ಮಾಲೀಕತ್ವ ಕಳೆದುಕೊಳ್ಳಲಿದ್ದಾರಾ ಬಿಡಿಎ ಸೈಟು ಮಾಲೀಕರು?!

By: ಅನುಷಾ ರವಿ
Subscribe to Oneindia Kannada

ಬೆಂಗಳೂರು, ಜನವರಿ 3: ಕೆರೆ ಒತ್ತುವರಿ ವಿಚಾರವಾಗಿ ಶಾಸಕರ ಸಮಿತಿಯ ಸಲಹೆಗಳನ್ನು ರಾಜ್ಯ ಸರಕಾರ ಜಾರಿಗೆ ತರಲು ನಿರ್ಧರಿಸಿದರೆ ಬೆಂಗಳೂರಿನಲ್ಲಿ ಒತ್ತುವರಿ ಜಾಗದಲ್ಲಿ ಮನೆ ಹೊಂದಿರುವವರು ಮಾಲೀಕತ್ವವನ್ನೇ ಕಳೆದುಕೊಳ್ತಾರೆ. ಈ ಸಮಿತಿಯು ಇನ್ನೂ ವರದಿ ಸಲ್ಲಿಸಬೇಕಿದೆ. ಸಮಿತಿಯ ಅಂತಿಮ ಷರಾ ಮತ್ತು ಸಲಹೆಗಳನ್ನು ಸಾರ್ವಜನಿಕರ ಮುಂದೆ ಇಡುವುದಕ್ಕೆ ಮುನ್ನ ಒನ್ ಇಂಡಿಯಾಗೆ ಲಭ್ಯವಾಗಿವೆ.

ಅದರ ಪ್ರಕಾರ ಹೇಳುವುದದರೆ ಒತ್ತುವರಿ ಜಾಗದ ಮಾಲೀಕರಿಗೆ ನೆಮ್ಮದಿಯ ದಿನಗಳು ದೂರಾಗಲಿವೆ. ಶಾಸಕರ ಸಮಿತಿಯ ನೇತೃತ್ವವನ್ನು ಸ್ಪೀಕರ್ ಕೆ.ಬಿ.ಕೋಳಿವಾಡ ವಹಿಸಿಕೊಂಡಿದ್ದರು. ಆ ಸಮಿತಿಯು ಸಂಪುಟದ ಮುಂದೆ ಇಡಲಿದೆ. ಆ ನಂತರ ವಿಧಾನಸಭೆಯಲ್ಲಿ ಮಂಡಿಸಲಾಗುವುದು. ಬೆಂಗಳೂರು ಗ್ರಾಮಾಂತರ ಹಾಗೂ ನಗರ ಜಿಲ್ಲೆಯ 1545 ಕೆರೆಗಳ ಅಧ್ಯಯನವನ್ನು ಸಮಿತಿ ನಡೆಸಿದೆ.

Karnataka legislative panel's shocker to BDA site owners

ಸಮಿತಿಯಿಂದ ಹತ್ತು ಸಾವಿರ ಪುಟಗಳ ಬೃಹತ್ ವರದಿಯೊಂದು ಸಲ್ಲಿಕೆಯಾಗುವ ಸಾಧ್ಯತೆ ಇದೆ. ಈಗ ಅಸ್ತಿತ್ವದಲ್ಲಿರುವ ಎಲ್ಲ ಕೆರೆಗಳಿಗೂ ಸಮಿತಿ ಭೇಟಿ ನೀಡಿದೆ. ಕೆಲವು ಕಡೆಯಂತೂ ಕೆರೆ ಇತ್ತು ಎಂಬ ಗುರುತು ಸಹ ಸಿಗದಂತೆ ಕೆರೆಗಳು ಮಾಯವಾಗಿವೆ.

ವರದಿಯಲ್ಲಿ ಏನಿದೆ?
ಒತ್ತುವರಿಯನ್ನು ಖಾಸಗಿ, ವಸತಿ ಮತ್ತು ವಾಣಿಜ್ಯ ಹೀಗೆ ವರ್ಗೀಕರಣ ಮಾಡಲಾಗಿದೆ. ಆಯಾ ವರ್ಗದ ಕೆಳಗೆ ಬರುವ ಒತ್ತುವರಿಗೆ ಸಮಿತಿಯು ನಿರ್ದಿಷ್ಟವಾಗಿ ದಂಡವನ್ನು ವಿಧಿಸುವುದಕ್ಕೆ ಸಲಹೆ ಮಾಡಿದೆ. ಜತೆಗೆ ಕೆಲವು ಮಾನದಂಡ ಅನುಸರಿಸಿ ಪರಿಹಾರವನ್ನೂ ಸೂಚಿಸಲಾಗಿದೆ. ವಶಪಡಿಸಿಕೊಳ್ಳುವುದಕ್ಕೆ ಅಥವಾ ಮುಟ್ಟುಗೋಲು ಹಾಕಿಕೊಳ್ಳುವ ಮುಂಚೆ ಪರಿಹಾರ ಮಾರ್ಗಗಳ ಬಗ್ಗೆಯೂ ಪ್ರಸ್ತಾವ ಮಾಡಿದೆ.

ಪ್ರತಿ ಕೆರೆಯ ಬಗ್ಗೆ ಅಧ್ಯಯನ ನಡೆಸಿದ ಸಮಿತಿ, ಎಲ್ಲ ಕೆರೆಯ ಬಗ್ಗೆಯೂ ತಲಸ್ಪರ್ಶಿಯಾದಂಥ ಮಾಹಿತಿಯನ್ನು ನೀಡಿದೆ. ಒತ್ತುವರಿಯ ಬಗ್ಗೆ ತಿಳಿಸುವ ಜೊತೆಗೆ ಆ ಕೆರೆಯ ಇತಿಹಾಸ, ಈ ವರೆಗೆ ಅ ಕೆರೆಯ ಅಭಿವೃದ್ಧಿಗೆ ಕೈಗೊಂಡ ಕ್ರಮಗಳ ಬಗ್ಗೆಯೂ ಮಾಹಿತಿಯನ್ನು ಒದಗಿಸಲಿದೆ.

ಬಿಡಿಎ ನಿವೇಶನ ಮಾಲೀಕರು ಸಮಸ್ಯೆಯಲ್ಲಿ?
ಇಡೀ ವರದಿಯ ಪ್ರಮುಖ ಸಲಹೆ ಸರಕಾರದ ಪ್ರಾಧಿಕಾರಗಳು ಸಾರ್ವಜನಿಕರಿಗೆ ಮಾರಿದ ನಿವೇಶನಗಳ ಬಗ್ಗೆ ಇದೆ. ಸರಕಾರದಿಂದ ನಡೆದ ಒತ್ತುವರಿದಾರರ ಪಟ್ಟಿಯಲ್ಲಿ ಮುಖ್ಯವಾದ ಹೆಸರು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ್ದು. ಆದ್ದರಿಂದ ಬಿಡಿಎ ನಿವೇಶನ ಮಾಲೀಕರ ಬಳಿ ಕಾನೂನು ಬದ್ಧವಾಗಿ ದಾಖಲೆಗಳು ಇದ್ದರೂ ಮೊದಲು ಭೂಮಿ ಮೇಲಿನ ಮಾಲೀಕತ್ವ ಕಳೆದುಕೊಳ್ಳುವವರು ಅವರೇ.

ಸಮಿತಿ ಸಲಹೆ ಪ್ರಕಾರ, ಸರಕಾರ ಅದರ ಮಾಲೀಕತ್ವ ವಹಿಸಿಕೊಳ್ಳಬೇಕು ಮತ್ತು ಅದರ ಸದ್ಯದ ಮಾಲೀಕರ ಜೊತೆಗೆ ಭೋಗ್ಯದ ಒಪ್ಪಂದ ಮಾಡಿಕೊಳ್ಳಬೇಕು. ಈ ಪ್ರಕ್ರಿಯೆಯಲ್ಲಿ ಸರಕಾರವು ಭೋಗ್ಯಕ್ಕೆ ನೀಡಿದ ಸ್ಥಾನದಲ್ಲಿ, ಆ ಜಾಗವನ್ನು ಖರೀದಿಸಿದ್ದ ವ್ಯಕ್ತಿ ಭೋಗ್ಯಕ್ಕೆ ಪಡೆದವರಾಗುತ್ತಾರೆ.

ಅದೇ ಸ್ಥಳದಲ್ಲಿ ಆ ಜಾಗ ಅಥವಾ ಮನೆಯ ಮಾಲೀಕರು ಇರುವುದಕ್ಕೆ ಅಡ್ಡಿಯಿಲ್ಲ. ಆದರೆ ಅವರು ಆ ಸ್ಥಳ-ಮನೆಯ ಮಾಲೀಕರಾಗಿರುವುದಿಲ್ಲ. ತಮ್ಮ ಭೋಗ್ಯದ ಕರಾರನ್ನು ಮತ್ತೊಬ್ಬರಿಗೆ ವರ್ಗಾಯಿಸಬಹುದು ವಿನಾ ಮಾರಲು ಸಾಧ್ಯವಿಲ್ಲ. ಇನ್ನು ಬಿಡಿಎಗೆ ಭಾರೀ ಮೊತ್ತದ ದಂಡ ವಿಧಿಸುವ ಸಾಧ್ಯತೆಯಿದೆ. ಆದರೆ ಸದ್ಯಕ್ಕೆ ವಾಸವಿರುವವರಿಗೆ ಪರಿಹಾರ ನೀಡಬೇಕಾದ ಜವಾಬ್ದಾರಿ ಬಿಡಿಎಗೆ ಇರುವುದಿಲ್ಲ.

ಈ ಸಲಹೆಗಳಿಂದ ಸಾಕಷ್ಟು ಪ್ರಶ್ನೆಗಳು ಉದ್ಭವಿಸುತ್ತವೆ. ಸರಕಾರದ ಜತೆ ಭೋಗ್ಯದ ಒಪ್ಪಂದಕ್ಕೆ ಬರುವ ನಿವಾಸಿ ಮತ್ತೊಮ್ಮೆ ಹಣ ಪಾವತಿಸಬೇಕೆ? ಬಿಡಿಎ ಮಾಡಿದ ತಪ್ಪುಗಳಿಗಾಗಿ ನಿವಾಸಿಗಳನ್ನು ಹಣ ಪಾವತಿಸುವಂತೆ ಹೇಳಲು ಸಾಧ್ಯವಾ? ಬಿಡಿಎಗೆ ಆಯಾ ಯೋಜನೆಯಲ್ಲಿ ಬಂದ ಹಣವನ್ನು ಮತ್ತೊಂದರಲ್ಲಿ ಹೂಡಿದೆ. ಒಂದು ವೇಳೆ ದಂಡ ಕಟ್ಟಬೇಕು ಅಂದರೆ ಹೇಗೆ ಕಟ್ಟುತ್ತದೆ?

ಅದೆಲ್ಲಕ್ಕಿಂತ ಮುಖ್ಯವಾಗಿ ಸರಕಾರವು ಮೊದಲಿಗೆ ಶಾಸಕರ ಸಮಿತಿಯ ಸಲಹೆಗಳನ್ನು ಪರಾಂಬರಿಸಬೇಕು. ಆದರೆ ಈಗಿನ ಸ್ಥಿತಿಯಲ್ಲಿ ಶಾಸಕರ ಸಮಿತಿಯ ಸಲಹೆಗಳನ್ನು ಸ್ವೀಕರಿಸಿ, ಜಾರಿ ಮಾಡುವ ಸಾಧ್ಯತೆಗಳು ತೀರಾ ಕಡಿಮೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
If the Karnataka government decides to implement suggestions by the legislative panel on lake encroachment, those owning houses on encroached land in Bengaluru may lose ownership.
Please Wait while comments are loading...