ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಸವ ತತ್ವ ಅಧ್ಯಯನಕ್ಕೆ ಅಂತರಾಷ್ಟ್ರೀಯ ಕೇಂದ್ರ : ಸಿಎಂ

|
Google Oneindia Kannada News

ಬೆಂಗಳೂರು, ಮೇ 5 : ಬೆಂಗಳೂರಿನಲ್ಲಿ ಬಸವ ತತ್ವ ಅಧ್ಯಯನ ಮತ್ತು ಸಂಶೋಧನೆಗೆ ಸಹಕಾರಿಯಾಗುವಂತೆ ಅಂತಾರಾಷ್ಟ್ರೀಯ ಮಟ್ಟದ ಕೇಂದ್ರ ಸ್ಥಾಪಿಸುವ ಬಗ್ಗೆ ಸರ್ಕಾರ ಪರಿಶೀಲನೆ ನಡೆಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಕೇಂದ್ರದ ರೂಪರೇಷೆಗಳ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜತೆ ಚರ್ಚಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಬಸವ ವೇದಿಕೆ ಭಾನುವಾರ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬಸವ ತತ್ವಗಳ ಅಧ್ಯಯನ ಮತ್ತು ಸಂಶೋಧನೆಗೆ ಸಂಶೋಧನಾ ಕೇಂದ್ರ ಸ್ಥಾಪಿಸಬೇಕು ಎಂದು ಬಸವ ವೇದಿಕೆ ಅಧ್ಯಕ್ಷ ಡಾ. ಸಿ. ಸೋಮಶೇಖರ್‌ ಬೇಡಿಕೆ ಇಟ್ಟಿದ್ದಾರೆ. ಈ ಕುರಿತು ಸರ್ಕಾರ ಪರಿಶೀಲನೆ ನಡೆಸಲಿದೆ ಎಂದರು.

Siddaramaiah

ಬಸವಣ್ಣನ ತತ್ವಗಳಲ್ಲಿ ನನಗೆ ಅಪಾರ ನಂಬಿಕೆ ಇದೆ ಎಂದು ಹೇಳಿದ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್‌ ಸರ್ಕಾರ ಕೂಡ ಬಸವಾದಿ ಶರಣರ ತತ್ವಗಳ ಅಳವಡಿಕೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದರು. ಜಾತಿ ವ್ಯವಸ್ಥೆ ತೊಲಗಿಸಿ ಸಮಾನತೆಯ ಸಮಾಜ ನಿರ್ಮಾಣಕ್ಕೆ ಬಸವಣ್ಣರು ಶ್ರಮಿಸಿದರು. ಆದರೆ, ಇಂದು ಅದು ಕೇವಲ ಭಾಷಣಗಳಿಗೆ ಸೀಮಿತವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮಾನವನು ಹೇಗೆ ಜೀವಿಸಬೇಕು ಎಂಬುದಕ್ಕೆ ಬಸವಾದಿ ಶರಣರ ವಚನಗಳಲ್ಲಿ ವಿಚಾರಗಳು ಸಿಗುತ್ತವೆ. ಬಸವಣ್ಣನವರ ಆಚಾರ-ವಿಚಾರಗಳ ಕುರಿತು ಮಾತನಾಡುವುದಕ್ಕಿಂತ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಸಿದ್ದರಾಮಯ್ಯ ಹೇಳಿದರು.

ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾರತರತ್ನ ಪ್ರೊ. ಸಿ.ಎನ್‌.ಆರ್‌. ರಾವ್‌ ಅವರಿಗೆ 2014ನೇ ಸಾಲಿನ ಬಸವಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಲೇಖಕಿ ಡಾ. ಲತಾ ರಾಜಶೇಖರ್‌, ಶರಣ ಸಾಹಿತ್ಯ ಪ್ರಚಾರಕ ಡಾ.ಆರ್‌. ಶಿವಣ್ಣ ಅವರಿಗೆ ವಚನ ಸಾಹಿತ್ಯಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಹುಚ್ಚರ ಪ್ರಪಂಚ ನಿರ್ಮಾಣವಾಗಿದೆ : ಬಸವಶ್ರೀ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಭಾರತರತ್ನ ಪ್ರೊ. ಸಿ.ಎನ್‌.ಆರ್‌. ರಾವ್‌, ಬಸವಣ್ಣನ ವಚನಗಳು ಪ್ರಪಂಚದ ಬೇರೆ ಬೇರೆ ಭಾಷೆಗಳಿಗೆ ಅನುವಾದವಾಗಬೇಕು. ಟಿವಿಗಳ ಹಾವಳಿಯಿಂದ ಹುಚ್ಚರ ಪ್ರಪಂಚವೊಂದು ನಿರ್ಮಾಣವಾಗಿ, ಅಧ್ಯಾತ್ಮದ ಬಗ್ಗೆ ಗೊಂದಲ ಸೃಷ್ಟಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. [ಸಿಎನ್ಆರ್ ರಾವ್ ಸಂದರ್ಶನ ಓದಿ]

ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಹಾ ಸಂಸ್ಥಾನದ ನಿರ್ಮಲಾನಂದನಾಥ ಸ್ವಾಮೀಜಿ, ಕೊಪ್ಪಳ ಗವಿಮಠ ಸಂಸ್ಥಾನದ ಗವಿಸಿದ್ದೇಶ್ವರ ಸ್ವಾಮೀಜಿ, ಉಪ ಲೋಕಾಯುಕ್ತ ಸುಭಾಷ್ ಬಿ.ಆದಿ, ಮಾಜಿ ಸಚಿವ ಗೋವಿಂದ ಎಂ. ಕಾರಜೋಳ, ಸಹಕಾರ ಸಚಿವ ಎಚ್‌.ಎಸ್‌. ಮಹಾದೇವಪ್ರಸಾದ್‌, ಬಸವ ವೇದಿಕೆ ಅಧ್ಯಕ್ಷ ಡಾ. ಸಿ. ಸೋಮಶೇಖರ್‌ ಮುಂತಾದವರು ಪಾಲ್ಗೊಂಡಿದ್ದರು.

English summary
Chief Minister Siddaramaiah said, the State government was contemplating setting up an international study and research center on the 12th century social reformer Basavanna soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X