾಷಿಕರನ್ನು ತಲುಪಲು ಅವರ ಭಾಷೆಯಲ್ಲಿ ಈ ಸೇವೆಗಳನ್ನು ಒದಗಿಸಬೇಕು ಅನ್ನುವ ಸಣ್ಣ ತಿಳುವಳಿಕೆಯನ್ನು ಕೈ ಬಿಟ್ಟು ಎಲ್ಲೆಡೆ ಹಿಂದಿ/ಇಂಗ್ಲಿಷ್ ಮಾತ್ರ ಬಳಕೆ ಮಾಡುತ್ತಿದೆ. ಇದು ಹಿಂದಿಯೇತರ ಭಾಷಿಕರಿಗೆ ತೀವ್ರ ತೊಂದರೆಯನ್ನುಂಟು ಮಾಡಿರುವುದಲ್ಲದೇ ಸರ್ಕಾರದ ಯೋಜನೆಗಳು ಅಂದುಕೊಂಡ ಮಟ್ಟದಲ್ಲಿ ಯಶಸ್ಸು ಪಡೆಯದಂತೆ ತಡೆ ಹಿಡಿದಿವೆ.

ಕರ್ನಾಟಕದ ವಿಷಯಕ್ಕೆ ಬಂದರೆ ಇತ್ತೀಚಿನ ದಿನಗಳಲ್ಲಿ ನಗರ, ಪಟ್ಟಣ, ಹಳ್ಳಿಯೆನ್ನದೇ ಕರ್ನಾಟಕದ ಮೂಲೆ ಮೂಲೆಯಲ್ಲಿರುವ ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಕಣ್ಮರೆಯಾಗುತ್ತಿದೆ. ಕೇಂದ್ರ ಸರ್ಕಾರಿ ನೌಕರಿ ಪಡೆಯಲು ಹಿಂದಿ/ಇಂಗ್ಲಿಷ್ ಗೊತ್ತಿದ್ದರೆ ಸಾಕು ಅನ್ನುವ ನಿಲುವಿನಿಂದಾಗಿ ಕರ್ನಾಟಕದೊಳಗಿನ ಕೆಲಸಗಳಲ್ಲಿ ಕನ್ನಡವೇ ಗೊತ್ತಿಲ್ಲದ ಜನರು ದೊಡ್ಡ ಮಟ್ಟದಲ್ಲಿ ಉದ್ಯೋಗಕ್ಕೆ ಸೇರಿಕೊಳ್ಳುತ್ತಿದ್ದರೆ, ಇನ್ನೊಂದೆಡೆ ಹಿಂದಿ/ಇಂಗ್ಲಿಷ್ ಎರಡೇ ಭಾಷೆಯಲ್ಲಿ ಆಡಳಿತ ಅನ್ನುವ ನಿಲುವಿನಿಂದಾಗಿ ಈ ಎಲ್ಲ ಕಚೇರಿಗಳು "ಕನ್ನಡ ಮುಕ್ತ" ವಾಗುತ್ತಿವೆ. [ಹಿಂದಿ ಹೇರಿಕೆ ವಿರುದ್ಧದ ಟ್ವೀಟ್ ಪ್ರತಿಭಟನೆ ಯಶಸ್ವಿ!]

ಒಬ್ಬ ಹಳ್ಳಿಯ ರೈತ ಬ್ಯಾಂಕಿಗೆ ಬಂದರೆ ಏನು ತಿಳಿಯದೇ ಕಕ್ಕಾಬಿಕ್ಕಿಯಾಗುವಂತಹ ಬೆಳವಣಿಗೆ ಬಹುತೇಕ ಊರುಗಳಲ್ಲಿ ಕಾಣುತ್ತಿದ್ದೇವೆ. ಈ ಬಗ್ಗೆ ದನಿಯೆತ್ತದೇ ಹೋದರೆ ಇನ್ನು ಹತ್ತು ಹದಿನೈದು ವರ್ಷದಲ್ಲಿ ಕರ್ನಾಟಕದ ಕೇಂದ್ರ ಸರ್ಕಾರಿ ಸಂಸ್ಥೆಗಳೆಲ್ಲದರಲ್ಲಿ ಕನ್ನಡ ಪೂರ್ತಿ ಮಾಯವಾಗುವುದರಲ್ಲಿ ಅನುಮಾನವಿಲ್ಲ.

ಈ ನಿಟ್ಟಿನಲ್ಲಿ ಬಹುಭಾಷಿಕ ಭಾರತದ ಒಕ್ಕೂಟದಲ್ಲಿ ಸಂವಿಧಾನದ ಎಂಟನೇಯ ಪರಿಚ್ಛೇದದಲ್ಲಿರುವ ಎಲ್ಲ 22 ಭಾಷೆಗಳಿಗೂ ಕೇಂದ್ರ ಸರ್ಕಾರದ ಆಡಳಿತ ಭಾಷೆಯ ಸ್ಥಾನಮಾನ ದೊರೆಯಬೇಕು ಅನ್ನುವ ಬೇಡಿಕೆ ಈ ಕರ್ನಾಟಕ, ತಮಿಳುನಾಡು, ಪಶ್ಚಿಮಬಂಗಾಳ, ಪಂಜಾಬ್, ಮಹಾರಾಷ್ಟ್ರ, ಓಡಿಶಾ ಮತ್ತು ಕೇರಳದಂತಹ ರಾಜ್ಯಗಳಲ್ಲಿ ಕೇಳಿ ಬರಲಾರಂಭಿಸಿದೆ.

ಕರ್ನಾಟಕದಲ್ಲಿ ಈ ಬೇಡಿಕೆಯತ್ತ ಕಳೆದ ಹತ್ತು ವರ್ಷಗಳಿಂದ ಜನ ಜಾಗೃತಿ, ಅಭಿಯಾನವನ್ನು ಬನವಾಸಿ ಬಳಗ ರೂಪಿಸುತ್ತ ಬಂದಿದೆ. ಭಾನುವಾರ, ಜನವರಿ 24ರಂದು ಬೆಳಿಗ್ಗೆ 10.30ರಿಂದ ಸಂಜೆ 3.30ರವರೆಗೆ, ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆರ್ಟ್ ಗ್ಯಾಲರಿಯಲ್ಲಿ ಚಿತ್ರಪ್ರದರ್ಶನವೊಂದನ್ನು ಬನವಾಸಿ ಬಳಗ ಹಮ್ಮಿಕೊಂಡಿದೆ.

ಭಾರತದ ಇವತ್ತಿನ ಭಾಷಾ ನೀತಿ, ಅದರಲ್ಲಿನ ತೊಡಕುಗಳು, ಅದರಿಂದಾಗಿ ಸಾಮಾನ್ಯ ಜನರಿಗೆ ಆಗುತ್ತಿರುವ ತೊಂದರೆಗಳು, ಆಗಬೇಕಿರುವ ಬದಲಾವಣೆಗಳನ್ನು ಬಿಂಬಿಸುವ ಈ ಪ್ರದರ್ಶನಕ್ಕೆ ಸಾರ್ವಜನಿಕರಿಗೆ ಮುಕ್ತಪ್ರವೇಶವಿದೆ. ಭಾರತದ ಭಾಷೆಗಳ ಉಳಿವು, ಬೆಳೆವಿನ ಬಗ್ಗೆ ಕಾಳಜಿಯುಳ್ಳ ಎಲ್ಲರೂ ಪಾಲ್ಗೊಂಡು ಭಾಷಾ ಸಮಾನತೆಗೆ ದನಿಗೂಡಿಸಬೇಕಾಗಿ ಕೋರಿಕೆ.

English summary
Banavasi Balaga is organising a photo exhibition to highlight the flaws of India's current Hindi-English language policy and how it is impacting the lives of ordinary citizens in Non Hindi states. The full day event will be held on Sunday, 24th January at Art Gallery within Ravindra Kala Kshetra in Bengaluru. Please join with your friends and join hands to demand linguisitc equality.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X