ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೊಮ್ಮಲೂರಿನ ಚೊಕ್ಕನಾಥಸ್ವಾಮಿ ಬಗ್ಗೆ ತಿಳಿಯಿರಿ

|
Google Oneindia Kannada News

ಬೆಂಗಳೂರಿನ ಪ್ರಾಚೀನ ಐತಿಹಾಸಿಕ ದೇವಾಲಯಗಳ ಕುರಿತ ಚರ್ಚೆಗಳಲ್ಲಿ ಹಲಸೂರಿನ ಸೋಮೇಶ್ವರ ದೇವಾಲಯ, ಮಲ್ಲೇಶ್ವರದ ಕಾಡುಮಲ್ಲೇಶ್ವರ ದೇವಾಲಯ, ಬಸವನಗುಡಿಯ ದೊಡ್ಡ ಬಸವಣ್ಣನ ಗುಡಿ, ಗವಿಪುರಂನ ಗವಿಗಂಗಾಧರೇಶ್ವರ ದೇವಾಲಯಗಳ ಉಲ್ಲೇಖಗಳು ಹೇರಳವಾಗಿ ದೊರೆಯುತ್ತವೆ.

ಇವೆಲ್ಲವುಗಳೂ ಶಿವನ ದೇವಾಲಯಗಳಾದರೆ ಅದೇ ಕಾಲಘಟ್ಟದಲ್ಲಿ ಬರುವ ನಗರದ ವಿಷ್ಣು ಆರಾಧನೆಯ ಪುರಾತನ ದೇವಾಲಯವೆಂದರೆ ಚೊಕ್ಕನಾಥಸ್ವಾಮಿ ದೇವಾಲಯ. ಆದರೆ, ಈ ದೇವಾಲಯ ಹೆಚ್ಚು ಪ್ರಚಾರಕ್ಕೆ ಬರಲಿಲ್ಲ. ಚೊಕ್ಕನಾರಾಯಣಸ್ವಾಮಿ ದೇಗುಲ ಎಂದೂ ಹೇಳುವ ಇದಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ.

ಎಲ್ಲಿದೆ ದೇವಾಲಯ : ಬೆಂಗಳೂರಿನ ಹೃದಯ ಭಾಗವಾದ ಮಹಾತ್ಮಾಗಾಂಧಿ ರಸ್ತೆಯಿಂದ ಹಳೆಯ ವಿಮಾನ ನಿಲ್ದಾಣ ರಸ್ತೆಯಲ್ಲಿ 2 ಕಿ.ಮೀ. ಸಾಗಿದರೆ ದೊಮ್ಮಲೂರು ಸಿಗುತ್ತದೆ. ದೊಮ್ಮಲೂರು ಗ್ರಾಮ ಸಿಕ್ಕಕೂಡಲೇ ಮುಖ್ಯ ರಸ್ತೆಯಿಂದ ಎಡಬದಿಗೆ ತಿರುಗಿ ಸುಮಾರು 50 ಮೀಟರ್ ಸಾಗಿದರೆ ಬಲಭಾಗದಲ್ಲಿ ಒಂದು ಎತ್ತರದ ಗರುಡಗಂಭ ಎದುರಾಗುತ್ತದೆ. ಎಡಭಾಗದಲ್ಲಿ ಎತ್ತರದಲ್ಲಿರುವ ಕಟ್ಟಡದ ಮೆಟ್ಟಿಲು ಹತ್ತಿ ಹೋದರೆ ಚೊಕ್ಕನಾಥಸ್ವಾಮಿ ದೇವಾಲಯವಿದೆ.

10ನೇ ಶತಮಾನದಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿದೆ ಎಂದು ಕರ್ನಾಟಕದ ರಾಜ್ಯಪತ್ರ ಹೇಳುತ್ತದೆ. ಈ ದೇವಸ್ಥಾನವು ಅತ್ಯಂತ ಎತ್ತರದ ಅಡಿಪಾಯದಲ್ಲಿ ನಿರ್ಮಾಣವಾಗಿವೆ. ತೆಲುಗಿನಲ್ಲಿ 'ಚೊಕ್ಕ' ಅಂದರೆ ಸುಂದರ ಎಂದಾಗುತ್ತದೆ ನಾರಾಯಣ ಅಂದರೆ ಸುಂದರ ವಿಷ್ಣುವಿನ ದೇವಾಲಯವೆಂಬ ಅರ್ಥವೂ ಬರುತ್ತದೆ.

ಪುರಾತನ ಶಾಸನಗಳಿವೆ : ದೇವಾಲಯ ಪ್ರವೇಶಿಸುತ್ತಿದ್ದಂತೆ ಇತ್ತೀಚೆಗೆ ನಿರ್ಮಾಣ ಮಾಡಿದ ಗಣಪತಿಯ ಸಣ್ಣ ಗುಡಿಯಿದೆ. ಇನ್ನು ನಾಲ್ಕು ಮೆಟ್ಟಿಲು ಹತ್ತಿದರೆ ಮೂಲ ದೇವಾಲಯವಿದೆ. ಐತಿಹಾಸಿಕವಾಗಿ ಹತ್ತನೇ ಶತಮಾನದಲ್ಲಿ ಚೋಳರ ಕಾಲದಲ್ಲಿ ನಿರ್ಮಿಸಿದ್ದ ದೇವಾಲಯವಾದರೂ ಇದರ ಅಭಿವೃದ್ಧಿಗೆ ಬಿಲ್ಲವರು, ಹೊಯ್ಸಳರು ಹಾಗೂ ವಿಜಯನಗರದ ಅರಸರು ಶ್ರಮಿಸಿದ್ದಾರೆ.

ಚೋಳರ ಕಾಲದಲ್ಲಿ ನಿರ್ಮಿಸಲಾದ ಗರ್ಭಗುಡಿ ಮತ್ತು ಪ್ರಾಂಗಣಗಳನ್ನು ದೇವಾಲಯದಲ್ಲಿ ಕಾಣಬಹುದಾಗಿದೆ. ವಿಜಯನಗರದ ಅರಸರ ಕಾಲದಲ್ಲಿ ನವರಂಗ ಮಂಟಪದ ಕಲ್ಲುಗಳನ್ನು ರಚಿಸಲಾಗಿದೆ. ಕಂಬಗಳ ಮೇಲೆ ವಾಲಿ-ಸುಗ್ರೀವರ ಯುದ್ಧ ಮತ್ತು ಸಿಂಹದ ಚಿತ್ರಗಳಿವೆ. ದೇವಸ್ಥಾನದ ದ್ವಾರ ಮತ್ತು ಗರ್ಭಗುಡಿಯ ಸುತ್ತ ಕಲ್ಲಿನ ಮೇಲೆ ಕೆತ್ತಿದ ಶಾಸನಗಳಿವೆ.

ಚೊಕ್ಕನಾರಾಯಣ ದೇವರ ಬಳಿ ಶ್ರೀದೇವಿ ಮತ್ತು ಭೂದೇವಿಯರ ಮೂರ್ತಿಗಳಿದ್ದು, ದೇವಾಲಯದ ಪ್ರಾಂಗಣದಲ್ಲಿ ಆಂಜನೇಯಸ್ವಾಮಿಯ ಸಣ್ಣ ಗುಡಿಯಿದೆ. ಅಲ್ಲದೆ, ದೇವಾಲಯದ ಅಂಗಳದಲ್ಲಿ ಪಾಕಶಾಲೆ ಮತ್ತು ಆರ್ಚಕರ ನಿವಾಸವೂ ಇದೆ. 30 ವರ್ಷಗಳಿಂದ ಹಲವು ಬಾರಿ ದೇವಾಲಯದ ನವೀಕರಣ ನಡೆದಿದೆ.

ಜಾತ್ರೆ ಯಾವಾಗ : ಪ್ರತಿ ವರ್ಷ ಏಪ್ರಿಲ್-ಮೇ ತಿಂಗಳಲ್ಲಿ ದೇವಾಲಯದಲ್ಲಿ ಉತ್ಸವ ನಡೆಯುತ್ತದೆ. ಯುಗಾದಿ, ವೈಕುಂಠ ಏಕಾದಶಿಗಳಂತಹ ದಿನಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತದೆ. ದಿನನಿತ್ಯ ಬೆಳಗ್ಗೆ 8.30 ರಿಂದ ಅಪರಾಹ್ನ 12-00 ರವರೆಗೆ ಹಾಗೂ ಸಂಜೆ 6 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ಪೂಜಾ ಕಾರ್ಯಗಳು ನಡೆಯುತ್ತವೆ.

Domlur

ಗಿಜಿಗುಟ್ಟುವ ಬೆಂಗಳೂರು ನಗರದ ಹೃದಯ ಭಾಗದಲ್ಲಿದ್ದರೂ ಅತ್ಯಂತ ಪ್ರಶಾಂತಮಯ ವಾತಾವರಣದಲ್ಲಿರುವ ಶ್ರೀದೇವಿ-ಭೂದೇವಿ ಸಹಿತ ಸುಂದರ ಚೊಕ್ಕನಾರಾಯಣಸ್ವಾಮಿ ದರ್ಶನಮಾಡಿ ಹೊರ ಬರುವಾಗ ದೂರದಲ್ಲೆಲ್ಲೋ ನೂರಾರು ವರ್ಷಗಳ ಹಿಂದೆ ಶ್ರೀಪುರಂದರದಾಸರು ಹೇಳಿದ ಪದ ಕೇಳಿ ಬರುತ್ತಿತ್ತು.

1960-70ರ ದಶಕದಲ್ಲಿ ಕನ್ನಡ ಚಿತ್ರರಂಗದ ಪ್ರಖ್ಯಾತ ನಟತ್ರಯರಲ್ಲಿ ಒಬ್ಬರಾದ ಕಲ್ಯಾಣ್ ಕುಮಾರ್ ಅವರ ಹುಟ್ಟು ಹೆಸರು ಚೊಕ್ಕಣ್ಣ. ಕಲ್ಯಾಣ್ ಕುಮಾರ್ ಆ ದಿನಗಳಲ್ಲಿ ಕನ್ನಡ ಚಿತ್ರರಂಗದ ಮೊದಲ ಸಾಲಿನ ನಟರಲ್ಲಿ ಒಬ್ಬರಾಗಿದ್ದರು. ಸುಂದರ ವಿಷ್ಣುವಿನ ಮತ್ತೊಂದು ಹೆಸರಾದ ಚೊಕ್ಕಣ್ಣ ಎಂದು ಹುಟ್ಟು ಹೆಸರು ಅವರಿಗಿತ್ತು. ಚಿತ್ರರಂಗಕ್ಕೆ ಬಂದ ನಂತರ ಅವರ ಹೆಸರು ಕಲ್ಯಾಣ್‍ಕುಮಾರ್ ಎಂದು ಆಯಿತು.

ಬರಹ : ಮಂಜುನಾಥ ಬಾಬು ಟಿ.ಸಿ.
ಸಹನಾ ಎಂ.
ಸಹಾಯಕ ನಿರ್ದೇಶಕರು, ವಾರ್ತಾ ಇಲಾಖೆ

English summary
The Chokkanathaswamy temple is the oldest temple in the Bengaluru city and the inscriptions on the temple suggest it belongs to the Chola period.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X