ಕಿಲಕಿಲನೆ ನಗೆ ಬೀರುವ ಲಾಲ್ಬಾಗ್ ಪುಷ್ಪಲೋಕ ನೋಡಿ ಬನ್ನಿ

Posted By:
Subscribe to Oneindia Kannada

ಬೆಂಗಳೂರು, ಜನವರಿ,20: ಅಲ್ಲಿ ಜರ್ಮನಿಯ ಅರಮನೆ ನಿರ್ಮಾಣವಾಗಿದೆ. ಲಕ್ಷಕ್ಕೂ ಹೆಚ್ಚು ಹೂಗಳು ಒಂದೆಡೆ ನೆರೆದು ಕಿಲಕಿಲನೆ ನಗುತ್ತಿವೆ. ನೋಡುಗರು ಮೌನದಲ್ಲೇ ಪಯಣಿಸುತ್ತಾ ತಕ್ಷಣ ಮೊಬೈಲ್ ಒಂದೇ ಒಂದು ಫೋಟೋ ಎನ್ನುತ್ತಿದ್ದರು. ಸೆಲ್ಫೀ ಮೋಹಿಗಳಿಗೆ ಹೇಳಿಮಾಡಿಸಿದೆ. ಒಮ್ಮೆ ಒಳಹೊಕ್ಕಾಗ ಕ್ಯಾಮರಾ ಆನ್ ಆದ್ರೆ ಹೊರಗೆ ಬಂದಾಗಲೇ ಆಫ್ ಆಗುತ್ತಿತ್ತು. ಒಟ್ಟಿನಲ್ಲಿ ಹೂ ಪ್ರಿಯರಿಗೆ, ಸಸ್ಯ ರಸಿಕರಿಗೆ ಮತ್ತೊಮ್ಮೆ ಬರಬೇಕೆಂಬ ಹಂಬಲ ಗರಿಗೆದರಿತ್ತು.

ಈ ಎಲ್ಲಾ ದೃಶ್ಯಗಳು ನಿಮಗೆ ಕಂಡು ಬರುವುದು ಸಸ್ಯಕಾಶಿ ಲಾಲ್ ಬಾಗ್ ನಲ್ಲಿ ಗಣರಾಜ್ಯೋತ್ಸವ ಪ್ರಯುಕ್ತ ಜನವರಿ 16ರಿಂದ 26ರವರೆಗೆ ತೋಟಗಾರಿಕೆ ಇಲಾಖೆ ಹಾಗೂ ಮೈಸೂರು ಉದ್ಯಾನ ಸಂಘ ಸಹಯೋಗದಲ್ಲಿ ಆಯೋಜನೆಯಾದ 203ನೇ ರಾಷ್ಟ್ರೀಯ ಪುಷ್ಪ ಹಬ್ಬದಲ್ಲಿ.

ಸುಮಾರು 10 ದಿನಗಳ ಕಾಲ ನಡೆಯುವ ಈ ರಾಷ್ಟ್ರೀಯ ಪುಷ್ಪ ಹಬ್ಬವು ಗುಸ್ತಾವ್ ಹೆರ್ಮಾನ್ ಕೃಂಬಿಗಲ್ ಅವರ 150ನೇ ಹುಟ್ಟುಹಬ್ಬದ ನೆನಪಿನಾರ್ಥ ಏರ್ಪಡಿಸಲಾಗಿದೆ. ಒಟ್ಟಿನಲ್ಲಿ ಸಸ್ಯಕಾಶಿ ಹೂ ಕಾಶಿಯಾಗಿ ಮಾರ್ಪಟ್ಟಿದ್ದು ಹೂಗಳ ಚೆಲುವಿಗೆ ಹೂಗಳೇ ಸಾಕ್ಷಿ ಎಂಬುದನ್ನು ಸಾರಿ ಸಾರಿ ಹೇಳುತ್ತಿತ್ತು.

ಪ್ರತಿವರ್ಷ ಹೂವಿನ ಪ್ರದರ್ಶನವನ್ನು ಬೇಸಿಗೆ ಮತ್ತು ಚಳಿಗಾಲ ಪ್ರದರ್ಶನ ಎಂದು ಎರಡು ಬಾರಿ ಪ್ರದರ್ಶನ ಹಮ್ಮಿಕೊಳ್ಳಲಾಗುತ್ತಿತ್ತು. 1951ರ ಈಚೆಗೆ ಇದನ್ನು ಸ್ವಾತಂತ್ರೋತ್ಸವ ಮತ್ತು ಗಣರಾಜ್ಯೋತ್ಸವ ಪ್ರದರ್ಶನ ಎಂದು ಮಾಡಲಾಯಿತು ಎಂದು ತೋಟಗಾರಿಕಾ ಅಧಿಕಾರಿಗಳು ಮಾಹಿತಿ ನೀಡಿದರು.

ಬನ್ನಿ ಈ ಬಾರಿ ಸಸ್ಯಕಾಶಿ ಲಾಲ್ ಬಾಗ್ ನಲ್ಲಿ ಏನೆಲ್ಲಾ ವಿಶೇಷಗಳಿವೆ, ಪುಷ್ಪ ಹಬ್ಬ ವೀಕ್ಷಿಸಿದ ವೀಕ್ಷಕರು ಏನು ಹೇಳ್ತಾರೆ, ಪೊಲೀಸ್ ಭದ್ರತಾ ವ್ಯವಸ್ಥೆ ಹೇಗಿದೆ, ಭದ್ರತೆಗೆಂದು ನಿಯೋಜನೆಯಾದ ಪೊಲೀಸ್ ಸಿಬ್ಬಂದಿ ಏನು ಹೇಳ್ತಾರೆ, ಯಾವೆಲ್ಲಾ ಮಳಿಗೆಗಳಿವೆ ಇನ್ನಿತರ ಮಾಹಿತಿ ಇಲ್ಲಿದೆ ನೋಡಿ.

ಪುಷ್ಪ ಹಬ್ಬದ ವಿಶೇಷ ಏನು?

ಪುಷ್ಪ ಹಬ್ಬದ ವಿಶೇಷ ಏನು?

ಪುಷ್ಪಲೋಕ ಪ್ರತಿ ಬಾರಿಯೂ ಹಲವು ವೈವಿಧ್ಯತೆಗಳಿಂದ ಕಂಗೊಳಿಸುತ್ತದೆ. ಈ ಬಾರಿಯ ಹೂವಿನ ಸಾಮ್ರಾಜ್ಯದಲ್ಲಿ ಲಾಲ್ ಬಾಗ್ ನ ಮೇಲ್ವಿಚಾರಕ ಹಾಗೂ ತೋಟಗಾರಿಕೆ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಕೃಂಬಿಗನ್ ಪುತ್ಥಳಿಯನ್ನು ಮುಖ್ಯ ಕೇಂದ್ರವಾಗಿ ಇರಿಸಲಾಗಿದೆ. ಅವರ ಪುತ್ಥಳಿಯೊಂದಿಗೆ ಅವರು ಜರ್ಮನಿಯಲ್ಲಿ ವಾಸವಾಗಿದ್ದ ಅರಮನೆಯನ್ನು ಲಕ್ಷಾಂತರ ಹೂಕುಂಡದ ಗಿಡಗಳಿಂದ ನಿರ್ಮಿಸಲಾಗಿದೆ.

ಕೃಂಬಿಗನ್ ಅರಮನೆ ಹೇಗಿದೆ?

ಕೃಂಬಿಗನ್ ಅರಮನೆ ಹೇಗಿದೆ?

ಲಾಲ್ ಬಾಗ್ ನ ಗಾಜಿನ ಮನೆಯ ಮಧ್ಯದಲ್ಲಿ 30/25ಅಡಿ ಅಗಲ ಹಾಗೂ 25 ಅಡಿ ಎತ್ತರದ ಕೃಂಬಿಗಲ್ ಅರಮನೆಯನ್ನು ಪೆಟೋನಿಯಾ, ಬಿಗೋನಿಯಾ, ಡಯಾಂತಸ್ ಇನ್ನಿತರ ಒಟ್ಟು ಎರಡು ಲಕ್ಷಕ್ಕೂ ಹೂಕುಂಡಗಳಿಂದ ನಿರ್ಮಾಣ ಮಾಡಲಾಗಿದೆ. ಇದು ಕೃಂಬಿಗನ್ ಜರ್ಮನಿಯ ಲೊಮನ್ ನಲ್ಲಿನ ಅರಮನೆಯಲ್ಲಿ ತಮ್ಮ ಬಾಲ್ಯವನ್ನು ಕಳೆದುದರ ದ್ಯೋತಕವಾಗಿ ನಿರ್ಮಿಸಲಾಗಿದೆ.

ಪುಷ್ಪ ವೃಕ್ಷಗಳು

ಪುಷ್ಪ ವೃಕ್ಷಗಳು

17 ಅಡಿ ಎತ್ತರದ 4ಪುಷ್ಪ ವೃಕ್ಷಗಳು ಕೃಂಬಿಗನ್ ಅರಮನೆಗೆ ಮೆರಗನ್ನು ತಂದಿದ್ದು, ಇದಕ್ಕೆ 3000ಕ್ಕೂ ಹೆಚ್ಚು ಪಾಯಿನ್ ಸಿಟಿಯಾ ಹೂವಿನ ಗಿಡಗಳನ್ನು ಬಳಸಲಾಗಿದೆ.

ಪುಷ್ಪ ಹೃದಯಗಳು

ಪುಷ್ಪ ಹೃದಯಗಳು

15, 14, 13 ಅಡಿ ಎತ್ತರದ ಮೂರು ಪುಷ್ಪ ಹೃದಯಗಳನ್ನು ಕೃಂಬಿಗನ್ ಅರಮನೆಯ ಹಿಂಭಾಗದಲ್ಲಿ ಮನೋಜ್ಞವಾಗಿ ಮೂಡಿ ಬಂದಿದೆ. ಹೂವಿನ ಸೌಂದರ್ಯವನ್ನು ಸುಮ್ಮನೆ ನೋಡಿಕೊಂಡು ಹೋಗುತ್ತಿದ್ದವರು ತಕ್ಷಣ ತಮ್ಮ ಕ್ಯಾಮರ ತೆಗೆದು ಪೋಟೋ ಕ್ಲಿಕ್ಕಿಸಲು ಶುರುವಿಟ್ಟು ಬಿಡುತ್ತಾರೆ ಅಷ್ಟೊಂದು ಸುಂದರವಾಗಿವೆ ಆ ಮೂರು ಪುಷ್ಪ ಹೃದಯಗಳು. ಇದನ್ನು 50,000 ಕ್ಕೂ ಹೆಚ್ಚು ಪೆಟೋನಿಯಾ ಎಂಬ ಗಿಡಗಳಿಂದ ಅಲಂಕೃತಗೊಳಿಸಲಾಗಿದೆ.

ಪ್ಲೋರಲ್ ಡೂಮ್ಸ್

ಪ್ಲೋರಲ್ ಡೂಮ್ಸ್

ಸುಮಾರು 5 ಅಥವಾ 6 ಪ್ಲೋರಲ್ ಡೂಮ್ಸ್ ಗಳಿದ್ದು, ಇದಕ್ಕೆ ಸುಮಾರು 5000 ಹೂಕುಂಡಗಳನ್ನು ಬಳಸಲಾಗಿದೆ. ಇದು ಕೂಡ ಜನರನ್ನು ಒಮ್ಮೆಲೆ ಹಿಡಿದು ನಿಲ್ಲಿಸಿ ಬಿಡುತ್ತಿತ್ತು.

ಎಷ್ಟು ಬಗೆಯ ಹೂಗಳಿದ್ದವು?

ಎಷ್ಟು ಬಗೆಯ ಹೂಗಳಿದ್ದವು?

ಈ ಸುಂದರ ಹೂವಿನ ನಗರಿಯಲ್ಲಿ ಸುಮಾರು 150ಕ್ಕೂ ಹೆಚ್ಚು ಹೂಗಳಿದ್ದವು. ಗುಲಾಬಿ, ಸೇವಂತಿಗೆ ಚೆಂಡೂ, ಆರ್ಕಿಡ್ಸ್, ಜೆರ್ಬೆರಾ, ಸಿಲೋಷಿಯಾ, ಮೇರಿ ಗೋಲ್ಡ್, ಕಾಸ್ ಮಾಸ್, ಸ್ಟ್ಯಾಟಿಸ್, ಸ್ವೀಟ್ ಪೀಸ್ ಪೆಟೂನಿಯಾ, ಒಟ್ಟಿನಲ್ಲಿ ಈ ಲೋಕ ಕವಿ ಹೃದಯಿಗಳನ್ನು, ನರ್ಸರಿ ಪ್ರಿಯರನ್ನು, ಹೂ ಮೋಹಿಗಳನ್ನು ಮತ್ತೊಮ್ಮೆ ಕೈಬೀಸಿ ಕರೆಯುತ್ತದೆ.

ಕಣ್ಮನ ಸೆಳೆಯುವ ಫ್ರಾಕ್ ತೊಟ್ಟ ಬಾಲೆ

ಕಣ್ಮನ ಸೆಳೆಯುವ ಫ್ರಾಕ್ ತೊಟ್ಟ ಬಾಲೆ

ಕೈ ಕುಲುಕುವ ಶೈಲಿಯಲ್ಲಿ ನಿಂತ ಬಾಲೆ ಹಾಗೂ ಆಕೆಯ ಫ್ರಾಕ್ ನ್ನು ಹೂಗಳಿಂದ ತಯಾರಿಸಿದ್ದು ಬಂದವರನ್ನು ಆತ್ಮೀಯತೆಯಿಂದ ಬರಮಾಡಿಕೊಳ್ಳುತ್ತಿತ್ತು. ಇದು ಮಾತ್ರ ಜನರನ್ನು ಇನ್ನಷ್ಟು ಸೆಳೆಯುತ್ತಿತ್ತು. ಕಣ್ಮನ ಸೆಳೆಯುವ ಫ್ರಾಕ್ ತೊಟ್ಟ ಬಾಲೆ ಕಂಡ ಕೂಡಲೇ ಜನರು ಫೋಟೋ ಕ್ಲಿಕ್ಕಿಸಿದ್ದೋ ಕ್ಲಿಕ್ಕಿಸಿದ್ದು.

ಮನಸೂರೆಗೊಳ್ಳುವ ನಾನಾ ಮಳಿಗೆಗಳು:

ಮನಸೂರೆಗೊಳ್ಳುವ ನಾನಾ ಮಳಿಗೆಗಳು:

ಸಾಂಬಾರ್ ಪೌಡರ್, ಕಾಫಿ ಪೌಡರ್ ನಿಂದ ಹಿಡಿದು ಮಕ್ಕಳ ಆಟಿಕೆ, ಮನೆ ಅಲಂಕಾರಿಕ ವಸ್ತುಗಳು, ದೀಪ, ಪುಸ್ತಕ, ಮಹಿಳಾ ಒಡವೆಗಳು, ಹೀಗೆ ನಾನಾ ಬಗೆಯ ಒಟ್ಟು ನೂರಕ್ಕೂ ಹೆಚ್ಚು ಮಳಿಗೆಗಳಿಗೆ ಅವಕಾಶ ನೀಡಲಾಗಿದೆ. ಮಕ್ಕಳು ಇಷ್ಟಪಡುವ ವಸ್ತುವಿನಿಂದ ಹಿಡಿದು ವಯೋವೃದ್ದರ ಮನತಣಿಸುವ ವಸ್ತಗಳು ಇಲ್ಲಿ ಧಾರಳವಾಗಿ ದೊರಕುತ್ತವೆ.

ಪ್ರವೇಶ ಶುಲ್ಕ?

ಪ್ರವೇಶ ಶುಲ್ಕ?

ಸಾಮಾನ್ಯ ದಿನಗಳಲ್ಲಿ ಜನವರಿ 25 ರವರೆಗೆ ವಯಸ್ಕರಿಗೆ 50 ರೂ. 12 ವರ್ಷದೊಳಗಿನ ಮಕ್ಕಳಿಗೆ 10ರೂ. ತೆಗೆದುಕೊಳ್ಳಲಾಗುತ್ತದೆ. 24 ಮತ್ತು 26ನೇ ದಿನಾಂಕದಂದು ವಯಸ್ಕರಿಗೆ 60 ರೂ. ಮಕ್ಕಳಿಗೆ 10 ರೂ. ಇರುತ್ತದೆ.

ತಾರಸಿ ಕೈ ತೋಟ?

ತಾರಸಿ ಕೈ ತೋಟ?

ತೋಟಗಾರಿಕೆ ತರಬೇತಿ ಕೇಂದ್ರದ ವತಿಯಿಂದ ತಾರಸಿ ತೋಟ ನಿರ್ಮಿಸಲಾಗಿದೆ. 'ಮನೆಯಂಗಳದಲ್ಲಿ ಸಾವಯವ ತಾರಸಿ ಮತ್ತು ಕೈ ತೋಟ ಸ್ವಾಸ್ಥ್ಯ, ಸಮೃದ್ಧ ಆರೋಗ್ಯದೆಡೆಗೆ' ಎಂಬ ವಾಕ್ಯದಡಿ ಮನೆಯ ಬಾಲ್ಕನಿ, ತಾರಸಿಗಳಲ್ಲಿ ಕಡಿಮೆ ನೀರಿನಿಂದ ತರಕಾರಿ, ಔಷಧಿ, ಹಣ್ಣಿನ ಗಿಡಗಳನ್ನು ಬೆಳೆಸುವುದು ಹೇಗೆ ಎಂಬ ಮಾಹಿತಿಯು ಇಲ್ಲಿದೆ.

ಕೃಂಬಿಗಲ್ ವಿಶೇಷ ಛಾಯಾಚಿತ್ರ ಪ್ರದರ್ಶನ?

ಕೃಂಬಿಗಲ್ ವಿಶೇಷ ಛಾಯಾಚಿತ್ರ ಪ್ರದರ್ಶನ?

ಕೃಂಬಿಗಲ್ ರವರು ತಮ್ಮ ಜೀವನದಲ್ಲಿ ಕೆಲವು ಗಣ್ಯರೊಂದಿಗೆ ಕಳೆದ ಅಪರೂಪದ ಕ್ಷಣಗಳನ್ನು ಬಿಂಬಿಸುವ ಛಾಯಾಚಿತ್ರಗಳ ಪ್ರದರ್ಶನ ಏರ್ಪಡಿಸಲಾಗಿದೆ. ಗಾಜಿನ ಮನೆಯಿಂದ ಹೊರಬಂದು ಹಿಂಬದಿ ಹೋದರೆ ನಿಮಗೆ ಈ ಪ್ರದರ್ಶನ ಕಾಣಸಿಗುತ್ತದೆ.

ನಾನಾ ಗಿಡಗಳು

ನಾನಾ ಗಿಡಗಳು

ಸಸ್ಯ ಪ್ರಿಯರು ಪುಷ್ಪ ಪ್ರದರ್ಶನದಲ್ಲಿ ಒಂದು ಸುತ್ತು ಹಾಕಿಯೇ ಬರಬೇಕು. ಏಕೆಂದರೆ ಇಲ್ಲಿ 30 ರೂ ಸಸ್ಯದಿಂದ ಹಿಡಿದು 30,000ರೂ ಬೆಲೆಬಾಳುವ ಸಸ್ಯ ಇಲ್ಲಿ ಸಿಗುತ್ತದೆ. ಸಸ್ಯಕ್ಕೆ ಅನುಗುಣವಾಗಿ ಸಸ್ಯದ ಬೆಲೆ ನಿಗದಿಪಡಿಸಲಾಗುವುದು ಎಂದು ನರ್ಸರಿ ಮಳಿಗೆ ಮಾಲೀಕ ಮಂಜುನಾಥ್ ಹೇಳುತ್ತಾರೆ.ಇಲ್ಲಿ ಗುಲಾಬಿ ಸೇವಂತಿಗೆ ಗಿಡದಿಂದ ಹಿಡಿದು ಬೋನ್ಸಾಯ್, ಆಲದ ಮರದವರೆಗೂ ಇಲ್ಲಿ ಸಿಗುತ್ತದೆ.

ಧಾನ್ಯಗಳಲ್ಲಿ ಗಣ್ಯರು

ಧಾನ್ಯಗಳಲ್ಲಿ ಗಣ್ಯರು

ಗಾಜಿನ ಮನೆಯೊಳಗೆ ಕೆಂಪೇಗೌಡ ಪ್ರಶಸ್ತಿ ವಿಜೇತ ಕಲಾವಿದ ಶಿವಣ್ಣ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ, ಅಬ್ದುಲ್ ಕಲಾಂ, ವಾಜಪೇಯಿ, ಬಸವಣ್ಣ, ವಿವೇಕಾನಂದ, ರಾಷ್ಟ್ರಧ್ವಜವನ್ನು ಬರೆದು ಅವುಗಳನ್ನು ಅಕ್ಕಿ,ರಾಗಿ, ಸಾಸಿವೆ ಇನ್ನಿತರ ಧಾನ್ಯಗಳಿಂದ ಬಿಡಿಸಲಾಗಿದೆ. ಒಮ್ಮೆ ಜನರು ನಿಂತು ನೋಡಿಯೇ ಮುಂದೆ ಸಾಗುತ್ತಿದ್ದರು.

ಭದ್ರತಾ ವ್ಯವಸ್ಥೆ ಹೇಗಿದೆ?

ಭದ್ರತಾ ವ್ಯವಸ್ಥೆ ಹೇಗಿದೆ?

ಒಂದು ದಿನಕ್ಕೆ 1 ಡಿಸಿಪಿ, ಎಸಿಪಿ, 7 ಇನ್ಸ್ ಪೆಕ್ಟರ್, 25ಸಬ್ ಇನ್ಸ್ ಪೆಕ್ಟರ್ ಇಷ್ಟು ಜನ ಕಾರ್ಯ ನಿರ್ವಹಿಸುತ್ತಾರೆ. 500 ಮಂದಿ ಭದ್ರತಾ ಸಿಬ್ಬಂದಿ ಇದ್ದು, 10 ಜನರು ಸಮವಸ್ತ್ರ ಇಲ್ಲದೆ ಜನರ ನಡುವೆಯೇ ಇರುತ್ತಾರೆ. ರಾತ್ರಿ ಪಾಳಿಯಲ್ಲಿ 1 ಸಬ್ ಇನ್ಸ್ ಪೆಕ್ಟರ್ ಸೇರಿದಂತೆ 10 ಸಿಬ್ಬಂದಿ ಇದ್ದಾರೆ. ಇರುವ 4 ದ್ವಾರದಲ್ಲಿಯೂ 1 ಇನ್ಸ್ ಪೆಕ್ಟರ್ (ರೈಫಲ್ ಸಮೇತ) 2 ಸಬ್ ಇನ್ಸ್ ಪೆಕ್ಟರ್, 3 ಎಎಸ್ಐ, 10 ಹೆಡ್ ಕಾನ್ಸ್ ಟೇಬಲ್ ಇದ್ದಾರೆ.

ವಿಶೇಷವಾದ ಭದ್ರತೆಗಾಗಿ ಏನೆಲ್ಲಾ ಕ್ರಮ ಅನುಸರಿಸಲಾಗಿದೆ?

ವಿಶೇಷವಾದ ಭದ್ರತೆಗಾಗಿ ಏನೆಲ್ಲಾ ಕ್ರಮ ಅನುಸರಿಸಲಾಗಿದೆ?

ಇಡೀ ಉದ್ಯಾನವನದ ಸುತ್ತ 50ಸಿಸಿ ಕ್ಯಾಮರ ಅಳವಡಿಸಲಾಗಿದೆ. 100 ಹೋಮ್ ಗಾರ್ಡ್ಸ್, 20 ಜನ ಎನ್ ಜಿಒ ಕಾರ್ಯಕರ್ತರು ಇವರ ಜೊತೆಗೆ ಪೋಲಿಸರು ಇರುತ್ತಾರೆ. ಹಾಲುಣಿಸುವ ತಾಯಂದಿರಿಗಾಗಗಿ ವಿಶೇಷ ಕೊಠಡಿಯ ವ್ಯವಸ್ಥೆ ಮಾಡಲಾಗಿದೆ. ಮಕ್ಕಳು ಕಳುವಾದರೆ ಘೋಷಿಸಲು ಮೈಕ್ ಸೆಟ್ ವ್ಯವಸ್ಥೆ ಮಾಡಲಾಗಿದೆ. 2 ಕೆಎಸ್ ಆರ್ ಪಿ ವ್ಯಾನ್ ಗಳಿವೆ, 1 ಆಂಬುಲೆನ್ಸ್ ಜೊತೆಗೆ ಜನರು ಒಳಗೆ ಬರುವಾಗ ಅವರನ್ನು ಪರಿಶೀಲಿಸಿಯೇ ಬಿಡಲಾಗುತ್ತದೆ ಎಸಿಪಿ ಕಾಂತರಾಜ್ ಎಂದರು.

ಜಲ ಸಂಪನ್ಮೂಲ ವೈಜ್ಞಾನಿಕ ಬೃಹತ್ ಮಳಿಗೆ

ಜಲ ಸಂಪನ್ಮೂಲ ವೈಜ್ಞಾನಿಕ ಬೃಹತ್ ಮಳಿಗೆ

ಇಲ್ಲಿ ತೋಟಗಾರಿಕಾ ಯೋಜನೆಗಳ ತಾಂತ್ರಿಕತೆ, ಜಲಸಂಪನ್ಮೂಲದ ವೈಜ್ಞಾನಿಕ ನಿರ್ವಹಣೆ ಬಗ್ಗೆ, ಹನಿ ನೀರಾವರಿ, ತುಂತುರು ನೀರಾವರಿ, ಮಳೆ ಕೊಯ್ಲು ವ್ಯವಸ್ಥೆ, ಹೊಸ ತಳಿಗಳ ಪರಿಚಯ, ಎಲ್ಲಾ ರೀತಿಯ ತರಕಾರಿಗಳು ಇನ್ನಿತರ ಮಾಹಿತಿಗಳನ್ನು ನೀಡುವ ಬೃಹತ್ ಮಳಿಗೆ ಇಲ್ಲಿ ನಿರ್ಮಿಸಲಾಗಿದೆ.

ಬಾಯಿ ಚಪ್ಪರಿಸಲು ತಿಂಡಿಗಳು ಲಭ್ಯ

ಬಾಯಿ ಚಪ್ಪರಿಸಲು ತಿಂಡಿಗಳು ಲಭ್ಯ

ಮಿರ್ಚಿ ಮಂಡಕ್ಕಿ, ಸೌತೆಕಾಯಿ, ಖಾರ ಮಂಡಕ್ಕಿ, ಫ್ರೂಟ್ ಸಲಾಡ್, ವೈವಿಧ್ಯಮಯ ಜ್ಯೂಸ್ ಗಳು, ಒಣಹಣ್ಣುಗಳು ಹೀಗೆ ಇನ್ನು ವಿವಿಧ ಬಗೆಯ ಕುರುಕಲು ತಿಂಡಿಗಳು ನಿಮಗೆ ಇಲ್ಲಿ ಸಿಗುತ್ತದೆ.

ವ್ಯವಸ್ಥೆಯಲ್ಲಿ ಸ್ವಲ್ಪ ಎಡವಟ್ಟಾಗಿದೆ?

ವ್ಯವಸ್ಥೆಯಲ್ಲಿ ಸ್ವಲ್ಪ ಎಡವಟ್ಟಾಗಿದೆ?

ಪುಷ್ಪ ಪ್ರದರ್ಶನವನ್ನು ಗಾಜಿನ ಮನೆಯಲ್ಲಿ ನೋಡಿದ ಬಳಿಕ ಎಲ್ಲೆಲ್ಲಿ ಏನೇನಿದೆ ಎಂದು ಜನರು ತಕ್ಷಣ ಗೊಂದಲ ಉಂಟಾಗುತ್ತದೆ. ಎಷ್ಟೋ ಮಂದಿಗೆ ಛಾಯಾಚಿತ್ರ ಪ್ರದರ್ಶನ, ತಾರಸಿ ತೋಟದ ಅನುಕೂಲತೆ ಬಗ್ಗೆ ಮಾಹಿತಿ ಇದೆ ಎಂಬುದೇ ತಿಳಿಯುವುದಿಲ್ಲ. ಇದಕ್ಕೆ ಕಾರಣ ಸೂಚನ ಫಲಕಗಳಿಲ್ಲದಿರುವುದು. ವೀಕ್ಷಕರ ಕೊರತೆ ಎದ್ದು ಕಾಣುತ್ತಿತ್ತು. ತಂಪಾದ ವಾತಾವರಣದಲ್ಲಿ ಬಿಕೋ ಎನ್ನುತ್ತಿತ್ತು. ರಜೆ ದಿನಗಳಲ್ಲಿ ಮಾತ್ರ ಜನ ಬರುತ್ತಾರೆ. ಕಳೆದ ಬಾರಿ ಹೋಲಿಸಿದರೆ ಈ ಬಾರಿ ವೀಕ್ಷಕರ ಸಂಖ್ಯೆ ತೀರಾ ಕಡಿಮೆ.

ವೀಕ್ಷಕರು ಹೇಳುವುದೇನು?

ವೀಕ್ಷಕರು ಹೇಳುವುದೇನು?

ನಾವು ಇಲ್ಲಿಗೆ ಪ್ರತಿವರ್ಷ ಬರುತ್ತೇವೆ. ಆದರೆ ಕಳೆದ ಬಾರಿ ಹೋಲಿಸಿದರೆ ಸಸ್ಯದ ವಿವಿಧತೆಗಳು ಕಡಿಮೆಯಾಗಿವೆ. ಹಸಿರು ಎನ್ನುವುದು ಮಾಯವಾಗಿದೆ. ಪುಷ್ಪಗಳ ಕೊರತೆ ಎದ್ದು ಕಾಣುತ್ತಿದೆ. ಅಷ್ಟೊಂದು ಸುಂದರತೆ ಇಲ್ಲ ಎಂದು ಹಿರಿಯರಾದ ಮುರುಳಿಧರ್ ಹೇಳುತ್ತಾರೆ.

ಇನ್ನೂ ಮೊದಲ ಬಾರಿ ಸಸ್ಯಕಾಶಿ ಮೇಲ್ವಿಚಾರಣೆಗೆಂದು ನಿಯುಕ್ತರಾದ ಕಾನ್ಸ್ ಟೇಬಲ್ ಮಂಜುನಾಥ್ ಅವರು ನಾವು ಮೊದಲು ಕುಟುಂಬ ಸಮೇತರಾಗಿ ಬಂದು ನೋಡುತ್ತಿದ್ದೆವು. ಆದರೆ ಈ ಬಾರಿ ಕೆಲಸದ ಮೇಲೆ ಇರುವ ಕಾರಣ ಕುಟುಂಬದವರನ್ನು ಕರೆದುಕೊಂಡು ಬರಲಾಗುತ್ತಿಲ್ಲ. ಒಟ್ಟಿನಲ್ಲಿ ಕುಟುಂಬದವವರೆಲ್ಲರೂ ಬಂದು ತಮ್ಮ ಅಮೂಲ್ಯ ಸಮಯ ಕಳೆಯಲು ಈ ಹೂವಿನ ಲೋಕ ನೆರವಾಗಲಿದೆ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The annual Republic Day flower show 2016 in Lalbagh, Bengaluru has begun from January 16. It will open till 26th January. Highlight of this flower show is home created in the memory of German horticulturist Gustav Hermann Krumbiegel. Take your camera capture the beauty of blossoming flowers.
Please Wait while comments are loading...