ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗಾರ್ಮೆಂಟ್ಸ್ ನೌಕರರ ಗೋಳಿನ ಕಥೆ ಬಿಚ್ಚಿಟ್ಟ ಸಾವಿತ್ರಿ

By ಮೈತ್ರೇಯಿ
|
Google Oneindia Kannada News

ಬೆಂಗಳೂರು, ಏಪ್ರಿಲ್ 19 : 'ನನಗೆ 8000 ಸಾವಿರ ವೇತನ ಬರುತ್ತದೆ. ಪತಿಗೆ 10 ಸಾವಿರ ಸಂಬಳ. ನಾನು ಕೆಲಸ ಮಾಡುವುದು ಅನಿವಾರ್ಯ. ಗಾರ್ಮೆಂಟ್ಸ್‌ನಲ್ಲಿ ಬರುವ ಸಂಬಳ ಕಡಿಮೆಯಾದರೂ ಕುಟುಂಬಕ್ಕೆ ಅದು ಆಧಾರ' ಎಂದು ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುವ ಸಾವಿತ್ರಿ ತಮ್ಮ ಮಾತು ಆರಂಭಿಸಿದರು.

ಬೆಂಗಳೂರಿನಲ್ಲಿ ಎರಡು ದಿನಗಳಿಂದ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುವ ಕಾರ್ಮಿಕರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ ವಿರುದ್ಧ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದು, ಪಿಎಫ್ ಪಡೆಯುವ ನಿಯಮವನ್ನು ಸಡಿಲಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ. [ಬೆಂಗಳೂರು ಪೊಲೀಸರ ಮೂರ್ಖತನ ಇದೇ ಮೊದಲಲ್ಲ]

garment

ಸೋಮವಾರ ನೌಕರರು ನಡೆಸಿದ ಪ್ರತಿಭಟನೆಯಿಂದ 6 ತಾಸು ಸಂಚಾರ ದಟ್ಟಣೆ ಉಂಟಾಗಿತ್ತು. ಮಂಗಳವಾರ ಬೆಳಗ್ಗೆಯಿಂದ ನಗರದ ವಿವಿಧ ಪ್ರದೇಶಗಳಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಬೆಂಗಳೂರು ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಭಾರೀ ಸಂಚಾರ ದಟ್ಟಣೆ ಉಂಟಾಗಿದೆ. [ಗಾರ್ಮೆಂಟ್ಸ್ ಪ್ರತಿಭಟನೆ ಕ್ಷಣ ಕ್ಷಣದ ಮಾಹಿತಿ]

ಏಕೆ ಪ್ರತಿಭಟನೆ? : ಮೇ 1ರಿಂದ ಜಾರಿಗೆ ಬರುವ ಹೊಸ ನಿಯಮದ ಪ್ರಕಾರ ನಿವೃತ್ತಿಗೆ ಮೊದಲು ಪಿಎಫ್‌ನಲ್ಲಿ ಶೇ 50ರಷ್ಟು ಹಣವನ್ನು ಪಡೆಯಲು ಅವಕಾಶವಿಲ್ಲ. 57 ವರ್ಷ ಅಂದರೆ ನಿವೃತ್ತಿಗಿಂತ ಒಂದು ವರ್ಷ ಮೊದಲು ಪಿಎಫ್ ಹಣವನ್ನು ಪಡೆಯಬಹುದಾಗಿದೆ.

ಕೇಂದ್ರ ಸರ್ಕಾರ ಈ ನಿಯಮವನ್ನು ಬದಲಾವಣೆ ಮಾಡಬೇಕು ಎಂದು ಒತ್ತಾಯಿಸಿ ಸೋಮವಾರದಿಂದ ಪ್ರತಿಭಟನೆ ನಡೆಯುತ್ತಿದೆ. ಇಂದು ಪ್ರತಿಭಟನೆ ವೇಳೆ ಹಿಂಸಾಚಾರ ನಡೆದಿದೆ. ಲಾಠಿ ಪ್ರಹಾರ ನಡೆಸಿ, ಅಶ್ರುವಾಯು ಸಿಡಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಪೊಲೀಸರು ಪ್ರಯತ್ನ ನಡೆಸುತ್ತಿದ್ದಾರೆ.

protest

ಕಡಿಮೆ ಸಂಬಳವಾದರೂ ಅದು ಅಗತ್ಯ : 18 ವರ್ಷಗಳಿಂದ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿರುವ ಆರ್.ಎಂ.ಸಾವಿತ್ರಿ ಅವರು ಒನ್ ಇಂಡಿಯಾ ಜೊತೆ ಮಾತನಾಡಿದ್ದು, 'ಕೇಂದ್ರ ಸರ್ಕಾರ ಬಡವರ ವಿರೋಧಿ' ಎಂದು ದೂರಿದ್ದಾರೆ.

ಮಾರತಹಳ್ಳಿಯ ಸುನೀತಾ ಇಂಪೆಕ್ಸ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಕೆಲಸ ಮಾಡುತ್ತಿರುವ ಸಾವಿತ್ರಿ ಅವರು ಕಡಿಮೆ ಸಂಬಳದಲ್ಲಿ ಬದುಕುತ್ತಿರುವ ನಮಗೆ ಪಿಎಫ್ ಪಡೆಯುವುದು ಅಗತ್ಯವಾಗಿದೆ. ತುರ್ತು ಸಂದರ್ಭದಲ್ಲಿ ನಾವು ಪಿಎಫ್ ಪಡೆದುಕೊಳ್ಳುತ್ತೇವೆ. ಆದರೆ, ಕೇಂದ್ರ ಸರ್ಕಾರ ಆ ಅವಕಾಶವನ್ನು ಏಕೆ ಕಿತ್ತುಕೊಳ್ಳುತ್ತಿದೆ? ಎಂದು ಪ್ರಶ್ನಿಸಿದ್ದಾರೆ.

ಕಷ್ಟದಲ್ಲಿ ಕೆಲಸ ಮಾಡುತ್ತೇವೆ : '8 ಸಾವಿರ ಸಂಬಳಕ್ಕಾಗಿ ನಾವು 8 ಗಂಟೆ ಕಷ್ಟಪಟ್ಟು ಕೆಲಸ ಮಾಡಬೇಕು. ಯಾವುದೇ ವಿರಾಮವಿಲ್ಲದೇ ಕೆಲಸ ಮಾಡಬೇಕಾಗುತ್ತದೆ. ಯಂತ್ರದ ಮುಂದೆ ನಿಂತು ಊಟ ಮಾಡಬೇಕು. ಶೌಚಾಲಯಕ್ಕೆ ಹೋಗಲು ಮ್ಯಾನೇಜರ್ ಅನುಮತಿ ಪಡೆಯಬೇಕು' ಎನ್ನುತ್ತಾರೆ ಸಾವಿತ್ರಿ.

'ನಾವು ಕೆಲಸ ಮಾಡುವ ಸ್ಥಳವೂ ಚಿಕ್ಕದಾಗಿರುತ್ತದೆ. ಎಲ್ಲಾ ಮಹಿಳೆಯರನ್ನು ಅಲ್ಲಿ ಕೂಡಿ ಹಾಕಲಾಗುತ್ತದೆ. ಕಟ್ಟಡದಲ್ಲಿ ಸರಿಯಾದ ಗಾಳಿಯ ಸೌಲಭ್ಯವಿರುವುದಿಲ್ಲ. ಹಲವಾರು ಕಷ್ಟಗಳ ನಡುವೆಯೇ ನಾವು ಕೆಲಸ ಮಾಡುತ್ತೇವೆ' ಎನ್ನುತ್ತಾರೆ ಸಾವಿತ್ರಿ ಅವರು.

English summary
IT hub Bengaluru came to a standstill as major thoroughfares of the city were blocked by thousands of protesting garment factory workers. The factory workers, mostly women, protested against the Prime Minister Narendra Modi’s government decision to amend rules governing withdrawal of Employees’ Provident Fund contributions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X