ಪಠಾಣ್‌ಕೋಟ್ ದಾಳಿ : ಬೆಂಗಳೂರಿನ ನಿರಂಜನ್ ಹುತಾತ್ಮ

Posted By:
Subscribe to Oneindia Kannada

ಬೆಂಗಳೂರು, ಜನವರಿ 04 : ಪಂಜಾಬ್‌ನ ಪಠಾಣ್‌ಕೋಟ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಬೆಂಗಳೂರು ಮೂಲದ ಲೆಫ್ಟಿನೆಂಟ್ ಕರ್ನಲ್ ನಿರಂಜನ್ ಕೆ. ಕುಮಾರ್ ಹುತಾತ್ಮರಾಗಿದ್ದಾರೆ. ನಿರಂಜನ್ ಅವರ ಮೃತದೇಹವನ್ನು ಬೆಂಗಳೂರಿನ ದೊಡ್ಡ ಬೊಮ್ಮಸಂದ್ರದಲ್ಲಿರುವ ನಿವಾಸಕ್ಕೆ ಸೋಮವಾರ ಬೆಳಗ್ಗೆ ತರಲಾಗಿದೆ.

ದೆಹಲಿಯಿಂದ ವಿಶೇಷ ವಿಮಾನದಲ್ಲಿ ನಿರಂಜನ್ ಅವರ ಪಾರ್ಥಿವ ಶರೀರವನ್ನು ಭಾನುವಾರ ರಾತ್ರಿ 11.30ರ ಸುಮಾರಿಗೆ ಬೆಂಗಳೂರಿಗೆ ತರಲಾಯಿತು. ನಂತರ ದೊಮ್ಮಲೂರಿನ ಕಮಾಂಡೋ ಆಸ್ಪತ್ರೆಗೆ ಸಾಗಿಸಲಾಯಿತು. ಸೋಮವಾರ ಬೆಳಗ್ಗೆ ದೊಡ್ಡ ಬೊಮ್ಮಸಂದ್ರದಲ್ಲಿರುವ ನಿವಾಸಕ್ಕೆ ತೆಗೆದುಕೊಂಡು ಬರಲಾಗಿದೆ. [ಪಠಾಣ್ ಕೋಟ್ ನಲ್ಲಿ ಉಗ್ರರ ದಾಳಿ]

Niranjan Kumar

ದೊಡ್ಡ ಬೊಮ್ಮಸಂದ್ರದ ನಿವಾಸದಲ್ಲಿ ಕುಟುಂಬದವರು ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಬಿಇಎಲ್ ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಂತರ ಬೆಂಗಳೂರಿನಿಂದ ಕೇರಳಕ್ಕೆ ತೆಗೆದುಕೊಂಡು ಹೋಗಿ, ಮಂಗಳವಾರ ಅಂತ್ಯ ಸಂಸ್ಕಾರ ನಡೆಸಲಾಗುತ್ತದೆ ಎಂದು ಕುಟುಂಬದವರು ತಿಳಿಸಿದ್ದಾರೆ. [ಪಂಜಾಬ್ : ವಾಯುನೆಲೆಯಲ್ಲಿ ಗುಂಡಿನ ಚಕಮಕಿ]

ಗ್ರನೇಡ್ ಸ್ಫೋಟಗೊಂಡು ಸಾವು : ಎನ್‍ಎಸ್‍ಜಿಯ ಬಾಂಬ್ ನಿಗ್ರಹ ದಳದಲ್ಲಿ ಸೇವೆ ಸಲ್ಲಿಸುತ್ತಿದ್ದ ನಿರಂಜನ್, ಭಾನುವಾರ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಸತ್ತ ಉಗ್ರನ ದೇಹದಿಂದ ಗ್ರನೇಡ್ ತೆಗೆಯುವಾಗ ಅದು ಸ್ಫೋಟಗೊಂಡು ಹುತಾತ್ಮರಾಗಿದ್ದರು. ನಿರಂಜನ್ ಕುಮಾರ್ ಪೋಷಕರು ಮೂಲತಃ ಕೇರಳದವರಾಗಿದ್ದು, ಅವರ ತಂದೆ ಶಿವರಾಜನ್ ಬಿಇಎಲ್‍ನಲ್ಲಿ ಕೆಲಸ ಮಾಡುತ್ತಿದ್ದರು. ಆದ್ದರಿಂದ, ಕುಟುಂಬ ಸಮೇತ ಬೆಂಗಳೂರಿನಲ್ಲಿ ನೆಲೆಸಿದ್ದರು.

ಶಿವರಾಜನ್ ಅವರಿಗೆ ನಾಲ್ವರು ಮಕ್ಕಳು. ನಿರಂಜನ್ ಅವರು 2ನೇ ಪುತ್ರರು. ಹಿರಿಯ ಮಗ ಶರತ್ ಚಂದ್ರ ಅವರು ಏರ್‌ಪೋರ್ಸ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ನಿರಂಜನ್ ಮಲ್ಲೇಶ್ವರಂನಲ್ಲಿರುವ ಬಿಪಿ ಇಂಡಿಯನ್ ಪಬ್ಲಿಕ್ ಹೈಸ್ಕೂಲ್‌ನಲ್ಲಿ ವ್ಯಾಸಂಗಮಾಡಿದ್ದರು.

12 ವರ್ಷಗಳ ಹಿಂದೆ ಕೆಲಸಕ್ಕೆ ಸೇರಿದ್ದ ನಿರಂಜನ್ ಹಿಂದೆ ಎನ್‌ಎಸ್‌ಜಿಯಲ್ಲಿ ಲೆಫ್ಟಿನೆಂಟ್ ಕರ್ನಲ್‌ ಆಗಿ ಸೇವೆ ಸಲ್ಲಿಸಿದ್ದರು. ಒಂದು ವರ್ಷದ ಹಿಂದೆ ಬಾಂಬ್ ನಿಷ್ಕ್ರಿಯ ದಳಕ್ಕೆ ಬಡ್ತಿ ದೊರಕಿತ್ತು. ನಿರಂಜನ್ ಪತ್ನಿ ರಾಧಿಕಾ ಹಾಗೂ ಪುತ್ರಿ ವಿಸ್ಮಯ ಜೊತೆ ದೆಹಲಿಯಲ್ಲಿ ವಾಸವಾಗಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
NSG commando Lieutenant Colonel Niranjan Kumar killed in the grenade blast at Pathankot air base on Sunday. Niranjan Kumar born in Bengaluru. His father E.K.Sivaranjan retired BEL employee.
Please Wait while comments are loading...