ಜೆಡಿಎಸ್ ಬಂಡಾಯ ಶಾಸಕರಿಗೆ ಕಾಂಗ್ರೆಸ್ ಮಣೆಹಾಕಿದರೆ ಏನಾದೀತು?

Posted By: ಬಿ.ಎಂ.ಲವಕುಮಾರ್
Subscribe to Oneindia Kannada

ಬೆಂಗಳೂರು, ಆಗಸ್ಟ್ 19: ಜೆಡಿಎಸ್ ನ ಏಳು ಮಂದಿ ಬಂಡಾಯ ಶಾಸಕರು ಕಾಂಗ್ರೆಸ್ ಸೇರ್ಪಡೆಯಾಗುತ್ತಿರುವುದು ಸನ್ನಿಹಿತವಾಗುತ್ತಿರುವ ಬೆನ್ನಲ್ಲೇ ಮೂಲ ಕಾಂಗ್ರೆಸ್ ಮುಖಂಡರಲ್ಲಿ ಅಸಮಾಧಾನ ಹೊಗೆಯಾಡ ತೊಡಗಿದೆ. ಕಾರಣ ಟಿಕೆಟ್ ನೀಡಲೇ ಬೇಕೆಂಬ ಷರತ್ತಿನೊಂದಿಗೆ ಪಕ್ಷಕ್ಕೆ ಸೇರ್ಪಡೆಯಾದರೆ, ಇದುವರೆಗೆ ಪಕ್ಷಕ್ಕಾಗಿ ದುಡಿದ ಬಹುತೇಕ ಮುಖಂಡರು ಟಿಕೇಟ್ ವಂಚಿತರಾಗುತ್ತಾರೆ.

ಅಷ್ಟೇ ಅಲ್ಲ, ಕಾಂಗ್ರೆಸ್ ಎರಡು ಬಣವಾಗಿ ಹಂಚಿದರೂ ಅಚ್ಚರಿಯೇನಿಲ್ಲ. ಜೆಡಿಎಸ್ ಬಂಡಾಯ ಶಾಸಕರು ಪ್ರತಿನಿಧಿಸುವ ಕ್ಷೇತ್ರದ ಕಾಂಗ್ರೆಸ್ ಮುಖಂಡರಿಗೂ ಈ ಬಂಡಾಯ ಶಾಸಕರ ಸೇರ್ಪಡೆ ಸಮಸ್ಯೆಯೇ. ಏಕೆಂದರೆ ಒಂದು ವೇಳೆ ಜೆಡಿಎಸ್ ಬಂಡಾಯ ಶಾಸಕರು ಕಾಂಗ್ರೆಸ್ ಗೆ ಸೇರಿ ಅವರಿಗೆ ಟಿಕೇಟ್ ಸಿಕ್ಕರೆ ಅವರ ಪರವಅಗಿ ಪ್ರಚಾರ ಮಾಡುವುದು ಅನಿವಾರ್ಯವಅಗಲಿದೆ. ಇದುವರೆಗೆ ಅವರ ವಿರುದ್ಧವೇ ತೊಡೆತಟ್ಟಿ ಕಾಂಗ್ರೆಸ್ ಪರ ಪ್ರಚಾರ ಮಾಡಿದ ಮುಖಂಡರು ಈಗ ಅವರ ಪರವಾಗಿ ಪ್ರಚಾರ ಮಾಡುವುದು ಇರಿಸುಮುರಿಸುಂಟು ಮಾಡುವುದು ದಿಟ.

ಇದರ ಜತೆಗೆ ಟಿಕೆಟ್ ಆಕಾಂಕ್ಷೆಯಲ್ಲಿದ್ದವರಿಗೂ ನಿರಾಸೆಯಾಗಲಿದೆ. ಸದ್ಯಕ್ಕೆ ಜೆಡಿಎಸ್ ಬಂಡಾಯ ಶಾಸಕರು ಮತ್ತು ಕಾಂಗ್ರೆಸ್ ಮುಖಂಡರ ಸಭೆ ನಡೆಯುತ್ತಿದ್ದು, ಒಂದು ವೇಳೆ ಕಾಂಗ್ರೆಸ್ ನಿಂದ ಟಿಕೆಟ್ ನೀಡದೆ ಹೋದರೆ ಅವರು ಪಕ್ಷಕ್ಕೆ ಸೇರ್ಪಡೆಗೊಳ್ಳುವುದು ಕಷ್ಟವೇ.

ಸದ್ಯ ಜೆಡಿಎಸ್ ಬಂಡಾಯ ಮತ್ತು ಕಾಂಗ್ರೆಸ್ ನಾಯಕರ ನಡುವೆ ಗೊಂದಲವಿದ್ದು, ಅಧಿಕೃತ ಸೇರ್ಪಡೆ ಕಾರ್ಯಕ್ರಮಗಳು ಮುಂದೂಡುತ್ತಲೇ ಇರುವುದು ಕಂಡುಬರುತ್ತಿದೆ.

ಟಿಕೇಟ್ ನೀಡುವ ಕುರಿತು ಚಿಂತಿಸಿಲ್ಲ!

ಟಿಕೇಟ್ ನೀಡುವ ಕುರಿತು ಚಿಂತಿಸಿಲ್ಲ!

ಜೆಡಿಎಸ್ ಬಂಡಾಯ ನಾಯಕರಿಗೆ ಟಿಕೇಟ್ ನೀಡುವ ಕುರಿತು ಸದ್ಯಕ್ಕೆ ಯಾವುದೇ ತೀರ್ಮಾನ ಆಗಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹೇಳುತ್ತಿದ್ದಾರೆ. ಮತ್ತೊಂದೆಡೆ ಏಳು ಮಂದಿ ಶಾಸಕರ ಪೈಕಿ ಭೀಮಾನಾಯಕ್, ಅಖಂಡ ಶ್ರೀನಿವಾಸಮೂರ್ತಿ, ಇಕ್ಬಾಲ್ ಅನ್ಸಾರಿ ಅವರಿಗೆ ವಿಧಾನಸಭೆ ಚುನಾವಣೆಗೆ ಟಿಕೆಟ್ ಖಚಿತಪಡಿಸಬಾರದು ಎಂದು ಖರ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ.

ಬೇಷರತ್ತಾಗಿ ಸೇರಿಕೊಳ್ಳುತ್ತಾರೆ!

ಬೇಷರತ್ತಾಗಿ ಸೇರಿಕೊಳ್ಳುತ್ತಾರೆ!

ಕೆಪಿಸಿಸಿ ಅಧ್ಯಕ್ಷರಂತೂ ಸದ್ಯಕ್ಕೆ ಯಾವುದೇ ಹೇಳಿಕೆ ನೀಡುವುದಿಲ್ಲ. ಈ ಕುರಿತು ಚರ್ಚಿಸಲು ಇದು ಸೂಕ್ತಕಾಲ ಅಲ್ಲ. ಜೆಡಿಎಸ್ ನಿಂದ ಬರುತ್ತಿರುವ ಶಾಸಕರು ಬೇಷರತ್ತಾಗಿ ಸೇರಿಕೊಳ್ಳುತ್ತಿದ್ದಾರೆ ಟಿಕೇಟ್ ನೀಡುವ ಸಮಯ ಬಂದಾಗ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ಮಾಡಿ ಟಿಕೇಟ್ ನೀಡಲಾಗುವುದಾಗಿ ಹೇಳಿದ್ದಾರೆ.

ಬಂಡಾಯ ಶಾಸಕರಿಗೆ ಟಿಕೇಟ್ ಬಹುತೇಕ ಖಚಿತ!

ಬಂಡಾಯ ಶಾಸಕರಿಗೆ ಟಿಕೇಟ್ ಬಹುತೇಕ ಖಚಿತ!

ಈಗಿನ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಗೆ ಗೆಲುವು ಅನಿವಾರ್ಯವಾಗಿದೆ. ಹೀಗಾಗಿ ಆಯಾಯ ಕ್ಷೇತ್ರದಲ್ಲಿ ಯಾರು ಗೆಲ್ಲಬಹುದೋ, ಅಂತಹವರಿಗೆ ಟಿಕೆಟ್ ನೀಡಲು ನಾಯಕರು ಮುಂದಾಗಿದ್ದಾರೆ. ಈ ಪೈಕಿ ಜೆಡಿಎಸ್ ನ ಬಂಡಾಯ ಶಾಸಕರು ಗೆಲುವಿನ ಕುದುರೆಗಳೇ. ಹೀಗಾಗಿ ಅವರನ್ನು ತಮ್ಮ ಪಕ್ಷಕ್ಕೆ ಸೆಳೆದುಕೊಂಡು ಟಿಕೆಟ್ ನೀಡುವುದರಲ್ಲಿ ಎರಡು ಮಾತಿಲ್ಲ. ಆದರೆ ಆ ನಂತರ ಪಕ್ಷದೊಳಗೆ ಏಳುವ ಭಿನ್ನಾಭಿಪ್ರಾಯಗಳನ್ನು ಹೇಗೆ ಶಮನ ಮಾಡುತ್ತಾರೆ ಎಂಬುದು ಮಾತ್ರ ಕುತೂಹಲದ ಪ್ರಶ್ನೆ!

ಡಿಸೆಂಬರ್ ವೇಳೆಗೆ ಸೇರ್ಪಡೆ

ಡಿಸೆಂಬರ್ ವೇಳೆಗೆ ಸೇರ್ಪಡೆ

ಇದರ ನಡುವೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಮತ್ತು ನಾಯಕರು ತಮ್ಮನ್ನು ಗೌರವಯುತವಾಗಿ ನಡೆಸಿಕೊಳ್ಳುತ್ತಾರೆಂಬ ವಿಶ್ವಾಸವಿದೆ ಎಂದು ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದ್ದು, ಡಿಸೆಂಬರ್ ವೇಳೆಗೆ ಕಾಂಗ್ರೆಸ್‍ಗೆ ಅಧಿಕೃತವಾಗಿ ಸೇರ್ಪಡೆಯಾಗುವುದಾಗಿ ಹೇಳಿದ್ದಾರೆ. ಎಲ್ಲದಕ್ಕೂ ಕಾಲವೇ ಉತ್ತರ ಹೇಳಬೇಕಾಗಿದೆ!

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The joining of JDS rebel leader to congress may highly impact on Congress condition in Karnataka state. The rebel leaders will likely to join congress in this December.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ