ಕನ್ನಡ 'ನೀಟ್' ಕಡೆಗಣನೆ, ಕೇಂದ್ರದ ವಿರುದ್ಧ ಜೆಡಿಎಸ್ ಆಕ್ರೋಶ

Posted By:
Subscribe to Oneindia Kannada

ಬೆಂಗಳೂರು, ಡಿ.24- ವೈದ್ಯಕೀಯ ಕೋರ್ಸ್ ಗಳ ಪ್ರವೇಶಕ್ಕಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ಪರೀಕ್ಷೆಯಲ್ಲಿ ಕನ್ನಡ ಭಾಷೆಯನ್ನು ಪರಿಗಣಿಸದ ಕೇಂದ್ರ ಸರಕಾರದ ವಿರುದ್ಧ ಬೆಂಗಳೂರು ಯುವ ಜೆಡಿಎಸ್ ಘಟಕ ಶನಿವಾರ ಬೃಹತ್ ಪ್ರತಿಭಟನೆ ನಡೆಸಿತು.

ಬೆಂಗಲೂರಿನ ಮೌರ್ಯ ವೃತ್ತದಲ್ಲಿರುವ ಗಾಂಧಿ ಪ್ರತಿಮೆ ಎದುರು ಜೆಡಿಎಸ್ ನ ನೂರಾರು ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ, ಪ್ರತಿಕೃತಿ ದಹಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಸರಕಾರವು ನೀಟ್ ಪರೀಕ್ಷೆಯಲ್ಲಿ ಎಂಟು ಪ್ರಾದೇಶಿಕ ಭಾಷೆಗಳಿಗೆ ಅವಕಾಶ ನೀಡಿ, ಕನ್ನಡವನ್ನು ಕಡೆಗಣಿಸಿದೆ ಎಂದು ಆರೋಪಿಸಿದರು.[8 ಭಾಷೆಯಲ್ಲಿ ನೀಟ್ ಪರೀಕ್ಷೆ, ಕನ್ನಡ ವಿದ್ಯಾರ್ಥಿಗಳಿಗೆ ಯಾಕೀ ಶಿಕ್ಷೆ?]

JDS protest

ತಕ್ಷಣವೇ ಈ ಪ್ರಮಾದವನ್ನು ಸರಿಪಡಿಸಿ, ಕನ್ನಡಿಗರಿಗೆ ಮಾತೃಭಾಷೆಯಲ್ಲೇ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬೇಕು. ಇಲ್ಲದಿದ್ದರೆ ಕೇಂದ್ರದ ವಿರುದ್ಧ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಬಿಬಿಎಂಪಿ ಯುವ ಜೆಡಿಎಸ್ ಘಟಕದ ಅಧ್ಯಕ್ಷ ಎಚ್.ಎನ್.ರಮೇಶ್ ಗೌಡ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರಮಾದದಿಂದಾಗಿ ಕನ್ನಡಕ್ಕೆ ಅವಮಾನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

JDS Protest

ಇಂಗ್ಲಿಷ್ ನಲ್ಲಿ ಪರೀಕ್ಷೆ ಬರೆಯುವುದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಹೆಚ್ಚಿನ ತೊಂದರೆ ಉಂಟಾಗುತ್ತದೆ. ನಗರ ಭಾಗದ ವಿದ್ಯಾರ್ಥಿಗಳು ಇಂಗ್ಲಿಷ್ ನಲ್ಲೇ ಬರೆಯಬಹುದು. ಕೇಂದ್ರದ ಮೇಲೆ ರಾಜ್ಯ ಹಾಗೂ ರಾಜ್ಯದ ಮೇಲೆ ಕೇಂದ್ರ ಸರಕಾರ ಗೂಬೆ ಕೂರಿಸುವ ಪ್ರಯತ್ನ ಬಿಟ್ಟು, ಆಗಿರುವ ಪ್ರಮಾದ ಸರಿಪಡಿಸಲಿ ಎಂದರು.[NEETನಲ್ಲಿ ಕನ್ನಡ ಸೇರಿಸಲು ಕೇಂದ್ರಕ್ಕೆ ಸಿಎಂ ಸಿದ್ದರಾಮಯ್ಯ ಪತ್ರ]

ರಾಜ್ಯ ಸರಕಾರರವೇ ನವೆಂಬರ್ 28ರಂದು ಇಂಗ್ಲಿಷ್ ನಲ್ಲೇ ಪರೀಕ್ಷೆಗೆ ಅವಕಾಶ ಕಲ್ಪಿಸುವಂತೆ ಹೇಳಿರುವುದು ಬಹುದೊಡ್ಡ ಪ್ರಮಾದ. ಇನ್ನು ಇದೇ ಕಾರಣ ಇಟ್ಟುಕೊಂಡು ಕೇಂದ್ರ ಸರಕಾರ ಕನ್ನಡ ಭಾಷೆಯನ್ನು ಕಡೆಗಣಿಸಿದ್ದು ಸರಿಯಲ್ಲ. ರಾಜ್ಯದ ಬಿಜೆಪಿ ಸಂಸದರು ಕನ್ನಡದಲ್ಲೇ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲು ಪ್ರಧಾನಿಗೆ ಒತ್ತಡ ಹಾಕಬೇಕು ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
JDS youth wing members protest against the Central and State government for not allowing the students to write Medical entrance exams in Kannada at Gandhi Statue, Bengaluru.
Please Wait while comments are loading...