ಹಾಯ್ ಬೆಂಗಳೂರು ಕಚೇರಿಗೆ ಸಿಬಿಐ ತಂಡ ಭೇಟಿ ಏಕೆ?

Posted By:
Subscribe to Oneindia Kannada

ಹಾಯ್ ಬೆಂಗಳೂರು ಪತ್ರಿಕೆ ಅಂಗಳದಲ್ಲಿ ಇತ್ತೀಚೆಗೆ ಸಿಬಿಐ ತನಿಖಾ ತಂಡ ಬಂದಿತ್ತು. 2011ರ ಜೂನ್ 11ರಂದು ಮುಂಬೈನ ಪೊವೈನ ಹಿರಾನಂದನಿ ಗಾರ್ಡನ್ಸ್ ನಲ್ಲಿ ನಡೆದ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಕಲೆ ಹಾಕಲು ಸಿಬಿಐ ತಂಡ ಮುಂದಾಗಿದೆ. ಕೊಲೆಯಾದ ವ್ಯಕ್ತಿ ಆ ಪತ್ರಕರ್ತರಿಗೂ ಹಾಯ್ ಬೆಂಗಳೂರು ಪತ್ರಿಕೆ ಸಂಪಾದಕ ರವಿ ಬೆಳೆಗೆರೆ ಅವರಿಗೂ ಸ್ನೇಹ ಸಂಬಂಧವಿತ್ತು. ಹೀಗಾಗಿ ಹಾಯ್ ಕಚೇರಿಗೆ ಸಿಬಿಐ ತಂಡ ಅಲ್ಲಿತ್ತು.. ಮುಂದೇನು? ಈ ಬಗ್ಗೆ ರವಿ ಬೆಳಗೆರೆಯವರ ಲೇಖನವನ್ನು ಮುಂದೆ ಓದಿ...

"ಕೆಲವರಿರ‍್ತಾರೆ. ಭಾರತದಲ್ಲಿ ಯಾರೇ ಸತ್ರೂ, ಹ್ಞಾಂ ನನಗವರು ಫ್ರೆಂಡಾಗಿದ್ರು ಅಂತ ಬರೆದುಕೊಂಡು ಸುಳ್ಳೇ ಪ್ರಚಾರ ತಗೊಳ್ತಾರೆ" ಅಂತ ತಲೆಗೆ ಎಣ್ಣೆ ಕಾಣದ ಪತ್ರಕರ್ತನೊಬ್ಬ ಬರೆದಿದ್ದ. ಅವನು ಬರೆದದ್ದು ಮುಂಬಯಿಯ ಪತ್ರಕರ್ತ ಮತ್ತು ನನ್ನ ಗೆಳೆಯ ಜ್ಯೋತಿರ್ಮೊಯ್ ಡೇ ಸಾವಿಗೆ ಸಂಬಂಧಿಸಿದಂತೆ.[ಜೆಡೆ ಹತ್ಯೆ: ದಾವೂದ್ ಶಿಷ್ಯ ಛೋಟಾ ಶಕೀಲ್ ಬಂಟರ ಬಂಧನ]

ಆತನನ್ನು ಹೆಚ್ಚೆಂದರೆ ನಾನು ಐದಾರು ಸಲ ಭೇಟಿಯಾಗಿದ್ದೆ. ಒಮ್ಮೆ ಮಾತ್ರ ಜೆ.ಡೇ ಬೆಂಗಳೂರಿನ ತಮ್ಮ ಪತ್ನಿಯ ಮನೆಗೆಂದು ಹತ್ತಿರದಲ್ಲೇ ಇರುವ ಜೆ.ಪಿ. ನಗರಕ್ಕೆ ಬಂದಿದ್ದರು. ಕಾರು ಕಳಿಸಿ ಆಫೀಸಿಗೆ ಕರೆಸಿಕೊಂಡಿದ್ದೆ. ಆತ ನನ್ನ ಪುಸ್ತಕಗಳನ್ನ ಹಾಗೂ ಪಬ್ಲಿಕೇಷನ್ಸ್‌ನ ವ್ಯಾಪ್ತಿ ನೋಡಿ ದಂಗಾಗಿದ್ದ. ತನ್ನದೂ ಒಂದು ಪುಸ್ತಕ ಪ್ರಕಟಿಸುವಂತೆ ಕೋರಿದ್ದ.

ಆ ಹೊತ್ತಿಗೆ ಮುಂಬೈ ಅಂಡರ್‌ವರ್ಲ್ಡ್‌ಗೆ ಸಂಬಂಧಿಸಿದಂತೆ ಒಂದು ಪುಸ್ತಕ ಪ್ರಕಟಿಸಿದ್ದ. ಅದರ ಬೆನ್ನಲ್ಲೇ ಆತ Zero Dial ಪುಸ್ತಕ ಬಿಡುಗಡೆ ಮಾಡಿದ್ದ. ನಾನು ಪ್ರಕಟಿಸುತ್ತೇನೆ ಅಂದಾಗ ಆತ ಬರೆಯುತ್ತಿದ್ದ ಪುಸ್ತಕಕ್ಕೆ 'ಚಿಂದಿ' ಅಂತ ಹೆಸರಿಟ್ಟಿದ್ದ. ಅದನ್ನು ಪೂರ್ತಿ ಮುಗಿಸುವುದರೊಳಗಾಗಿ ಆತನ ಕೊಲೆಯಾಗಿತ್ತು. [ಕ್ರೈಂ ಪತ್ರಕರ್ತ ಡೇ ಕೊಲೆ ಮಾಡಿದ್ದು ಯಾರು ದಾವೂದ್?]

Ravi Belagere

ಮುಂಬೈ ಮಟ್ಟಿಗೆ ಅದೊಂದು ಸಂಚಲನವುಂಟು ಮಾಡಿದ ಹತ್ಯೆ. ಮುಂಬೈ ಸ್ಪೆಷಲ್ ಬ್ರಾಂಚ್‌ನವರು ಸತೀಶ್ ಕಾಲಿಯಾ ಸೇರಿದಂತೆ ಹತ್ತು ಜನ ಷೂಟರ್‌ಗಳನ್ನು ಬಂಧಿಸಿದ್ದರು. ಆ ನಂತರ ಅವರು 'ಏಷಿಯನ್ ಏಜ್'ನ ಕ್ರೈಂ ರಿಪೋರ್ಟರ್ ಜಿಗನಾ ವೋರಾ ಎಂಬಾಕೆಯನ್ನೂ ಬಂಧಿಸಿದ್ದರು.[ಮುಂಬೈನಲ್ಲಿ ಮಿಡ್ ಡೇ ಕ್ರೈಂ ಪತ್ರಕರ್ತನ ಹತ್ಯೆ]

ಅದೆಲ್ಲದರ ಪರಿಣಾಮವಾಗಿ ಜೆ.ಡೇ ಹತ್ಯೆಯನ್ನು ಛೋಟಾ ರಾಜನ್ ಮಾಡಿಸಿದ್ದಾನೆ, ಅದಕ್ಕೆ ಜಿಗನಾ ವೋರಾ ಕಾರಣಳು ಎಂಬ ತೀರ್ಮಾನಕ್ಕೆ ಮುಂಬೈ ಪೊಲೀಸರು ಬಂದಿದ್ದರು.[ಜೆಡೆ ಕೊಲೆ: ಪತ್ರಕರ್ತೆ ಬಂಧನ, ಪ್ರಕರಣಕ್ಕೆ ಹೊಸ ತಿರುವು]

ಆದರೆ ಕೇಸು ಅಲ್ಲಿಂದ ಮುಂದಕ್ಕೆ ಕದಲಿರಲಿಲ್ಲ. ಮುಖ್ಯವಾಗಿ, ಈ ಹತ್ಯೆಗೆ ಕಾರಣ (motive) ಆದರೂ ಏನಿತ್ತು ಎಂಬುದು ಬಯಲಾಗಲೇ ಇಲ್ಲ. ಇಡೀ ಕೇಸು ಮುಂದಕ್ಕೆ ಕದಲದೆ ನಿಂತು ಬಿಟ್ಟಿತ್ತು. ಆಗ ಮಹಾರಾಷ್ಟ್ರ ಸರ್ಕಾರ ಜೆ.ಡೇ ಹತ್ಯೆಯ ಕೇಸನ್ನು ಸಿ.ಬಿ.ಐಗೆ ವಹಿಸಿ ಕೈ ತೊಳೆದುಕೊಂಡಿತ್ತು. ಅವರಾದರೂ ಏನು ಮಾಡಿಯಾರು? ಹತ್ಯೆ ನಡೆದು ಯಾವುದೋ ಕಾಲವಾಗಿ ಹೋಗಿತ್ತು. ಹೆಜ್ಜೆ ಗುರುತುಗಳು ಅಳಸಿ ಹೋಗಿದ್ದವು.

Jyotirmoy Dey

ಆದರೆ ಚಿಕ್ಕದೊಂದು thread ಕೂಡ ಬಿಡದೆ ತನಿಖೆ ನಡೆಸಿದ ಸಿ.ಬಿ.ಐ ಅದರ ಭಾಗವಾಗಿ ಎಲ್ಲಿಗೆ ಬಂದು ನಿಂತಿತ್ತು ಗೊತ್ತೆ? ಅದು 'ಹಾಯ್ ಬೆಂಗಳೂರ್!' ಕಚೇರಿಯ ಅಂಗಳಕ್ಕೆ! ನನ್ನ ಮತ್ತು ಜ್ಯೋತಿರ್ಮೊಯ್ ಡೇ ನಡುವೆ ಕೆಲವು mails ಬದಲಾವಣೆಗಳಾಗಿದ್ದವು. ಅವುಗಳನ್ನು ಅಧ್ಯಯನಕ್ಕೆ ತೆಗೆದುಕೊಂಡರೆ ಡೇ ಹತ್ಯೆಯ ಸುಳಿವುಗಳು ಸಿಗಬಹುದಾ ಎಂಬ ಆಸೆ ಸಿ.ಬಿ.ಐ ಅಧಿಕಾರಿಗಳಿಗಿದೆ.[ಜೆಡೇ ಹತ್ಯೆ: ಪತ್ರಕರ್ತೆ ಜಿಗ್ನಾಗಿದೆ ಬಾಲಿವುಡ್ ನಟನ ಲಿಂಕ್]

ನಾನು ಜೇಯೊಂದಿಗೆ ನಡೆಸಿದ mail ವ್ಯವಹಾರದ ಪ್ರತಿಗಳನ್ನು ಒಬ್ಬ ಇನ್ಸ್‌ಪೆಕ್ಟರ್‌ರ ಕೈಗೆ ಕೊಟ್ಟೆ. ಅದಕ್ಕೆ ಅವರೊಂದು endorsement ಕೂಡ ಕೊಟ್ಟರು.

ಇರಲಿ, ಸತ್ತವರು ನನ್ನ ಮಿತ್ರರಾಗಿದ್ದರು ಅಂತ ಬರಕೊಂಡು ಪಬ್ಲಿಸಿಟಿ ಪಡೆಯುವ ಹುಚ್ಚು ನನಗಿದೆ ಎಂದು ಅಕರಾಳ ನರಿಯೊಂದು ಊಳಿಟ್ಟಿತ್ತಲ್ಲ? ಅದು ತನ್ನ ಆತ್ಮಕ್ಕೆ ಕೊಂಚ ನೀರು ಹನಿಸಿ, ತಣ್ಣಗಾಗಲಿ ಎಂದು ಇದಿಷ್ಟನ್ನೂ ಬರೆದಿದ್ದೇನೆ. ಇನ್ನಷ್ಟು ಮಾಹಿತಿಗಾಗಿ ರವಿ ಬೆಳಗೆರೆ ಅವರ ವೆಬ್ ಸೈಟ್ ನೋಡಿ

-ಬೆಳಗೆರೆ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Journalist Jyotirmoy Dey Murder case: Hai Bengaluru tabloid editor explains why CBI team visited 'Hai Bengaluru' office recently.
Please Wait while comments are loading...