ಜನಶ್ರೀ ಚಾನಲ್ ಸಿಇಒ ವಾಜಪೇಯಿ ವಿರುದ್ಧ ಇನ್ನೊಂದು ಕೇಸ್

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಏಪ್ರಿಲ್ 17: ಬ್ಲ್ಯಾಕ್ ಮೇಲ್ ಆರೋಪದಿಂದ ಜೈಲು ಪಾಲಾಗಿರುವ ಜನಶ್ರೀ ನ್ಯೂಸ್ ಚಾನಲ್ ಮುಖ್ಯಕಾರ್ಯನಿರ್ವಹಣಾಧಿಕಾರಿ (ಸಿಇಒ) ಲಕ್ಷ್ಮಿ ಪ್ರಸಾದ್ ವಾಜಪೇಯಿ ಅವರ ಕುರಿತು ಮತ್ತೊಂದು ಆರೋಪ ಕೇಳಿಬಂದಿದೆ.

'ಇನ್ಜಾಜ್ ಗ್ರೂಪ್‌'ನ ರಿಯಲ್ ಎಸ್ಟೇಟ್ ಉದ್ಯಮಿ ಸುಹೈಲ್ ಷರೀಫ್ ಎಂಬುವವರನ್ನು ಬ್ಲ್ಯಾಕ್ ಮೇಲ್ ಮಾಡಿದ್ದ ಆರೋಪದಡಿಯಲ್ಲಿ ಕೋರಮಂಗಲ ಪೊಲೀಸರು ಲಕ್ಷ್ಮಿ ಪ್ರಸಾದ್ ಅವರನ್ನು ಏಪ್ರಿಲ್ 15 ರಂದು ಬಂಧಿಸಿದ್ದರು.

ಅವರನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗಿತ್ತಿದ್ದು, ಇದೇ ವೇಳೆ ಎಂ.ಎಂ.ಖಾನ್ ಎಂಬುವವರು ಸಹ ಕಮರ್ಶಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಲಕ್ಷ್ಮಿ ಪ್ರಸಾದ್ ಅವರ ವಿರುದ್ಧ ದೂರು ದಾಖಲಿಸಿದ್ದಾರೆ.

'ಐ ಮಾನಿಟರಿ ಅಡ್ವೈಸರಿ' (ಐಎಂಎ) ಕಂಪೆನಿ ವ್ಯವಸ್ಥಾಪಕ ನಿರ್ದೇಶಕ ಎಂ.ಎಂ.ಖಾನ್ ಅವರ ಬಳಿ 10 ಕೋಟಿ ರೂ. ಬೇಡಿಕೆ ಇಟ್ಟು, ಅವರ ಕಂಪೆನಿಯ ವಿರುದ್ಧ ಅಪಪ್ರಚಾರ ಮಾಡುವುದಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಲಕ್ಷ್ಮಿ ಪ್ರಸಾದ್, ಹಣ ನೀಡಿದ ನಂತರವೂ ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟು ಉದ್ಯಮಿಯನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು ಎಂಬ ಸುದ್ದಿ ಬಯಲಾಗಿದೆ.[ಬ್ಲ್ಯಾಕ್ ಮೇಲ್: ಕನ್ನಡ ಟಿವಿ ಚಾನಲ್ ಸಿಇಒ ಬಂಧನ]

One more case on Kannada TV Channel CEO

ಆರೋಪವೇನು..?
ಖಾನ್ ಅವರ ಐಎಂಎ ಕಂಪೆನಿ ಕಾನೂನು ಬಾಹಿರವಾಗಿ ವ್ಯವಹಾರ ನಡೆಸುತ್ತಿರುವ ಬಗ್ಗೆ ಮಾರ್ಚ್ 16ರಂದು ಜನಶ್ರೀ ನ್ಯೂಸ್ ಚಾನಲ್ ನಲ್ಲಿ ಸುಳ್ಳು ಸುದ್ದಿ ಬಿತ್ತರವಾಯಿತು.

ಅದೇ ದಿನ ರಾತ್ರಿ ಖಾನ್ ಅವರಿಗೆ ಕರೆ ಮಾಡಿದ ವಾಹಿನಿಯ ಸಿಬ್ಬಂದಿ, 'ನಿಮ್ಮ ಕಂಪೆನಿಯ ಸುದ್ದಿಯನ್ನು ನೇರಪ್ರಸಾರ ಮಾಡಲು ಕೆಲವೊಂದು ಮಾಹಿತಿ ನೀಡಬೇಕು' ಎಂದಿದ್ದಾರೆ. ಅವರು ಕೇಳಿದ್ದ ಮಾಹಿತಿಯನ್ನು ಖಾನ್ ಅವರು ಒದಗಿಸಿದ್ದಾರೆ.

ಮರುದಿನ ಬೆಳಿಗ್ಗೆ 9 ಗಂಟೆಗೆ ವಾಹಿನಿ ಕಚೇರಿಯಿಂದ ವ್ಯಕ್ತಿಯೊಬ್ಬ ಕರೆ ಮಾಡಿ, ಖಾನ್ ಅವರು ವಾಹಿನಿಯ ಸಿಇಒ ಅವರನ್ನು ಭೇಟಿ ಮಾಡಬೇಕೆಂದು ಹೇಳಿದ್ದಾರೆ.

ಮರುದಿನ ಅವರನ್ನು ಭೇಟಿ ಮಾಡಿದಾಗ, ಖಾನ್ ಅವರ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಸಿ, 15 ಕೋಟಿ ಹಣ ನೀಡಬೇಕೆಂದೂ, ಇಲ್ಲವಾದರೆ ಖಾನ್ ಅವರ ಕಂಪೆನಿಯ ವಿರುದ್ಧ ಮತ್ತಷ್ಟು ಅಪಪ್ರಚಾರ ಮಾಡುವುದಾಗಿಯೂ ಹೇಳಿದ್ದಾರೆ. ಇದರಿಂದ ಹೆದರಿದ ಖಾನ್ ಲಕ್ಷ್ಮಿ ಪ್ರಸಾದ್ ಅವರಿಗೆ ಸಂಬಂಧಿಸಿದ ಏಳು ಖಾತೆಗಳಿಗೆ ಬರೋಬ್ಬರಿ 10 ಕೋಟಿ ರೂ.ನಗದು ಮತ್ತು 1 ಕೆ.ಜಿ.ಯಷ್ಟು ಚಿನ್ನಾಭರಣ ನೀಡಿದ್ದಾರೆ.

ಹಣ ಕೈಸೇರಿದ ನಂತರ ಖಾನ್, ಕಂಪೆನಿ ವಿರುದ್ಧ ಪ್ರಸಾರ ಮಾಡಿದ್ದ ಸುದ್ದಿಗೆ ವಾಹಿನಿ ಸಮಜಾಯಿಷಿ ನೀಡಿ, ಮಾರ್ಚ್ 17ರ ರಾತ್ರಿ ಮತ್ತೊಂದು ಕಾರ್ಯಕ್ರಮ ನಡೆಸಿತು. ಆದರೆ ಅವರ ಆಸೆ ಇಷ್ಟಕ್ಕೇ ತೀರಲಿಲ್ಲ. ಏಪ್ರಿಲ್ 1ರಂದು ಪುನಃ ಖಾನ್ ಅವರನ್ನು ಕಚೇರಿಗೆ ಕರೆಸಿಕೊಂಡ ಲಕ್ಷ್ಮಿಪ್ರಸಾದ್, ಟೊಯೊಟಾ ಕಂಪೆನಿಯ ಐಷಾರಾಮಿ ಕಾರಿಗೆ ಬೇಡಿಕೆ ಇಟ್ಟಿದ್ದರು.

ಅಷ್ಟೇ ಅಲ್ಲ, 25 ಕೋಟಿ ರೂ. ಹಣದೊಂದಿಗೆ ದೆಹಲಿಯಲ್ಲಿ ತಮ್ಮನ್ನು ಭೇಟಿಯಾಗಬೇಕೆಂದು ಹೇಳಿದ್ದಲ್ಲದೆ, ಖಾನ್ ಅವರಿಗೆ ಜೀವ ಬೆದರಿಕೆಯನ್ನೂ ಒಡ್ಡಿದ್ದರು. ಇನ್ನು ಸುಮ್ಮನಿರುವುದರಲ್ಲಿ ಅರ್ಥವಿಲ್ಲ ಎಂದುಖಾನ್, ಪೊಲೀಸರಿಗೆ ದೂರು ನೀಡಿದ್ದರು.

ಸದ್ಯ ಪೊಲೀಸರ ಅತಿಥಿಯಾಗಿರುವ ಜನಶ್ರೀ ನ್ಯೂಸ್ ಚಾನಲ್ ಸಿಇಒಗೆ ಸಂಬಂಧಿಸಿದಂತೆ ಇನ್ನೆಷ್ಟು ಇಂಥದೇ ಆರೋಪಗಳು ಹೊರಬೀಳಲಿವೆಯೋ, ಕಾದು ನೋಡಬೇಕು.

ಸಮಾಜದ ಸ್ವಾಸ್ಥ್ಯ ಕಾಯುವ ಹೊಣೆ ಹೊತ್ತ ವಾಹಿನಿಯ ಮುಖ್ಯಸ್ಥರೇ ಹೀಗೆ, ಸಮಾಜಘಾತುಕ ಕೆಲಸಗಳಲ್ಲಿ ತೊಡಗಿದರೆ ಹೇಗೆ ಎಂಬುದು ಪ್ರಜ್ಞಾವಂತರ ಅಂಬೋಣ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
One more case registered in Commercial street police station on Janasri Kannada news channel CEO Lakshmi Prasad Vajpeyee, who has arrested by Koramangala Police, Bengaluru under IPC section 384, 385, 506, Punishment for extortion on 15th April, Saturday.
Please Wait while comments are loading...